ಮಂಗಳವಾರ, ಮಾರ್ಚ್ 2, 2021
29 °C
ಕಲಾಪ

ಕುಂಚದ ಕಣ್ಣಲ್ಲಿ ಮಹಾನಗರದ ಆಧುನಿಕತೆ

ಶೋಭಾ ವಿ. Updated:

ಅಕ್ಷರ ಗಾತ್ರ : | |

ಕುಂಚದ ಕಣ್ಣಲ್ಲಿ ಮಹಾನಗರದ ಆಧುನಿಕತೆ

‘ದ ಮಾಡರ್ನಿಸ್ಟ್‌ ಆಫ್‌ ಬೆಂಗಳೂರು’ ಎಂಬ ಹೆಸರಿನಲ್ಲಿ ಆರ್ಟ್‌ ಹೌಸ್‌ ಗ್ಯಾಲರಿಯಲ್ಲಿ ಅಪರೂಪದ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಹಲವು ಹಿರಿಯ ಕಲಾವಿದರ ಕಲಾಕೃತಿಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶ ಇಲ್ಲಿ ಲಭ್ಯ.ಕಲಾವಿದರಾದ ಎಸ್‌.ಜಿ. ವಾಸುದೇವ್‌, ಬಾಲನ್‌ ನಂಬಿಯಾರ್, ರೇಖಾ ಹೆಬ್ಬಾರ್‌ ರಾವ್‌, ಜಸು ರಾವಲ್‌, ಚಂದ್ರನಾಥ್‌ ಆಚಾರ್ಯ, ಗುರುದಾಸ್‌ ಶೆಣೈ, ಮಿಲಿಂದ್‌ ನಾಯಕ್‌, ಜಿ.ಸುಬ್ರಮಣಿಯನ್‌, ಪ.ಸ.ಕುಮಾರ್‌ ಮತ್ತು ಪರೇಶ್‌ ಹಜ್ರ ಹೀಗೆ ಈಗಾಗಲೇ ಜನಪ್ರಿಯಗೊಂಡಿರುವ ಹಲವು ಕಲಾವಿದರ ಕಲಾಕೃತಿಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶ ಈ ಪ್ರದರ್ಶನದಲ್ಲಿದೆ.ಜಲವರ್ಣ, ಮಿಶ್ರ ಮಾಧ್ಯಮ, ಆಕ್ರಿಲಿಕ್‌, ತೈಲವರ್ಣ ಮತ್ತು ಕ್ಯಾನ್‌ವಾಸ್‌ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿವೆ.ಪ್ರತಿ ಕಲಾಕೃತಿಗಳೂ ವಸ್ತು, ವಿಷಯ, ಮಾಧ್ಯಮ, ಕಲಾವಿದನ ದೃಷ್ಟಿಕೋನ ಹೀಗೆ ಹಲವು ದೃಷ್ಟಿಗಳಿಂದ ಭಿನ್ನವಾಗಿರುವುದು ಪ್ರದರ್ಶನಕ್ಕೆ ವೈವಿಧ್ಯತೆ ಒದಗಿಸಿದೆ. ಏಕತಾನತೆಯನ್ನೂ ಮುರಿದಿದೆ. ಒಂದೇ ಫ್ರೇಮ್‌ನಲ್ಲಿ ರಾಜ, ಕುದುರೆ, ಮನುಷ್ಯ, ಪಕ್ಷಿ, ಕೋತಿ, ಕುರಿ, ಗೊಂಬೆಯಾಟದ ಮಹಿಳೆ ಹೀಗೆ ಹಲವು ಜೀವರಾಶಿಗಳನ್ನು ಸೇರಿಸಿ ರಚಿಸಿದ ಚಂದ್ರನಾಥ್‌ ಆಚಾರ್ಯ ಅವರ ಕಲಾಕೃತಿಯನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಾರೆ.ರಾಜ ಕೂಲಿಂಗ್‌ ಗ್ಲಾಸ್‌ ಹಾಕಿರುವ ಈ ಚಿತ್ರವು ಪರಂಪರೆಯೊಟ್ಟಿಗೆ ಆಧುನಿಕತೆ ಬೆಸೆದುಕೊಂಡಿರುವ ಪರಿಯನ್ನು ಪ್ರತಿಬಿಂಬಿಸವಂತಿದೆ. ಅಲ್ಲದೆ ಬೊಂಬೆ ಯಾಟದ ಸೂತ್ರಧಾರಿಯನ್ನು ಹಲವು ಬಣ್ಣ ಬಳಸಿ ‘ಕಲರ್‌ಫುಲ್‌’ ಗೊಳಿಸಿದ್ದಾರೆ.ಹಳೇ ಕಾಲದ ಪಾತ್ರಧಾರಿಗಳಿಗೆ ಆಧುನಿಕ ಕಾಲದ ಜೀವನ ಶೈಲಿಯ ರೂಪವನ್ನು ನೀಡಿದ್ದಾರೆ. ಕ್ರಿಕೆಟ್‌ ಆಡುವುದಕ್ಕೆ ಉಡುಪು ಧರಿಸಿ ರಾಜನು ಸಿದ್ಧವಾಗಿರುವಂತೆ, ರಾಣಿಯು ಮೊಬೈಲ್‌ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಮತ್ತು  ವಿಕೆಟ್‌ ಕೀಪರ್‌ ರೂಪದಲ್ಲಿ ಮಂಗನನ್ನು ರೂಪಿಸಿರುವುದು ಚಂದ್ರನಾಥ್‌ ಆಚಾರ್ಯರ ಕಲಾ ಚಿಂತನೆಯ ವೈಖರಿಗೆ ಉದಾಹರಣೆಗಳು.ಮಿಲಿಂದ್‌ ಅವರ ಕುಂಚವನ್ನು ತೀವ್ರವಾಗಿ ಪ್ರಭಾವಿಸಿದ್ದು ಪ್ರಕೃತಿ. ಈ ಮಾತಿಗೆ ಅವರ ಕಲಾಕೃತಿಗಳೇ ಪುರಾವೆ. ಕಾಡು ಮೇಡುಗಳಲ್ಲಿ ಗುಂಪುಗುಂಪಾಗಿ ನಿಂತಿರುವ ಬಿದಿರಿನ ಪೊದೆ, ಒಮ್ಮೆಲೆ ಬಿರುಗಾಳಿಗೆ ತಲೆದೂಗಿ ನೆಲಕ್ಕೆ ಬಾಗಿದಂತೆ ಭಾಸವಾಗುತ್ತದೆ. ಮಿಲಿಂದ್‌ ನಾಯಕ್‌ ಅವರು ಬಿದಿರಿನ ಗುಂಪನ್ನು  ಫ್ರೇಮಿನ ಮೇಲೆ ನೈಜ ರೀತಿಯಲ್ಲಿ ಚಿತ್ರಿಸಿರುವುದು ಅವರ ಸೂಕ್ಷ್ಮ ಗ್ರಹಿಕೆಯನ್ನೂ ತೋರಿಸುವಂತಿದೆ.ಸಂಗಡಿಗರ ಜತೆ ಮಾತುಕತೆಯಲ್ಲಿ ನಿರತರಾಗಿರುವ ಹಳ್ಳಿಯ ಸುಂದರ ವಾತಾವರಣ, ಸಂತೆಯಿಂದ ಮರಳುತ್ತಿರುವ ಮಹಿಳೆಯರ ಚಿತ್ರವನ್ನು ಪ.ಸ. ಕುಮಾರ್‌  ಅವರು ಸುಂದರವಾಗಿ ಚಿತ್ರಿಸಿದ್ದಾರೆ.ಗುರುದಾಸ್‌ ಶೆಣೈ ಅವರ ಚಿತ್ರಗಳ ಫ್ರೇಮಿನಲ್ಲಿ ಗಿಜಿಗುಡುವ ಜನರ ಮಧ್ಯೆ ಬೃಹತ್‌ ಕಟ್ಟಡಗಳು ತಲೆ ಎತ್ತಿವೆ. ನಗರದ ಅಂದ ಇದರಿಂದ ಹಾಳಾಗಿರುವುದನ್ನು ಅವರು ಸಾರಿ ಹೇಳುತ್ತಾರೆ.ಎಸ್‌.ಜಿ. ವಾಸುದೇವ್‌ ಅವರ ರೇಷ್ಮೆ ಎಳೆಯ ವಿನ್ಯಾಸವು ನೋಡಿದ ಕೂಡಲೇ ಆಪ್ತಭಾವ ಹುಟ್ಟಿಸುತ್ತದೆ. ಬಣ್ಣ ಬಣ್ಣದ ರೇಷ್ಮೆ ನೂಲುಗಳಿಂದ ಹೆಣೆದಿರುವ ಈ ಬೊಂಬೆಯ ಚಿತ್ರ ಸಿದ್ಧಗೊಳ್ಳಲು ನಾಲ್ಕು ತಿಂಗಳು ಬೇಕಾಯಿತಂತೆ.ರೇಖಾ ಹೆಬ್ಬಾರ್‌ ರಾವ್‌ ಅವರು ತಮ್ಮ ಕಲ್ಪನೆಯ ದನಿಗೆ ಓಗೊಟ್ಟು ಕುಂಚಗಳಿಂದ ಕ್ಯಾನ್ವಾಸಿನ ಮೇಲೆ ಬಣ್ಣದ ಭಾಷೆಯಲ್ಲಿ ಮಾತನಾಡಿದ್ದಾರೆ. ಇಲ್ಲಿ ಹಲವು ಬಣ್ಣಗಳ ಸಮಾಗಮವೇ ಇದೆ. ಬೆಂಗಳೂರು ನಗರ ರಾತ್ರಿ ಹೊತ್ತು ಕಾಣುವ ಬಗೆ ಇವರ ಚಿತ್ತಾರದಲ್ಲಿ ಮೂಡಿದೆ.ಹಬ್ಬದ ಸಮಯದಲ್ಲಿ ಮಕ್ಕಳು ಪಡುವ ಸಂಭ್ರಮ, ಬಣ್ಣಬಣ್ಣದ ಉಡುಗೆ ತೊಟ್ಟು ನಲಿದಾಡುವ ಮುದ್ದು ಮಕ್ಕಳ ಭಾವ ಜಗತ್ತು ಜಿ.ಸುಬ್ರಮಣಿಯನ್‌ ಅವರ ಸೃಜನಶೀಲತೆಯ ಮೂಸೆಯಲ್ಲಿ ಅರಳಿದೆ. ಸುಂದರ ವಾತಾವರಣದಲ್ಲಿ  ಗುಡಿ, ಚರ್ಚ್‌, ಮಸೀದಿಗಳನ್ನು ತಿಳಿಯಾದ ಬಣ್ಣಗಳಿಂದ ಸಿಂಗಾರಗೊಳಿಸಿದ್ದಾರೆ ಜಸು ರಾವಲ್‌.ಪ್ರದರ್ಶನದ ವಿವರಗಳು

ಆಗಸ್ಟ್‌ 6ರವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ಪ್ರದರ್ಶನವಿರುತ್ತದೆ.

ವಿಳಾಸ: ಆರ್ಟ್‌ ಹೌಸ್‌ ಗ್ಯಾಲರಿ, 63,

ಅರಮನೆ ರಸ್ತೆ, ವಸಂತನಗರ,

ಮೊ– 8041148662.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.