ಮಂಗಳವಾರ, ಮೇ 24, 2022
30 °C

ಕೃಷ್ಣ ಕೊಲ್ಹಾರ ಮಾರ್ಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣ ಕೊಲ್ಹಾರ ಮಾರ್ಗ!

ಬಹುಶಿಸ್ತೀಯ, ಬಹುಸ್ತರೀಯ ಅಧ್ಯಯನ ಸಂಕೀರ್ಣವಾದದ್ದು. ಅದು ಬೇಡುವ ನಿಷ್ಠೆ, ಸಮಯ ದೊಡ್ಡದು. ವೃತ್ತಿಯಲ್ಲಿ ಅಂಚೆ ಇಲಾಖೆಯ ತಾರ್ ಮಾಸ್ತರರಾಗಿದ್ದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಹೆಸರು ಕೂಡ ಬಹುಸ್ತರೀಯ ಅಧ್ಯಯನದಲ್ಲಿ ಮುಖ್ಯವಾದದ್ದು. ಕವಿತಾ ರಚನೆಯೊಂದನ್ನು ಬಿಟ್ಟು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿರುವ ಅವರ ಪ್ರೀತಿಯ ಕ್ಷೇತ್ರ ಸಂಶೋಧನೆ. ಅವರು ನಮ್ಮ ನಾಡು ಕಂಡ ಅಪರೂಪದ ವಿದ್ವಾಂಸ, ವಿರಳ ಸಂಶೋಧಕ.

ವಿಜಯನಗರ ಪತನಾನಂತರ, ಅಂದರೆ ಕ್ರಿ.ಶ.1565ರಿಂದ ಸುಮಾರು 150 ವರ್ಷ ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ಕನ್ನಡ ಸಾಹಿತ್ಯ ಅಜ್ಞಾತದಲ್ಲಿತ್ತು ಎಂಬುದು ಬೆಟಗೇರಿ ಕಷ್ಣಶರ್ಮ, ರಾ.ಸ್ವಾ.ಪಂಚಮುಖಿ, ರಂ.ಶ್ರೀ. ಮುಗಳಿ, ಕಪಟರಾಳ ಕೃಷ್ಣರಾಯರು ಸೇರಿದಂತೆ ಬಹುತೇಕ ಚರಿತ್ರಕಾರರ ಅಭಿಪ್ರಾಯ. ಆದರೆ ಕೊಲ್ಹಾರ ಕುಲಕರ್ಣಿ ಅವರು ಈ ದಿಶೆಯಲ್ಲಿ ನಡೆಸಿದ ಶೋಧದ ಫಲವಾಗಿ ಈ ಮೊದಲಿನ `ಅಜ್ಞಾತ ಕಾಲ~ ಎಂಬ ನಿರ್ಣಯವನ್ನು ಬದಲಿಸುವಷ್ಟು ಆ ಕಾಲದ ಸಾಹಿತ್ಯವು ಅವರಿಗೆ ದೊರೆಯಿತು. ಸುಮಾರು 36 ಹಸ್ತಪ್ರತಿಗಳನ್ನು ದೊರಕಿಸಿ ಅವುಗಳ ಮುಖಾಂತರ ಈ ಅವಧಿಯಲ್ಲಿ ಬಾಳಿ-ಬದುಕಿ ಸಂಖ್ಯೆಯಲ್ಲಿ, ಗುಣದಲ್ಲಿ ಪುರಂದರ ದಾಸರಿಗೆ ಸರಿಸಮನಾದ ಕೃತಿಗಳನ್ನು ನೀಡಿದ ಕಾಖಂಡಕಿ ಶ್ರೀ ಮಹಿಪತಿರಾಯರ ಬದುಕು-ಕೃತಿಗಳನ್ನು ಬೆಳಕಿಗೆ ತರುವ ಮೂಲಕ, ಕನ್ನಡ ಸಾಹಿತ್ಯದಲ್ಲಿ ಅಜ್ಞಾತ ಕಾಲವೇ ಇಲ್ಲವೆಂಬುದನ್ನು ದೃಢಪಡಿಸಿದರು. ತಮ್ಮ ಮಹಾಪ್ರಬಂಧದ ಮೂಲಕ ಇದನ್ನು ತೋರಿಸಿದರು.

ಕನ್ನಡ ಸಾಹಿತ್ಯ ಚರಿತ್ರೆಗೆ, ವಿಶೇಷವಾಗಿ ಹರಿದಾಸ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಅವರ ಕೊಡುಗೆ ಗಮನಾರ್ಹ. ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಇರುವ ಕುಲಕರ್ಣಿ ಸಂಸ್ಕೃತವನ್ನೂ ಬಲ್ಲವರು. ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ವೀರಶೈವ ಸಿದ್ಧಾಂತಗಳಲ್ಲೂ ಪ್ರವೀಣರು. ಮಧ್ವ ಮಠಗಳು ಹಾಗೂ ದಾಸಸಾಹಿತ್ಯ ಅವರ ಆಸಕ್ತಿಯ ವಿಷಯಗಳು. ಉತ್ತರಾದಿಮಠ ಹಾಗೂ ಉಳಿದ ಮಧ್ವ ಮಠಗಳ ಸ್ವಾಮೀಜಿಯವರು ಹಾಗೂ ಪಂಡಿತರೊಡನೆ ಚರ್ಚಿಸಿ ಆಳವಾದ ಅಧ್ಯಯನ ಮಾಡಿ ಅಪರೂಪದ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸರಿಸುಮಾರು 350 ವರ್ಷ ಕರ್ನಾಟಕದ ಬಹುಭಾಗವನ್ನು ಆಳಿದ ಮುಸ್ಲಿಂ ಅರಸರ ಚರಿತ್ರೆ ಈವರೆಗೆ ಸವಿವರವಾಗಿ ಬಂದಿರಲಿಲ್ಲ. ಸುಮಾರು 200 ವರ್ಷ ಆಳಿದ ಬಿಜಾಪುರದ ಆದಿಲಶಾಹಿಗಳ ಚರಿತ್ರೆ ನಾಲ್ಕಾರು ಪುಟಗಳ ಪಠ್ಯಪುಸ್ತಕಗಳಿಗಷ್ಟೇ ಮೀಸಲಾಗಿತ್ತು. ಸಂಗೀತ, ಸಾಹಿತ್ಯ, ಕಲೆ, ವಾಸ್ತುಶಿಲ್ಪ ಮತ್ತು ಆಡಳಿತಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನಿತ್ತ ಒಂದು ಮನೆತನ ಆದಿಲಶಾಹಿಗಳದ್ದು. ಕಳೆದ ಎರಡು ದಶಕಗಳಿಂದ ಈ ಕುರಿತು ತಪೋನಿಷ್ಠೆಯಿಂದ ಅಭ್ಯಾಸಮಾಡಿ ಹಲವಾರು ಗ್ರಂಥಗಳನ್ನು ರಚಿಸಿರುವ ಕುಲಕರ್ಣಿ ಅವರು ಕತ್ತಲೆಯಲ್ಲಿದ್ದ ಒಂದು ಅಪೂರ್ವ ಚರಿತ್ರೆಯನ್ನು ಕನ್ನಡಿಗರ ಮುಂದಿಟ್ಟಿದ್ದಾರೆ.

ಅರ್ವಾಚೀನ ಇತಿಹಾಸದ್ಲ್ಲಲಿಯೂ ಆಸಕ್ತಿ ಇರುವ ಕುಲಕರ್ಣಿ ಅವರು 1971ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗಾಗಿ `ದ್ವಿತೀಯ ಮಹಾಯುದ್ಧ~ ಗ್ರಂಥವನ್ನು ಬರೆದರು. ಎರಡನೆಯ ಮಹಾಯುದ್ಧದ ಬಗ್ಗೆ ಸಮಗ್ರ ಮಾಹಿತಿ ನೀಡುವ ಕನ್ನಡದ ಏಕೈಕ ಕೃತಿ ಎಂಬ ಹೆಗ್ಗಳಿಕೆ ಅದರದ್ದು. ಅದರ ಪರಿಷ್ಕೃತ ಆವೃತ್ತಿಯೂ ಬಂದಿದೆ. 1970-71ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪೂರ್ವದ ಬಾಂಗ್ಲಾ ಪ್ರಾಂತವು ಬಾಂಗ್ಲಾದೇಶವಾಗಿ ಸ್ವತಂತ್ರವಾಯಿತು. ಈ ಕುರಿತು ಕುಲಕರ್ಣಿ ಅವರು `ಸೋನಾರ ಬಾಂಗ್ಲಾ~ ಎಂಬ ಕೃತಿ ಪ್ರಕಟಿಸಿದರು.

ಕರ್ನಾಟಕದ ಗಾಂಧೀಜಿ ಎನಿಸಿದ ಕೌಜಲಗಿ ಹಣಮಂತರಾಯರು, ಅಸ್ಪೃಶ್ಯತೆಯ ವಿರುದ್ಧ ಜೀವನವಿಡೀ ಹೋರಾಡಿದ ಕಾಕಾ ಕಾರಖಾನೀಸರು, ಮಹಾತ್ಮಾ ಗಾಂಧೀಜಿ ಮತ್ತು ಸುಭಾಷ್‌ಚಂದ್ರ ಭೋಸರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆವಾಸ ಮಾಡಿದ ಶಂಕರರಾವ ದೇಶಪಾಂಡೆ, ಪತ್ರಿಕೋದ್ಯಮದ ಪ್ರಪಿತಾಮಹರಾದ ಮೊಹರೆ ಹಣಮಂತರಾಯರು ಮೊದಲಾದವರ ಚರಿತ್ರೆ, ವ್ಯಕ್ತಿಚಿತ್ರಗಳನ್ನು ಬರೆದಿದ್ದಾರೆ. ಏಕೀಕರಣಕ್ಕೆ ಸಂಬಂಧಿಸಿದ `ಅಖಂಡ ಕರ್ನಾಟಕದ ಹೆಜ್ಜೆಗಳು~ ಅವರ ಇನ್ನೊಂದು ಅಪರೂಪದ ಕೃತಿ.

ಅನುವಾದದಲ್ಲೂ ಅವರದ್ದು ಮಹತ್ವದ ಕಾಣಿಕೆ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಇಂಗ್ಲಿಷ್‌ನಿಂದ `ತುಕಾರಾಮ~, ಭಾರತೀಯ ವಿದ್ಯಾಭವನಕ್ಕಾಗಿ ಇಂಗ್ಲಿಷ್‌ನಿಂದ `ಮಹಾತ್ಮಾ ಗಾಂಧೀಜಿ~ ಸಂಪುಟ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಪರ್ಶಿಯನ್‌ದಿಂದ ಅನುವಾದಿತ ಮರಾಠಿ `ಬುಸಾತಿನೆ-ಸಲಾತೀನ~ ಬೃಹತ್ ಹೊತ್ತಿಗೆ ಮೊದಲಾದ ಅಪರೂಪದ ಸಂಶೋಧನಾತ್ಮಕ ಕೃತಿಗಳನ್ನು ಕನ್ನಡಕ್ಕೆ ತಂದರು.

ಕೃಷ್ಣಾ ನದಿಯ ದಂಡೆಯ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಕುಲಕರ್ಣಿಯವರು ಕೃಷಿಕರಲ್ಲವಾದರೂ ಅದರಲ್ಲಿ ಅಧಿಕ ಆಸಕ್ತಿ ಇತ್ತು. ಜಿಲ್ಲೆಯಲ್ಲಿ ಸಮದ್ಧ ನೀರು ಇದ್ದರೂ ಬಿಜಾಪುರ ನಗರಕ್ಕೆ ಕುಡಿಯುವ ನೀರು ಏಕಿಲ್ಲ? ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಆಣೆಕಟ್ಟು ಎಂದು ಹೆಸರಾದ ಆಲಮಟ್ಟಿ ಆಣೆಕಟ್ಟು ನಾಲ್ಕು ದಶಕಗಳಿಂದ ಏಕೆ ಪೂರ್ತಿಯಾಗುತ್ತಿಲ್ಲ? ಏಷ್ಯಾದಲ್ಲೇ ಬೃಹತ್ ಪ್ರಮಾಣದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್‌ವಸತಿ-ಪುನರ್‌ನಿರ್ಮಾಣದಲ್ಲಿ ನಿರ್ಲಕ್ಷ್ಯ ಏಕೆ? ತಲೆ-ತಲಾಂತರಗಳಿಂದ ಹರಿಯುತ್ತಿರುವ ಭೀಮಾ ನದಿ ಕರ್ನಾಟಕದಲ್ಲಿ ಮಾತ್ರ ಬತ್ತಿತೇಕೆ ? ಅಖಂಡ ಕರ್ನಾಟಕದ ನದಿಗಳು - ನೀರಾವರಿ ಯೋಜನೆಗಳು 50 ವರ್ಷವಾದರೂ ಏಕೆ ಪೂರ್ತಿ ಫಲವನ್ನು ಕೊಡುತ್ತಿಲ್ಲ?- ಇಂಥ ಸಮಸ್ಯೆಗಳತ್ತ ಅವರ ಚಿಂತನೆ ಹರಿಯಿತು. ತಮ್ಮ ಬರಹಗಳ ಮೂಲಕ ರಾಜ್ಯ-ರಾಷ್ಟ್ರಮಟ್ಟದಲ್ಲಿ ಅವರೊಬ್ಬ ನೀರಾವರಿ ತಜ್ಞರಾಗಿ ರೂಪುಗೊಂಡರು.

ಬಿಜಾಪುರ ಜಿಲ್ಲಾ ಗೆಝಿಟಿಯರ್ ಸಂಪಾದನಾ ಕಾರ್ಯದಲ್ಲಿ ವಿಶೇಷ ಸಲಹಾ ಸಮಿತಿಯ ಸದಸ್ಯರಾಗಿ, ಉರ್ದು ಅಕಾಡೆಮಿ ಸದಸ್ಯರಾಗಿ, ಸಮಗ್ರ ದಾಸ ಸಾಹಿತ್ಯ ಪ್ರಕಟನ ಸಮಿತಿಯ ಸಂಪಾದಕ ಸದಸ್ಯರಾಗಿ, ಹೊಸ ದೆಹಲಿಯ `ಇಂಟ್ಯಾಚ್~ ಸಂಸ್ಥೆಯ ಬಿಜಾಪುರ ವಿಭಾಗದ ಸಂಚಾಲಕರಾಗಿ ಇದೀಗ ಅದರ ಆಡಳಿತ ಮಂಡಳಿಯ ಸದಸ್ಯರಾಗಿ ಅವರು ದುಡಿದಿದ್ದಾರೆ.

ಸೃಜನಶೀಲ ಬರವಣಿಗೆಯಲ್ಲೂ ಅವರು ಕೈಯಾಡಿಸಿದವರೇ. ಅವರ ಒಂದು ಕಥಾ ಸಂಕಲನ `ಜ್ಞಾನಾರ್ಜನೆ~. ಉತ್ತರ ಕರ್ನಾಟಕ ಭಾಷೆಯ ಸೊಗಡಿನ `ಮನೆ ಮುಳುಗಿತು~ ಹಾಗೂ `ರತ್ನಾಕರ~ ಅವರ ಕಾದಂಬರಿಗಳು. ವಿಡಂಬನೆ- ಹರಟೆಗಳನ್ನು ಕೂಡ ಅವರು ಬರೆದಿದ್ದಾರೆ. ಅವರು ಬರೆದ ಐದು ನಾಟಕಗಳಲ್ಲಿ `ಜಗದ್ಗುರು ಇಬ್ರಾಹಿಮ~, `ನಾ ಸತ್ತಿಲ್ಲ~ ರಂಗ ಪ್ರಯೋಗ ಕಂಡಿವೆ.

ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಓದಿದ ಕುಲಕರ್ಣಿಯವರು ಅಂಚೆ - ತಂತಿ ಇಲಾಖೆಯಲ್ಲಿ ಅಧಿಕಾರಿಯಾಗಿ ಬಡ್ತಿ ಪಡೆದರು. ಕನ್ನಡ ಭಾಷೆಯೊಂದನ್ನು ಬಿಟ್ಟು ಬೇರೆ ಭಾಷೆಗಳ ಸಂಪರ್ಕವಿಲ್ಲದ ಹಳ್ಳಿಯೊಂದರಲ್ಲಿ ಜನಿಸಿದರೂ ಹಲವಾರು ಭಾಷೆಗಳಲ್ಲಿ ಪರಿಣಿತರಾದರು. 50ಕ್ಕೂ ಹೆಚ್ಚು ಪುಸ್ತಕ 400ಕ್ಕೂ ಹೆಚ್ಚು ಲೇಖನಗಳನ್ನು ಒಳಗೊಂಡು ಸುಮಾರು 10,000ಕ್ಕಿಂತ ಅಧಿಕ ಪುಟಗಳ ಸಮೃದ್ಧ ಸಾಹಿತ್ಯ ರಚನೆ ಅವರದ್ದು.

(ಇಂದು ಬಿಜಾಪುರದಲ್ಲಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಅಭಿನಂದನೆ ಹಾಗೂ ಸುಮಿತ್ರಾ ದಶರಥ ಸಾವಂತ ಅವರ ಪಿಎಚ್.ಡಿ. ಅಧ್ಯಯನದ `ಕೃಷ್ಣ ಕೊಲ್ಹಾಪುರ ಕುಲಕರ್ಣಿ: ಬದುಕು ಬರಹ~ ಕೃತಿ ಬಿಡುಗಡೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.