ಭಾನುವಾರ, ಜೂನ್ 20, 2021
20 °C

ಕುಟುಂಬ ನಿರ್ವಹಣೆಗೆ ಶಾಲೆ ಬಿಟ್ಟ ಬಾಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಪ್ಪ ಕಾಲು ಮುರಿದುಕೊಂಡು ಬಿದ್ದಿದ್ದಾನೆ. ಅಮ್ಮ ಆತನ ಆರೈಕೆಯಲ್ಲಿ ತೊಡಗಿದ್ದಾಳೆ. 7ನೇ ತರಗತಿಯಲ್ಲಿ ಓದುತ್ತಿದ್ದ ಮಗಳು ಈಗ ಶಾಲೆ ಬಿಟ್ಟು ಕೂಲಿಗೆ ಹೋಗುತ್ತಿದ್ದಾಳೆ.ಎಚ್.ಡಿ.ಕೋಟೆ ತಾಲ್ಲೂಕು ಹುಣಸೇಕುಪ್ಪೆ ಹಾಡಿಯ ಭೀಮಸೇನನ ಕುಟುಂಬದ ಕರುಣಾಜನಕ ಕತೆ ಇದು. ಅಪ್ಪ ಅಮ್ಮನ್ನು ಸಾಕಲು ಕೂಲಿಗೆ ಹೊರಟವಳು 13 ವರ್ಷದ ನೀಲ. ಇದೆಲ್ಲಾ ಆರಂಭವಾಗಿದ್ದು ಕಳೆದ ನವೆಂಬರ್ ತಿಂಗಳಿನಿಂದ.2011ರ ನವೆಂಬರ್ 9ರಂದು ಭೀಮಸೇನ ಮತ್ತು ಅವರ ಸಂಗಡಿಗರು ತಾರಕ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದಾಗ ಅರಣ್ಯ ಇಲಾಖೆಯವರು ಮರಗಳ್ಳರು ಎಂದು ಇವರ ಮೇಲೆ ಗುಂಡು ಹಾರಿಸಿದರು. ಭೀಮಸೇನ ಅವರ ಬಲಗಾಲಿಗೆ 10ಕ್ಕೂ ಹೆಚ್ಚು ಗುಂಡಗಳು ತಗಲಿದವು.

 

ಉಳಿದವರು ಅಲ್ಲಿಂದ ಪರಾರಿಯಾದರೆ ಭೀಮಸೇನ ಮಾತ್ರ ಅಲ್ಲಿಯೇ ನರಳುತ್ತಾ ಬಿದ್ದುಕೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಯಲ್ಲಿ ಅವರು 2 ತಿಂಗಳು ಇದ್ದರು. ಈಗ ಅವರ ಕಾಲಿಗೆ ಸರಳು  (ರಾಡ್) ಹಾಕಿ ಮನೆಗೆ ಕಳುಹಿಸಲಾಗಿದೆ. ರಾಡ್ ತೆಗೆಸಲು ಹಣ ಇಲ್ಲದೆ ಅವರು ಕೊರಗುತ್ತಾ ಮನೆಯಲ್ಲಿಯೇ ತೆವಳುತ್ತಿದ್ದಾರೆ.ಈ ನಡುವೆ ಅರಣ್ಯ ಇಲಾಖೆ ಭೀಮಸೇನ ಮತ್ತು ಇತರ ಮೂವರ ವಿರುದ್ಧ ಮರಗಳ್ಳತನದ ಪ್ರಕರಣ ದಾಖಲಿಸಿದೆ. ಮೀನು ಹಿಡಿಯಲು ಹೋದ ತಮ್ಮ ಮೇಲೆ ಅನಗತ್ಯವಾಗಿ ಗುಂಡು ಹಾರಿಸಲಾಗಿದೆ ಎಂದು ಭೀಮಸೇನ ಮತ್ತು ಇತರರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಡೀ ಪ್ರಕರಣದ ಬಗ್ಗೆ ಸಿಓಡಿ ತನಿಖೆ ಕೂಡ ನಡೆಯುತ್ತಿದೆ.ಪ್ರಕರಣ ನಡೆದ ಒಂದು ವಾರದಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಈ ತನಿಖಾ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿಯನ್ನು ನೀಡಿದೆ. ಭೀಮಸೇನ ಮತ್ತು ಸಂಗಡಿಗರು ಮೀನು ಹಿಡಿಯಲು ಹೋಗಿದ್ದರು. ಮರ ಕಡಿಯುವ ಉದ್ದೇಶ ಅವರಿಗೆ ಇರಲಿಲ್ಲ.ಅಲ್ಲದೆ ಅದರ ಕುರುಹುಗಳೂ ಇರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಅನಗತ್ಯವಾಗಿ ಗುಂಡ ಹಾರಿಸಿದ್ದಾರೆ ಎಂದು ಉಪವಿಭಾಗಾಧಿಕಾರಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.ಇಷ್ಟೆಲ್ಲಾ ಆದರೂ ಸರ್ಕಾರದಿಂದ ಭೀಮಸೇನ ಅವರ ಕುಟಂಬಕ್ಕೆ ಯಾವುದೇ ನೆರವು ಸಿಕ್ಕಿಲ್ಲ. ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಅಭಿವೃದ್ಧಿ ಯೋಜನೆ ಅಥವಾ ಜಿಲ್ಲಾಡಳಿತದಿಂದಲೂ ಪರಿಹಾರ, ನೆರವು ಸಿಕ್ಕಿಲ್ಲ. ನೆರವಿಗಾಗಿ ಆದಿವಾಸಿಗಳು ಹೋರಾಟ, ಕಾಲ್ನಡಿಗೆ ಜಾಥಾ ಮಾಡಿದ್ದಾರೆ.ಆದರೆ ಫಲಿತಾಂಶ ಮಾತ್ರ ಸೊನ್ನೆ. ಸುಂಕದಕಟ್ಟೆ ಕಾಡಿನಿಂದ ಹೊರಬಂದು ಹುಣಸೇಕುಪ್ಪೆ ಹಾಡಿಯಲ್ಲಿ ವಾಸವಾಗಿರುವ ಭೀಮಸೇನ ಅವರಿಗೆ ಜಮೀನು ಇಲ್ಲ. ಜೇನುಕುರುಬ ಜಾತಿಗೆ ಸೇರಿದ ಅವರು ಕಾಡಿನ ಉಪ ಉತ್ಪನ್ನಗಳನ್ನು ಸಂಗ್ರಹಿಸಿಯೇ ಬದುಕುತ್ತಿದ್ದರು. ಕೇವಲ ಒಂದು ತಿಂಗಳ ಹಿಂದೆ ಅವರಿಗೆ ಅಂತ್ಯೋದಯ ಕಾರ್ಡ್ ನೀಡಲಾಗಿದೆ.ಭೀಮಸೇನ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳಿಗೆ ಮದುವೆಯಾಗಿ ಒಂದು ಮಗು ಇದೆ. ಅವಳು ಈಗ ಗಂಡನ ಮನೆಯಲ್ಲಿದ್ದಾಳೆ. ಇನ್ನೊಬ್ಬಳು ಮಗಳು ನೀಲಾಳಿಗೆ 13 ವರ್ಷ. 7ನೇ ತರಗತಿಯಲ್ಲಿ ಓದುತ್ತಿದ್ದವಳು ಈಗ ಶಾಲೆ ಬಿಟ್ಟು ಕೂಲಿಗೆ ಹೋಗುತ್ತಿದ್ದಾಳೆ.“ಇಲ್ಲಿಯೇ ಕೂಲಿಗೆ ಹೋದರೆ ಕಡಿಮೆ ಕೂಲಿ ನೀಡುತ್ತಾರೆ. ಕೊಡಗಿಗೆ ಹೋದರೆ ದಿನಕ್ಕೆ 150 ರೂಪಾಯಿ ನೀಡುತ್ತಾರೆ. ಅದಕ್ಕೇ ಅಲ್ಲಿಗೇ ಹೋಗ್ತೀನಿ. ನನಗೆ ಓದಬೇಕು ಎಂಬ ಆಸೆ ಇದೆ. ಆದರೆ ಈಗ ನಾನು ಶಾಲೆಗೆ ಹೋದರೆ ನಮ್ಮ ಕುಟುಂಬ ಬೀದಿ ಪಾಲಾಗುತ್ತದೆ.ಅದಕ್ಕೇ ಕೂಲಿಗೆ ಹೋಗುತ್ತಿದ್ದೇನೆ” ಎನ್ನುತ್ತಾಳೆ ನೀಲ.ಈ ನಡುವೆ ಇತ್ತೀಚೆಗೆ ನಾಗರಹೊಳೆ ಕಾಡಿಗೆ ಬೆಂಕಿ ಬಿತ್ತು. ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದರಿಂದಲೇ ದ್ವೇಷದಿಂದ ಕಾಡಿಗೆ ಬೆಂಕಿ ಹಚ್ಚಲಾಗಿದೆ ಎಂಬ ಆರೋಪಗಳೂ ಕೇಳಿಬಂದವು.

 

`ಕಾಡು ಪ್ರವೇಶಿಸಲು ಸಾಧ್ಯವಾಗದ ನಾವು ಕಾಡಿಗೆ ಬೆಂಕಿ ಹಾಕಿಲ್ಲ. ಬೆಂಕಿ ಬಿದ್ದಿದ್ದು ಕಾಡಿಗೆ ಮಾತ್ರ ಅಲ್ಲಾ ಸಾರ್, ನನ್ನ ಕುಟುಂಬಕ್ಕೇ ಬೆಂಕಿ ಬಿದ್ದಿದೆ. ಆರಿಸಲು ಯಾರೂ ಬರ‌್ತಾ ಇಲ್ಲ~ ಎನ್ನುತ್ತಾರೆ ಭೀಮಸೇನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.