ಶುಕ್ರವಾರ, ಮೇ 27, 2022
30 °C

ಕೃಷಿ ವಿರೋಧಿ ನೀತಿ ವಿರುದ್ಧ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ವಿರೋಧಿ ನೀತಿ ವಿರುದ್ಧ ಟೀಕೆ

ಬೆಂಗಳೂರು: `ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಲು ಕಾರ್ಪೊರೆಟ್ ಸಂಸ್ಥೆಗಳಿಗೆ ರತ್ನಗಂಬಳಿ ಹಾಕಿ ಸ್ವಾಗತ ಕೋರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಯ ವಿರುದ್ಧ ಕಿಸಾನ್ ಸಭಾ ಮತ್ತು ರೈತ ಸಂಘಟನೆಗಳು ದೇಶವ್ಯಾಪಿ ಸಂಘಟಿತ ಹೋರಾಟ ನಡೆಸಬೇಕು~ ಎಂದು ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರೊ. ಉತ್ಸಾ ಪಟ್ನಾಯಕ್ ಶನಿವಾರ ಇಲ್ಲಿ ಕರೆ ನೀಡಿದರು. ಕರ್ನಾಟಕ ಪ್ರಾಂತ ರೈತಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಕೆ.ಎಚ್. ರಸ್ತೆಯ ಕೆ.ಎಚ್. ಪಾಟೀಲ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ `ಕೃಷಿ ಕ್ಷೇತ್ರದಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ~ದ ಪರಿಣಾಮಗಳು ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಮುಂದುವರಿದ ಬಹುತೇಕ ರಾಷ್ಟ್ರಗಳಲ್ಲಿ ಹವಾಮಾನ ವೈಪರಿತ್ಯದಿಂದ ವರ್ಷ ಪೂರ್ತಿ ಬೆಳೆ ಬೆಳೆಯುವಂತಹ ವಾತಾವರಣ ಇಲ್ಲ. ಮೇ ತಿಂಗಳಿಂದ ಸೆಪ್ಟೆಂಬರ್ ಅವಧಿಯಲ್ಲಿ ಮಾತ್ರ ಹಣ್ಣು-ತರಕಾರಿಗಳನ್ನು ಬೆಳೆಯಬಹುದು.ಹೀಗಾಗಿ, ಈ ರಾಷ್ಟ್ರಗಳು ಆಹಾರ ಉತ್ಪನ್ನಗಳಿಗಾಗಿ ಪ್ರಮುಖವಾಗಿ ಏಷ್ಯಾ ಹಾಗೂ ಆಫ್ರಿಕಾ ಖಂಡಗಳ ರಾಷ್ಟ್ರಗಳನ್ನು ಅವಲಂಬಿಸಿವೆ. ಆಹಾರ ಉತ್ಪಾದಿಸುವಂತಹ ಕಾರ್ಪೊರೆಟ್ ಸಂಸ್ಥೆಗಳಿಗೆ ಅಲ್ಲಿನ ಸರ್ಕಾರಗಳು ಹೆಚ್ಚಿನ ಸಬ್ಸಿಡಿ ನೀಡಿ ಪ್ರೋತ್ಸಾಹ ನೀಡುತ್ತಿರುವುದರಿಂದ ಅವು ಭಾರತದಂತಹ ಕೃಷಿ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು ಸ್ಪರ್ಧೆಗಳಿದಿವೆ~ ಎಂದು ಹೇಳಿದರು.`ಕಾರ್ಪೊರೆಟ್ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತಹ ಪ್ರಕ್ರಿಯೆ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಚೀನಾದ ಕಾರ್ಪೊರೆಟ್ ಸಂಸ್ಥೆಗಳು ತಾಂಜೇನಿಯಾದ ಕೃಷಿ ಭೂಮಿ ಮೇಲೆ ಕಣ್ಣಿಟ್ಟಿದ್ದರೆ, ಭಾರತದ ಕಾರ್ಪೊರೆಟ್ ಸಂಸ್ಥೆಗಳು ಇಥಿಯೋಪಿಯಾದ ಭೂಮಿಯನ್ನೂ ವಶಪಡಿಸಿಕೊಳ್ಳುತ್ತಿವೆ~ ಎಂದರು. ಲಾಭವೇ ಗುರಿ: `ಕಾರ್ಪೊರೆಟ್ ಸಂಸ್ಥೆಗಳಿಗೆ ಲಾಭಾಂಶವೇ ಮುಖ್ಯ ಗುರಿಯಾಗಿದೆ. ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಸಾಧ್ಯತೆಗಳು ತೀರಾ ಕಡಿಮೆ. ಪಂಜಾಬ್- ಹರ‌್ಯಾಣದಂತಹ ರಾಜ್ಯಗಳಲ್ಲಿ ಇದು ಈಗಾಗಲೇ ಸಾಬೀತಾಗಿದೆ. ಗುತ್ತಿಗೆ ಸ್ವರೂಪದ ಒಪ್ಪಂದಗಳಿಂದ ರೈತೆರಿಗೆ ದೀರ್ಘಾವಧಿ ಲಾಭ ಇಲ್ಲ~ ಎಂದು ಹೇಳಿದರು.`ದೇಶದಲ್ಲಿ 240 ದಶಲಕ್ಷ ಟನ್ ಆಹಾರ ಉತ್ಪಾದನೆ ಮಾಡಲಾಗಿದೆ. ಇದು ಬಂಪರ್ ಎನ್ನುವ ರೀತಿಯಲ್ಲಿ ಕೇಂದ್ರವು ಕೊಚ್ಚಿಕೊಳ್ಳುತ್ತಿದೆ. ಅದೇ ನಮ್ಮ ನೆರೆಯ ಚೀನಾ 500 ದಶಲಕ್ಷ ಟನ್ ಆಹಾರ ಉತ್ಪಾದಿಸುತ್ತಿದೆ. ಆ ದೇಶದ ಜನಸಂಖ್ಯೆ ಭಾರತಕ್ಕಿಂತ ತುಂಬಾ ಹೆಚ್ಚೇನೂ ಇಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು~ ಎಂದರು.

`2008ರಲ್ಲಿ ಭಾರತದ ಆಹಾರ ಉತ್ಪಾದನೆ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳ ತಲಾವಾರು ಆಹಾರ ಉತ್ಪನ್ನಗಳಿಗಿಂತ ಬಹಳ ಕಡಿಮೆ.

 

ದೇಶದ ಜನಸಂಖ್ಯೆಯ ಪೈಕಿ ಶೇ 80ರಷ್ಟು ಜನತೆ ಕಬ್ಬಿಣ ಹಾಗೂ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ಕೇಂದ್ರವು 60 ದಶಲಕ್ಷ ಟನ್ ಆಹಾರ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಕೊಳೆಯಲು ಬಿಟ್ಟು ಆಹಾರ ಭದ್ರತೆಯಲ್ಲಿ ಸ್ವಾವಲಂಬನೆಯ ಬಡಾಯಿ ಕೊಚ್ಚಿಕೊಳ್ಳುತ್ತಿದೆ~ ಎಂದು ಜರೆದರು.`ಹೊಸ ಆರ್ಥಿಕ ನೀತಿ ಜಾರಿಗೆ ಬಂದ ನಂತರ ದೇಶದ ಕೃಷಿ ಕ್ಷೇತ್ರವು ಬಿಕ್ಕಟ್ಟನ್ನು ಎದುರಿಸುತ್ತಿದೆ. 1995ರಿಂದ ಇದುವರೆಗೆ ದೇಶದಲ್ಲಿ 2,56,913  ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಗತಿಪರ ರಾಜ್ಯ ಎಂದು ಹೇಳಿಕೊಳ್ಳುವ ಕರ್ನಾಟಕದಲ್ಲಿಯೂ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ~ ಎಂದು ಕಳವಳ ವ್ಯಕ್ತಪಡಿಸಿದರು. ಲಾಭಕ್ಕಿಂತ ನಷ್ಟವೇ ಹೆಚ್ಚು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಡಾ.ಟಿ.ಎನ್. ಪ್ರಕಾಶ್, `ಕೃಷಿಯು ದುಬಾರಿ ಹಾಗೂ ಶ್ರಮಿಕ ಕ್ಷೇತ್ರವಾಗುತ್ತಿರುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಕೃಷಿ ಲಾಭದಾಯಕವಲ್ಲ ಎಂಬುದನ್ನು ಕೃಷಿ ಇಲಾಖೆಯ ವರದಿಯೇ ದೃಢಪಡಿಸಿದೆ. ಸುಮಾರು 18 ಪ್ರಮುಖ ಆಹಾರ ಬೆಳೆಗಳ ಪೈಕಿ 9 ಬೆಳೆಗಳಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ವರದಿಯೇ ಹೇಳಿದೆ. ಹೀಗಾಗಿ, ದೇಶದಲ್ಲಿ ಬತ್ತ ಬೆಳೆಯುವಂತಹ ಒಂದು ಲಕ್ಷ ರೈತರು ಕೃಷಿಯನ್ನು ತ್ಯಜಿಸಿದ್ದಾರೆ~ ಎಂದು ನುಡಿದರು. ಮಾಜಿ ಸಂಸದ ಮತ್ತು ಎಐಎಡಬ್ಲ್ಯುಯು ಪ್ರಧಾನ ಕಾರ್ಯದರ್ಶಿ ಎ. ವಿಜಯರಾಘವನ್ ಮಾತನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಾಗಾರದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಬಯ್ಯಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.