ಸೋಮವಾರ, ಜನವರಿ 27, 2020
14 °C

ಕಿರಣಾಧರ ಗಂಗಾಧರ!

ರಮೇಶ ಕೆ. Updated:

ಅಕ್ಷರ ಗಾತ್ರ : | |

ಮಕರ ಸಂಕ್ರಾಂತಿ ದಿನ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನದ ಕ್ಷಣಗಣನೆ ಆರಂಭವಾದರೆ, ಇಲ್ಲಿ ಬೆಂಗಳೂರಿನಲ್ಲಿ ಅಪೂರ್ವ ಸಂಗಮಕ್ಕಾಗಿ ಭಕ್ತಾದಿಗಳ ಕಾತರ. ಈ ಸಂಕ್ರಾತಿಯಂದು (ಭಾನುವಾರ) ದಕ್ಷಿಣಾಭಿಮುಖ ಶಿವನನ್ನು ಸೂರ್ಯನು ಸ್ಪರ್ಶಿಸುವ ಅದ್ಭುತ ಕ್ಷಣಗಳನ್ನು ಉದ್ಯಾನನಗರಿಯ ಭಕ್ತರು ಕಣ್ಣಲ್ಲಿ ತುಂಬಿಕೊಳ್ಳಲಿದ್ದಾರೆ.ಸಂಕ್ರಾಂತಿಯ ಮೊದಲ ಹತ್ತು ದಿನ ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಚಲಿಸುವ ಎಲ್ಲಾ ಲಕ್ಷಣಗಳು ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಕಾಣಸಿಗುತ್ತವೆ.ಆದರೆ ಮಕರ ಸಂಕ್ರಾಂತಿಯಂದು ಸೂರ್ಯಾಸ್ತ ಸಮಯದಲ್ಲಿ ದೇವಸ್ಥಾನದ ಪಶ್ಚಿಮ ಭಾಗದ ಕಿಟಕಿಯ ಮೂಲಕ ಪ್ರವೇಶಿಸುವ ಕಿರಣಗಳು ದೇವದ್ವಾರದ ಮೂಲಕ ಹಾದು ನಂದಿಯ ಕೋಡುಗಳ ಮಧ್ಯಭಾಗದಿಂದ ಶಿವಲಿಂಗದ ಪಾದವನ್ನು ನೇರವಾಗಿ ಸ್ಪರ್ಶಿಸುತ್ತವೆ. ಈ ಮೂಲಕ ಸಂಪೂರ್ಣವಾಗಿ ಪಥ ಬದಲಿಸುವ ಘಳಿಗೆಯನ್ನು ಕಣ್ತುಂಬಿಕೊಳ್ಳಬಹುದು.ಮಧ್ಯಾಹ್ನ ಮೂರು ಗಂಟೆಯಿಂದಲೇ ಈ ಅಪೂರ್ವ ದೃಶ್ಯ ನೋಡಲು ಭಕ್ತಾದಿಗಳು ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೇರುತ್ತಾರೆ. ಸಂಜೆ 5ರಿಂದ 5.20ರ ಮಧ್ಯೆ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುತ್ತವೆ. ಭಕ್ತಾದಿಗಳಿಗೆ ಇದು ರೋಮಾಂಚಕ ಕ್ಷಣ.

 ಈ ಗುಹಾಂತರ ದೇವಾಲಯಕ್ಕೆ ಸಹಸ್ರಾರು ವರ್ಷಗಳ ಐತಿಹ್ಯವಿದೆ. ಇದು ತ್ರೇತಾಯುಗದಲ್ಲಿ ಗೌತಮ ಮಹರ್ಷಿ ಹಾಗೂ ಭಾರದ್ವಾಜ ಮುನಿಗಳು ಪೂಜೆ ಮಾಡಿದ ಸ್ಥಳ. ಇವರು ಪ್ರಾತಃ ಕಾಲದಲ್ಲಿ ಕಾಶಿ, ಮಧ್ಯಾಹ್ನ ಗಂಗಾಧರೇಶ್ವರನಿಗೆ, ಸಂಜೆ ಶಿವಗಂಗೆಯಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂಬ ನಂಬಿಕೆಯಿದೆ.ದೇವಾಲಯದ ಗರ್ಭಗುಡಿಯ ಹಿಂಭಾಗದಲ್ಲಿ ಎರಡು ಗುಹೆಗಳಿವೆ. ಒಂದು ಕಾಶಿಗೂ ಮತ್ತೊಂದು ಶಿವಗಂಗೆಗೂ ಹೋಗುತ್ತದೆ ಎಂಬ ಐತಿಹ್ಯವಿದೆ.ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಸ್ಥಾನವು ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ಧಾರವಾಯಿತು. ಇಲ್ಲಿನ ಸ್ವಯಂಭೂ ಲಿಂಗದ ಬಲಭಾಗದಲ್ಲಿ ಪಾರ್ವತಿ, ಆಕೆಯ ಪಕ್ಕ ದುರ್ಗೆಯಿದ್ದಾಳೆ. ಇದು ಶಕ್ತಿ ಸ್ಥಳ ಎಂದು ಹೇಳುತ್ತಾರೆ ಪ್ರಧಾನ ಅರ್ಚಕ ಎಸ್.ಸೋಮಸುಂದರ ದೀಕ್ಷಿತರು.ಇಪ್ಪತ್ತೈದು ವರ್ಷಗಳ ಹಿಂದೆ ಈ ಅಪೂರ್ವ ಸಂಗಮವನ್ನು ವೀಕ್ಷಿಸಲು ಹೆಚ್ಚೆಂದರೆ 50-60 ಭಕ್ತರು ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಒಳಭಾಗ ತುಂಬಾ ವಿಶಾಲವಾಗಿಲ್ಲ. ಹಾಗಾಗಿ ಭಕ್ತರಿಗೆ  ಈ ಕ್ಷಣದ ದರ್ಶನ ಮಾಡಿಸಲು ದೇವಾಲಯದ ಮುಂಭಾಗದಲ್ಲಿ ಬೃಹತ್ ವಿಡಿಯೊ ಪರದೆ ಅಳವಡಿಸಲಾಗುತ್ತಿದೆ.ಸೂರ್ಯಸ್ನಾನಕ್ಕೂ ಮುನ್ನ ಗಂಗಾಧರನಿಗೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಅಂದು ರಾತ್ರಿ11ರವರೆಗೂ ವಿಶೇಷ ಪೂಜೆ ಸಲ್ಲುತ್ತದೆ. 

 

ಪ್ರತಿಕ್ರಿಯಿಸಿ (+)