ಮಂಗಳವಾರ, ಜೂನ್ 22, 2021
28 °C

ಕೆ.ಆರ್. ಪುರ ನಿವಾಸಿಗಳಿಂದ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್. ಪುರ ನಿವಾಸಿಗಳಿಂದ ಮನವಿ

ಕೃಷ್ಣರಾಜಪುರ :  ನೀರು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕೆ.ಆರ್.ಪುರ ವ್ಯಾಪ್ತಿಯ ಒಂಬತ್ತು ವಾರ್ಡ್‌ಗಳ ನಿವಾಸಿಗಳು ನೀರಿನ ಬವಣೆ ಅನುಭವಿಸುವಂತಾಗಿದೆ. ಹೀಗಾಗಿ ಈ ಭಾಗದಲ್ಲಿ ಸಮರ್ಪಕವಾಗಿ ನೀರು ಪೂರೈಸಲು ಜಲಮಂಡಳಿ ಸೂಕ್ತ ಕ್ರಮಗೊಳ್ಳಬೇಕು ಎಂದು ಕೆ.ಆರ್.ಪುರ ಕ್ಷೇಮಾಭಿವೃದಿ ಸಂಘದ ವತಿಯಿಂದ ಜಲಮಂಡಳಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಲಮಂಡಳಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನೀರಿನ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇಮಾಭಿವೃದಿ ಸಂಘದ ಕಾರ್ಯದರ್ಶಿ ಆಂಜನಪ್ಪ ಮಾತನಾಡಿ, `ಜಲಮಂಡಳಿಯು ಕೆಟ್ಟಿರುವ ಕೊಳವೆ ಬಾವಿಗಳ ಪೈಪುಗಳನ್ನು ದುರಸ್ತಿಗೊಳಿಸಬೇಕು. ನೀರು ಸರಬರಾಜಿನ ಕೊಳವೆ ಬಾವಿಗಳಲ್ಲಿ ಶೇಖರಣೆಯಾಗಿರುವ ಮಣ್ಣನ್ನು ತೆಗೆಸಬೇಕು. ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವಾಟರ್‌ಮನ್‌ಗಳು ತಾರತಮ್ಯ ಎಸಗುವುದನ್ನು ಅಧಿಕಾರಿಗಳು ತಪ್ಪಿಸಬೇಕು~ ಎಂದು ಆಗ್ರಹಿಸಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯರಾಮಯ್ಯ ಮಾತನಾಡಿ, `ಅಂತರ್ಜಲ ಕುಸಿತದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಒಂಬತ್ತು ವಾರ್ಡ್‌ಗಳಿಗೆ 120 ಟ್ಯಾಂಕರ್‌ಗಳಲ್ಲಿ ಉಚಿತವಾಗಿ ನೀರು ಪೂರೈಸಲಾಗುತ್ತಿದೆ. ಬೀದಿ ನಲ್ಲಿಗಳಿಗೂ ವಾರಕ್ಕೆ ಎರಡು ಬಾರಿ ನೀರು ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ~ ಎಂದರು.`ಬಡಾವಣೆಗಳಲ್ಲಿ ಕೊಳವೆ ಬಾವಿ ಕೊರೆಯಿಸುವ ಜವಾಬ್ದಾರಿಯನ್ನು ಈಗ ಬಿಬಿಎಂಪಿ ವಹಿಸಿಕೊಂಡಿದೆ. ಬಿಬಿಎಂಪಿ ಈಗಾಗಲೇ 100ಕೊಳವೆ ಬಾವಿಗಳನ್ನು ಕೊರೆಸಿದ್ದು ಇನ್ನೂ ಜಲಮಂಡಳಿಗೆ ಹಸ್ತಾಂತರಿಸಿಲ್ಲ. ಹಸ್ತಾಂತರದ ನಂತರ ನೀರಿನ ಸಮಸ್ಯೆ ಕಡಿಮೆಯಾಗಬಹುದು~ ಎಂದು ಅವರು ಆಶ್ವಾಸನೆ ನೀಡಿದರು.

ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್, `ಬಿಬಿಎಂಪಿ ವತಿಯಿಂದ ಈಗಾಗಲೇ 98 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ.ಜಲಮಂಡಳಿ ಕಾರ್ಯ ವೈಖರಿಗೆ ನಾಗರಿಕರ ದೂರುಗಳನ್ನು ಆಧರಿಸಿ ಕೊಳವೆ ಬಾವಿ ಕೊರೆಯಿಸುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ. ಸದ್ಯ 98 ಕೊಳವೆ ಬಾವಿಗಳ ಮೂಲಕ ಸರಬರಾಜು ಆಗುತ್ತಿರುವ ನೀರನ್ನು ಜಲಮಂಡಳಿ ಅಳವಡಿಸಿದ ಪೈಪುಗಳ ಮೂಲಕ ನಾಗರಿಕರಿಗೆ ಪೂರೈಸಲಾಗುತ್ತಿದೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.