ಮಂಗಳವಾರ, ಜನವರಿ 28, 2020
29 °C

ಕುಂಬ್ಳೆ ಮಾತಿನ ಗೂಗ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರಲ್ಲಿ ಕನ್ನಡಿಗ, ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಕೂಡ ಒಬ್ಬರು.

 

ಒಂದು ಕಾಲದಲ್ಲಿ ತನ್ನ ಸ್ಪಿನ್ ಮೋಡಿಯಿಂದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಅವರು, ಭಾರತ ತಂಡದ ಸ್ಪಿನ್ ವಿಭಾಗದ ಶಕ್ತಿಯಾಗಿದ್ದರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರ. ಅವರಿಲ್ಲದ ಭಾರತ ತಂಡವನ್ನು ಊಹಿಸಿಕೊಳ್ಳುವುದು ಕಷ್ಟವಿತ್ತು.ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿದ್ದು, ಈಗ ಅವು ಇತಿಹಾಸದ ಪುಟ ಸೇರಿವೆ. ಏಷ್ಯಾ ಉಪಖಂಡ ಮತ್ತು ವಿದೇಶದ ಪಿಚ್‌ಗಳಲ್ಲಿ ಅವರ ಸಾಧನೆ ಸಮನಾಗಿತ್ತು. ಅದು ಯಾವುದೇ ತರಹದ ಪಿಚ್ ಆಗಿರಲಿ ಅವರ ಬೌಲಿಂಗ್ ಜಾದೂ ಕಡಿಮೆಯಾಗಿರಲಿಲ್ಲ. ಕುಂಬ್ಳೆ ಬೌಲಿಂಗ್‌ಗೆ ಬರುತ್ತಿದ್ದರೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳ ಕರತಾಡನ ಮುಗಿಲು ಮುಟ್ಟಿತ್ತಿತ್ತು. ಸದ್ಯ ಅನಿಲ್ ಎಲ್ಲ ಬಗೆಯ ಕ್ರಿಕೆಟ್‌ಗೆ ವಿದಾಯ ಹೇಳಿರಬಹುದು. ಆದರೆ, ಅವರ ಜಾದೂ ಮಾತ್ರ ಕಡಿಮೆಯಾಗಿಲ್ಲ.ಅದು ಕ್ರಿಕೆಟ್ ಅಂಗಳ ಆಗಿರಲಿಲ್ಲ. ಆದರೂ ಅಲ್ಲಿ ಕುಂಬ್ಳೆ ಅವರ ಒಂದೊಂದು `ಗೂಗ್ಲಿ~ಗೂ ಯುವಕ/ಯುವತಿಯರು ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದ್ದರು. ಅಂದಹಾಗೆ ಅವುಗಳು ಬೌಲಿಂಗ್ `ಗೂಗ್ಲಿ~ಯಾಗಿರದೆ ಅವರ ಹಿತವಚನದ `ಗೂಗ್ಲಿ~ಗಳಾಗಿದ್ದವು.ಅದಕ್ಕೆ ಮನಸೋತು ಅಲ್ಲಿದ್ದವರಿಂದ ಈ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ವೇದಿಕೆಯಾದದ್ದು `ತಂಬಾಕು ಮುಕ್ತ ಭಾರತ~ ಅಭಿಯಾನ. ನಗರದ ರಾಜರಾಜೇಶ್ವರಿ ದಂತ ಕಾಲೇಜು, ಭಾರತೀಯ ದಂತ ವೈದ್ಯಕೀಯ ಸಂಸ್ಥೆ ಮತ್ತು ನಾರಾಯಣ ಸೇವಾ ಸಂಸ್ಥೆಯ ಸಹಯೋಗದಲ್ಲಿ ಈಚೆಗೆ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಂಬ್ಳೆ ಮಾತನಾಡುತ್ತಿದ್ದರೆ, ಅಲ್ಲಿ ನೆರೆದಿದ್ದ ಯುವಸಮೂಹದಿಂದ ಅಷ್ಟೇ ಉತ್ಸಾಹದ ಪ್ರತಿಕ್ರಿಯೆ ಸಿಗುತ್ತಿತ್ತು.`ಧೂಮಪಾನ, ತಂಬಾಕು ಸೇವನೆಯಂತಹ ಚಟಗಳಿಲ್ಲದ ವ್ಯಕ್ತಿ ಮಾತ್ರ ಒಬ್ಬ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯ. ಹಾಗಾಗಿ ನೀವು ಉತ್ತಮ ವ್ಯಕ್ತಿಯಾಗಬೇಕಾದರೆ ಇವುಗಳಿಂದ ದೂರ ಇರಬೇಕು. ನೀವು ಚಟಗಳ ಸಹವಾಸಕ್ಕೆ ಹೋಗುವುದಿಲ್ಲ ತಾನೆ?~ ಎಂಬ ಅವರ ಪ್ರಶ್ನೆಗೆ ಹೌದು ಎಂಬ ಉತ್ತರ ತೂರಿ ಬಂತು. ಹೀಗೆ ಅನೇಕ ಪ್ರಶ್ನೆಗಳ ಜೊತೆಗೆ ಯಾವುದೇ ಚಟ ಬೆಳೆಸಿಕೊಳ್ಳದೆ ಉತ್ತಮ ಕ್ರೀಡಾಪಟುವಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದರು.`ಕ್ರೀಡಾಕ್ಷೇತ್ರ ಸೇರಿದಂತೆ ಇನ್ನಿತರ ಯಾವುದೇ ವಲಯದಲ್ಲಿ ಉನ್ನತವಾದುದ್ದನ್ನು ಸಾಧಿಸಬೇಕಾದರೆ ಚಟಗಳಿಂದ ದೂರ ಇರಬೇಕು. ಆಗ ಮಾತ್ರ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಸಾಧ್ಯ~ ಎಂದು ಕಿವಿಮಾತು ಹೇಳಿದರು.ಒಂದು ತಿಂಗಳು19 ರಾಜ್ಯಗಳಲ್ಲಿ 9,000 ಕಿ.ಮೀ ರಸ್ತೆ ಜನ ಜಾಗೃತಿ ಅಭಿಯಾನಕ್ಕೆ ಇದೇ ಸಂದರ್ಭದಲ್ಲಿ ಅವರು ಚಾಲನೆ ನೀಡಿದರು. ಆನಂತರ ವಿದ್ಯಾರ್ಥಿಗಳಿಂದ ಕಾರು ರ‌್ಯಾಲಿ ನಡೆಯಿತು. ಬೆಂಗಳೂರಿನಿಂದ ಆರಂಭವಾದ ರ‌್ಯಾಲಿಯು ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ದೆಹಲಿ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಂಚರಿಸಲಿದೆ.ರಾಜರಾಜೇಶ್ವರಿ ಗ್ರೂಪ್ ಆಫ್ ಇನ್ಸ್‌ಟಿಟ್ಯೂಶನ್ಸ್ ಅಧ್ಯಕ್ಷ ಷಣ್ಮುಗಂ, ಭಾರತೀಯ ದಂತ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಡಾ. ಜಾರ್ಜ್ ಥಾಮಸ್ ಉಪಸ್ಥಿತರಿದ್ದರು.

ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿವರ್ಷ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದು, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ  ಜನರಲ್ಲಿ ತಿಳಿವಳಿಕೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

 -

 

ಪ್ರತಿಕ್ರಿಯಿಸಿ (+)