ಬುಧವಾರ, ಜೂನ್ 16, 2021
22 °C

ಕೆರೆ ದಂಡೆಯಲ್ಲಿ ಬೆಳ್ಳಕ್ಕಿ ಕಲರವ...

ಪ್ರಜಾವಾಣಿ ವಾರ್ತೆ ಬಸವರಾಜ ಹಲಕುರ್ಕಿ Updated:

ಅಕ್ಷರ ಗಾತ್ರ : | |

ನರಗುಂದ:  ಹೊಳೆ, ಹಳ್ಳ, ಕಾಲುವೆಗಳ ನೀರಿದ್ದ ಪ್ರದೇಶದಲ್ಲಿ ಚಳಿಗಾಲದಲ್ಲಿ ಹಕ್ಕಿಗಳ ಕಲರವ  ಕಂಡು ಬಂದರೆ ಅದಕ್ಕೆ ವೈರುಧ್ಯವೆಂಬಂತೆ ಬೇಸಿಗೆಯಲ್ಲಿ ಪಟ್ಟಣದ ಐತಿಹಾಸಿಕ ಪಡುವನಗೊಂಡ ಕೆರೆಯ ಮೇಲೆ ನೀರಿಲ್ಲದಿದ್ದರೂ ಬೆಳ್ಳಕ್ಕಿಗಳ ಕಲರವ ಕೇಳಿ ಬರುತ್ತಿದೆ.  ಕಳೆದ ಎರಡು ವಾರಗಳಿಂದ  ಈ  ಬೆಳ್ಳಕ್ಕಿಗಳು  ಪಡುವನಗೊಂಡ ಕೆರೆಯನ್ನೇ ಆಶ್ರಯ ತಾಣವನ್ನಾಗಿ ಮಾಡಿಕೊಂಡಿವೆ.  ನೂರಾರು ಜನರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಸಹಸ್ರಾರು ಬೆಳ್ಳಕ್ಕಿಗಳು ತಮ್ಮ ಆಶ್ರಯ ತಾಣವನ್ನು ಈ ಐತಿಹಾಸಿಕ  ಕೆರೆಯನ್ನೇ ಮಾಡಿಕೊಂಡಿದ್ದರಿಂದ ದಂಡಾಪುರದ ಜನರು ಹಾಗೂ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಹೋಗುವ ಜನರು  ಇಲ್ಲಿ ಕೆಲ ಹೊತ್ತು ನಿಂತು ಇವುಗಳನ್ನು ನೋಡಿಕೊಂಡು ಮುಂದೆ ಸಾಗುತ್ತಿದ್ದಾರೆ.   ಆದರೆ, ಈಗ ಪಡುವನಗೊಂಡ ಕೆರೆ ನವೀಕರಣ  ಕಾಮಗಾರಿ ಆರಂಭ ವಾಗಿದ್ದರಿಂದ ಕೆರೆಯ ನೀರನ್ನು ಹೊರ ಹಾಕಲಾಗಿದೆ. ಇಲ್ಲಿ ಅಷ್ಟಾಗಿ ತಂಪಾದ ವಾತಾವರಣವೂ ಇಲ್ಲ. ಆದರೂ ಈ ಬೆಳ್ಳಕ್ಕಿಗಳು  ಸಂಜೆ 6 ರಿಂದ ಬೆಳಿಗ್ಗೆ 7ರವೆರೆಗೆ ಇಲ್ಲಿಯೇ ಬೀಡು ಬಿಡುತ್ತಿರುವುದು ಎಲ್ಲರಲ್ಲೂ ವಿಸ್ಮಯ ಮೂಡಿಸಿದೆ.    ಸುತ್ತಮುತ್ತಲಿನ ಜನರಿಗೆ, ಚಿಣ್ಣರಿಗೆ ಸಂತಸವನ್ನು ಉಂಟು ಮಾಡಿವೆ. ಹಸಿರು ಸೀರೆಗೆ ಬಿಳಿಯ ಕುಪ್ಪಸದಂತೆ ಕಂಡು ಬರುತ್ತಿರುವ ಈ ಬೆಳ್ಳಕ್ಕಿಗಳು ನೋಡುಗರಿಗೆ ಆನಂದವನ್ನು ಉಂಟು ಮಾಡುತ್ತಿವೆ.  ಗುಡ್ಡದ ತಡಿಯಲಿರುವ ಈ  ಐತಿಹಾಸಿಕ ಕೆರೆಗೆ ರೈತನ ಮಿತ್ರ ನಂತಿರುವ ಈ ಬೆಳ್ಳಕ್ಕಿಗಳ ಆಗಮನ ದಿಂದ ಹೊಸ ಚೈತನ್ಯ ತುಂಬಿದ ಂತಾಗಿದೆ.  ಈ ಬೆಳ್ಳಕ್ಕಿಗಳು ಬರಲಿಕ್ಕೆ ಕಾರಣ ಈ ಅವಧಿಯಲ್ಲಿ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳ್ಳಕ್ಕಿಗಳಿಗೆ ಬೇಕಾದ  ಕೀಟಗಳು ಆಹಾರವಾಗಿ ದೊರೆ ಯುತ್ತವೆ.ಜೊತೆಗೆ ಅವುಗಳು ವಾಸ ಸ್ಥಾನ ಸಾಮಾನ್ಯವಾಗಿ ಜಾಲಿ ಕಂಟಿಗಳೆ ಆಗಿರುತ್ತವೆ. ಅದಕ್ಕೆ ಪೂರಕವೆಂಬಂತೆ  ಹೆಚ್ಚಿನ ಪ್ರಮಾಣದಲ್ಲಿ  ಜಾಲಿ ಗಿಡಗಳು ಕೆರೆ ದಂಡೆ ಮೇಲಿರುವುದರಿಂದ ಬೆಳ್ಳಕ್ಕಿಗಳ  ಗುಂಪು ಇಲ್ಲಿಗೆ ವಲಸೆ ಬಂದಿವೆ.ಜೊತೆಗೆ ಈ ಪಡುವನಗೊಂಡ ಕೆರೆ ವಿಶಾಲವಾಗಿದ್ದು ಜನರಿಂದ ಇವುಗಳಿಗೆ ತೊಂದರೆ ಬಾರದಿರುವುದರಿಂದ ಹಾಗೂ  ವೈರಿಗಳಿಂದ ತಪಿಸಿಕೊಳ್ಳಲು ಇಲ್ಲಿ ಬೀಡು  ಬಿಟ್ಟಿರಬಹುದೆಂದು ವಿಜ್ಞಾನ ಶಿಕ್ಷಕ  ಎಸ್.ಎಲ್.ಮರಿಗೌಡ್ರ ಹೇಳುತ್ತಾರೆ. ಏನೇ ಇರಲಿ ಈ ಬೆಳ್ಳಕ್ಕಿಗಳು ತಮ್ಮ ಕಲರವದ ಮೂಲಕ ಬೆಳಿಗ್ಗೆ ಹಾಗೂ ಸಂಜೆ ಹೊತ್ತು ನಾಗರಿಕರನ್ನು ಆಕರ್ಷಿಸಿ ಪಟ್ಟಣದಲ್ಲಿ  ವಿಶೇಷತೆ ಉಂಟು ಮಾಡಿ  ಚೈತನ್ಯ ತುಂಬಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.