ಗುರುವಾರ , ಸೆಪ್ಟೆಂಬರ್ 19, 2019
26 °C

ಕೆರೆ: ಸ್ಥಳಾಂತರಕ್ಕೆ ವಿರೋಧ

Published:
Updated:

ಕಂಪ್ಲಿ: ಪಟ್ಟಣದ ಐತಿಹಾಸಿಕ ಸೋಮಪ್ಪನ ಕೆರೆ ಏರಿ ಭಾಗದಲ್ಲಿ ಕಳೆದ 45 ವರ್ಷಗಳಿಂದ ವಾಸಿಸುತ್ತಿರುವ ಸುಮಾರು 320 ಕುಟುಂಬಗಳನ್ನು ತೆರವುಗೊಳಿಸಲು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮುಂದಾದಲ್ಲಿ ಹೋರಾಟ ಅನಿವಾರ್ಯ ಎಂದು ವಿರಾಜಪೇಟೆ ಮಾಜಿ ಶಾಸಕ ಹಾಗೂ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಅಧ್ಯಕ್ಷ ಎಚ್.ಡಿ. ಬಸವರಾಜ ಎಚ್ಚರಿಸಿದರು.ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕೆರೆ ಏರಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಕೃಷಿ ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಇದೀಗ ಕೆರೆ ಅಭಿವೃದ್ಧಿ ಹೆಸರಲ್ಲಿ ಬಡವರನ್ನು ಒಕ್ಕಲೆಬ್ಬಿಸುವ ಕುತಂತ್ರವನ್ನು ಅವರು ತೀವ್ರವಾಗಿ ಖಂಡಿಸಿದರು.2005ರಲ್ಲಿ ಅಂದಿನ ಪುರಸಭೆ ಆಡಳಿತ ಮಂಡಳಿ ಕೆರ ಏರಿ ಭಾಗದಲ್ಲಿ ವಾಸಿಸುವ ಕಡುಬಡವರಿಗೆ ಪಟ್ಟಾ ಕೊಡುವುದಾಗಿ ನಿರ್ಣಯ ಅಂಗೀಕರಿಸಿ ಜಿಲ್ಲಾಧಿಕಾರಿಗಳಿಗೆ ರವಾನಿಸಿದೆ. 2007ರಲ್ಲಿ ಈ ವಿಷಯವನ್ನು ಕೂಲಂ ಕಷವಾಗಿ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಹೊಸಪೇಟೆ ಉಪ ವಿಭಾಗಾಧಿಕಾರಿ ಗಳಿಗೆ ಪಟ್ಟಾ ಕೊಡಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.ಇದರ ಜೊತೆಗೆ ಸ್ಥಳೀಯ ಶಾಸಕ ಟಿ.ಎಚ್. ಸುರೇಶ್‌ಬಾಬು ಹಲವಾರು ಬಾರಿ ಪಟ್ಟಾ ಕೊಡುವುದಾಗಿ ಭರವಸೆ ನೀಡಿ ಇದೀಗ ಈ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಒಕ್ಕಲೆಬ್ಬಿಸುವುದಕ್ಕೆ ಈಗಲಾದರೂ ಉತ್ತೇಜನ ನೀಡಬೇಡಿ ಎಂದು ಶಾಸಕರಿಗೆ ಮನವಿ ಮಾಡಿದರು.

ಕೆರೆ ವ್ಯಾಪ್ತಿಯಲ್ಲಿ ಈಗಾಗಲೇ ಪೆಟ್ರೋಲ್ ಬಂಕ್, ನಟರಾಜ ಕಲಾಮಂದಿರ, ಉಪ ನೋಂದಣಿ ಕಚೇರಿಗೆ ನಿವೇಶನ ನೀಡಿದಂತೆ ಇಲ್ಲಿನ ನಿವಾಸಿಗಳಿಗೂ ಅಧಿಕೃತ ಪಟ್ಟಾ ವಿತರಿಸಿ ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.ಕೆರೆ ಸುಮಾರು 48 ಎಕರೆ ಇದ್ದು, ಇದರಲ್ಲಿರುವ 10 ಎಕರೆಯನ್ನು ಮಾತ್ರ ಬಡವರು ವಸತಿಗಾಗಿ ಬಳಸುತ್ತಿದ್ದಾರೆ. ಇವರೆಲ್ಲರೂ ದುಡಿದು ದೈನಂದಿನ ಜೀವನ ಮಾಡುತ್ತಿದ್ದಾರೆ. ಇಂಥವರ ಮೇಲೆ ಸರ್ಕಾರ ಗದಾಪ್ರಹಾರ ಮಾಡಲು ಮುಂದಾಗಿದೆ. ಇದನ್ನು ತಡೆಯಲು ಶೀಘ್ರವೇ ಮುಖ್ಯಮಂತ್ರಿ ಗಳ ಬಳಿ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದರು.ಕಂಪ್ಲಿ ಪುರಸಭೆ ಸದಸ್ಯ ಯು. ರಾಮದಾಸ್, ಜಿ.ಜಿ. ಆನಂದ ಮೂರ್ತಿ, ಯಶೋದಮ್ಮ, ಮುಖಂಡ ರಾದ ಅಡಿವೆಪ್ಪ, ಬಸಪ್ಪ, ಎಂ.ಆರ್. ಮಲ್ಲಿಕಾರ್ಜುನ, ಎಂ. ಚಂದ್ರಶೇಖರ, ಶಿಕಾರಿ ರಾಮು ಇತರರು ಹಾಜರಿದ್ದರು.

Post Comments (+)