ಭಾನುವಾರ, ಏಪ್ರಿಲ್ 11, 2021
21 °C

ಕುಸ್ಮಾಅಧ್ಯಕ್ಷ ಶರ್ಮಾ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಸರ್ಕಾರಿ ಶಾಲೆಗಳನ್ನು ಕೊಳಚೆ ನೀರಿಗೆ ಹೋಲಿಸಿ ಬಡವರಿಗೆ ಅವಮಾನ ಎಸಗಿರುವ ಕುಸ್ಮಾ ಅಧ್ಯಕ್ಷ ಶರ್ಮಾ ಅವರನ್ನು ಈ ಕೂಡಲೆ ಬಂಧಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ದಲಿತ ಹಿಂದುಳಿದವರ ವೇದಿಕೆಯ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾಧ್ಯಕ್ಷ ರಾಂಪುರ ನಾಗೇಶ್ ಮಾತನಾಡಿ, `ಕೊಳಚೆ ನೀರು ಸಮುದ್ರ ಕ್ಕೆ ಬೆರೆತರೆ ಅದು ಕೊಳಚೆಯಾಗುತ್ತದೆ ಎಂದು ಹೇಳುವ ಮೂಲಕ ಶರ್ಮಾ ತಳ ಸಮುದಾಯದ ವಿರೋಧಿತನ ಪ್ರದರ್ಶಿಸಿದ್ದಾರೆ. ಅವರ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಈ ಕೂಡಲೇ ಅವರನ್ನು ಬಂಧಿಸಬೇಕೆಂದು ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರವು ಬಡವರಿಗೂ ಅನುದಾನರಹಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ದೊರೆಯಬೇಕೆಂಬ ಮಹದುದ್ದೇಶದಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದೆ. ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಕೂಡಾ ಅನುಮೋದಿಸಿದ್ದು ಎಲ್ಲ ಖಾಸಗಿ ಶಾಲೆಗಳಲ್ಲೂ  ಶೇ. 25 ರಷ್ಟು ಬಡಮಕ್ಕಳಿಗೆ ಅವಕಾಶ ನೀಡುವಂತೆ ಆದೇಶಿಸಿದೆ. ಆದರೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಇದನ್ನು ವಿರೋಧಿಸಿ ರಾಜ್ಯವ್ಯಾಪಿ ಒಂದು ವಾರ ಶಾಲೆಗಳನ್ನು ಬಂದ್ ಮಾಡಿ ಸರ್ಕಾರದ ಅದೇಶವನ್ನೇ ತಿರಸ್ಕರಿಸಿ ಶಾಲಾ ಮಕ್ಕಳಿಗೆ ಅನ್ಯಾಯ ಮಾಡಿದೆ ಎಂದು ಅವರು ಕಿಡಿಕಾರಿದರು.ಎಸ್‌ಎಸ್‌ಡಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ಆರ್‌ಟಿಇ ಕಾಯ್ದೆ ತಿರಸ್ಕರಿಸಿರುವ `ಕುಸ್ಮಾ~ವನ್ನು ಸರ್ಕಾರ ನಿಷೇಧಿಸಬೇಕು. ಬಂದ್ ಆಚರಣೆಗೆ ಅವಕಾಶ ನೀಡಬಾರದು. ಕಾಯ್ದೆ ಜಾರಿಗೊಳಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಂಡು ಅವುಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಕುಮಾರ್ ಮಾತನಾಡಿ, ಕುಸ್ಮಾ ಕುಚೋದ್ಯತನಕ್ಕೆ ಸೂಕ್ರ ಕ್ರಮ ಕೈಗೊಳ್ಳಬೇಕು.  ಇಲ್ಲವಾದಲ್ಲಿ ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಿಡಿಕಾರಿದರು. ಪ್ರತಿಭಟನಾಕಾರರು ಸಾಂಕೇತಿಕವಾಗಿ ರಸ್ತೆ ತಡೆನಡೆಸಿ ಕುಸ್ಮಾ ವಿರುದ್ಧ ಘೋಷಣೆಗಳನ್ನು ತಹಸೀಲ್ದಾರ್‌ಗೆ ಮನವಿ ಮತ್ರ ಸಲ್ಲಿಸಿದರು.ಸಿದ್ದಬೀರಯ್ಯ, ಕೋಟೆ ಮಂಜು, ವೆಂಕಟೇಶ್, ಹೊನ್ನಪ್ಪ, ಆರ್.ಕೆ.ಶಿವಕುಮಾರ್, ಶ್ರೀನಿವಾಸ್, ಸುರೇಶ್.ಜಿ, ಮೋಹನ್‌ಕುಮಾರ್, ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.