ಭಾನುವಾರ, ಏಪ್ರಿಲ್ 11, 2021
32 °C

ಕಾವೇರಿ ಒಂದೇ ವಿವಾದಕ್ಕೆ ಒಳಗಾಗಿಲ್ಲ: ಸದಾಶಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ಕಾವೇರಿ ನದಿ ಒಂದೇ ವಿವಾದಕ್ಕೆ ಒಳಗಾಗಿಲ್ಲ. ಗಂಗಾ, ಕೃಷ್ಣಾ, ಮಹಾನದಿ ಹಾಗೂ ನರ್ಮದ ನದಿಗಳು ವಿವಾದ ಸುಳಿಯಲ್ಲಿ ಸಿಲುಕಿವೆ. ಹಲವು ನದಿಗಳ ವಿವಾದಗಳು ಒಂದು ಹಂತಕ್ಕೆ ಬಂದಿವೆ. ಆದರೆ, ಕಾವೇರಿ ನದಿಯ ವಿವಾದ ಮಾತ್ರ ಸದಾ ಜೀವಂತವಾಗಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ತಿಳಿಸಿದರು.ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಭಾನುವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ಕರ್ನಾಟಕ ತಮಿಳುನಾಡಿನ ನೀರಿನ ಕಣಜವೇ? ಕನ್ನಂಬಾಡಿಯನ್ನು ತಮಿಳಿನಾಡಿಗಾಗಿ ಕಟ್ಟಿದ್ದೆೀವಾ? ಎನ್ನುವ ಇಕ್ಕಟ್ಟಿನಲ್ಲಿ ಇಂದು ನಾವಿದ್ದೆೀವೆ.

ಕಾವೇರಿ ವಿವಾದ ಸಂಸತ್ತಿನಲ್ಲಿ ಬಂದಾಗೆಲ್ಲ ತಮಿಳುನಾಡಿನ ಎಲ್ಲ ಸಂಸತ್ ಸದಸ್ಯರು ಏಕತೆಯಿಂದ ಸಮರ್ಥಿಸಿಕೊಳ್ಳುತ್ತಾರೆ. ಅದರೆ ಕಾವೇರಿ ವಿವಾದ ಬಂದಾಗ ಕಾವೇರಿ ಕೊಳ್ಳದ ಸಂಸದರು ಮಾತನಾಡದೇ ಮೌನವಹಿಸುತ್ತಾರೆ. ಮೊದಲು ನಮ್ಮ ರಾಜಕಾರಣಿಗಳಲ್ಲಿ ಐಕ್ಯತೆ ಬರಬೇಕು ಎಂದು ತಿಳಿಸಿದರು. 

 

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಸಮಯಕ್ಕೆ ಗೌರವ ಕೊಡದವನು ದೇವರಿಗೂ ಗೌರವ ಕೊಡಲಾರ. ಇಲ್ಲಿನ ಸ್ವಾಮೀಜಿಗಳ ಸಮಯ ನಿಷ್ಠೆ ನಮ್ಮಂಥ ಸ್ವಾಮೀಜಿಗಳಿಗೆ ಮಾದರಿಯಾದುದು. ಬಹುಮುಖ ವ್ಯಕ್ತಿತ್ವ ವಿಕಾಸಕ್ಕೆ ಈ ಸ್ಥಳ ಉತ್ತಮ ವೇದಿಕೆ ಒದಗಿಸುತ್ತಿದೆ ಎಂದರು. ಇಂದಿನ ಯುವಕರಲ್ಲಿ ನೈತಿಕ ಪ್ರಜ್ಞೆ ಜಾಗೃತಗೊಳಿಸುವ ಜವಾಬ್ದಾರಿ ಸ್ವಾಮಿಗಳ ಮೇಲಿದೆ. ನಮ್ಮ ಮಕ್ಕಳು ನಮ್ಮಿಂದ ನೈತಿಕವಾಗಿ ದೂರವಾಗುತ್ತಿದ್ದಾರೆ. ಅವರನ್ನು ಮೊದಲು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ವಿದ್ಯೆಯ ಜತೆಗೆ ಹೃದಯವಂತರಾಗುವಂತೆ ಮಾಡುವ ಕೆಲಸ ಆಗಬೇಕು. ಇವತ್ತು ಯಾವ ಕ್ಷೇತ್ರವು ಸ್ವಚ್ಛವಿಲ್ಲ. ಟಿವಿಯಲ್ಲಿ ಜ್ಯೋತಿಷ ಹೇಳುವವರು ಮಾನಸಿಕ ಭಯೋತ್ಪದಾಕರಾಗಿದ್ದಾರೆ.

ಭಕ್ತರಿಂದ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಮೊದಲು ಇವರನ್ನು ನಿಗ್ರಹಿಸುವ ಕೆಲಸ ಆಗಬೇಕಾಗಿದೆ ಎಂದು ನುಡಿದರು.  ಉಡುಪಿ ನಕ್ಸಲ್ ನಿಗ್ರಹ ದಳದ ಮುಖ್ಯಸ್ಥ ಅಲೋಕ್‌ಕುಮಾರ್ ಮಾತನಾಡಿ, ಉಗ್ರಗಾಮಿಗಳು ಹಾಗೂ ನಕ್ಸಲರು ಹೆಚ್ಚುತ್ತಿರುವುದಕ್ಕೆ ತಿಳಿವಳಿಕೆಯ ಕೊರತೆಯೇ ಕಾರಣ. ಜಾತಿಯ ಸಮಸ್ಯೆ ನಮ್ಮ ದೇಶವನ್ನು ಕಾಡುತ್ತಿದೆ.

ಬೇರೆ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಚಟುವಟಿಕೆಗಳಿಗೆ ದೇಶದ ಇನ್ನಿತರ ಭಾಗದ ಜನತೆ ಪ್ರತಿಸ್ಪಂದಿಸದೇ ಇರುವುದು ವಿಷಾದನೀಯ ಸಂಗತಿ. ಧರ್ಮ, ಜಾತಿ, ಭಾಷೆಗಳ ಬಗ್ಗೆ ಪರಸ್ಪರರಲ್ಲಿ ಗೌರವ ಇರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾರ್ಥಕವಾದ ಪಾತ್ರ ವಹಿಸಬೇಕು ಎಂದರು.ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿ, ರಾಜ್ಯದಲ್ಲಿ ಜಲನೀತಿ ಜಾರಿಗೆ ತರುವ ಪ್ರಯತ್ನ ಮಾಡಬೇಕಿದೆ. ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಈ ಕುರಿತು ಸರಕಾರದ ಗಮನ ಸೆಳೆಯುವೆ. ತಾಲ್ಲೂಕಿನಲ್ಲಿ ಪ್ಲೋರೈಡ್ ಅಂಶ ಬಹಳವಿದ್ದು, ಕುಡಿಯುವ ನೀರಿನ ಕೊರತೆಯುಂಟಾಗಿದೆ.

ಅಪ್ಪರ್ ಭದ್ರ ಯೋಜನೆ ಮಂಜೂರಾಗಿದೆ. ಆದರೆ, ಅದು ಇಲ್ಲಿಗೆ ಬರಲು ನಾಲ್ಕೈದು ವರ್ಷ ಬೇಕಾಗಬಹುದು. ತರೀಕೆರೆಯ ಭಾಗದಲ್ಲಿ ಸುರಂಗ ಮಾರ್ಗದ ಕಾರ್ಯ ನಡೆಯುತ್ತಿದ್ದು, ಆ ಭಾಗದ ರೈತರ ಹಿತಾಸಕ್ತಿ ಗಮನಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸುವೆ ಎಂದು ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.