ಭಾನುವಾರ, ಮೇ 9, 2021
18 °C

ಕುರಿ ಕಾಯುವ ಈ ಪರಿ...

ಎಂ.ಎಸ್.ಧರ್ಮೇಂದ್ರ Updated:

ಅಕ್ಷರ ಗಾತ್ರ : | |

ಮುಂದೆ ಕುರಿಗಳ ಹಿಂಡು, ಅವುಗಳ ಕಾವಲಿಗೆ ಮುಧೋಳ ನಾಯಿ. ಹಿಂದೆ ಸಂಸಾರದ ಪಾತ್ರೆ ಪಗಡು, ಇವುಗಳನ್ನು ಹೊರಲು ಕತ್ತೆಗಳ ಸಾಥ್. ಇವುಗಳ ಜೊತೆ ಮನೆ ಬಿಟ್ಟರೆ ಎಲ್ಲಿಗೋ ಪಯಣ. ಗುರಿಯ ಅರಿವಿಲ್ಲ. ಸುಮಾರು 5-6 ತಿಂಗಳು ಗೊತ್ತುಗುರಿಯಿಲ್ಲದ ಅಲೆದಾಟ, ಪುನಃ ತವರಿಗೆ ವಾಪಸ್...ಇಂಥದ್ದೊಂದು ಅಪರೂಪದ ಜೀವನಶೈಲಿ ನಡೆಸುತ್ತಿರುವವರು ಮಂದೆಕುರಿ ಕುರಿಗಾಯಿಗಳು. ಜೀವನ ಸಾಗಿಸುವ ತಂತ್ರಗಾರಿಕೆ ಇದು. ಕುರಿಯ ಹಿಕ್ಕೆ, ಮೂತ್ರದಿಂದ ತಮ್ಮ ಬಾಳು ಹಸನು ಮಾಡಿಕೊಳ್ಳುವುದಲ್ಲದೇ ಕುರಿಯ ಮಾಂಸದಿಂದಲೂ ಹಣ ಗಳಿಸುವ ಚಾಕಚಕ್ಯತೆ ಇದು!ಚಿತ್ರದುರ್ಗ, ಹಾಸನ ಮುಂತಾದ ಪ್ರಾಂತ್ಯಗಳಲ್ಲಿ ಇವರ ನೋಟ ಸಾಮಾನ್ಯ. ಕುರಿಗಳ ಆಹಾರಕ್ಕಾಗಿ ಡಿಸೆಂಬರ್‌ನಲ್ಲಿ ಮನೆಬಿಟ್ಟು ವಲಸೆ ಹೊರಟು ಮೇ ತಿಂಗಳಲ್ಲಿ ಗೂಡು ಸೇರುತ್ತಾರೆ. ಕುರಿ ಹಿಂಡಿನ ಜೊತೆ ಹೊರಡುವಾಗ ಅಡುಗೆ ಪಾತ್ರೆ, ಮಲಗಲು ಬೇಕಾಗುವ ರಗ್ಗು, ಮಳೆಯಿಂದ ರಕ್ಷಿಸಿಕೊಳ್ಳಲು ಟಾರ್ಪಲು, ಕುರಿಗಳು ರಾತ್ರಿ ಗುಂಪಿನಿಂದ ಬೇರ್ಪಡದಂತೆ ಲಕ್ಷ್ಮಣರೇಖೆ ನಿರ್ಮಿಸಿ ಬಂಧಿಸಲು ಬಲೆ ಮತ್ತು ಕಬ್ಬಿಣದ ಗೂಟ, ಕುರಿಗಳನ್ನು ರಾತ್ರಿ ಹೊತ್ತಿನಲ್ಲಿ ಕಳ್ಳಕಾಕರಿಂದ ರಕ್ಷಿಸಲು ಸುಸಜ್ಜಿತ ನುರಿತ ಮುಧೋಳ ಬೇಟೆನಾಯಿ, ಸಾಮಾನು ಹೊರಲು ಕತ್ತೆಗಳು... ಒಟ್ಟಿನಲ್ಲಿ ಯುದ್ಧಕ್ಕೆ ಹೊರಡುವ ಶಿಸ್ತಿನ ಸಿಪಾಯಿಗಳಂತೆ ಇವರ ಪಯಣ.ತಮ್ಮ ತಮ್ಮ ಕುರಿಗಳನ್ನು ಬೇರೆ ಬೇರೆ ಆಗಿ ಬೇರ್ಪಡಿಸಿ ಪ್ರತ್ಯೇಕ ಗುಂಪು (ತುಡು) ಮಾಡಲಾಗುತ್ತದೆ. ಒಂದೊಂದು ತುಡಕ್ಕೂ ಒಬ್ಬೊಬ್ಬ ನಾಯಕ. ಹೀಗೆ ಒಂದೊಂದು ತುಡದಲ್ಲಿ 200ರಿಂದ 300 ಕುರಿಗಳ ಹಿಂಡು. ಹಲವು ಕುರಿಗಳು ಇದ್ದರೂ ತಮ್ಮ ತುಡಗಳಲ್ಲಿನ ಕುರಿಗಳನ್ನು ಗುರುತಿಸುವ ಪರಿ ಮಾತ್ರ ಅಚ್ಚರಿ ತರುವಂಥದ್ದು. ಹಸಿರು ಹುಲ್ಲು ಇರುವಲ್ಲಿಗೆ ಕುರಿ ಮೇಯಿಸುತ್ತಾ ಸಾಗುತ್ತಾರೆ ಇವರು.ಬರುವಿಕೆಯ ನಿರೀಕ್ಷೆ

ಈ ಮಂದೆಕುರಿಗಳ ಬರುವಿಕೆಗಾಗಿ ಊರಿನ ಜನರು ಕಾಯುತ್ತಿರುತ್ತಾರೆ. ಕುರಿಗಳ ಹಿಕ್ಕೆ, ಮೂತ್ರದ ನಿರೀಕ್ಷೆ ಇದು. ಇದು ಭೂಮಿಗೆ ಸೇರಿದರೆ ಉತ್ತಮ ಬೆಳೆ ಬರುತ್ತದೆ ಎಂಬುದೇ ಇದಕ್ಕೆ ಕಾರಣ. ಈ ವಿಧಾನದಲ್ಲಿ ಬಂದ ಬೆಳೆಗಳಲ್ಲಿ ವಿಟಮಿನ್ ಸತ್ವ ಹೇರಳವಾಗಿರುತ್ತದೆ ಎನ್ನುವುದಕ್ಕಾಗಿ ಕುರಿಗಳಿಗೆ ಹೆಚ್ಚು ಬೇಡಿಕೆ.ಮಂದೆಕುರಿಗಳು ಬಂದಾಗ ತುಡದ ನಾಯಕನನ್ನು ತಮ್ಮ ಜಮೀನಿನಲ್ಲಿ ನೆಲೆಸುವಂತೆ ಊರಿನ ಜನರು ಕೇಳಿಕೊಳ್ಳುತ್ತಾರೆ. ಒಂದು ರಾತ್ರಿ ಉಳಿಯಲು 700-800 ರೂಪಾಯಿಗಳವರೆಗೂ ಬೇಡಿಕೆ. ಇಷ್ಟೇ ಅಲ್ಲ. ಇವುಗಳ ಜೊತೆಗೆ ಅಕ್ಕಿ, ರಾಗಿಹಿಟ್ಟು, ಧವಸಧಾನ್ಯ ಕೊಟ್ಟರೆ ಮಾತ್ರ ನಾಯಕ ಉಳಿಯಲು ಒಪ್ಪಿಗೆ ಸೂಚಿಸುವುದು. ಇಲ್ಲದಿದ್ದರೆ ಬೇಡಿಕೆ ಬಂದಲ್ಲಿ ಅವರ ಪಯಣ.ಕುರಿಗಳು ವಾಸವಾಗಿದ್ದ ಸಂದರ್ಭದಲ್ಲಿ ತುಂತುರು ಸೋನೆಮಳೆಯಾದರೆ ಜಮೀನಿನ ಮಾಲೀಕನಿಗೆ ಖುಷಿಯೋ ಖುಷಿ. ಕಾರಣ, ಕುರಿಯ ತುಪ್ಪಟ, ಮೇಲೆ ಬಿದ್ದ ನೀರು, ಹಿಕ್ಕೆ ಮತ್ತು ಮೂತ್ರ ಭೂಮಿಯ ಒಡಲಾಳ ಸೇರುತ್ತದೆ. ಇದರಿಂದ ಉತ್ತಮ ಬೆಳೆ ಬರುತ್ತದೆ. ಅದಕ್ಕಾಗಿ ಜಮೀನಿನಲ್ಲಿ ಉತ್ತಮ ಫಸಲು ಬರಬೇಕಿದ್ದರೆ ಜಮೀನಿನ ಒಡೆಯ ಮಂದೆಕುರಿಗಾಹಿಗಳ ಮಾತು ಕೇಳಲೇಬೇಕಾದ ಪರಿಸ್ಥಿತಿ!ಒಂದು ಊರು ಮುಗಿದ ಮೇಲೆ ಮತ್ತೊಂದು ಊರಿಗೆ ಪಯಣ. ಅಲ್ಲಿ ಯಾರೂ ತಮ್ಮನ್ನು ತಡೆಯುವವರು ಇಲ್ಲದೇ ಹೋದರೆ, ಸ್ವತಃ ಜಮೀನಿನ ಮಾಲೀಕರ ಮನೆಗೆ ಹೋಗುವ ಸ್ಥಿತಿ ಮಂದೆಕುರಿಗಾಯಿಗಳದ್ದು. ತಮ್ಮ ಕುರಿಗಳ ಹಿಕ್ಕೆ, ಮೂತ್ರವನ್ನು ರಿಯಾಯಿತಿ ದರದಲ್ಲಿ ಜಮೀನಿಗೆ ಉಪಯೋಗಿಸಿಕೊಳ್ಳುವಂತೆ ಜಮೀನು ಮಾಲೀಕರಿಗೆ ಕಾಡಿಬೇಡಿ ಅಲ್ಲೂ ಆದಷ್ಟು ಲಾಭ ಮಾಡಿಕೊಳ್ಳುತ್ತಾರೆ.ಅಷ್ಟಕ್ಕೂ ಕುರಿಗಳ ರಕ್ಷಣೆ ಸುಲಭದ ಮಾತಲ್ಲ. ಅದಕ್ಕಾಗಿ ಬೇಟೆ ನಾಯಿ ಒಯ್ಯಬೇಕು. ಕಳ್ಳರಿಂದ ಕುರಿಗಳನ್ನು ರಕ್ಷಿಸಲು ನಾಯಿಗಳಿದ್ದರೂ ಒಬ್ಬರಾದ ಮೇಲೊಬ್ಬರಂತೆ ಪಾಳಿಯಲ್ಲಿ ನಿದ್ರಿಸಬೇಕು. ಗಂಟಿರುವ ಬೇಲದ ಕಾಯಿಗಳನ್ನು ತಿಂದು ಕುರಿಗಳು ಸಾಯುವ ಭಯ ಬೇರೆ. ಇಂಥ ಪರಿಸ್ಥಿತಿ ಎದುರಾಗುವುದು ತಿಳಿದರೆ ಕುರಿಗಳನ್ನು ಅದೇ ಊರಿನಲ್ಲಿ ಯಾರಿಗಾದರೂ ರಿಯಾಯಿತಿ ದರದಲ್ಲಿ ಮಾರಿಬಿಡುತ್ತಾರೆ.ಕೆಲವೊಮ್ಮೆ ಇವರ ಜೊತೆಯಿರುವ ಬೇಟೆನಾಯಿಗಳು ಊರಿನವರ ಹಸು ಎಮ್ಮೆಯ ತೊಡೆಯ ಮಾಂಸವನ್ನೇ ಕಚ್ಚಿ ಹಾಕುವುದೂ ಇದೆ. ಇಂಥ ಸಂದರ್ಭಗಳಲ್ಲಿ ಹಸುಗಳ ಮಾಲೀಕರಿಗೆ ಪರಿಹಾರ ಕೊಡುವ ಅನಿವಾರ್ಯತೆ. ಸತತವಾಗಿ ಮಳೆಬೀಳಲು ಪ್ರಾರಂಭವಾಗಿ ಹೊಲದಲ್ಲಿ ಉಳಿಮೆ ಶುರುವಾದ ಮೇಲೆ ಇವರ ಕುರಿ ಕೇಳುವವರು ಇರುವುದಿಲ್ಲ. ತವರಿಗೆ ವಾಪಸಾಗಲೇಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.