ಭಾನುವಾರ, ಮೇ 16, 2021
22 °C

ಕಾಸರಗೋಡು ಕನ್ನಡಕ್ಕೆ ಕೊನೆಯ ಕುಣಿಕೆ

-ರಾಜೇಶ್ ರೈ ಚಟ್ಲ . Updated:

ಅಕ್ಷರ ಗಾತ್ರ : | |

ಕಾಸರಗೋಡು ಕನ್ನಡಕ್ಕೆ ಕೊನೆಯ ಕುಣಿಕೆ

ಕಾಸರಗೋಡು ಬಹುಭಾಷೆ, ಬಹು ಸಂಸ್ಕೃತಿಯ ನೆಲ. ಮೈಸೂರು ರಾಜ್ಯದ ಕೆನರಾ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು, ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡಿಗರ ಪ್ರಾಬಲ್ಯದಿಂದ ಕನ್ನಡ ಭೂಮಿಯಾಗಿತ್ತು. ಭಾಷಾವಾರು ಪ್ರಾಂತ್ಯ ರಚನೆ ವೇಳೆ ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾಗಿದೆ. ಚಂದ್ರಗಿರಿ- ಪಯಸ್ವಿನಿ ನದಿಯ ಉತ್ತರ ಭಾಗ ಕರ್ನಾಟಕದಲ್ಲಿ ಸೇರಿಕೊಂಡು ಹೊಸ ರಾಜ್ಯ (ಕರ್ನಾಟಕ) ಉದಯವಾಗಬಹುದೆಂಬ ನಿರೀಕ್ಷೆ ಸುಳ್ಳಾಗಿತ್ತು. ರಾಜ್ಯದ ಗಡಿ ತಕರಾರು ನಿವಾರಣೆಗೆ ನೇಮಕಗೊಂಡ ಮಹಾಜನ ಆಯೋಗದ ವರದಿ ಇಲ್ಲಿನ ಕನ್ನಡಿಗರ ಪರವಾಗಿದ್ದರೂ ಅದಕ್ಕೀಗ ಗೆದ್ದಲು ಹಿಡಿದಿದೆ.ಯಕ್ಷಗಾನದ ಪಾರ್ತಿಸುಬ್ಬ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಕವಿ ಕಯ್ಯಾರ ಕಿಞ್ಞಣ್ಣ ರೈ, `ಕರ್ನಾಟಕ ಸಮಿತಿ'ಯಡಿ ಸ್ಪರ್ಧಿಸಿ ಗೆದ್ದು ವಿಧಾನಸಭೆಯಲ್ಲಿ ಕನ್ನಡದ ಧ್ವನಿ ಎತ್ತಿದ್ದ ಮಹಾಬಲ ಭಂಡಾರಿ, ಯು.ಪಿ. ಕುಣಿಕುಳ್ಳಾಯ... ಮತ್ತಿತರರ ಮೂಲಕ ಕನ್ನಡ ಬೆಳಗಿದ ನೆಲವಾದ ಇಲ್ಲಿ ಈಗ ಕನ್ನಡಿಗರಿಗೆ ಬದುಕು ದುಸ್ತರವಾಗುತ್ತಿದೆ. ದಿನೇ ದಿನೇ ಕನ್ನಡ ಮೂಲದಿಂದ ದೂರ ಸರಿಯುತ್ತಿರುವ ಈ ನೆಲದಲ್ಲಿ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಭವಿಷ್ಯ ಇಲ್ಲ ಎನ್ನುವ ವಾತಾವರಣ ಸೃಷ್ಟಿಯಾಗುತ್ತಿದೆ. ಕನ್ನಡ ಮಾಧ್ಯಮದ ಮಕ್ಕಳು ಮಲಯಾಳಿ ಶಿಕ್ಷಕರಿಂದ ಕಲಿಯಬೇಕಾದ ದುಃಸ್ಥಿತಿ ಸದ್ಯ ಕಾಸರಗೋಡಿನಲ್ಲಿದೆ.ಅಷ್ಟೇಕೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಿ ಸೇವೆಗಳಲ್ಲಿ ಹಾಗೂ ಲೋಕಸೇವಾ ಆಯೋಗದ (ಪಬ್ಲಿಕ್ ಸರ್ವಿಸ್ ಕಮಿಷನ್- ಪಿಎಸ್‌ಸಿ) ನೇಮಕಾತಿಗಳಲ್ಲಿ ಮಲಯಾಳ ಭಾಷಾ ಪರಿಜ್ಞಾನ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆ ಮೂಲಕ ಸರ್ಕಾರಿ ಉದ್ಯೋಗಾಕಾಂಕ್ಷಿ ಕನ್ನಡಿಗರ ಪಾಲಿಗೆ ಶಾಶ್ವತವಾಗಿ ತಡೆಯಾಗಲು ಕ್ರಮ ತೆಗೆದುಕೊಂಡಿದೆ.ಉದ್ಯೋಗ ನೇಮಕಾತಿಗಳಲ್ಲಿ ಮಲಯಾಳ ಭಾಷೆ ಕಡ್ಡಾಯಗೊಳಿಸಿದ ಆದೇಶದಿಂದಾಗಿ ಭಾಷಾ ಅಲ್ಪಸಂಖ್ಯಾತರಿಗೆ, ಅದರಲ್ಲೂ ಕಾಸರಗೋಡಿನ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಕನ್ನಡ, ತುಳು, ಕೊಂಕಣಿ, ಉರ್ದು ಹಾಗೂ ಮರಾಠಿ ಭಾಷಿಕರಿಗೆ ಅನ್ಯಾಯ ಆಗಿದೆ.ಕಾಸರಗೋಡಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ರಚಿಸಲಾದ ಪಿ. ಪ್ರಭಾಕರನ್ ಆಯೋಗ ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ ವರದಿಯಂತೆ ಕಾಸರಗೋಡು ಜಿಲ್ಲೆಯ ಕನ್ನಡಿಗ ಪ್ರದೇಶಗಳಲ್ಲಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಿಸುವಂತೆ ಸರ್ಕಾರದ ಜಂಟಿ ಕಾರ್ಯದರ್ಶಿ 2013 ಮಾ. 22ರಂದು ಹೊರಡಿಸಿದ ಆದೇಶದ ಬೆನ್ನಲ್ಲೇ ಕೇರಳದ ಸರ್ಕಾರಿ ಉದ್ಯೋಗ ಹಾಗೂ ಪಿಎಸ್‌ಸಿ ನೇಮಕಾತಿಯಲ್ಲಿ ಮಲಯಾಳ ಭಾಷೆ ಕಡ್ಡಾಯಗೊಳಿಸಿರುವ `ದ್ವಂದ್ವ ನೀತಿ' ಆತಂಕ ಹೆಚ್ಚಲು ಕಾರಣವಾಗಿದೆ.

`ಕನ್ನಡ ಸಮನ್ವಯ ಸಮಿತಿ' ಎಂಬ ಸಂಘಟನೆ ರಚಿಸಿಕೊಂಡಿರುವ ಕನ್ನಡಿಗರು, ಈ ಹೊಸ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಪಿಎಸ್‌ಸಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದಾರೆ. ಆದೇಶವನ್ನು ಹಿಂದಕ್ಕೆ ಪಡೆಯುವವರೆಗೆ ವಿರಮಿಸುವುದಿಲ್ಲ ಎನ್ನುತ್ತಾರೆ ಸಮಿತಿಯ ಅಧ್ಯಕ್ಷ, ಹಿರಿಯ ಕನ್ನಡ ಹೋರಾಟಗಾರ ಬಿ. ಪುರುಷೋತ್ತಮ ಮಾಸ್ಟರ್.

`ಇತ್ತೀಚಿನ ದಿನಗಳಲ್ಲಿ ಕಾಸರಗೋಡಿನ ಕನ್ನಡಿಗರಲ್ಲಿ ಅನಾಥ ಪ್ರಜ್ಞೆ ಹೆಚ್ಚುತ್ತಿದೆ' ಎನ್ನುತ್ತಾರೆ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿ ನಿವೃತ್ತರಾದ ಎನ್.ಕೆ.ಮೋಹನದಾಸ್.`ಭಾಷಾ ಅಲ್ಪಸಂಖ್ಯಾತರಿಗಿರುವ ಸಂವಿಧಾನಬದ್ಧ ನಿಯಮದ ಪ್ರಕಾರ ಲೋಕಸೇವಾ ಆಯೋಗ, ಕನ್ನಡಿಗರಿಗೆ ಕನ್ನಡದಲ್ಲಿಯೂ, ತಮಿಳರಿಗೆ ತಮಿಳಿನಲ್ಲೂ ಸೌಲಭ್ಯ ಒದಗಿಸಬೇಕು. ಈ ಹಿಂದೆ ಆಯೋಗ ಅದನ್ನು ಪಾಲಿಸಿದ್ದರಿಂದ ಅನೇಕ ಕನ್ನಡಿಗರು ಸರ್ಕಾರಿ ಸೇವೆಗೆ ಸೇರಲು ಸಾಧ್ಯವಾಗಿತ್ತು. ಹೀಗೆ ಸೇರಿದವರು 10 ವರ್ಷದ ಬಳಿಕ ಮಲಯಾಳ ಕಲಿತರೆ ಸಾಕು ಎಂಬ ನಿಯಮ ಜಾರಿಯಲ್ಲಿತ್ತು. ಆದರೆ ಕಳೆದ ಜನವರಿ ಮತ್ತು ಫೆಬ್ರುವರಿಯಲ್ಲಿ ನಡೆಸಿದ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮಲಯಾಳ ಭಾಷೆ ಮಾತ್ರ ಬಳಸಿರುವ ಆಯೋಗ, ಮಲಯಾಳ ಭಾಷಾ ಜ್ಞಾನ ಕಡ್ಡಾಯಗೊಳಿಸಿದೆ.

ಇದರ ವಿರುದ್ಧ ವಿವಿಧ ಕನ್ನಡ ಸಂಘಟನೆಗಳು ಕೇರಳ ಸರ್ಕಾರ ಮತ್ತು ಆಯೋಗಕ್ಕೆ ಮನವಿ ಸಲ್ಲಿಸಿವೆ. ಮುಂಬರುವ ಜುಲೈ 13ರಂದು ಕಿರಿಯ ಸಹಾಯಕ ಗುಮಾಸ್ತ ಹುದ್ದೆಗಳಿಗೆ ನಡೆಯುವ ಪರೀಕ್ಷಾ ಪಠ್ಯಕ್ರಮದಲ್ಲಿ `ಆಡಳಿತ ಭಾಷಾ ಪರಿಚಯ'ವಾಗಿ ಮಲಯಾಳ ಲಿಪಿಯಲ್ಲೇ ಭಾಷಾ ಪ್ರಯೋಗ, ವ್ಯಾಕರಣ, ಸಮಾಧಿ, ಸಮಾಜ, ಅರ್ಥ, ಅರ್ಥ ವ್ಯತ್ಯಾಸ, ಪದ ಪ್ರಯೋಗ ಕುರಿತು ಪ್ರಶ್ನೆ ಕೇಳಲಾಗುವುದು ಎಂದು ಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ. ಕನ್ನಡಿಗರಿಗೆ ಉದ್ಯೋಗ ಸಿಗದಂತೆ ಮಾಡುವ ತಂತ್ರಗಾರಿಕೆ ಇದು' ಎಂದು ಅಭಿಪ್ರಾಯ ಪಡುತ್ತಾರೆ ಕಾಸರಗೊಡು ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ರತ್ನಾಕರ ಮಲ್ಲಮೂಲೆ.

`ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಕೈಗೊಳ್ಳುವ ಯೋಜನೆಗಳ ಸಂಪೂರ್ಣ ಸವಲತ್ತು ಕಾಸರಗೋಡಿನ ಕನ್ನಡಿಗರಿಗೆ ಲಭಿಸಬೇಕು. ಸರ್ಕಾರದ ಸುತ್ತೋಲೆ, ಆದೇಶಗಳನ್ನು ಕನ್ನಡದಲ್ಲೇ ನೀಡಿ ಸ್ಥಳೀಯರ ಸಂವಿಧಾನಬದ್ಧ ಹಕ್ಕು ಸಂರಕ್ಷಿಸಲು ಕೇರಳ ಸರ್ಕಾರ ಬದ್ಧವಾಗಬೇಕು' ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ (ಕಾಸರಗೋಡು) ಅಧ್ಯಕ್ಷ ಎಸ್.ವಿ. ಭಟ್.ಸಂವಿಧಾನಬದ್ಧ ಹಕ್ಕಿಗೆ ಕತ್ತರಿ!

ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವುದು, ಉದ್ಯೋಗ ಪಡೆಯುವುದು ಭಾಷಾ ಅಲ್ಪಸಂಖ್ಯಾತರ ಸಂವಿಧಾನದತ್ತ ಅವಕಾಶ. ಸಂವಿಧಾನದ ಕಲಂ 350 ಎ ಪ್ರಕಾರ ಭಾಷಾ ಅಲ್ಪಸಂಖ್ಯಾತರಿಗೆ ಪ್ರಾಥಮಿಕ ಹಂತದಲ್ಲೇ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವಂತೆ ರಕ್ಷಣೆ ಮತ್ತು ಸೌಲಭ್ಯ ಒದಗಿಸಬೇಕು. 350 ಬಿ (1)ರ ಪ್ರಕಾರ ರಾಷ್ಟ್ರಪತಿಯವರು ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ವಿಶೇಷ ಅಧಿಕಾರಿಯನ್ನು ನೇಮಿಸಬೇಕು.

350 ಬಿ (2)ರ ಪ್ರಕಾರ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ ಬಗ್ಗೆ ಕಾಲಾನುಕಾಲದಲ್ಲಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇದಕ್ಕೆ ಪೂರಕವಾಗಿ ಕೇರಳ ಸರ್ಕಾರ ಕಾಸರಗೋಡಿನ ಕನ್ನಡಿಗರನ್ನು ಭಾಷಾ ಅಲ್ಪಸಂಖ್ಯಾತರೆಂದು ಮಾನ್ಯ ಮಾಡಿ ಸಂವಿಧಾನಬದ್ಧ ಸವಲತ್ತುಗಳನ್ನು ಒದಗಿಸಿ ಹಲವು ಸರ್ಕಾರಿ ಆದೇಶಗಳನ್ನು ಹೊರಡಿಸಿದೆ. ಆದರೆ ಕೆಲವು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಆದೇಶಗಳ ಪ್ರಯೋಜನ ಕನ್ನಡಿಗರಿಗೆ ಸಿಗುತ್ತಿಲ್ಲ.2012-13ನೇ ಶೈಕ್ಷಣಿಕ ವರ್ಷದಲ್ಲಿ ಕಾಸರಗೋಡು ಜಿಲ್ಲೆಯ ಹೊಸದುರ್ಗ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿಭಾಗದ ಸಮಾಜಶಾಸ್ತ್ರ ವಿಷಯವನ್ನು ಬೋಧಿಸಲು ಕನ್ನಡ ಭಾಷೆಯ ಗಂಧಗಾಳಿಯೇ ಇಲ್ಲದ ಮಲಯಾಳಿ ಶಿಕ್ಷಕಿಯನ್ನು ನೇಮಿಸಲಾಗಿತ್ತು!

ಭಾಷಾ ಅಲ್ಪಸಂಖ್ಯಾತರಿಗೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು ಎಂಬ ಸಂವಿಧಾನದ ಕಲಂ 350 (ಎ) ಸ್ಪಷ್ಟ ಉಲ್ಲಂಘನೆಯಿದು. ಇದರ ವಿರುದ್ಧ ಕನ್ನಡಿಗರು ಧ್ವನಿ ಎತ್ತಿದ್ದಾರೆ.`ಕನ್ನಡ ಭಾಷಾ ಜ್ಞಾನವನ್ನು ಸಂದರ್ಶನ ಸಮಯದಲ್ಲಿ ಪರೀಕ್ಷಿಸುವಾಗ ರಾಜಕೀಯ ಪ್ರಭಾವದಿಂದಲೋ, ಮೀಸಲಾತಿ ಕಾರಣದಿಂದಲೋ ಕನ್ನಡ ಜ್ಞಾನ ಇಲ್ಲದವರೂ `ಕನ್ನಡ ತಿಳಿದಿದೆ' ಎಂದು ನೇಮಕಗೊಳ್ಳುತ್ತಾರೆ. ಭಾಷಾ ಅಲ್ಪಸಂಖ್ಯಾತರ ಹಕ್ಕು ಕಸಿದುಕೊಂಡಿರುವುದಕ್ಕೆ ಇದಕ್ಕಿಂತ ಸ್ಪಷ್ಟ ನಿದರ್ಶನ ಇನ್ನೇನುಬೇಕು' ಎನ್ನುವುದು ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ ಬಿ.ವಿ ಕಕ್ಕಿಲ್ಲಾಯ ಅವರ ಪ್ರಶ್ನೆ. ಆಡಳಿತ ಭಾಷೆಯನ್ನು ಸಂಪೂರ್ಣ ಮಲಯಾಳೀಕರಣಗೊಳಿಸುವ ಉದ್ದೇಶದಿಂದ ಸರ್ಕಾರಿ ಹುದ್ದೆಯಲ್ಲಿರುವ ಎಲ್ಲ ನೌಕರರು ಮಲಯಾಳ ಕಲಿತಿರಬೇಕೆಂಬ ಆದೇಶವನ್ನು ಅನುಷ್ಠಾನಗೊಳಿಸಲು ಕೇರಳ ಸರ್ಕಾರ ರೂ 60 ಲಕ್ಷ ಮೀಸಲಿರಿಸಿದೆ.ಕನ್ನಡ ಬಲ್ಲವರ ನೇಮಕಕ್ಕೆ ಆದೇಶ!

ಒಂದೆಡೆ ಸರ್ಕಾರ ಸದ್ದಿಲ್ಲದೆ ಕನ್ನಡ ವಿರೋಧಿ ಪ್ರಕ್ರಿಯೆ ಮುಂದುವರಿಸಿದರೆ, ಇನ್ನೊಂದೆಡೆ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ಜಿಲ್ಲಾಧಿಕಾರಿ ವಿವಿಧ ಇಲಾಖೆಗಳಿಗೆ ಆದೇಶಿಸುತ್ತಾರೆ.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ, ಡಾ. ಪಿ. ಪ್ರಭಾಕರನ್ ಆಯೋಗ ಮಾಡಿದ ಪ್ರಸ್ತಾಪಗಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಮುಖ್ಯಕಾರ್ಯದರ್ಶಿ ನೀಡಿದ ನಿರ್ದೇಶನದ ಅನ್ವಯದ ಕೃಷಿ ಭವನ, ಗ್ರಾಮ ಕಚೇರಿ, ಗ್ರಾಮ ಪಂಚಾಯ್ತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡ ಬಲ್ಲವರಿಲ್ಲದೆ ತೊಂದರೆಯಾಗುತ್ತಿದೆ. ಕಂದಾಯ, ಪೊಲೀಸ್, ಆರೋಗ್ಯ, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳಲ್ಲಿ ಕನ್ನಡಿಗರು ಸಮಸ್ಯೆ ಎದುರಿಸುತ್ತಿದ್ದು, ಈ ಇಲಾಖೆಗಳಲ್ಲಿ ಕನ್ನಡ ಬಲ್ಲವರನ್ನು ನೇಮಿಸುವಂತೆ ಸೂಚಿಸಿದೆ.

ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ನಿಯಮಗಳನ್ನು ಅನುಷ್ಠಾನಗೊಳಿಸಬೇಕು. ಎಲ್ಲ ಪ್ರಮುಖ ಸರ್ಕಾರಿ ಆದೇಶ-ನಿರ್ದೇಶನಗಳು, ಮತದಾರಪಟ್ಟಿ ಇತ್ಯಾದಿಗಳನ್ನು ಅಲ್ಪಸಂಖ್ಯಾತ ಭಾಷೆಯಲ್ಲೂ ಪ್ರಕಟಿಸಬೇಕು. ಜನಸಾಮಾನ್ಯರು ಬಳಸುವ ಅರ್ಜಿ ನಮೂನೆ ಇತ್ಯಾದಿಗಳನ್ನು ಪ್ರಾದೇಶಿಕ ಭಾಷೆ ಹಾಗೂ ಅಲ್ಪಸಂಖ್ಯಾತ ಭಾಷೆ ಎರಡರಲ್ಲೂ ಮುದ್ರಿಸಬೇಕು. ದಾಖಲೆಗಳನ್ನು ಅಲ್ಪಸಂಖ್ಯಾತ ಭಾಷೆಯಲ್ಲೂ ಸಿದ್ಧಪಡಿಸಲು, ಸರ್ಕಾರಿ ಕಚೇರಿಗಳೊಂದಿಗೆ ಪತ್ರ ವ್ಯವಹಾರ ಮಾಡಲು ಅವಕಾಶ ಒದಗಿಸಬೇಕು.

ಆಡಳಿತದ ಅನುಕೂಲ ಪರಿಗಣಿಸಿ ಅಲ್ಪಸಂಖ್ಯಾತ ಭಾಷೆಯ ಜ್ಞಾನ ಇರುವವರನ್ನು ನೇಮಿಸಬೇಕು. ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ದ್ವಿಭಾಷಾ ಅರ್ಜಿ ನಮೂನೆ ಒದಗಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. ಈ ಆದೇಶದ ಮಧ್ಯೆಯೇ ಕನ್ನಡಿಗರನ್ನು ಮಲಯಾಳೀಕರಣಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ಮುಂದುವರಿದಿದೆ.

-ರಾಜೇಶ್ ರೈ ಚಟ್ಲ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.