ಭಾನುವಾರ, ಜೂನ್ 13, 2021
21 °C

ಕಿರುತೆರೆಯಲ್ಲಿ ಗುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿರುತೆರೆಯಲ್ಲಿ ಗುರು

ಸುಮಾರು ಎರಡು ವರ್ಷದ ಹಿಂದೆಯೇ `ಡೈರೆಕ್ಟರ್ ಸ್ಪೆಷಲ್~ ಎಂಬ ವಿಶಿಷ್ಟ ಶೀರ್ಷಿಕೆಯ ಚಿತ್ರಕ್ಕೆ ಕೈಹಾಕಿ ಕುತೂಹಲ ಮೂಡಿಸಿದ್ದ `ಮಠ~ ಗುರುಪ್ರಸಾದ್ ಚಿತ್ರದ ಬಿಡುಗಡೆಗೆ ಮುನ್ನವೇ ಮತ್ತಷ್ಟು ಬ್ಯುಸಿಯಾಗಿದ್ದಾರೆ.

ಅವರೀಗ ಬ್ಯುಸಿಯಾಗಿರುವುದು ಕಿರುತೆರೆಯಲ್ಲಿ. ಅದು ಕೂಡ ಕೋಟಿ ಕೋಟಿ ಹಣ ಎಣಿಸುವ ಕಾರ್ಯಕ್ರಮದಲ್ಲಿ. ನಿಜ. ಸುವರ್ಣ ವಾಹಿನಿಯಲ್ಲಿ ಮಾರ್ಚ್ 12ರಿಂದ ಪ್ರಾರಂಭವಾಗಲಿರುವ ಪುನೀತ್ ರಾಜ್‌ಕುಮಾರ್ ಸಾರಥ್ಯದ `ಕನ್ನಡದ ಕೋಟ್ಯಧಿಪತಿ~ ಕಾರ್ಯಕ್ರಮದ ಬೆನ್ನೆಲುಬು ಗುರುಪ್ರಸಾದ್. ಈ ಕಾರ್ಯಕ್ರಮದ ರೂಪುರೇಷೆ, ಪ್ರಶ್ನೆ-ಉತ್ತರ, ಚಿತ್ರೀಕರಣ ಹೀಗೆ ವಿವಿಧ ವಿಭಾಗಗಳಿಗೆ ಒಂದೊಂದು ತಂಡವಿದ್ದರೂ ಗಮನ ಸೆಳೆದಿರುವುದು ಗುರುಪ್ರಸಾದ್ ಅವರ ಸ್ಕ್ರಿಪ್ಟ್. ಕಾರ್ಯಕ್ರಮದಲ್ಲಿ ಪುನೀತ್ ತರಹೇವಾರಿ ಪ್ರಶ್ನೆಗಳನ್ನು ಕೇಳುತ್ತಾರೆ, ನಗಿಸುತ್ತಾರೆ, ಭಾವನೆಗಳನ್ನು ಹಂಚಿಕೊಳ್ಳುತ್ತಾರೆ, ಪ್ರತಿ ಕಂತಿನ ಕೊನೆಯಲ್ಲಿ ಕಥೆ ಹೇಳುತ್ತಾರೆ. ಹೀಗೆ ಪುನೀತ್ ಮಾತಿನ ಮಳೆಯ ಹಿಂದಿನ ರೂವಾರಿ ಗುರುಪ್ರಸಾದ್. ಸುಮಾರು ಮೂರು ತಿಂಗಳಿನಿಂದ ಈ ರಿಯಾಲಿಟಿ ಷೋಗೆ ಸ್ಕ್ರಿಪ್ಟ್ ರಚಿಸುವುದರಲ್ಲಿ ತೊಡಗಿಕೊಂಡಿರುವ ಗುರುಪ್ರಸಾದ್, ಈ ಅವಧಿಯಲ್ಲಿ ದಿನಕ್ಕೆ 18ಗಂಟೆ ಸಮಯವನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದರಂತೆ.

ಈಗ ಕಾರ್ಯಕ್ರಮದ ಕೆಲವು ಕಂತುಗಳ ಚಿತ್ರೀಕರಣ ಪೂರ್ಣಗೊಂಡಿರುವುದರಿಂದ ಗುರುಪ್ರಸಾದ್ ಸ್ವಲ್ಪ ನಿರಾಳರಾಗಿದ್ದಾರೆ. ಈ ಮಧ್ಯೆ ತಮ್ಮ ಚಿತ್ರಗಳತ್ತ ಗಮನ ಹರಿಸುವಷ್ಟು ಬಿಡುವು ದೊರೆತಿದೆ. ವಿಭಿನ್ನ ಕಥಾವಸ್ತುವನ್ನು ಹೊಂದಿದೆ ಎನ್ನಲಾದ `ಡೈರೆಕ್ಟರ್ ಸ್ಪೆಷಲ್~ ಏಪ್ರಿಲ್‌ನಲ್ಲಿ ತೆರೆಕಾಣಲಿದೆ. ಈಗ ಚಿತ್ರದ ನಿರ್ಮಾಣೋತ್ತರ ಕಾರ್ಯಗಳು ನಡೆಯುತ್ತಿವೆ. ಇದೇ ತಿಂಗಳ ಅಂತ್ಯಕ್ಕೆ ಚಿತ್ರವನ್ನು ಸೆನ್ಸಾರ್ ಮಂಡಳಿಯ ಮುಂದಿಡುವುದು ಗುರುಪ್ರಸಾದ್ ಉದ್ದೇಶ.

ಚಿತ್ರದಲ್ಲಿ ರಂಗಾಯಣ ರಘು ಪಾತ್ರ ಅತ್ಯಂತ ಹೊಸತನದಿಂದ ಕೂಡಿದೆ. ಜನರಿಗೆ ವಿಶಿಷ್ಟ ಅನುಭವವನ್ನಂತೂ ಚಿತ್ರ ನೀಡಲಿದೆ ಎನ್ನುತ್ತಾರೆ ಅವರು. ಈ ನಡುವೆ ಕೆಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದೇನೆ. ನನ್ನ ಚಿತ್ರವನ್ನಂತೂ ಅಚ್ಚುಕಟ್ಟಾಗಿ ಮುಗಿಸಿದ್ದೇನೆ ಎನ್ನುವ ಗುರುಪ್ರಸಾದ್ ಕೈಯಲ್ಲಿ ಇನ್ನೆರಡು ಚಿತ್ರಗಳಿವೆ. ಅವು ಯಾವ ಚಿತ್ರಗಳು? ಯಾವಾಗ ಶುರು ಮಾಡುತ್ತೀರಾ? ಎಂಬ ಪ್ರಶ್ನೆ ಮುಂದಿಟ್ಟರೆ, `ಡೈರೆಕ್ಟರ್ ಸ್ಪೆಷಲ್~ ತೆರೆ ಮೇಲೆ ಬರಲಿ. ಅದಾದ ಬಳಿಕ ಹೇಳುತ್ತೇನೆ. ಅಲ್ಲಿಯವರೆಗೂ ಸಸ್ಪೆನ್ಸ್!~ ಎಂದು ಮೆಲ್ಲನೆ ನಗೆ ಹರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.