ಮಂಗಳವಾರ, ಜೂನ್ 15, 2021
26 °C

ಕಿಂಗ್‌ಫಿಷರ್: ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಾಕಿ ಪಾವತಿಸದ ಹಿನ್ನೆಲೆಯಲ್ಲಿ, ಜಾಗತಿಕ ಟ್ರಾವೆಲ್ ಏಜೆಂಟರ ಒಕ್ಕೂಟ- ಅಂತರರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆಯು (ಐಎಟಿಎ), ಖಾಸಗಿ ವಿಮಾನ ಯಾನ ಸಂಸ್ಥೆ ಕಿಂಗ್‌ಫಿಷರ್ ಸದಸ್ಯತ್ವವನ್ನು 2ನೇ ಬಾರಿಗೆ ಅಮಾನತುಗೊಳಿಸಿದ್ದು, ತಕ್ಷಣದಿಂದಲೇ ಸಂಸ್ಥೆಯ ಟಿಕೆಟ್ ಬುಕಿಂಗ್ ಸ್ಥಗಿತಗೊಳಿಸಲು ಟ್ರಾವೆಲ್ ಏಜೆಂಟ್ ಸಂಸ್ಥೆಗಳಿಗೆ ಸೂಚಿಸಿದೆ.ಜಾಗತಿಕವಾಗಿ ನಗದು ವಹಿವಾಟು ಇತ್ಯರ್ಥಗೊಳಿಸಿಕೊಳ್ಳಲು ಅಂತರರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳು `ಐಎಟಿಎ~ದ `ಐಸಿಎಚ್~ (ಕ್ಲಿಯರಿಂಗ್) ವ್ಯವಸ್ಥೆ ಬಳಸಿಕೊಳ್ಳುತ್ತವೆ. ನಿಗದಿತ ಕಾಲಮಿತಿಯೊಳಗೆ ಕಿಂಗ್‌ಫಿಷರ್ ಬಾಕಿ ಇತ್ಯರ್ಥ ಮಾಡದ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫೆಬ್ರುವರಿ ತಿಂಗಳಿನಿಂದೀಚೆಗೆ ಎರಡನೆ ಬಾರಿಗೆ ಇಂತಹ ನಿರ್ಧಾರಕ್ಕೆ ಬರಲಾಗಿದೆ. `ಐಎಟಿಎ~ದ ನಿರ್ಧಾರದಿಂದಾಗಿ ಕಿಂಗ್‌ಫಿಷರ್ ವಿಮಾನಗಳಲ್ಲಿ ಟಿಕೆಟ್ ಕಾದಿರಿಸಲು ಗೆಲಿಲಿಯೊ, ಸಬ್ರೆ ಮತ್ತಿತರ ಜಾಗತಿಕ ಟ್ರಾವೆಲ್ ಏಜೆಂಟ್ ಸಂಸ್ಥೆಗಳ ಸೇವೆ ಪಡೆಯುವ ಬಗ್ಗೆ ಈಗ ಅನುಮಾನಗಳು ಮೂಡಿವೆ.ವಿಮಾನಯಾನ ಮತ್ತು ವಾಯು ಯಾನಕ್ಕೆ ಸಂಬಂಧಿಸಿದ ಇತರ ಸಂಸ್ಥೆಗಳು, ಇತರ ವಿಮಾನ ಯಾನ ಅಥವಾ ಸಂಸ್ಥೆಗಳಿಗೆ ಒದಗಿಸಿದ ಸೇವೆಯ ಹಣಕಾಸು ವಹಿವಾಟು ಇತ್ಯರ್ಥಪಡಿಸಿಕೊಳ್ಳಲು `ಐಎಟಿಎ~ಗೆ ಸೇರ್ಪಡೆಗೊಂಡಿರುತ್ತವೆ.ಕಿಂಗ್‌ಫಿಷರ್ ಹೇಳಿಕೆ: ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸರ್ಕಾರದ ವಿವಿಧ ಇಲಾಖೆಗಳು ಸ್ಥಗಿತಗೊಳಿಸಿರುವುದರಿಂದ `ಐಎಟಿಎ ಕ್ಲಿಯರಿಂಗ್ ಹೌಸ್~ಗೆ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿಯೇ ಈ ಬಿಕ್ಕಟ್ಟು ಇತ್ಯರ್ಥಪಡಿಸಲಾಗುವುದು ಎಂದು ಕಿಂಗ್‌ಫಿಷರ್ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.