ಮಂಗಳವಾರ, ಏಪ್ರಿಲ್ 20, 2021
32 °C

ಕುಣಿಕೆಯೊಳಗಿನ ಕಗ್ಗಂಟಿನ ಪ್ರಶ್ನೆಗಳು

-ನಾ ದಿವಾಕರ,ಮೈಸೂರು Updated:

ಅಕ್ಷರ ಗಾತ್ರ : | |

26/11 ಭಾರತದ ಇತಿಹಾಸದಲ್ಲಿ ಮರೆಯಲಾಗದ ಕರಾಳ ದಿನ. ವಸ್ತುನಿಷ್ಠವಾಗಿ ಹೇಳುವುದಾದರೆ ಇದೊಂದೇ ಕರಾಳ ದಿನವಲ್ಲ. ಅಥವಾ 26/11ರ ಘಟನೆಯನ್ನು ಕರಾಳ ದಿನಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರಿಸಲೂ ಸಾಧ್ಯವಿಲ್ಲ. ಪ್ರಾಣ ತೆತ್ತ ಅಮಾಯಕ ಜೀವಿಗಳ ಸಂಖ್ಯೆಯ ದೃಷ್ಟಿಯಿಂದಾಗಲೀ, ದೇಶದ ಸಾರ್ವಭೌಮತೆಗೆ ಉಂಟಾದ ಆಘಾತದ ದೃಷ್ಟಿಯಿಂದಾಗಲೀ, ದೇಶದ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಉಂಟುಮಾಡಿದ ತಲ್ಲಣಗಳ ದೃಷ್ಟಿಯಿಂದಾಗಲೀ 26/11 ಅಗ್ರಸ್ಥಾನ ಪಡೆಯಲಾರದು. ಆದರೆ ಸ್ವತಂತ್ರ ಭಾರತ ಜನಿಸಿದ ದಿನದಿಂದಲೂ ಕಂಡಿರುವ ಹಲವಾರು ಭ್ರಾತೃಘಾತಕ, ಹಿಂಸಾತ್ಮಕ, ಅಮಾನವೀಯ ಮತ್ತು ಪಾಶವೀ ಘಟನೆಗಳಲ್ಲಿ ಇದೂ ಒಂದಾಗಿ ಕಂಡುಬರುತ್ತದೆ.ಜನಸಾಮಾನ್ಯರ ಜೀವ ಹಾನಿಗೆ ಕಾರಣವಾಗುವ ಪಾಶವೀ ಘಟನೆಗಳನ್ನು ಶ್ರೇಣೀಕರಣಕ್ಕೊಳಪಡಿಸಿ, ಘಟನೆಯ ಪ್ರಭಾವ ಮತ್ತು ಕಾರಣಗಳನ್ನು ಅಳೆಯುವುದು ಪ್ರಜಾತಂತ್ರ ಮೌಲ್ಯಗಳಿಗೆ ಮಾರಕವಾದ ವಿಧಾನ. ಜೀವ ಹಾನಿಯೇ ಅಪರಾಧದ ಮಾನದಂಡವಾಗುವುದಿಲ್ಲ. ಅಥವಾ ಸಾಮಾಜಿಕ ತಲ್ಲಣಗಳು ಮನುಕುಲದ ಪಾತಕಿ ಕೃತ್ಯಗಳ ಅಳತೆಗೋಲಾಗುವುದಿಲ್ಲ. ಈ ನಿಟ್ಟಿನಲ್ಲಿನೋಡಿದಾಗ ಭಾರತದ ಇತಿಹಾಸದಲ್ಲಿ1947ರ ವಿಭಜನೆಯಿಂದ 26/11ರ ಘಟನೆಯವರೆಗೂ ಸಂಭವಿಸಿರುವ ಘಟನೆಗಳು ಭಾರತೀಯ ಸಮಾಜದ ಆತ್ಮಾವಲೋಕನಕ್ಕೆ ಮಾರ್ಗವಾಗಬೇಕೇ ಹೊರತು,  ಶಿಕ್ಷೆಯ ವೈಭವೀಕರಣ ಅಥವಾ ಸಂಭ್ರಮಾಚರಣೆಯ ಪ್ರತೀಕವಾಗಬಾರದು.ಹೊರದೇಶದಿಂದ ಭಾರತದೊಳಗೆ ನುಗ್ಗಿ, ಭಯೋತ್ಪಾದನೆಯ ಉಗ್ರ ಸ್ವರೂಪವನ್ನು ಅನಾವರಣಗೊಳಿಸಿ 165 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ 26/11ರ ಘಟನೆಯ ಪಾತ್ರಧಾರಿಯೊಬ್ಬನಿಗೆ ಭಾರತದ ನ್ಯಾಯಾಂಗ ವ್ಯವಸ್ಥೆ ಸಂವಿಧಾನಬದ್ಧವಾಗಿಯೇ ನ್ಯಾಯ ವಿನಿಯೋಗಿಸಿ ಗಲ್ಲು ಶಿಕ್ಷೆ ವಿಧಿಸಿದೆ. ಅಜ್ಮಲ್ ಕಸಾಬ್ ಬಹುಜನರ ನಿರೀಕ್ಷೆಯಂತೆ, ಅಪೇಕ್ಷೆಯಂತೆ ಮತ್ತು ಹಲವರ ಆಕಾಂಕ್ಷೆಯಂತೆ ಗಲ್ಲಿಗೇರಿದ್ದಾನೆ. ಕಸಾಬ್ ಅಂತ್ಯವಾದ ಕೂಡಲೇ ಭಯೋತ್ಪಾದನೆ ಅಂತ್ಯವಾಯಿತೆ ಎಂಬ ಪ್ರಶ್ನೆ ಇಲ್ಲಿ ಕ್ಲೀಷೆ ಎನಿಸುತ್ತದೆ.ಕಸಾಬ್‌ನಂತಹ ಸಾವಿರಾರು ನಾಜೂಕಯ್ಯಗಳು ನಮ್ಮ ಸುತ್ತಲೂ ಇದ್ದಾರೆ. ಅಸಮಾನತೆ ಇರುವವರೆಗೂ ಹಿಂಸೆ ಇದ್ದೇ ಇರುತ್ತದೆ. ಮತೀಯತೆ ಇರುವವರೆಗೂ ಭಯೋತ್ಪಾದನೆಯೂ ಇರುತ್ತದೆ. ವಿಭಿನ್ನ ಸ್ವರೂಪಗಳಲ್ಲಿ, ವಿಭಿನ್ನ ಅರ್ಥಗಳ ಮೂಲಕ, ವಿಭಿನ್ನ ಆಯಾಮಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ಆಧುನಿಕೋತ್ತರ ಸಂಕಥನಗಳಲ್ಲಿ ವ್ಯಾಖ್ಯಾನಿಸಲಾಗುವ ಧರ್ಮಾಧಾರಿತ ಭಯೋತ್ಪಾದನೆಯ ಪರಿಕಲ್ಪನೆಗಳನ್ನು ಬದಿಗಿಟ್ಟು ನೋಡಿದಾಗ ಕಸಾಬ್ ಅಥವಾ ಅವನ ಪೀಳಿಗೆಯವರು ಪ್ರತಿನಿಧಿಸುವ ಭಯೋತ್ಪಾದನೆಯ ವಿಶಿಷ್ಟ ಆಯಾಮವನ್ನು ಗ್ರಹಿಸಲು ಸಾಧ್ಯವಾಗಬಹುದು.ನಿಜ, ಕಸಾಬ್ ನೇಣುಗಂಬವನ್ನೇರಿದ ಸಂದರ್ಭದಲ್ಲಿ ಇಡೀ ದೇಶವೇ ಸಂಭ್ರಮಿಸಿತ್ತು. ಅಥವಾ ಸಂಭ್ರಮೋತ್ಸವವವನ್ನು ಮಾಧ್ಯಮಗಳಲ್ಲಿ ದೇಶವ್ಯಾಪಿ ವಿದ್ಯಮಾನದಂತೆ ಬಿಂಬಿಸಲಾಯಿತು. ಮುಂಬೈ ದಾಳಿಯಲ್ಲಿ ಮಡಿದ ಅಮಾಯಕರ ಕುಟುಂಬ ಸದಸ್ಯರು, ಘಟನೆಯಲ್ಲಿ ಘಾಸಿಗೊಂಡು ಸತ್ತು ಬದುಕಿದ ಜನಸಾಮಾನ್ಯರು, ತಮ್ಮ ಕುಟುಂಬದ ಆಧಾರ ಸ್ತಂಭಗಳನ್ನೇ ಕಳೆದುಕೊಂಡು ನಿರ್ಗತಿಕರಾದವರು, ತಮ್ಮ ಭವಿಷ್ಯವನ್ನೇ ಕಂಗೆಡಿಸುವಂತೆ ಆಘಾತ ಅನುಭವಿಸಿದ ಪ್ರಜೆಗಳು, ಕಸಾಬ್‌ನ ಅಂತ್ಯವನ್ನು ಸಂಭ್ರಮಿಸುವುದು ಮನುಜ ಸಹಜ ಸ್ವಭಾವ.ಎಷ್ಟೇ ಮಾನವೀಯತೆ, ಅಂತಃಕರಣ, ತಾಳ್ಮೆ ಮತ್ತು ಸಹಿಷ್ಣುತೆ ಇದ್ದರೂ ಮಾನವನ ಹೃದಯದ ಒಂದು ಮೂಲೆಯಲ್ಲಿ ಪ್ರತೀಕಾರದ ಒಂದು ಕಿಡಿ ಜ್ವಲಿಸುತ್ತಲೇ ಇರುತ್ತದೆ. ಈ ಕಿಡಿಯನ್ನು ನಂದಿಸುವ ಸಾಮರ್ಥ್ಯ ಇರುವವರು ಶಾಂತಿಯ ಪ್ರತಿಪಾದಕರಾಗುತ್ತಾರೆ. ಆದರೆ ಇದೊಂದು ಅಪವಾದ ಮಾತ್ರ. ಅಪಭ್ರಂಶ ಮಾತ್ರ.          26/11ರ ಸಂಭ್ರಮಾಚರಣೆಯನ್ನು ಈ ಮಾನವ ಸಹಜ ಪ್ರವೃತ್ತಿಯ ದೃಷ್ಟಿಯಿಂದ ನೋಡಿದಾಗ ಪಿಚ್ಚೆನಿಸಲಾರದು.ಆದರೆ ನೊಂದ ಜೀವಗಳ ಲೋಕದ ಹೊರಗೊಂದು ಲೋಕವೂ ಇದೆ. ಬೆಂದ ಜೀವಗಳ ಅಂತರಾಳದ ಬೇಗೆಯನ್ನು ಅರಿತೂ ಮಾನವತೆಯ ಪ್ರಣತಿಯನ್ನು ಬೆಳಗಲು ಯತ್ನಿಸುವ ಮನುಜ ಲೋಕವೂ ಇದೆ.  ಈ ಲೋಕದಲ್ಲಿ ನ್ಯಾಯಾನ್ಯಾಯಗಳ ಪರಾಮರ್ಶೆಯಾಗುವುದು ಭಾವನೆಗಳ ನೆಲೆಗಟ್ಟಿನಲ್ಲಿ ಅಲ್ಲ. ವಾಸ್ತವತೆಗಳ ನೆಲೆಯಲ್ಲಿ. ಇಲ್ಲಿ ಶಿಕ್ಷೆಗೊಳಗಾಗುವುದು ಅಪರಾಧಿಯಲ್ಲ, ಅಪರಾಧ. ಪಾತಕಿಯಲ್ಲ, ಪಾತಕ ಕೃತ್ಯ. ಮರಣದಂಡನೆಯ ಔಚಿತ್ಯದ ಪ್ರಶ್ನೆಯನ್ನು ಇಲ್ಲಿ ಗಂಭೀರವಾಗಿಯೇ ಪರಿಗಣಿಸುವುದು ಅಗತ್ಯ.  ಒಬ್ಬ ಪಾತಕಿಗೆ ಮರಣದಂಡನೆ ವಿಧಿಸುವುದರಿಂದ ಹಲವು ಅಪರಾಧಗಳಿಗೆ ಇತಿಶ್ರಿ ಹಾಡಬಹುದು ಎಂಬ ನಂಬಿಕೆ ಇಂದಿನ ಜಾಗತಿಕ ಅನುಭವಗಳ ಹಿನ್ನೆಲೆಯಲ್ಲೂ ಗಟ್ಟಿಯಾಗಿ ಉಳಿದಿದ್ದರೆ ಅದು  ಸಮಾಜದ ಅಪ್ರಬುದ್ಧತೆಗೆ ಸಾಕ್ಷಿಯಾಗುತ್ತದೆ.ಇಲ್ಲಿ ನಿವೃತ್ತ ನ್ಯಾಯಾಧೀಶರೂ ಖ್ಯಾತ ಚಿಂತಕರೂ ಆದ ವಿ.ಆರ್. ಕೃಷ್ಣ ಐಯ್ಯರ್ ಅವರು ಹೇಳಿರುವ ಒಂದು ಮಾತು ಉಲ್ಲೇಖನಾರ್ಹ. ಅವರು ಹೀಗೆ ಹೇಳುತ್ತಾರೆ   `ಯಾವುದೇ ಸಮಾಜವು ತನ್ನ ಜನಸಮುದಾಯಗಳಿಗೆ  ನ್ಯಾಯ ಒದಗಿಸದಿದ್ದರೆ ಜನರ ಅಪೇಕ್ಷೆಗಳು ಖಿನ್ನತೆಯಾಗಿ ಪರಿವರ್ತಿತವಾಗುತ್ತವೆ. ಖಿನ್ನತೆ ಭೀತಿಗೆ ಎಡೆಮಾಡಿಕೊಡುತ್ತದೆ. ಭೀತಿ ಕ್ರಮೇಣವಾಗಿ ಹತಾಶೆಯಾಗಿ ಮಾರ್ಪಾಟಾಗುತ್ತದೆ. ಹತಾಶೆ ಅಂತಿಮವಾಗಿ ಭಯೋತ್ಪಾದಕತೆಯಲ್ಲಿ ಕೊನೆಗೊಳ್ಳುತ್ತದೆ. ಈ ವಿದ್ಯಮಾನ ಭಾರತವನ್ನೂ ಒಳಗೊಂಡಂತೆ ಎಲ್ಲ ವ್ಯವಸ್ಥೆಗಳಲ್ಲೂ ಕಂಡುಬರುತ್ತದೆ.' ಸಾರ್ವಜನಿಕ ವಲಯದಲ್ಲಿ, ಸಾರ್ವತ್ರಿಕ ನೆಲೆಯಲ್ಲಿ ಇಂತಹ ಪ್ರಬುದ್ಧ ಚಿಂತನೆಗಳೂ ಕೆಲವೊಮ್ಮೆ ಅಪ್ರಸ್ತುತ ಎನಿಸಬಹುದು. ಆದರೆ ಮನುಕುಲವನ್ನು ಪ್ರೀತಿಸುವ ವಿಶಿಷ್ಟ ಲೋಕದಲ್ಲಿ ಮನುಜ ಜೀವಕ್ಕೆ ಇರುವುದೊಂದೇ ಆತ್ಮ, ಒಂದೇ ಮೌಲ್ಯ, ಒಂದೇ ಆಯಾಮ. ಅದುವೇ ಮಾನವೀಯತೆ. ಹಾಗಾದಲ್ಲಿ 165 ಜನರ ಜೀವಹರಣ ಮಾಡಿದ ಕಸಾಬ್ ಗಲ್ಲಿಗೆ ಅರ್ಹನಾದರೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಾವಿರಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿರುವ ಪಾತಕಿಗಳಿಗೆ ಯಾವ ಶಿಕ್ಷೆಯಾಗಬೇಕು? 1984ರ ಭೋಪಾಲ, 1992-93ರ ಮುಂಬೈ, 2002ರ ಗುಜರಾತ್, 1989-92ರ ಅವಧಿಯ ಅಯೋಧ್ಯಾ, 1984ರ ಸಿಖ್ ನರಮೇಧ, ತದನಂತರದ ಖಾಲಿಸ್ತಾನ ಚಳವಳಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ತಮ್ಮ ಅಸ್ಮಿತೆಗಳಿಗಾಗಿ, ಸೈದ್ಧಾಂತಿಕ ಅಸ್ತಿತ್ವಗಳ ಉಳಿವಿಗಾಗಿ,  ತತ್ವಾದರ್ಶಗಳ ಪ್ರತಿಪಾದನೆಗಾಗಿ ಸಾವಿರಾರು ಅಮಾಯಕ ಜೀವಗಳನ್ನು ಬಲಿ ಪಡೆದ ಈ ಘಟನೆಗಳ ಹಿಂದಿನ `ಮಾಸ್ಟರ್ ಮೈಂಡ್'ಗಳು ಯಾರು? ಸೂತ್ರಧಾರರು ಯಾರು?ಕಸಾಬ್ ಗಲ್ಲಿಗೇರಿದ ನಂತರ ಉದ್ಭವಿಸಿದ ಪ್ರಶ್ನೆಯೂ ಇದೇ ಅಲ್ಲವೇ? 26/11ರ `ಮಾಸ್ಟರ್ ಮೈಂಡ್'ಗಳು ಇನ್ನೂ ಜೀವಂತವಾಗಿದ್ದಾರೆ. ಅವರಿಗೂ ಕುಣಿಕೆ ಸಿದ್ಧವಾಗಬೇಕು. ಹೌದಾದರೆ, ಈ ಮೇಲಿನ ಘಟನೆಗಳಲ್ಲೂ ಕುಣಿಕೆಗಳು ಸಿದ್ಧವಾಗಬೇಕಲ್ಲವೇ? ನೊಂದು ಬೆಂದ ಜೀವಗಳಿಗೆ ಸ್ಪಂದಿಸುವ ಮಾನವೀಯ ಅಂತಃಕರಣಗಳಿಗೆ ಅಪರಾಧ ಕೊನೆಗೊಳ್ಳುವುದು ಮುಖ್ಯವಾಗಬೇಕೇ ಹೊರತು, ಅಪರಾಧಿಯ ಅಂತ್ಯವಲ್ಲ. ಅಪರಾಧಿಯ ಅಂತ್ಯ ಅಪರಾಧದ ತಾರ್ಕಿಕ ಅಂತ್ಯವಾಗುವುದೂ ಇಲ್ಲ. ನೂರಾರು ಜನರ ಹತ್ಯೆಯನ್ನು ಸಂಭ್ರಮಿಸಿದ ಕ್ರೂರಿಯೊಬ್ಬನ ಅಂತ್ಯ ಸಂಭ್ರಮಯೋಗ್ಯ ಎನಿಸಿದರೆ,  ಸಾವಿರಾರು ಜನರ ಮಾರಣ ಹೋಮದ ನಡುವೆ ನ್ಯೂಟನ್ ಸಿದ್ಧಾಂತ ಪ್ರತಿಪಾದಿಸಿ ತಮ್ಮದೇ ಆದ ಭಾವನಾತ್ಮಕ ನಿಲುವುಗಳಿಂದ ಸಮರ್ಥಿಸಿಕೊಳ್ಳುವವರ ಬದುಕು ವಿಷಾದನೀಯ ಎನಿಸಬೇಕಲ್ಲವೇ? ಇಲ್ಲಿ ಪ್ರಶ್ನೆ ಇರುವುದು ಸಾವು ಬದುಕಿನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ್ದು.ಮನುಕುಲ ಸಾವಿನಿಂದ ಬದುಕುವುದಿಲ್ಲ. ಬದುಕಿ ಸಾವನ್ನಪ್ಪುತ್ತದೆ. ಸಾವಿನ ದಲ್ಲಾಳಿಗಳು ಸದಾ ಜಾಗೃತರಾಗಿಯೇ ಇರುತ್ತಾರೆ. ಬದುಕು ಕಟ್ಟಿಕೊಡುವ ದಲ್ಲಾಳಿಗಳು ತೆರೆಮರೆಯಲ್ಲಿರುತ್ತಾರೆ. ಇದು ಪ್ರಜಾತಂತ್ರ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ಮತ್ತು ಮನುಕುಲದ ಇತಿಹಾಸವನ್ನು ಅಣಕಿಸುತ್ತಲೇ ಇರುವ ಒಂದು ವಿಶಿಷ್ಟ ವಿದ್ಯಮಾನ. ಇದಕ್ಕೆ ಉತ್ತರ ಹುಡುಕೋಣವೇ? ನೇಣು ಕುಣಿಕೆಯಲ್ಲಿ ಸಿಗಲಾರದು, ಕುಣಿಕೆಯ ಗಂಟುಗಳನ್ನು ಬಿಡಿಸಿ ನೋಡಿದಾಗ ಸತ್ಯ ಅರಿವಾಗಬಹುದಲ್ಲವೇ ?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.