ಬುಧವಾರ, ಮೇ 12, 2021
24 °C

ಕಾವೇರಿ ವಿವಾದ: ತಮಿಳುನಾಡು ಅರ್ಜಿಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮಧ್ಯಂತರ ಅರ್ಜಿ ಸಂಬಂಧ ತಕ್ಷಣಕ್ಕೆ ಯಾವುದೇ ಪರಿಹಾರ ದೊರೆತಿಲ್ಲ. ಇದರಿಂದ ತಮಿಳುನಾಡಿಗೆ ಸ್ವಲ್ಪ ಹಿನ್ನಡೆಯಾದಂತಾಗಿದೆ.

ಕಾವೇರಿ ನದಿಯಿಂದ ತನ್ನ ರೈತರ ಬೇಸಿಗೆ ಬೆಳೆಗಳಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡದಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ತಮಿಳುನಾಡು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಪುನಃ ಮನವಿ ಮಾಡಿತು. ಆದರೆ, ಬೇಸಿಗೆ ರಜೆ ಬಳಿಕ ಮನವಿ ಮಾಡುವಂತೆ ನ್ಯಾ.ಡಿ.ಕೆ. ಜೈನ್ ಹಾಗೂ ಎ.ಆರ್.ದವೆ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು.

ಸುಪ್ರೀಂ ಕೋರ್ಟ್‌ಗೆ ಮೇ 14ರಿಂದ ಜುಲೈ 1ರವರೆಗೆ ಸುಮಾರು ಒಂದೂವರೆ ತಿಂಗಳು ಬೇಸಿಗೆ ರಜೆ. ಅನಂತರ ತಮಿಳುನಾಡು ಮತ್ತೆ ಕೋರ್ಟ್‌ಗೆ ಮನವಿ ಸಲ್ಲಿಸಬೇಕಿದೆ. ಅಷ್ಟರೊಳಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದರೆ ಸಮಸ್ಯೆಗೆ ಸುಲಭವಾಗಿ ಪರಿಹಾರ ಸಿಗಲಿದೆ. ತಮಿಳುನಾಡು ಮಾರ್ಚ್ 23ರಂದು ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ, ಕಾವೇರಿ ನದಿಯ ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಅಣೆಕಟ್ಟೆಯಿಂದ ಬೇಸಿಗೆ ಬೆಳೆಗೆ ಹೆಚ್ಚುವರಿ ನೀರು ಬಿಡುಗಡೆ ಮಾಡದಂತೆ ಕರ್ನಾಟಕವನ್ನು ನಿರ್ಬಂಧಿಸಬೇಕು ಎಂದು ಮನವಿ ಮಾಡಿದೆ.

ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಅಂಗೀಕರಿಸುವಂತೆ ತಮಿಳುನಾಡು ಈ ಮೊದಲು ಏ.13 ಮತ್ತು ಏ.23ರಂದು ಸುಪ್ರೀಂ ಕೋರ್ಟ್‌ಗೆ ಕೋರಿಕೆ ಸಲ್ಲಿಸಿತ್ತು. ಕರ್ನಾಟಕ ಈಗಾಗಲೇ ಅಣೆಕಟ್ಟೆಯಿಂದ 29 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬೇಸಿಗೆ ಬೆಳೆಗೆ ಬಿಡುಗಡೆ ಮಾಡಿದೆ. ಇದೇ ರೀತಿ ನೀರು ಬಿಡುಗಡೆ ಮಾಡಿದರೆ ತಮ್ಮ ಜಲಾಶಯಗಳಿಗೆ ಬಿಡಲು ನೀರೇ ಇರುವುದಿಲ್ಲಎಂದು ಅರ್ಜಿಯಲ್ಲಿ ವಿವರಿಸಿದೆ.

ಆದರೆ, ಮತ್ತೊಂದೆಡೆ ಕಾವೇರಿ ನ್ಯಾಯಮಂಡಳಿ ಅಂತಿಮ ಆದೇಶದಂತೆ ತಮಿಳುನಾಡಿಗೆ ಮಾರ್ಚ್ ಅಂತ್ಯದ ವೇಳೆಗೆ 192 ಟಿಎಂಸಿ ನೀರು ಬಿಡುಗಡೆ ಮಾಡಿದೆ. ಇದು ಬಿಳಿಗುಂಡ್ಲು ಮಾಪಕ ಕೇಂದ್ರದಲ್ಲಿ ದಾಖಲಾಗಿದೆ ಎಂದು ಕರ್ನಾಟಕ ಪ್ರತಿಪಾದಿಸಿದೆ.

ಸಾಮಾನ್ಯ ವರ್ಷದಲ್ಲಿ 192 ಟಿಎಂಸಿ ಬಿಡುಗಡೆ ಮಾಡಿದ ಬಳಿಕ ಉಳಿದ ನೀರು ಬಳಕೆ ಮಾಡಲು ತನಗೆ ಯಾವ ಅಭ್ಯಂತರವಿಲ್ಲ.

ನೀರಾವರಿ ಪ್ರದೇಶ ವಿಸ್ತೀರ್ಣ ಅಥವಾ ಬೆಳೆಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ ಎಂದು ಕರ್ನಾಟಕ ಹೇಳಿದೆ.

ಇದಲ್ಲದೆ, ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಕುರಿತು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಕೇಳಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.