ಮಂಗಳವಾರ, ಏಪ್ರಿಲ್ 13, 2021
24 °C

ಕೆಎಸ್‌ಆರ್‌ಟಿಸಿಯ ಉದ್ದೇಶಿತ ಯೋಜನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರದ ಹಳೆಯ ಬಸ್ ನಿಲ್ದಾಣದ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉದ್ದೇಶಿತ ಯೋಜನೆಯನ್ನು ನಗರದ ವಿವಿಧ ಸಂಘಟನೆಗಳು ಒಕ್ಕೊರಲಿನಿಂದ ವಿರೋಧಿಸಿವೆ.ಶುಕ್ರವಾರ ಶಾಸಕ ಎಚ್.ಎಸ್. ಪ್ರಕಾಶ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ರಸ್ತೆ ಸಾರಿಗೆ ನಿಗಮದ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಬಸ್ ನಿಲ್ದಾಣಕ್ಕಾಗಿಯೇ ಹೆಚ್ಚು ಜಾಗವನ್ನು ಮೀಸಲಿಡುವಂಥ ಹೊಸ ಯೋಜನೆ ಸಿದ್ಧಪಡಿಸುವಂತೆ ಒತ್ತಾಯಿಸಿದ್ದಾರೆ.ಸಾರಿಗೆ ಸಂಸ್ಥೆಯವರು ಈಗ ತಯಾರಿಸಿರುವ ನೀಲ ನಕಾಶೆ ಪ್ರಕಾರ ಒಟ್ಟು ನಾಲ್ಕು ಎಕರೆ ಜಾಗದಲ್ಲಿ 14ಸಾವಿರ ಚದರ ಅಡಿಯನ್ನು ಮಾತ್ರ ಬಸ್ ನಿಲ್ದಾಣಕ್ಕಾಗಿ ಬಳಸಲಾಗುತ್ತಿದೆ. ತಳ ಅಂತಸ್ತಿನಲ್ಲಿ ಪಾರ್ಕಿಂಗ್ ಹಾಗೂ ಮೊದಲ ಅಂತಸ್ತಿನಲ್ಲಿ ಬಸ್ ನಿಲ್ದಾಣದ ಜತೆಗೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಯೋಜನೆ ರೂಪಿಸಿದೆ. ನಗರಸಭೆಯವರು ಬಸ್ ನಿಲ್ದಾಣಕ್ಕಾಗಿಯೇ 1960ರ ದಶಕದಲ್ಲಿ ಭೂಮಿ ನೀಡಿದ್ದರಿಂದ ಅದನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಪ್ರಜಾ ವೇದಿಕೆಯ ವೈ.ಎಸ್. ವೀರಭದ್ರಪ್ಪ ಆಗ್ರಹಿಸಿದರು.ಒಟ್ಟು ಜಾಗದಲ್ಲಿ ಶೇ 75ರಷ್ಟನ್ನು ಬಸ್ ನಿಲ್ದಾಣಕ್ಕೆ ಹಾಗೂ ಉಳಿದ ಶೇ 25ರಷ್ಟನ್ನು ಶೌಚಾಲಯವೇ ಮುಂತಾಗಿ ಇತರ ಸೌಲಭ್ಯಗಳಿಗಾಗಿ ಉಪಯೋಗಿಸಿಕೊಳ್ಳಬೇಕು. ಎರಡನೇ ಮಹಡಿಯಲ್ಲಿ ಬೇಕಾದರೆ ಮಳಿಗೆ ಮಾಡಿಕೊಳ್ಳಲಿ ಎಂದು ಸಭೆಯಲ್ಲಿದ್ದವರು ಆಗ್ರಹಿಸಿದರು.ಮಾಲ್ ಬೇಡ: ಸಭೆಯಲ್ಲಿದ್ದ ಕೆಲವರು ಹಳೆಯ ಬಸ್ ನಿಲ್ದಾಣದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದರೂ ಅದರಲ್ಲಿ ಮಾಲ್‌ಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.ಹೊಸ ಬಸ್ ನಿಲ್ದಾಣದಲ್ಲಿ ಮಾಡಿದಂತೆ ಜಾಗತಿಕ ಟೆಂಡರ್ ಕರೆದು ಒಬ್ಬನೇ ಗುತ್ತಿಗೆದಾರನಿಗೆ ಎಲ್ಲ ಮಳಿಗೆಗಳನ್ನು ನೀಡುವ ಕಾರ್ಯ ಮಾಡಬಾರದು ಎಂದು ಆಗ್ರಹಿಸಿದರು.ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, `ಹಲವು ವರ್ಷಗಳಿಂದ ಹಳೆಯ ಬಸ್ ನಿಲ್ದಾಣದಲ್ಲಿ ವ್ಯಾಪಾರ ಮಾಡಿಕೊಂಡಿದ್ದವರಿಗೆ ಹೊಸ ಸಂಕೀರ್ಣದಲ್ಲಿ ಮಳಿಗೆಗಳನ್ನು ನೀಡಬೇಕು. ಜಾಗತಿಕ ಟೆಂಡರ್ ಕರೆದರೆ ಸ್ಥಳೀಯರಿಗೆ ಅನ್ಯಾಯವಾಗುವುದರಿಂದ ಸ್ಥಳೀಯವಾಗಿಯೇ ಟೆಂಡರ್‌ಗಳನ್ನೂ ಕರೆಯಬೇಕು~ ಎಂದರು. ಜತೆಗೆ ಶೇ 75ಕ್ಕಿಂತ ಕಡಿಮೆ ಜಾಗವನ್ನು ಬಸ್ ನಿಲ್ದಾಣಕ್ಕೆ ಬಳಸಿದರೆ ಜಿಲ್ಲೆಯ ಜನರು ಹೋರಾಟ             ನಡೆಸುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಿದರು.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಶಿವಕುಮಾರ್, ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣದ ನೀಲ ನಕಾಶೆ ತೋರಿಸಿ ಇತರ ಮಾಹಿತಿ ನೀಡಿದರು.`ಜಿಲ್ಲೆಯ ಜನರ ಅಭಿಪ್ರಾಯವನ್ನು ಕೇಂದ್ರ ಕಚೇರಿಗೆ ತಿಳಿಸಿ ಹೊಸದಾಗಿ ಯೋಜನೆ ರೂಪಿಸುವಂತೆ ಮನವಿ ಮಾಡಲಾಗುವುದು~ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಶ್ ಕುಮಾರ್‌ಭರವಸೆ ನೀಡಿದರು.

ವಿಭಾಗೀಯ ಟ್ರಾಫಿಕ್ ಅಧಿಕಾರಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ಆಯುಕ್ತ ನಾಗಭೂಷಣ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.