ಶನಿವಾರ, ಫೆಬ್ರವರಿ 27, 2021
23 °C

ಕಾವೇರಿ ನದಿ ಇದೆ, ನೀರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ನದಿ ಇದೆ, ನೀರಿಲ್ಲ

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ `ನೀರು ಬೇಕು ನೀರು~ ಎನ್ನುವ ಕೂಗು  ನಿತ್ಯಮಂತ್ರವಾಗಿದೆ. ನಗರ, ಪಟ್ಟಣ, ಹಳ್ಳಿಗಳ ಜನರು ಕುಡಿಯುವ ನೀರು ಸಿಗದೆ ಬಾಯಾರಿ ಬೆಂಡಾಗಿದ್ದಾರೆ. ಕುಡಿಯುವ ನೀರಿಲ್ಲದೆ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎದುರಿಗೆ ಸಿಕ್ಕ ಜನಪ್ರತಿನಿಧಿಗಳ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ಅಧಿಕಾರಿಗಳು ಕಂಡ ಕೂಡಲೇ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ.ಮಾರ್ಚ್ ಆರಂಭದಿಂದಲೇ ಐದು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇದು ಏಪ್ರಿಲ್ ಮೊದಲ ವಾರ. ಮೇ ಮತ್ತು ಜೂನ್ ತಿಂಗಳಲ್ಲಿ  ಮಳೆಯಾಗದೇ ಹೋದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ. ಮೈಸೂರು ನಗರದ ಸಮೀಪದಲ್ಲೇ ಕೆಆರ್‌ಎಸ್ ಇದೆ. ಆದರೆ ನಗರಕ್ಕೆ ಕುಡಿಯುವ ನೀರಿನ ತೊಂದರೆ ತಪ್ಪಿಲ್ಲ.ಪ್ರತಿ ದಿನ ಯಾವುದಾದರೊಂದು ವಾರ್ಡಿನ ಜನರು ರಸ್ತೆ ತಡೆ ಮಾಡುತ್ತಿದ್ದಾರೆ. ಮೇಯರ್ ವಾರ್ಡ್‌ನಲ್ಲಿಯೇ 700 ಮನೆಗಳಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಟ್ಯಾಂಕರ್‌ಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ.ಮೈಸೂರು ಜಿಲ್ಲೆಯ ನಂಜನಗೂಡು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ಇಲ್ಲಿನ ಯಾವ ಹಳ್ಳಿಗೂ ಟ್ಯಾಂಕರ್ ನೀರು ಕೊಡುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿ ಹರಿದರೂ ಕುಡಿಯುವ ನೀರಿಗೆ ಸಮಸ್ಯೆ ಇದೆ.

 

ಜಿಲ್ಲಾಡಳಿತದ ಮಾಹಿತಿ ಪ್ರಕಾರ 139 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಪೈಕಿ 5-6 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮಂಡ್ಯದಲ್ಲಿ ಎರಡು ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತಿದ್ದರೂ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಕೆ ಆಗುತ್ತಿಲ್ಲ.ಹಾಸನ ಜಿಲ್ಲೆಯ ಸ್ಥಿತಿ ಮೈಸೂರು, ಮಂಡ್ಯ ಜಿಲ್ಲೆಗಿಂತ ಭಿನ್ನವಾಗಿಲ್ಲ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ನೀರಿಗೆ ತೊಂದರೆ ಇದೆ. ಅರಸೀಕೆರೆ, ಅರಕಲಗೂಡು, ಬಾಣಾವರ, ರಾಮನಾಥಪುರ, ಜಾವಗಲ್‌ನಂತಹ ಪ್ರಮುಖ ಸ್ಥಳಗಳಲ್ಲಿ ನೀರಿಗಾಗಿ ಪರದಾಟ ಹೆಚ್ಚಾಗಿದೆ. ಕರ್ನಾಟಕ ಕಾಶ್ಮೀರ ಎಂದು ಹೆಸರಾಗಿರುವ ಮಡಿಕೇರಿಯಲ್ಲಿಯೂ ಇದೇ ಸ್ಥಿತಿ.ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ಬತ್ತಿ ಹೋಗಿದೆ.  ಕೊಳವೆ ಬಾವಿಗಳು, ತೆರೆದ ಬಾವಿಗಳು ಬತ್ತಿ ಹೋಗಿವೆ. ನಗರದ ಅರ್ಧದಷ್ಟು ಭಾಗಕ್ಕೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟವೂ ಕಡಿಮೆ ಇದೆ.ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಚಾಮರಾಜನಗರ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿನ ಬಿಳಿಗಿರಿ ರಂಗನಬೆಟ್ಟದಲ್ಲಿರುವ ಸೋಲಿಗರ ಪೋಡುಗಳು, ಉಪ್ಪಾರರ ಮೋಳೆಗಳಲ್ಲಿ ನೀರಿನ ದಾಹ ಕೇಳುವಂತಿಲ್ಲ.ಸೋಲಿಗರು ಪ್ರಾಣವನ್ನು ಅಂಗೈಯಲ್ಲಿ ಹಿಡಿದುಕೊಂಡು ಕಾಡಿನ ನಡುವೆ ಸಾಗಿ ನೀರು ತರಬೇಕಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಗಿರಿಜನರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಹಾಡಿಗಳಲ್ಲಿ ವಾಸಿಸುತ್ತಿದ್ದಾರೆ.ಇವರ ನೀರಿನ ಬವಣೆ ಅಕ್ಷರಶಃ ಅರಣ್ಯ ರೋದನವೇ ಆಗಿದೆ. ಇರುವ ಒಂದೋ, ಎರಡೋ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ದೂರದಲ್ಲಿರುವ ಹಳ್ಳಿಗಳು ಇಲ್ಲವೇ ಹೊಲಗಳಲ್ಲಿರುವ ಹಳ್ಳ, ಕೊಳ್ಳ, ಬಾವಿಗಳಿಂದ ನೀರು ತರಬೇಕು. ಅಲ್ಲಿಂದ ತರುವ ನೀರು ಶುದ್ಧವಾಗಿರುವುದಿಲ್ಲ. ಹೀಗಾಗಿ ಗಿರಿಜನರು ರೋಗ ಪೀಡಿತರಾಗುತ್ತಿದ್ದಾರೆ.ಎಲ್ಲ ಕಡೆ ಒಂದೇ ಸಮಸ್ಯೆ: ಕೊಳವೆಬಾವಿಗಳಿವೆ, ಆದರೆ ಅವುಗಳಲ್ಲಿ ನೀರು ಬರುತ್ತಿಲ್ಲ. ಕೆಲವು ಕಡೆ ಬಂದರೂ ಇಳುವರಿ ತೀರಾ ಕಡಿಮೆ. ಇನ್ನು ಹಲವು ಕಡೆ ನೀರಿನಲ್ಲಿ ಫ್ಲೋರೈಡ್ ಅಂಶ ಇರುತ್ತದೆ; ಕುಡಿಯಲು ಯೋಗ್ಯವಾಗಿರುವುದಿಲ್ಲ.

 

ಕೆರೆಗಳು ಇದ್ದರೂ ಅವುಗಳ ನೀರು ಕುಡಿಯಲು ಬಳಸಲು ಅಸಾಧ್ಯ. ಹೊಸ ಕೊಳವೆಬಾವಿಗಳ ನಿರ್ಮಾಣಕ್ಕೆ ಬೇಸಿಗೆ ಸಕಾಲವಲ್ಲ. ಸ್ಥಳೀಯ ಸಂಸ್ಥೆಗಳು ನೀರು ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ.  ವಿದ್ಯುತ್ ಕಣ್ಣಾಮುಚ್ಚಾಲೆ ಇಂದಿಗೂ ಜಾರಿಯಲ್ಲಿದೆ. ಗುಣಮಟ್ಟದ ವಿದ್ಯುತ್ ಇಲ್ಲದೆ ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ.

ಹಲವು ಕಡೆ ಮೋಟರ್‌ಗಳು, ಇನ್ನು ಕೆಲವು ಕಡೆ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋದ ವಾರದ ನಂತರವೇ ರಿಪೇರಿ ಕಾಣುವುದು. ಇವೆಲ್ಲ ಕಾರಣಗಳಿಂದ ಜನತೆಯ ನೀರಿನ ದಾಹ ಇಂಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.