ಕೃಷ್ಣ ಅ. 13ರವರೆಗೆ ನ್ಯಾಯಾಂಗ ಬಂಧನಕ್ಕೆ

7

ಕೃಷ್ಣ ಅ. 13ರವರೆಗೆ ನ್ಯಾಯಾಂಗ ಬಂಧನಕ್ಕೆ

Published:
Updated:

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ಸ್‌ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬಂಧಿಸಿದ್ದ ರಾಜ್ಯ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣ ಅವರನ್ನು ಗುರುವಾರದವರೆಗೆ (ಅ. 13) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಎಂಟನೇ ಎಸಿಎಂಎಂ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣ ಅವರನ್ನು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. ರಾತ್ರಿ ಏಳು ಗಂಟೆ ಸುಮಾರಿಗೆ ಕಾರಾಗೃಹಕ್ಕೆ ಬಂದ ಕೃಷ್ಣ ಅವರಿಗೆ ಜೈಲಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. `ಕೃಷ್ಣ ಅವರಿಗೆ ಗುರುವಾರ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗುತ್ತದೆ~ ಎಂದು ಕಾರಾಗೃಹ ಮುಖ್ಯ ಅಧೀಕ್ಷಕ ಟಿ.ಎಚ್.ಲಕ್ಷ್ಮಿನಾರಾಯಣ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಸಿಐಡಿ ಪೊಲೀಸರು ಅ.7ರಂದು ಕೃಷ್ಣ ಅವರನ್ನು ಬಂಧಿಸಿ ಎಂಟನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಕೃಷ್ಣ ಅವರ ದತ್ತು ಪುತ್ರಿಯ ವಿವಾಹ ಸಮಾರಂಭವಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ ಅ. 12ರವರೆಗೆ ಮಧ್ಯಂತರ ಜಾಮೀನು ನೀಡಿತ್ತು.

ಮಧ್ಯಂತರ ಜಾಮೀನು ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಕೃಷ್ಣ ಅವರು ನ್ಯಾಯಾಲಯದಲ್ಲಿ ಬುಧವಾರ ವಿಚಾರಣೆಗೆ ಹಾಜರಾದರು. ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್‌ಕಿಣಿ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದರು. ಸಿಐಡಿ ಪೊಲೀಸರ ಪರವಾಗಿ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಅರುಂಧತಿ ಕುಲಕರ್ಣಿ ಅವರು ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry