ಬುಧವಾರ, ಜನವರಿ 22, 2020
28 °C

ಕೆಂಪು ದೀಪಕ್ಕೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನಗಳ ಮೇಲೆ ಕೆಂಪು ದೀಪ ಹಾಗೂ ಸೈರನ್ ಬಳಕೆಯ ಬಗ್ಗೆ  ಈ ಹಿಂದೆ ನೀಡಿದ್ದ ನಿರ್ದೇಶನದ ಪಾಲನೆಯಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿರುವುದರಲ್ಲಿ ಅರ್ಥವಿದೆ. ಕೆಂಪು ದೀಪ ಬಳಕೆಯ ಮೇಲೆ ಕಡಿವಾಣ ಅಗತ್ಯ ಎಂದು ಈ ಹಿಂದೆಯೇ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದ್ದರೂ ಅದಕ್ಕೆ ಸೊಪ್ಪು ಹಾಕದಿರುವುದು ಕೋರ್ಟಿನ ಆಕ್ರೋಶಕ್ಕೆ ಕಾರಣವಾಗಿದೆ.ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ವಾಹನಗಳಿಗೆ ಕೆಂಪು ದೀಪ ಅಳವಡಿಸಿ ಪ್ರಯಾಣಿಸುವುದು ಪ್ರತಿಷ್ಠೆಯ ಸಂಕೇತ ಎಂದು ಭಾವಿಸಿದ್ದಾರೆ. ತಮ್ಮ ಓಡಾಟ ತುರ್ತು­ಸೇವೆಯ ವ್ಯಾಪ್ತಿಗೆ ಸೇರಿಲ್ಲ ಎನ್ನುವುದು ಗೊತ್ತಿದ್ದೂ  ಕೋರ್ಟಿನ ಈ ಹಿಂದಿನ ಆದೇಶಕ್ಕೆ ಬೆಲೆ ಕೊಡದೆ ಉದ್ಧಟತನದ ವರ್ತನೆ ತೋರಿಸುತ್ತಿರುವುದು ಸರಿಯಲ್ಲ. ಈ ವಿಐಪಿ ಸಂಸ್ಕೃತಿಯನ್ನು ಕೋರ್ಟ್ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದೆ. ದೀಪ ಬಳಕೆಯ ಬಗ್ಗೆ ಮೋಟಾರು ವಾಹನ ಕಾಯ್ದೆಯ ಮಾರ್ಗದರ್ಶಿ ಸೂತ್ರಗಳು ಇದ್ದರೂ ಉಲ್ಲಂಘಿಸುತ್ತಿರುವುದು ಸಮರ್ಥನೀಯವಲ್ಲ. ಈ ಬಗೆಯ ಪೊಳ್ಳು ಪ್ರತಿಷ್ಠೆ  ಕೆಲವರಿಗೆ ಗೀಳಾಗಿದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇರುವ ವಸಾಹತುಶಾಹಿ ಮನಸ್ಥಿತಿಯನ್ನು ಕೋರ್ಟ್‌ ತೀವ್ರ ಮಾತುಗಳಲ್ಲಿ  ಖಂಡಿಸಿದೆ. ಸೈರನ್‌ ಮೊಳಗಿಸಿಕೊಂಡು ಕೆಂಪುದೀಪದ ನೆತ್ತಿ ಹೊಂದಿದ ಕಾರಲ್ಲಿ ಓಡಾಡುತ್ತಾ ರಸ್ತೆ ಬಳಸುವ ಮೊದಲ ಹಕ್ಕು ತಮ್ಮದಾಗಿದೆ ಎಂದು ತೋರ್ಪಡಿಸಿಕೊಳ್ಳುವ ದುರ್ವರ್ತನೆ ಪ್ರಜಾಸತ್ತಾತ್ಮಕ ದೇಶಕ್ಕೆ ಹೊಂದುವುದಿಲ್ಲ. ಹಿಂದೆ ಹಾಗೂ ಮುಂದೆ ಭದ್ರತಾ ಸಿಬ್ಬಂದಿ, ಓಡಾಡಲು ಕೆಂಪು ದೀಪದ ವಾಹನ ಇದ್ದರೆ ಜನರ ಗೌರವಕ್ಕೆ ಪಾತ್ರವಾಗುತ್ತೇವೆ ಎಂಬ ಭ್ರಮೆಯಿಂದ ಇವರು ಹೊರಬರಬೇಕಿದೆ.ಕೆಲವು ನಿವೃತ್ತರು ಹಾಗೂ ಅಧಿಕಾರದಲ್ಲಿರುವವರ ಕುಟುಂಬಕ್ಕೆ ಸೇರಿದವರೂ ಕೆಂಪು ದೀಪದ ಕಾರಲ್ಲಿ ಓಡಾಡಲು ಪ್ರಾಯಶಃ ನಮ್ಮ ದೇಶದಲ್ಲಿ ಮಾತ್ರ ಸಾಧ್ಯ. ಹೆಚ್ಚಿನವರಿಗೆ ಯಾವುದೇ ಸಂಘಟನೆಗಳಿಂದ ಅಥವಾ ವ್ಯಕ್ತಿಗಳಿಂದ ಜೀವ ಬೆದರಿಕೆ ಇಲ್ಲ. ಆದರೂ ಭದ್ರತಾ ಪಡೆಗಳ ಬೆಂಗಾವಲಿನೊಂದಿಗೆ ಓಡಾಡಿದರೆ ಸಮಾಜ ತಮ್ಮನ್ನು ಗಣ್ಯರು ಎಂದು ಭಾವಿಸುತ್ತದೆ ಎಂಬ ಭ್ರಮೆ ಅವರಲ್ಲಿ ದಟ್ಟವಾಗಿ ಆವರಿಸಿದೆ. ವಾಹನದಟ್ಟಣೆ ಅತ್ಯಧಿಕ ಇದ್ದಾಗ ಆಂಬುಲೆನ್ಸ್‌ಗಳಿಗೆ ದಾರಿಕೊಡದೆ ಅವುಗಳಲ್ಲಿರುವ ರೋಗಿಗಳ ಬಗ್ಗೆ ಕಿಂಚಿತ್ತೂ ದಯೆ ತೋರಿಸದೆ ವರ್ತಿಸುವುದು ಕ್ಷಮಾರ್ಹವಲ್ಲ. ಪ್ರತಿಷ್ಠೆ ಮತ್ತು ಗೌರವವನ್ನು ತಮ್ಮ ಸಾಧನೆಗಳಿಂದ ಗಳಿಸಬೇಕೇ ಹೊರತು ವಾಹನದ ಮೇಲಿನ ದೀಪಗಳಿಂದ ಅಥವಾ ಬೇರಾವುದೇ ಸಂಕೇತಗಳಿಂದ ಅಲ್ಲ.ಕೆಂಪು ದೀಪ ಬಳಸಲು ಅರ್ಹರಾದವರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಬೇಕು; ಮೂರು ತಿಂಗಳ ಒಳಗೆ ಕಾನೂನಿಗೆ ತಿದ್ದುಪಡಿ ಮಾಡಬೇಕು ಎಂದು ಸಂಬಂಧಪಟ್ಟವರಿಗೆ ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಆದೇಶ ನೀಡಿದೆ. ಅನಗತ್ಯವಾಗಿ ಸೈರನ್ ಬಳಸಿ ಕರ್ಕಶ ಸದ್ದು ಹೊರಡಿಸುವುದನ್ನು  ಶಬ್ದಮಾಲಿನ್ಯ ಎಂದು ಪರಿಗಣಿಸುವ ಅಗತ್ಯವೂ ಇದೆ.

ಪ್ರತಿಕ್ರಿಯಿಸಿ (+)