ಭಾನುವಾರ, ಮೇ 22, 2022
21 °C

ಕೃಷಿಗೆ ಪ್ರತ್ಯೇಕ ಬಜೆಟ್ಟಿನ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಗಳಿಗೆ ಮತ್ತು ರಾಜಕಾರಣಿಗಳಿಗೆ ಜನಪರ ನೀತಿಗಳಿಗಿಂತ ಜನಲೋಲುಪತೆಯ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಜಾಸ್ತಿ. ಅದರ ಒಂದು ಭಾಗವಾಗಿ ನಾವು ಕೃಷಿಗೆ ಪ್ರತ್ಯೇಕ ಬಜೆಟ್ಟು ಎಂಬ ಹೊಸ ಘೋಷಣೆಯನ್ನು ನೋಡಬೇಕು.ನಮ್ಮ ಜನರ ಮತ್ತು ಅವರ ಬದುಕಿನ ಸಮಸ್ಯೆಗಳು ನಮ್ಮ ರಾಜಕಾರಣಕ್ಕೆ ಮುಖ್ಯವಾಗುತ್ತಿಲ್ಲ. ಅವುಗಳನ್ನು ಮೂಲೆಗೆ ತಳ್ಳಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಜನರು ತಮ್ಮ ದಂದುಗಗಳನ್ನು ಮತ್ತು ಜಂಜಾಟಗಳನ್ನು ಸಹಿಸಿಕೊಂಡು, ಕೇವಲ ಭ್ರಮೆಗಳಲ್ಲಿ ಬದುಕುವಂತೆ ಮಾಡುವ ಪರಿಭಾಷೆಯನ್ನು ನಮ್ಮ ರಾಜಕಾರಣ ರೂಪಿಸುತ್ತಿದೆ. ಕೃಷಿಗೆ ಪ್ರತ್ಯೇಕ ಬಜೆಟ್ಟೆಂಬ ಘೋಷಣೆಯ ಹಿಂದಿನ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಇದನ್ನು ಜನರೇನು ಕೇಳಿಲ್ಲ.  ಈ ಬೇಡಿಕೆ ಹೇಗೆ ಹುಟ್ಟಿಕೊಂಡಿತು ಎಂಬುದು ಮುಖ್ಯ. ಯಾರಿಗೆ ಇದು ಬೇಕಾಗಿದೆ? ಜನರು ಒತ್ತಾಯ ಮಾಡದ, ಯಾವ ಸಂಘಟನೆಗಳೂ ನಿರ್ಣಯ ಮಾಡಿ ಕೇಳದ ಸಂಗತಿಯು ಚರ್ಚೆಯ ಮುಂಚೂಣಿಗೆ ಬಂದದ್ದು ಹೇಗೆ? ನಮ್ಮ ಕೃಷಿಯ ಸಮಸ್ಯೆಯೇನು? ಕೃಷಿಯ ಭೂಮಿಯನ್ನೆಲ್ಲ ನಗರಗಳು ಕಬಳಿಸುತ್ತಿರುವಾಗ ‘ಕೃಷಿಗೆ ಪ್ರತ್ಯೇಕ ಬಜೆಟ್ಟು’ ಎಂಬ ಮಾತಿಗೆ ಏನಾದರೂ ಅರ್ಥವಿರುತ್ತದೆಯೇ?ಇವೆಲ್ಲ ಕೇವಲ ಮಾತಿನ ಪಸರ, ಶಬ್ದಜಾಲ ಅನ್ನಿಸುವುದಿಲ್ಲವೇ? ನಮ್ಮ ಜನರ ಬದುಕನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಾವುವು? ಶಾಲೆಯನ್ನು ಮಕ್ಕಳು ಮಧ್ಯದಲ್ಲಿ ಬಿಟ್ಟು ಹೋಗುವುದು ನಮ್ಮಲ್ಲಿರುವ ದೊಡ್ಡ ಸಮಸ್ಯೆ. ಆದರೆ ಮಕ್ಕಳಿಗೆ ಸೈಕಲ್ ನೀಡುವುದರಲ್ಲಿ ಸರ್ಕಾರಕ್ಕೆ ಹೆಚ್ಚು ಆಸಕ್ತಿ. ಹಿಂದುಳಿದ ಪ್ರದೇಶಗಳಲ್ಲಿ ಜನರು ಬದುಕನ್ನು ಕಟ್ಟುಕೊಳ್ಳಲು ವಲಸೆಯನ್ನು ಆಶ್ರಯಿಸಿದ್ದಾರೆ. ಇದು ಯಾರಿಗೂ ಸಮಸ್ಯೆಯಾಗಿ ಕಾಣುತ್ತಿಲ್ಲ. ಹಿಂದುಳಿದ ಪ್ರದೇಶದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸುವುದರ ಬಗ್ಗೆ ಸರ್ಕಾರಕ್ಕೆ ಅಧಿಕ ಆಸಕ್ತಿ. ದುಡಿಯುವ ಮಹಿಳೆಯರಿಗೆ ಕೂಲಿ ಕೆಲಸ ಬೇಕು, ತಲೆಯ ಮೇಲೊಂದು ಸೂರು ಬೇಕು.ಮನೆಯ ಹತ್ತಿರ ಕುಡಿಯುವ ನೀರಿನ ಸರಬರಾಜು ಬೇಕು. ಅವು ನಮ್ಮ ರಾಜಕಾರಣಿಗಳಿಗೆ ಸಮಸ್ಯೆಗಳೇ ಅಲ್ಲ. ಅವರಿಗೆ ಉಚಿತವಾಗಿ ಸೀರೆ ಹಂಚುವುದು ಆದ್ಯತೆಯ ಸಂಗತಿ. ಕೃಷಿಯಲ್ಲಿರುವ ಒಟ್ಟು ದುಡಿಮೆಗಾರರಲ್ಲಿ ಭೂರಹಿತ ದಿನಗೂಲಿ ದುಡಿಮೆಗಾರರ ಪ್ರಮಾಣ ಉತ್ತರ ಕರ್ನಾಟಕದಲ್ಲಿ ಶೇ 40ರಷ್ಟಿದೆ. ಇಲ್ಲಿ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಅವರ ಬಗ್ಗೆ ಮಾತನಾಡುವುದಕ್ಕೆ ಪ್ರತಿಯಾಗಿ ಸರ್ಕಾರವು ಕೃಷಿ ಬಜೆಟ್ಟಿನ ಬಗ್ಗೆ ಮಾತನಾಡುತ್ತಿದೆ. ರಾಜ್ಯದ ಪಂಚಾಯತಿ  ರಾಜ್ ಸಂಸ್ಥೆಗಳಲ್ಲಿ ಹಿತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಾತಿನಿಧ್ಯವು 2005ರಲ್ಲಿ ಶೇ 40 ರಷ್ಟಿದ್ದುದು 2010ರಲ್ಲಿ ಶೇ22ಕ್ಕೆ ಕುಸಿದಿದೆ. ನಮಗೆಲ್ಲ ತಿಳಿದಿರುವಂತೆ ಮುಕ್ಕಾಲುಮೂರುವೀಸೆ ಪಾಲು ರೈತರೆಲ್ಲ ಒಬಿಸಿ ಗುಂಪಿಗೆ ಸೇರುತ್ತಾರೆ. ಆದರೆ ಅವರಿಗೆ ಸೂಕ್ತವಾದ ಪ್ರಾತಿನಿಧ್ಯವನ್ನು ನೀಡುವುದಕ್ಕೆ ಪ್ರತಿಯಾಗಿ ಕೃಷಿಗೆ ಪ್ರತ್ಯೇಕ ಬಜೆಟ್ಟಿನ ಬಗ್ಗೆ ಇಂದು ಚರ್ಚೆ ಮಾಡಲಾಗುತ್ತಿದೆ.ಡಾ.ಡಿ.ಎಂ.ನಂಜುಂಡಪ್ಪ ಸಮಿತಿಯ ಶಿಫಾರಸ್ಸಾದ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ (2007-2011) ರೂ. 9162.26 ಕೋಟಿ ಮೀಸಲಿಟ್ಟಿದ್ದರೆ, ಕೇವಲ ರೂ 5251.44 ಕೋಟಿಯನ್ನು (ಶೇ 57.33) ಮಾತ್ರ ಖರ್ಚು ಮಾಡಲು ಸರ್ಕಾರಕ್ಕೆ ಸಾಧ್ಯವಾಗಿದೆ. ಇದು ಯಾಕೆ ನಮಗೆ ಸಮಸ್ಯೆಯಾಗುತ್ತಿಲ್ಲ? ಈ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ 2010-11ನೆಯ ಸಾಲಿನಲ್ಲಿ ಮೀಸಲಿಟ್ಟ ಹಣ ರೂ. 2464 ಕೋಟಿ. ಆದರೆ ಅಕ್ಟೋಬರ್ 2010 ರವರೆಗೆ ಖರ್ಚು ಮಾಡಿದ ಮೊತ್ತ ಕೇವಲ ರೂ 646.10 ಕೋಟಿ (ಶೇ 26.22). ಇದು ನಮ್ಮ ಮುಖ್ಯಮಂತ್ರಿಗಳೇ ‘ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ’ಯ ಬಗ್ಗೆ ನಡೆಸಿದ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಬಹಿರಂಗಗೊಂಡ ಸಂಗತಿ.ಡಾ.ಡಿ.ಎಂ.ನಂಜುಂಡಪ್ಪ ಸಮಿತಿಯು ತನ್ನ ವರದಿಯಲ್ಲಿ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಅನೇಕ ಶಿಫಾರಸುಗಳನ್ನು ಮಾಡಿದೆ. ಆದರೆ ಅದನ್ನು ಸರ್ಕಾರವು ಕೇವಲ ಒಂದೇ ಒಂದು ಕಾರ್ಯಕ್ರಮವಾದ ‘ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ’ಗೆ ಕುಬ್ಜಗೊಳಿಸಿಬಿಟ್ಟಿದೆ. ಅದರ ಮೊದಲ ಶಿಫಾರಸು ‘ಪ್ರಾದೇಶಿಕ ಅಭಿವೃದ್ಧಿ ನೀತಿ’ಯನ್ನು ಸರ್ಕಾರ ಘೋಷಿಸಬೇಕು ಎಂಬುದಾಗಿದೆ. ಆದರೆ ನಮ್ಮ ಸರ್ಕಾರ ಮತ್ತು ರಾಜಕಾರಣಿಗಳಿಗೆ ಅದು ಬೇಕಾಗಿಲ್ಲ. ಅದಕ್ಕಾಗಿ ಅದು 2002ರಿಂದ ಘೋಷಣೆಯಾಗಿಲ್ಲ. ಈ ಬಗ್ಗೆ ಚಿಂತನೆ ನಡೆಸುವುದಕ್ಕೆ ಪ್ರತಿಯಾಗಿ ಕೃಷಿಗೆ ಪ್ರತ್ಯೇಕ ಬಜೆಟ್ಟಿನ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಆದ್ಯತೆಯು ಗ್ರಾಮೀಣವೋ ನಗರವೋ!: ಕೃಷಿಗೆ ಪ್ರತ್ಯೇಕ ಬಜೆಟ್ಟನ್ನು ಘೋಷಿಸುವುದರ ಬಗ್ಗೆ ಸದ್ದು ಮಾಡುತ್ತಿರುವ ಸರ್ಕಾರ ಕಳೆದ ನಾಲ್ಕು (2007-08 ರಿಂದ 2010-11) ವರ್ಷಗಳಲ್ಲಿ ಬಜೆಟ್ಟಿನಲ್ಲಿ ಕೃಷಿಗೆ ಏನು ಮಾಡಿದೆ? ಅದರ ಕೃಷಿಯ ಬಗೆಗಿನ ಮತ್ತು ಗ್ರಾಮೀಣದ ಬಗೆಗಿನ ಕಾಳಜಿಯು ಎಷ್ಟು ನಿಜವಾದುದು ಎಂಬುದನ್ನು ಅದರ ಕಳೆದ ನಾಲ್ಕು ವರ್ಷಗಳ ಬಜೆಟ್ಟಿನ ವಿಶ್ಲೇಷಣೆಯಿಂದ ತಿಳಿದುಕೊಳ್ಳಬಹುದು. ಸರ್ಕಾರವೊಂದು ನೀತಿಯೊಂದನ್ನು ರೂಪಿಸಿದಾಗ ಅದು ಜನಪರವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತೀರ್ಮಾನಿಸಲು ಇರುವ ಮಾನದಂಡವೆಂದರೆ ಅದರ ಹಿಂದಿನ ವರ್ಷಗಳ ಸಿದ್ಧಿ-ಸಾಧನೆಗಳು. ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರವು ನಗರ ಪ್ರದೇಶಗಳ ಬಗ್ಗೆ ಕಾಳಜಿ ತೋರಿಸುತ್ತಿದೆಯೋ ಅಥವಾ ಗ್ರಾಮೀಣ ಪ್ರದೇಶದ ಬಗ್ಗೆ ತೋರಿಸುತ್ತಿದೆಯೋ ಎಂಬುದನ್ನು ತಿಳಿದುಕೊಳ್ಳುವುದು   ಬಹಳ ಮುಖ್ಯ.ಕೃಷಿ, ಗ್ರಾಮೀಣ ಮತ್ತು ನೀರಾವರಿಗಳನ್ನು ಒಟ್ಟಿಗೆ ಸೇರಿಸಿ ಕೃಷಿ ಬಜೆಟ್ಟು ಎಂದು ಪರಿಗಣಿಸುವುದಾದರೆ ಅದನ್ನು ಕಳೆದ ನಾಲ್ಕು ವರ್ಷಗಳಿಂದ ಸರ್ಕಾರವು ಯಾವ ರೀತಿಯಲ್ಲಿ ನಿರ್ವಹಿಸಿಕೊಂಡು ಬಂದಿದೆ ಎಂಬುದನ್ನು ಪರಿಶೀಲಿಸಿದರೆ ಕೃಷಿಗೆ ಪ್ರತ್ಯೇಕ ಬಜೆಟ್ಟು ಎಂಬ ರಾಜಕಾರಣದ ಹಿಂದಿನ ಹಿತಾಸಕ್ತಿಗಳು ಅರ್ಥವಾಗುತ್ತದೆ. ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ನೀರಾವರಿಗಳಿಗೆ 2007-08ರ ಯೋಜನಾ ವೆಚ್ಚದಲ್ಲಿ ದೊರೆತ ಒಟ್ಟು ಮೊತ್ತ ರೂ. 5586.94 ಕೋಟಿ. ಅದು 2007-08ರ ಒಟ್ಟು ಯೋಜನಾ ವೆಚ್ಚದ ಶೇ 31.42ರಷ್ಟಾಗುತ್ತದೆ. ಇದರ ಪ್ರಮಾಣ 20010-11ನೆಯ ಸಾಲಿನಲ್ಲಿ ರೂ. 8291 ಕೋಟಿಯಷ್ಟಾಗಿದೆ. ಇದು ಯೋಜನಾ ವೆಚ್ಚದ ಶೇ 26.75ರಷ್ಟಾಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿಗೆ ಯೋಜನಾ ವೆಚ್ಚದಲ್ಲಿ ಮೀಸಲಿಟ್ಟ ಮೊತ್ತದ ಪ್ರಮಾಣ ಶೇ 31.42 ರಿಂದ ಶೇ 26.75ಕ್ಕೆ ಕುಸಿದಿದೆ. ಆದರೆ ಇದೇ ಅವಧಿಯಲ್ಲಿ ನಗರಾಭಿವೃದ್ಧಿಗೆ ಸರ್ಕಾರವು ತನ್ನ ಬಜೆಟ್ಟಿನಲ್ಲಿ ಮೀಸಲಿಟ್ಟ ಹಣ 2007-08ರಲ್ಲಿ ರೂ. 2045.43 ಕೋಟಿ.ಇದು ಒಟ್ಟು ಯೋಜನಾ ವೆಚ್ಚದ ಶೇ 11.50ರಷ್ಟಾಗುತ್ತದೆ. ಇದು 2010-11ರಲ್ಲಿ ರೂ. 4748.80 ಕೋಟಿಯಷ್ಟಕ್ಕೇರಿದೆ.ಅದರ ಪ್ರಮಾಣ ಒಟ್ಟು ಯೋಜನಾ ವೆಚ್ಚದ ಶೇ 15.32ರಷ್ಟಾಗುತ್ತದೆ. ನಗರಾಭಿವೃದ್ಧಿಗೆ ಯೋಜನಾ ವೆಚ್ಚದಲ್ಲಿನ ಪ್ರಮಾಣ 2007-2011ರ ಅವಧಿಯಲ್ಲಿ ಶೇ. 11.50ರಿಂದ ಶೇ 15.32ಕ್ಕೇರಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ನೀರಾವರಿ ಮೇಲಿನ ಒಟ್ಟು ವೆಚ್ಚದಲ್ಲಿ ಶೇ. 48.41ರಷ್ಟು ಏರಿಕೆಯಾಗಿದ್ದರೆ ನಗರಾಭಿವೃದ್ಧಿ ಮೇಲಿನ ವೆಚ್ಚದಲ್ಲಿ ಶೇ. 132.17ರಷ್ಟು ಏರಿಕೆ ಕಂಡು ಬಂದಿದೆ. ಇವೆಲ್ಲ ಏನನ್ನು ಸೂಚಿಸುತ್ತವೆ?

ಈ ಹಿನ್ನೆಲೆಯಲ್ಲಿ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುತ್ತೇವೆ ಎಂದು ಹೇಳುವುದು ಕೇವಲ ಜನಲೋಲುಪತೆಯಾಗುತ್ತದೆಯೇ ವಿನಾ ಜನಪರವಾದ ಸಂಗತಿಯಾಗುವುದಿಲ್ಲ. ಸರ್ಕಾರಗಳ ಒಟ್ಟಾರೆ ನೀತಿಯೇ ಗ್ರಾಮೀಣಕ್ಕೆ ವಿರುದ್ಧವಾದುದಾಗಿದೆ.ಅದನ್ನು ವಿರುದ್ಧವೆಂದು ಹೇಳಲಾಗದಿದ್ದರೂ ಅದರ ಒಲವು ಗ್ರಾಮೀಣದ ಪರವಾಗಿಲ್ಲವೆಂದು ಸ್ಪಷ್ಟವಾಗಿ ಹೇಳಬಹುದು. ನಮ್ಮ ರಾಜ್ಯದಲ್ಲಿ ಅಭಿವೃದ್ಧಿಯೆಂದರೆ ಬೆಂಗಳೂರು ಮಾತ್ರ ಕಾಣುತ್ತದೆ ವಿನಾ ಬೀದರ್ ಆಗಲಿ ಅಥವಾ ಕೋಲಾರವಾಗಲಿ ಅಥವಾ ಚಾಮರಾಜನಗರವಾಗಲಿ ಕಾಣುವುದಿಲ್ಲ. ಅದಕ್ಕಾಗಿಯೇ ಬೆಂಗಳೂರು ನಗರ ಜಿಲ್ಲೆಯ ತಲಾ ವರಮಾನ 2007-08ರಲ್ಲಿ ರೂ. 1,13,033 ರಷ್ಟಿದ್ದರೆ ಬೀದರ್‌ನಲ್ಲಿ ಅದು ರೂ. 22.731ರಷ್ಟಿದೆ. ಇಲ್ಲಿ ಅಂತರ ಸುಮಾರು ಐದು ಪಟ್ಟು! ಯಾಕೆ ಇಷ್ಟೊಂದು ಅಂತರ? ಇದು ಸರ್ಕಾರಕ್ಕೆ ಕಳವಳಕಾರಿ ಸಂಗತಿಯಾಗಿಲ್ಲ.  ಕರ್ನಾಟಕ ಏಕೀಕರಣದ ಮಹತ್ವದ ಪ್ರತಿಪಾದಕರಾಗಿದ್ದ ಕೃಷ್ಣಕುಮಾರ ಕಲ್ಲೂರರು 1956ರಲ್ಲಿ ನಮ್ಮ ರಾಜ್ಯದಲ್ಲಿ ಅಭಿವೃದ್ಧಿಯು ಬೆಂಗಳೂರಿಗೆ ಅಭಿಮುಖವಾಗುವುದಕ್ಕೆ ಪ್ರತಿಯಾಗಿ ‘ಉತ್ತರಾಭಿಮುಖಿ’ಯಾಗಬೇಕೆಂದು ವಾದಿಸುತ್ತಿದ್ದರು. ಆದರೆ ಅದು ಹಾಗೆ ನಡೆಯಲಿಲ್ಲ.ನಮ್ಮ ರಾಜ್ಯದಲ್ಲಿ ಅಭಿವೃದ್ಧಿಯು ಬೆಂಗಳೂರಿಗೆ ಅಭಿಮುಖವಾಗಿ ನಡೆದಿದೆಯೇ ವಿನಾ ಇಡೀ ರಾಜ್ಯವನ್ನು ಒಳಗೊಳ್ಳುವ ರೀತಿಯಲ್ಲಿ ನಡೆದಿಲ್ಲ.  ರಾಜ್ಯದಲ್ಲಿ 2007ರಲ್ಲಿದ್ದ ಒಟ್ಟುಬ್ಯಾಂಕು ಠೇವಣಿಗಳಲ್ಲಿ (ರೂ.1,71,898 ಕೋಟಿ) ಬೆಂಗಳೂರಿನ ಪಾಲು ಶೇ 65.35 (ರೂ. 1,12,343 ಕೋಟಿ)ರಷ್ಟಿದೆ. ನಮ್ಮ ರಾಜ್ಯದಲ್ಲಿ ಅಭಿವೃದ್ದಿಯು ಬೆಂಗಳೂರಿಗೆ ಅಭಿಮುಖವಾಗಿ ನಡೆದಿದೆ ಎಂಬುದಕ್ಕೆ ಮತ್ತಾವ ಪುರಾವೆ ಬೇಕು? ಈ ಹಿನ್ನೆಲೆಯಲ್ಲಿ ಕೃಷಿಗೆ ಪ್ರತ್ಯೇಕ ಬಜೆಟ್ಟೆಂಬುದಕ್ಕೆ ಏನಾದರೂ ಅರ್ಥವಿದೆಯೇ? ಕೃಷಿಯ ಅಭಿವೃದ್ಧಿಗೆ ಅಗತ್ಯವಾದ ಕ್ರಮವೆಂದರೆ ಅದರ ಮೇಲಿನ ಸಾರ್ವಜನಿಕ ಬಂಡವಾಳ ವೆಚ್ಚವನ್ನು ಹೆಚ್ಚಿಸಬೇಕು. ಕೃಷಿ ಭೂಮಿಯನ್ನು ಯಾವ ಕಾರಣಕ್ಕೂ ಪರಭಾರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಆದರೆ ಇಂದು ಸರ್ಕಾರವೇ ಕೃಷಿ ಭೂಮಿಯನ್ನು ಕಬಳಿಸುವುದಕ್ಕೆ ಕುಮ್ಮಕ್ಕು ನೀಡುತ್ತಿದೆ. ಕೃಷಿಯಲ್ಲಿ ನಮ್ಮ ಸರ್ಕಾರಕ್ಕೆ ನೀರಾವರಿ ಮಾತ್ರ ಕಾಣುತ್ತದೆ. ನಮ್ಮ ರಾಜ್ಯದಲ್ಲಿ ಮೂರುಮುಕ್ಕಾಲುವೀಸೆ ಪಾಲು ರೈತರು ಒಣಭೂಮಿ ಬೇಸಾಯ ಮಾಡುತ್ತಿದ್ದಾರೆ. ಅವರ ರಕ್ಷಣೆಗೆ ಕ್ರಮಗಳನ್ನು ಯೋಚಿಸಬೇಕು. ಕೃಷಿ ಮಾರುಕಟ್ಟೆಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಕಣ್ಣು ಬಿದ್ದಿದೆ.ಒಂದು ವೇಳೆ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸಿಬಿಟ್ಟರೆ ಅಲ್ಲಿಗೆ ನಮ್ಮ ರೈತರ ಬದುಕು ಮೂರಾಬಟ್ಟೆಯಾಗುವುದು ಖಂಡಿತ. ಕೃಷಿ ಅಂದರೆ ಕೇವಲ ಕೃಷ್ಣಾ ಮತ್ತು ಕಾವೇರಿ ಕಣಿವೆ ಪ್ರದೇಶ ಮಾತ್ರವಲ್ಲ. ಅದನ್ನು ಬಿಟ್ಟು ಒಕ್ಕಲುತನವಿದೆ. ಅದರ ಬಗ್ಗೆ ನಾವು ಯೋಚಿಸುವ ಅಗತ್ಯವಿದೆ. ಕೃಷಿಯಲ್ಲಿರುವ ಒಟ್ಟು ದುಡಿಮೆಗಾರರಲ್ಲಿ ಅರ್ಧಕ್ಕಿಂತಲೂ ಅಧಿಕ ಮಹಿಳೆಯರಿದ್ದಾರೆ. ಅವರಿಗೆ ಅಗತ್ಯವಾಗಿರುವುದು ಸೀರೆಯಲ್ಲ. ಅವರಿಗೆ ಜರೂರಾಗಿ ಬೇಕಾಗಿರುವುದು ಕೆಲಸ ಮತ್ತು ಕೂಲಿ.ಇವು ನಮ್ಮ ಮುಂದಿರುವ ಕೃಷಿ ಸಮಸ್ಯೆಗಳು. ನಿಜವಾಗಿ ಕೃಷಿಯೆಂದರೆ ಕೃಷಿಯಲ್ಲಿನ ದುಡಿಮೆಗಾರರ ಬದುಕನ್ನು ಗಮನಿಸಬೇಕು. ನಮ್ಮ ಸರ್ಕಾರದ ಒಟ್ಟು ಬಜೆಟ್ಟಿನ ಶೇ 25ರಷ್ಟು ಪಾಲು ಪಡೆದಿರುವ ಕೃಷಿಗೆ ಪ್ರತ್ಯೇಕ ಬಜೆಟ್ಟೆಂಬುದು ಹಾಸ್ಯಾಸ್ಪದವಾಗುತ್ತದೆ. ನಮ್ಮ ಬಜೆಟ್ಟಿನ ಗಾತ್ರವನ್ನು ಮುಂದಿನ ಮೂರು ವರ್ಷಗಳಲ್ಲಿ ಈಗಿನ ರೂ. 65.000 ಕೋಟಿಯಿಂದ ರೂ.100,000 ಕೋಟಿಗೇರಿಸುವುದು ನಮ್ಮ ಗುರಿಯೆಂದು ಸರ್ಕಾರ ಹೇಳುತ್ತಿದೆ. ನಮ್ಮ ರಾಜ್ಯದಲ್ಲಿ ಇಂದು  ಶೇ 35ರಷ್ಟಿರುವ ನಗರವಾಸಿಗಳಿಗೆ ಬಜೆಟ್ಟಿನ ಶೇ 15ರಷ್ಟನ್ನು ಮೀಸಲಿಡಲಾಗುತ್ತಿದೆ.ಆದರೆ ಜನಸಂಖ್ಯೆಯ ಶೇ 65ರಷ್ಟಿರುವ ಗ್ರಾಮೀಣವಾಸಿಗಳ ಅಭಿವೃದ್ಧಿಗೆ ಒಟ್ಟು ಬಜೆಟ್ಟಿನ ಶೇ 25ರಷ್ಟನ್ನು ಮಾತ್ರ ಮೀಸಲಿಡಲಾಗುತ್ತಿದೆ.  ಅಂದರೆ ನಮ್ಮ ಒಲವು ಎಲ್ಲಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ಜನಲೋಲುಪತೆಯನ್ನು ಬಿಟ್ಟು ನಾವು ಇಂದು ಜನಪರ ಅಭಿವೃದ್ಧಿ ನೀತಿಗಳ ಬಗ್ಗೆ ಚಿಂತಿಸುವ ಅಗತ್ಯವಿದೆ. ಕೇವಲ ಭ್ರಮೆಯನ್ನು ಹುಟ್ಟಿಸುವ ಪರಿಭಾಷೆಯನ್ನು ತ್ಯಜಿಸಬೇಕು. ಜನರನ್ನು ಒಳಗೊಳ್ಳುವ ರಾಜಕಾರಣವನ್ನು ಕಟ್ಟುವ ಅಗತ್ಯವಿದೆ.

(ಲೇಖಕರು ಹಂಪಿ ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.