ಗುರುವಾರ , ಜೂನ್ 24, 2021
29 °C
ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನ

ಕುಮಾರ ಬಂಗಾರಪ್ಪ ಬಂಡಾಯ ಅಭ್ಯರ್ಥಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ದೊರೆಯದೆ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಮುಖಂಡ ಕುಮಾರ ಬಂಗಾರಪ್ಪ ಅವರು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.ಹಾಲಿ ಅಭ್ಯರ್ಥಿ ಮಂಜುನಾಥ ಭಂಡಾರಿ ಬದಲಿಗೆ ತಮಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ ಅವರು ಮಂಗಳವಾರ ರಾಜ್ಯಸಭಾ ಸದಸ್ಯ ಎಸ್‌.ಎಂ. ಕೃಷ್ಣ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಕೂಡ ಇದ್ದರು. ಶಿವಮೊಗ್ಗದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಇಬ್ಬರೂ ನಾಯಕರಿಗೆ ಕುಮಾರ್‌ ಬಂಗಾರಪ್ಪ ವಿವರಿಸಿದರು. ತಮಗೆ ಟಿಕೆಟ್‌ ನೀಡಿದರೆ ಪಕ್ಷಕ್ಕೆ ಉಂಟಾಗುವ ಲಾಭದ ಕುರಿತು ವಿವರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಬಂಗಾರಪ್ಪ, ‘ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಲು ನಾನು ನಿರಂತರವಾಗಿ ಶ್ರಮಿಸಿದ್ದೇನೆ. ಎರಡು ವರ್ಷಗಳಿಂದ ಚುನಾವಣೆಗೆ ಸಿದ್ಧತೆಗಳನ್ನು ಕೈಗೊಂಡಿದ್ದೆ.ಶಿವಮೊಗ್ಗ ಜಿಲ್ಲೆಯ ಜನತೆ ಬಿಜೆಪಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ನನಗೆ ಟಿಕೆಟ್‌ ನೀಡದಿರುವುದು ನಿರಾಸೆ ಮೂಡಿಸಿದೆ. ಇದು ಪಕ್ಷದ ಅಸ್ತಿತ್ವದ ಪ್ರಶ್ನೆ’ ಎಂದರು.‘ಈಗ ತಾತ್ಕಾಲಿಕವಾಗಿ ಅಭ್ಯರ್ಥಿ ಹೆಸರು ಘೋಷಿಸಲಾಗಿದೆ. ಹಲವಾರು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬದಲಾಯಿಸಿದ ಉದಾಹರಣೆಗಳಿವೆ. ಪಕ್ಷದ ಹೈಕಮಾಂಡ್‌ ವಾಸ್ತವ ಸ್ಥಿತಿ ಅರಿತು ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಎಸ್‌.ಎಂ. ಕೃಷ್ಣ ಅವರು ನನ್ನ ರಾಜಕೀಯ ಗುರುಗಳು. ಅವರು ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ಟಿಕೆಟ್‌ ಕುರಿತು ಹೈಕಮಾಂಡ್‌ ಜತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಟಿಕೆಟ್‌ಗೆ ಕಾಯುತ್ತೇನೆ’ ಎಂದರು.ಒಂದು ವೇಳೆ ಟಿಕೆಟ್‌ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎನ್ನುವ ವಿಶ್ವಾಸವಿದೆ. ಆದರೆ, ಒಂದು ವೇಳೆ ಮಂಜುನಾಥ್‌ ಭಂಡಾರಿ ಅವರೇ ಪಕ್ಷದ ಅಭ್ಯರ್ಥಿಯಾಗಿ ಮುಂದುವರಿದರೆ ಅವರಿಗೆ ಬೆಂಬಲ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.