ಭಾನುವಾರ, ಮೇ 16, 2021
26 °C

ಕೃಷಿ ವಿಸ್ತರಣಾ ಕಾರ್ಯಚಟುವಟಿಕೆ ಎಲ್ಲಿ?

- ಎಚ್. ಎಸ್. ಮಂಜುನಾಥ,ಬೆಂಗಳೂರು Updated:

ಅಕ್ಷರ ಗಾತ್ರ : | |

ಬೆಂಗಳೂರು ಕೃಷಿ ವಿ.ವಿ.ಯ ಸುವರ್ಣ ಮಹೋತ್ಸವದ ಕುರಿತ ವರದಿಗಳಿಗೊಂದು ಪ್ರತಿಕ್ರಿಯೆ.ಈ ವಿ.ವಿ.ಯ 19,175 ಪದವೀಧರರ ಪೈಕಿ ನಾನೂ ಒಬ್ಬ. ನನಗೆ ವಿಷಾದ ತಂದಿರುವ ವಾಸ್ತವವೆಂದರೆ ಈ ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದಿನ ಮೂರು ಉದ್ದೇಶಗಳ ಪೈಕಿ ವಿಸ್ತರಣೆ (ಅಗ್ರಿಕಲ್ಚರಲ್ ಎಕ್ಸ್‌ಟೆನ್‌ಷನ್) ತೀರ ಹಿಂದೆ ಬಿದ್ದಿದೆ.ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕರಿಗೆ ವೇತನ ಶ್ರೇಣಿ ಸುಧಾರಿಸಿದೆ. ಅಲ್ಲಿಂದ ಹೊರಬರುವ ಪದವೀಧರರಿಗೂ ವೈಯಕ್ತಿಕ ಆರ್ಥಿಕ ಉನ್ನತಿ ಸಾಧ್ಯವಾಗಿದೆ. ಆದರೆ ಕರ್ನಾಟಕದ ಕೃಷಿ ಸಮುದಾಯಕ್ಕೆ ವಿಶ್ವವಿದ್ಯಾಲಯದಿಂದ ಅಪೇಕ್ಷಣೀಯ ಪ್ರಮಾಣದಲ್ಲಿ ಸಹಾಯ ಆಗಿಲ್ಲ.ಪ್ರತಿ ವರ್ಷ ಘಟಿಕೋತ್ಸವಕ್ಕೆ ಮುಂಚೆ ಇಷ್ಟು ತಳಿಗಳು ಬಿಡುಗಡೆ ಆಗಿವೆ ಎಂದು ತಿಳಿಸಲಾಗುತ್ತದೆ. ಒಮ್ಮೆ ರಾಷ್ಟ್ರಪತಿಯವರನ್ನು ಘಟಿಕೋತ್ಸವಕ್ಕೆ ಕರೆತರಲಾಗಿತ್ತು. ಈಗ `ಅಂತರರಾಷ್ಟ್ರೀಯ ಕೃಷಿ ಮೇಳ'ದ ಪ್ರಸ್ತಾಪವಿದೆ. ಇವುಗಳಿಂದ ಪ್ರಚಾರ ಸಿಗಬಹುದಾದರೂ ಬುಡಮಟ್ಟದಲ್ಲಿ ಉಪಯೋಗ ಆಗದು. ಪದವೀಧರರನ್ನು ಉತ್ಪಾದಿಸುವುದು, ತರಬೇತಿ ಕಾರ್ಯಕ್ರಮ ಹಾಗೂ ಸೆಮಿನಾರುಗಳನ್ನು ನಡೆಸುವುದು ವರ್ಷಕ್ಕೊಮ್ಮೆ ಮೇಳ ನಡೆಸಿ ರೈತರೊಂದಿಗೆ ಸಂಪರ್ಕ ಸಾಧಿಸಿದ್ದೇವೆ ಎಂದು ತಿಳಿಯುವುದು - ಇಷ್ಟು ಸಾಲದು.ಕೃಷಿ ಇಲಾಖೆ ಕೃಷಿ ಸಾಮಗ್ರಿ, ಸಬ್ಸಿಡಿ ವಿತರಣೆಗೆ ಹೆಚ್ಚು ಸಮಯ ವ್ಯಯಿಸುತ್ತಿದೆ. ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳಾದ ಮೇಲೆ ಹಳ್ಳಿಗೆ ಹೋಗಿ ನೋಡುವ ಪ್ರವೃತ್ತಿಯೇ ತಗ್ಗಿದೆ. ಹೀಗಿರುವಾಗ ಹೊಸ ಹೊಸ ಕೃಷಿ ಕಾಲೇಜು, ಕೋರ್ಸ್ ಆರಂಭಿಸುವುದಕ್ಕಿಂತ ಸಮಸ್ಯೆಗಳ ಪರಿಹಾರದತ್ತ ಗಮನ ಕೇಂದ್ರೀಕರಿಸಿದ ವಿಸ್ತರಣಾ ಕಾರ್ಯ ನಡೆಯಬೇಕಿದೆ. ಅಗತ್ಯ ಬಿದ್ದಲ್ಲಿ ಇದಕ್ಕಾಗಿ ಕೃಷಿ ವಿ.ವಿ. ವರ್ಷದಲ್ಲಿ ಒಂದೆರಡು ತಿಂಗಳು ಬೋಧನೆ, ಸಂಶೋಧನೆ  ನಿಲ್ಲಿಸಿದರೂ ಚಿಂತಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.