ಶನಿವಾರ, ಮೇ 15, 2021
25 °C

ಕೆರೆಯ ಜೊತೆಯಲಿ ಸತಿಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕೆರೆಗೆ ಹಾರ~ ಕನ್ನಡದ ಪ್ರಸಿದ್ಧ ಜನಪದ ಕಥನಗೀತೆ. ಅದರ ವಸ್ತುವನ್ನು ಆಧರಿಸಿ ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಸಂಭಾಷಣೆ ಬರೆದು `ಭಾಗೀರತಿ~ ಹೆಸರಿನ ಚಿತ್ರ ನಿರ್ದೇಶಿಸಿದ್ದಾರೆ. ಬರಗೂರರೇ ಐದು ಗೀತೆಗಳನ್ನು ಬರೆದಿದ್ದು ಮನೋಹರ್ ರಾಗಸಂಯೋಜನೆ ಮಾಡಿದ್ದಾರೆ. ಚಿತ್ರದ ನಿರ್ಮಾಪಕರು ಬಿ.ಕೆ. ಶ್ರೀನಿವಾಸ್.ಈ ಚಿತ್ರದ ಕೇಂದ್ರ ಪಾತ್ರ ಭಾಗೀರತಿ. ಕಲ್ಲಿನಕೇರಿ ಮಲ್ಲನಗೌಡನ ಕಿರಿಯ ಸೊಸೆ. ಈಕೆಯ ಗಂಡ ಮಾದೇವರಾಯ ದೊರೆಯ ದಂಡಿನಲ್ಲಿ ಸೈನಿಕ. ಮದುವೆಯ ನಂತರ ಆತ ದಂಡಿಗೆ ಹೋಗಿರುತ್ತಾನೆ.ಇತ್ತ ಜನರ ಅನುಕೂಲಕ್ಕಾಗಿ ಕಟ್ಟಿದ ಕೆರೆಗೆ ನೀರು ಬರುವುದಿಲ್ಲ. ಕಾರಣ ಹುಡುಕಿದ ಜೋಯಿಸಲು ಮಲ್ಲನಗೌಡನ ಹಿರಿಯ ಸೊಸೆಯನ್ನು ಕೆರೆಗೆ `ಆಹಾರ~ (ಆತ್ಮಬಲಿ) ಮಾಡಬೇಕೆಂಬ ಪರಿಹಾರ ಸೂಚಿಸುತ್ತಾರೆ.ಹಿರಿಯ ಸೊಸೆಯನ್ನು ಕೆರೆಗೆಹಾರ ಮಾಡಲು ಹಿಂಜರಿದ ಮಲ್ಲನಗೌಡನಿಗೆ ಕಿರಿಯ ಸೊಸೆಯಾದರೂ ಸರಿಯೆಂದು ಜೋಯಿಸರು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಭಾಗೀರತಿ ತಳಮಳಿಸುತ್ತಾಳೆ.ತವರಿಗೆ ಹೋಗಿ ತಾಯಿ ತಂದೆಯರಿಗೆ ವಿಷಯ ತಿಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಒಳಗೇ ಸಂಕಟಪಡುತ್ತಾಳೆ. ಕಡೆಗೆ ಕೆರೆಗೆ ಹಾರವಾಗುತ್ತಾಳೆ. ದಂಡಿನಿಂದ ಹಿಂತಿರುಗಿ ಬಂದ ಮಾದೇವರಾಯ ತನ್ನ ಪತ್ನಿ ಕೆರೆಗೆಹಾರವಾದ ವಿಷಯ ತಿಳಿದು ತಾನೂ ಕೆರೆಗೆಹಾರವಾಗಿ ಸಾಯುತ್ತಾನೆ.ಈ ಮೂಲಕತೆಯನ್ನು ಅನುಸರಿಸಿ ಚಿತ್ರಕತೆಯನ್ನು ಬೆಳೆಸಲಾಗಿದೆ. ಸತಿಯೊಡನೆ ಸಹಗಮನ ಮಾಡಿದ ಏಕೈಕ ಉದಾಹರಣೆಯನ್ನು ಒಳಗೊಂಡ ಕಥನದೊಂದಿಗೆ ಪತಿ-ಪತ್ನಿಯರ ಪ್ರೀತಿಯನ್ನು ವಿಶೇಷವಾಗಿ ನಿರೂಪಿಸಲಾಗಿದೆ ಮತ್ತು ಪ್ರೀತಿ ಪ್ರಸಂಗಗಳನ್ನು ಹೆಣೆಯಲಾಗಿದೆ.ಕೆರೆ ಕಟ್ಟುವಾಗ ಅವರಿಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಕೆರೆಯ ಸಾಕ್ಷಿಯಲ್ಲಿ ಮದುವೆಯಾಗುತ್ತದೆ. ಕಡೆಗೆ ಕೆರೆಯಲ್ಲೇ ಅವರ ಅಂತ್ಯವಾಗುತ್ತದೆ. ಹೀಗೆ ರೂಪುಗೊಂಡ ಚಿತ್ರಕತೆಯಲ್ಲಿ ಕೆರೆಯೇ ಒಂದು ರೂಪಕವಾಗುತ್ತದೆ.  ಜೊತೆಗೆ ಮೂಢನಂಬಿಕೆಯ ದಾರುಣತೆಯನ್ನು ಕಟ್ಟಿ ಕೊಡಲಾಗಿದೆ.ಭಾವನಾ ಭಾಗೀರತಿಯ ಪಾತ್ರ ಮಾಡಿದ್ದಾರೆ. ಕಿಶೋರ್‌ಗೆ ಮಾದೇವರಾಯನ ಪಾತ್ರ. ಶ್ರೀನಾಥ್, ಹೇಮಾಚೌಧರಿ, ತಾರಾ, ಸಂಗೀತಾ, ಪದ್ಮವಾಸಂತಿ, ಶಿವಧ್ವಜ್, ವತ್ಸಲಾ ಮೋಹನ್, ರಾಧಾ ರಾಮಚಂದ್ರ, ಎಚ್.ಎಂ.ಟಿ. ನಂದಾ, ಹರಿಣಿ, ಹುಳಿಮಾವು ರಾಮಚಂದ್ರ, ವೆಂಕಟರಾಜು, ರವಿಶಂಕರ್ ಉಳಿದ ಕಲಾವಿದರು.ಹರೀಶ್ ಎನ್. ಸೊಂಡೆಕೊಪ್ಪ ಛಾಯಾಗ್ರಹಣ, ಮದನ್ ಹರಿಣಿ ನೃತ್ಯ ನಿರ್ದೇಶನ, ಸುರೇಶ್ ಅರಸು  ಸಂಕಲನ, ನಟರಾಜ್ ಮತ್ತು ಪ್ರವೀಣ್ ಸಹನಿರ್ದೇಶನವಿದೆ.

ಚನ್ನಪಟ್ಟಣ ಸಮೀಪದ ವಿರೂಪಾಕ್ಷಿಪುರ, ಮೇಲುಕೋಟೆ ಮತ್ತು ಬೆಂಗಳೂರಿನ ಅರಮನೆ ಸೆಟ್‌ನಲ್ಲಿ ಚಿತ್ರೀಕರಣ ನಡೆದು ಮುಕ್ತಾಯಗೊಂಡಿದೆ. ಸದ್ಯದಲ್ಲೇ ಮಾತಿನ ಧ್ವನಿಮುದ್ರಣ ಕಾರ್ಯ ಆರಂಭವಾಗಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.