ಗುರುವಾರ , ಮೇ 6, 2021
23 °C

ಕೂಡಲಸಂಗಮಕ್ಕೆ ಕಾಂಗ್ರೆಸ್ ನಾಯಕರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಪಕ್ಷ ಸಂಘಟನೆ ಉದ್ದೇಶದಿಂದ ಜೂನ್ 15ರಂದು ತುಮಕೂರಿನಿಂದ ಆರಂಭಿಸಿದ್ದ  `ಕಾಂಗ್ರೆಸ್ ನಡೆಗೆ ಜನರ ಬಳಿಗೆ~ ಕಾರ್ಯಕ್ರಮದ ಸಮಾರೋಪ ಇದೇ 12ರಂದು 11ಗಂಟೆಗೆ ಕೂಡಲಸಂಗಮದಲ್ಲಿ ನಡೆಯಲಿದೆ.ಸಮಾವೇಶದಲ್ಲಿ ಕೇಂದ್ರ ಸಚಿವರಾದ ಎಸ್.ಎಂ. ಕೃಷ್ಣ, ಎಂ. ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಮತ್ತು ಆಸ್ಕರ್ ಫರ್ನಾಂಡಿಸ್, ರೆಹಮಾನ್ ಖಾನ್, ಮಧುಸೂದನ ಮೇಸ್ತ್ರಿ, ಸಿ.ಕೆ. ಜಾಫರ್ ಷರೀಪ್, ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಕೆ.ಸಿ.ಕೊಂಡಯ್ಯ, ಡಿ.ಕೆ. ಶಿವಕುಮಾರ್ ಸ್ಥಳೀಯ ಮುಖಂಡರಾದ ಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮೋಪುರ,  ಎಚ್. ವೈ. ಮೇಟಿ,  ಎಂ.ಬಿ. ಸೌದಾಗರ್, ಜಿ.ಎನ್. ಪಾಟೀಲ ಮತ್ತಿತರರು ಪ್ರಮುಖವಾಗಿ ಪಾಲ್ಗೊಳ್ಳಲಿದ್ದಾರೆ.ಭರದ ಸಿದ್ಧತೆ: ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 25 ಸಾವಿರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಕೂಡಲಸಂಗಮದ ಯಾತ್ರಿ ನಿವಾಸ ಮತ್ತು ಬಸವಧರ್ಮಪೀಠದ ಅಕ್ಕಮಹಾದೇವಿ ಶರಣಧಾಮದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ದಾಸೋಹ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ ತಿಳಿಸಿದರು.ಇಲ್ಲಿನ ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಮೈದಾನ ಮತ್ತು ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರ ವಾಹನ ನಿಲುಗಡೆಗೆ ವ್ಯವಸ್ಥೆ  ಮಾಡಲಾಗಿದೆ.ಮುಖಂಡರನ್ನು ಸ್ವಾಗತಿಸುವ ಬ್ಯಾನರ್, ಕಟೌಟ್, ಪಕ್ಷದ ಬಾವುಟಗಳು ಸಂಗಮಕ್ರಾಸ್‌ನಿಂದ ಕಾರ್ಯಕ್ರಮ ನಡೆಯುವ ಕೂಡಲಸಂಗಮದ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ರಾರಾಜಿಸುತ್ತಿವೆ.  ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹೊಸಹುಮ್ಮಸ್ಸಿನಿಂದ ಾಯಕರ ಸ್ವಾಗತಕ್ಕೆ ಅಣಿಯಾಗಿದ್ದಾರೆ.ರಾಜ್ಯ ಸರ್ಕಾರದ ವೈಫಲ್ಯವೇ ಅಸ್ತ್ರ: ರಾಜ್ಯ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ ಬಗ್ಗೆ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುಖಂಡರ ಭಾಷಣ ವಿಷಯವಾಗಲಿದೆ. ಅಲ್ಲದೇ  ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ನೀಡಿರುವ ವರದಿ ಜಾರಿಗೆ ಒತ್ತಾಯ, ತುರ್ತು ವಿಧಾನಸಭೆ ಅಧಿವೇಶನ ಕರೆಯುವಂತೆ ಸಮಾವೇಶದ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಸಾಧ್ಯತೆ ಇದೆ.ಸಮಾವೇಶದ ಬಳಿಕ ಕಾಂಗ್ರೆಸ್ ಮುಖಂಡರು ಕೊಪ್ಪಳ ವಿಧಾನಸಭೆ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.