ಶನಿವಾರ, ಮೇ 8, 2021
27 °C
ನಗರ ಸಂಚಾರ

ಕೂಲಿ ಕೊಡೋದೇ ಇಷ್ಟು...

ಶರತ್ ಹೆಗ್ಡೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ನಾನು ಕೊಡೋದಿಷ್ಟು. ಬರೋದಾದ್ರೆ ಬಾ... ಎಂದು ಆತ ಆದೇಶಿಸುತ್ತಾನೆ. ಈತ, ದಣಿ ಏನೋ ಹೊಟ್ಟೆಪಾಡಿಗೆ ಕೇಳ್ತಾ ಇದ್ದೀವಿ. ಒಂಚೂರು ಕೂಲಿ ಜಾಸ್ತಿ ಕೊಡ್ರಿ...ಎನ್ನುತ್ತಾನೆ.ಮಾತು ಮುಂದುವರಿಯುತ್ತಿದ್ದಂತೆಯೇ ರಪ್ಪನೆ ಒಂದೇಟು ಬೀಳುತ್ತದೆ. ಏನಲೇ ಅಂಥ ಕೆಲ್ಸಾ ನೀ ಮಾಡ್ತೀಯಾ? ಮಾಡೋ ಕೆಲ್ಸಕ್ಕೆ ಜಾಸ್ತಿ ಕೂಲಿ ಬೇಕಾ?... ಮತ್ತಷ್ಟು ಕೆಂಪುಗಣ್ಣಿನ ನೋಟ ಬೀರಿ ಮೇಸ್ತ್ರಿ ಗುರುಗುಟ್ಟುವ ಮುನ್ನ ಈ ಬಡಪಾಯಿ ಅವರು ತಂದಿದ್ದ ಗಾಡಿ ಹತ್ತುತ್ತಾನೆ.- ಇದು ಯಾವುದೋ ಸಿನಿಮಾ ದೃಶ್ಯ ಅಲ್ಲ. ಪಟ್ಟಣದಲ್ಲಿ ಪ್ರತಿನಿತ್ಯ ಸೇರುವ ಕೂಲಿ ಆಳುಗಳ ಪಾಡು ಇದು. ಇಲ್ಲಿನ ಮುಖ್ಯರಸ್ತೆ (ಗದಗ ರಸ್ತೆ), ಗಡಿಯಾರದ ಕಂಬ ಈ ಸ್ಥಳಗಳಲ್ಲಿ ಪ್ರತಿದಿನ ಬೆಳಿಗ್ಗೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಕೂಲಿಕಾರ್ಮಿಕರು ಬುತ್ತಿ ಕಟ್ಟಿಕೊಂಡು ಬಂದು ನಿಲ್ಲುತ್ತಾರೆ. ಅವರನ್ನೇ ಕಾದಿದ್ದ ಗುತ್ತಿಗೆದಾರರು, ಮೇಸ್ತ್ರಿಗಳು, ಆಳುಗಳ ಅಗತ್ಯವಿರುವವರು ಬಳಿ ಬಂದು ವ್ಯವಹಾರ ಕುದುರಿಸುತ್ತಾರೆ.ಲಾರಿ, ಕಾರು, ಆಪೆ ಆಟೋ ಬಂದರೆ ಸಾಕು. ಅಣ್ಣಾ ಎಷ್ಟು ಕೊಡುತ್ತೀರಿ ನಾವು ಬರ್ತೀವಿ ಎನ್ನುತ್ತಾ ಮುಗಿಬಿದ್ದು ಮಾತಿಗಿಳಿಯುತ್ತಾರೆ. ಗಂಡಾಳಿಗೆ ಗರಿಷ್ಠ ರೂ 250, ಹೆಣ್ಣಾಳು ಆದರೆ ರೂ 120ರವರೆಗೆ ಕೂಲಿ ದರವಿದೆ. ಅದರಲ್ಲೂ ಮತ್ತೆ ಚೌಕಾಸಿ ನಡೆಯುತ್ತದೆ. ಆಳುಗಳನ್ನು ವಾಹನದಲ್ಲಿ ಕರೆದೊಯ್ಯುತ್ತಾರೆ. ಕೆಲಸ ಮುಗಿದ ಬಳಿಕ ಇವರ ದಾರಿ ಇವರಿಗೆ.ಎಲ್ಲಿಂದ ಬರುತ್ತಾರೆ?: ತಾಲ್ಲೂಕಿನ ತಳಕಲ್, ಮಾಚಿಹಳ್ಳಿ, ಹನುಮನಹಟ್ಟಿ, ನರೇಗಲ್, ಅರಕೇರಿ, ಕುಣಿಕೇರಿ, ಯಲಬುರ್ಗಾ, ವಡ್ರಟ್ಟಿಯಿಂದ ಬರುವ ಮಂದಿಯ ಜೀವನಕ್ಕೆ ಕೂಲಿಯೇ ದಾರಿ.ಏನು ಕೆಲಸ?: ಲಾರಿಗೆ ಸರಕು, ಮಣ್ಣು ಹೇರುವುದು, ಗಟಾರ ಸ್ವಚ್ಛಗೊಳಿಸುವುದು... ಹೀಗೆ ಸಿಕ್ಕಿದ ಕೆಲಸವನ್ನು ನೆಚ್ಚಿಕೊಳ್ಳುತ್ತಾರೆ. ಬೆಳಿಗ್ಗೆ 8ರಿಂದ ಜನಸಂದಣಿ ಸೇರುತ್ತದೆ. ಮಧ್ಯೆ ಮಧ್ಯವರ್ತಿಗಳ ಕಾಟವೂ ಇದೆ. ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ಗೂಡ್ಸ್ ವಾಹನಗಳ ಮಧ್ಯೆ ಹೆಣ್ಣಾಳುಗಳೂ ಕುಳಿತಿರುತ್ತಾರೆ. 9ರ ವೇಳೆಗೆ ಬಹುತೇಕರು ನಿಗದಿತ ಕೆಲಸ ಕುದುರಿಸಿಕೊಂಡು ಹೋದರೆ, ಉಳಿದವರು ಬರಿಗೈಲಿ ಹಳ್ಳಿಗೆ ವಾಪಸಾಗುತ್ತಾರೆ. ಬೆಳಿಗ್ಗೆ ಹೋದವರನ್ನು ಆದರೆ, ರಾತ್ರಿ 8ರವರೆಗೆ ದುಡಿಸಿಕೊಳ್ಳುವುದೂ ಇದೆ ಎನ್ನುತ್ತಾರೆ ಯಮನೂರಪ್ಪ ಉಸಲುಕುಂಟಿ.ಕೆಲಸದ ಮಧ್ಯೆ ಏನಾದರೂ ತಕರಾರು ತೆಗೆದರೆ ಏಟು ಖಾತ್ರಿ. ಸಿಕ್ಕಿದ ಕೂಲಿಯಲ್ಲಿ ಪ್ರಯಾಣವೆಚ್ಚ, ಆಹಾರವೆಚ್ಚ ಕಳೆದರೆ ನೂರರಿಂದ ನೂರೈವತ್ತು ರೂಪಾಯಿ ಉಳಿಯುತ್ತದೆ. ಮತ್ತೆ ಮರುದಿನ ಅದೇ ಪಾಡು ಎಂದು ಕೂಲಿಯಾಳು ವೀರನಗೌಡ ಪೊಲೀಸ್ ಪಾಟೀಲ ಅಸಹಾಯಕತೆ ವ್ಯಕ್ತಪಡಿಸಿದರು.ಇವರು ಬಡವರಲ್ಲ: ಇಲ್ಲಿ ಸೇರುವ ಮಂದಿಯಲ್ಲಿ ಎಲ್ಲರೂ ಬಡವರಲ್ಲ. ಆದರೆ, ಮಳೆ ಇಲ್ಲದಿರುವುದು, ಕೈಕೊಟ್ಟ ಬೋರ್‌ವೆಲ್ ನೀರಿನ ಹನಿ ಭೂಮಿಯಲ್ಲಿ ಜಿನುಗದ ಕಾರಣ ರೈತಾಪಿ ಮಂದಿ ತಮ್ಮ ಹತ್ತಾರು ಎಕರೆ ಜಮೀನುಬಿಟ್ಟು ನಗರದ ಕೂಲಿ ಕೆಲಸಕ್ಕೆ ಕೈಒಡ್ಡುತ್ತಿದ್ದಾರೆ.`ಖಾತರಿ'ಯಾಗದ ಉದ್ಯೋಗ: ಉದ್ಯೋಗ ಖಾತರಿ ಯೋಜನೆ ಸರಿಯಾಗಿ ಅನುಷ್ಠಾನ ಆಗಿಲ್ಲ.  ನನ್ನ ಮತ್ತು ಪತ್ನಿ ಹೆಸರಿನಲ್ಲಿ ಉದ್ಯೋಗ ಕಾರ್ಡ್ ಇದೆ. ಆದರೆ, ನಮಗೆ ಕೆಲಸವೇ ಸಿಕ್ಕಿಲ್ಲ ಎಂದು ವರ್ತತ್ನಾಳ್ ಗ್ರಾಮದ ರಾಮಣ್ಣ ಬೇಸರ ವ್ಯಕ್ತಪಡಿಸಿದರು.ಹಿಂದೆ ಬಳ್ಳಾರಿಯ ಗಣಿಗಾರಿಕೆ ತುತ್ತತುದಿಯಲ್ಲಿರಬೇಕಾದರೆ ಕೂಲಿಮಟ್ಟವೂ ಚೆನ್ನಾಗಿತ್ತು. ದುಡ್ಡಿನಾಸೆಗೆ ಕೆಲಸಬಿಟ್ಟು ಕೂಲಿಗೆ ಬರುತ್ತಿದ್ದರು. ಈಗ ಎಲ್ಲವೂ ಇಳಿದಿದೆ.ಶಿಕ್ಷಣ, ಒಗ್ಗಟ್ಟು ಇಲ್ಲದಿರುವುದು. ಕೂಲಿಯ ಅನಿವಾರ್ಯತೆ. ಜತೆಗೆ ಪ್ರಕೃತಿಯ ಮುನಿಸು ಇವರನ್ನು ಆಳುಗಳನ್ನಾಗಿಸಿದೆ. ದುಡಿಸಿಕೊಳ್ಳುವ ಮಂದಿ ವ್ಯವಸ್ಥಿತವಾಗಿ ಇವರ ಅಸಹಾಯಕತೆಯ ಲಾಭ ಪಡೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.