ಕುಡಿಯುವ ನೀರಿನ ಪೂರೈಕೆ ಆದೇಶ

7

ಕುಡಿಯುವ ನೀರಿನ ಪೂರೈಕೆ ಆದೇಶ

Published:
Updated:
ಕುಡಿಯುವ ನೀರಿನ ಪೂರೈಕೆ ಆದೇಶ

ರಾಮನಗರ : ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸನಾ ಉಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯುತ್ ಕಡಿತದಿಂದ ಚನ್ನಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ.ಬೆಸ್ಕಾಂ ಅಧಿಕಾರಿಗಳು ನೀರು ಪೂರೈಕೆಗೆ ಸಮಸ್ಯೆಯಾಗದಂತೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ತಾಕೀತು ಮಾಡಿದರು. ಮುಂಬರುವ ದಿನಗಳಲ್ಲಿ ರಾಮನಗರ, ಮಾಗಡಿ, ಕನಕಪುರ ತಾಲ್ಲೂಕುಗಳಲ್ಲಿಯೂ ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ವಿದ್ಯಾರ್ಥಿ ನಿಲಯಗಳಲ್ಲಿ ಶೇ. 100ರಷ್ಟು ದಾಖಲಾತಿ ಇರುವಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು. ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು.

 

ಗ್ರಾಮಾಂತರ ಪ್ರದೇಶಗಳಲ್ಲಿ ಹಾಳಾಗಿರುವ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಹೈಟೆಕ್ ಸೌಲಭ್ಯವುಳ್ಳ ರಕ್ತ ಪರೀಕ್ಷಾ ಕೇಂದ್ರವಿದೆ.ಡಯಾಲಿಸಿಸ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕಡಿಮೆ ವೆಚ್ಚದಲ್ಲಿ ಈ ಸೌಲಭ್ಯಗಳನ್ನು ನೀಡುತ್ತಿರುವುದರಿಂದ ಜಿಲ್ಲೆಯ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸಿ.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಬಿಸನಳ್ಳಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ವೆಂಕಟೇಶಪ್ಪ, ಸಿ.ಪಿ.ಒ. ಬಸವರಾಜು, ಅರಣ್ಯ ಉಪಸಂರಕ್ಷಣಾಧಿಕಾರಿ ಗೀತಾಂಜಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಹ್ಲಾದ್‌ಗೌಡ ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry