ಅಬ್ರಾಹಂ ಲಿಂಕನ್ ಕ್ಷಮೆ ಕೋರಿ ಪ್ರಜಾಪ್ರಭುತ್ವಕ್ಕೊಂದು ಹೊಸ ವ್ಯಾಖ್ಯಾನ: ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಅಂದರೆ ಕೆಲ ಜನರಿಂದ, ಕೆಲ ಜನರಿಗಾಗಿ, ಕೆಲ ಜನರಷ್ಟೇ ಆಚರಿಸುವ ವ್ಯವಸ್ಥೆಯಾಗಿ ಉಳಿದುಕೊಂಡುಬಿಟ್ಟಿದೆ.

ಕಳೆದ 64 ವರ್ಷಗಳ ಸ್ವಾತಂತ್ರ್ಯದಲ್ಲಿ, ನಿಧಾನವಾಗಿ, ಕ್ರಮೇಣವಾಗಿ ಕಂಡೂಕಾಣದಂತೆ ಪ್ರಭಾವಿಗಳು ಹಾಗೂ ಸಿರಿವಂತರು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಸಂಸ್ಥೆಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳಲ್ಲಿ ತಮ್ಮ ಬೇರು ಇಳಿಸಿದ್ದಾರೆ. ತಮ್ಮ ಹಿತಾಸಕ್ತಿ ಕಾಪಾಡುವಂತೆ ಆ ಸಂಸ್ಥೆಗಳನ್ನೆಲ್ಲ ಮಾರ್ಪಡಿಸಿಕೊಂಡಿದ್ದಾರೆ.

ನಮ್ಮ ಸಂವಿಧಾನ ಉದ್ದೇಶಿಸಿರುವ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹನೀಯರು, ಮಹಿಳೆಯರು ಕನಸು ಕಂಡಿದ್ದ ಪ್ರಜಾಪ್ರಭುತ್ವ ಈಗ ವಿಡಂಬನೆಯಂತೆ ಕಾಣುತ್ತಿದೆ. ಬಡತನ, ಹಸಿವು, ಅನಕ್ಷರತೆ, ತಾರತಮ್ಯ ಇತ್ಯಾದಿ ಅನ್ಯಾಯಕ್ಕೊಳಗಾದ ಬಹುದೊಡ್ಡ ಸಮುದಾಯಕ್ಕೆ ಪ್ರಜಾಪ್ರಭುತ್ವ ಅರ್ಥಹೀನವಾಗಿಬಿಟ್ಟಿದೆ.

ಪ್ರಜಾಪ್ರಭುತ್ವದ ಅಂಗಗಳೆಂದು ಪರಿಗಣಿತವಾಗಿರುವ ನಾಲ್ಕು ಸಂಸ್ಥೆಗಳು ಸಹ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿವೆ. ಶಾಸಕಾಂಗವೆಂಬುದು ಸಿರಿವಂತರ ಮೋಜಿನ ತಾಣದಂತೆ ಕಾಣುತ್ತಿದೆ. ಕಾರ್ಯಾಂಗ ಈ ಸಿರಿವಂತರ ಸೇವೆಗಾಗಿ ಟೊಂಕ ಕಟ್ಟಿ ನಿಂತಂತೆ ತೋರುತ್ತಿದೆ.

ಮಾಧ್ಯಮ ತನ್ನ ದೇಹ ಮತ್ತು ಆತ್ಮವನ್ನು ಹರಾಜಿಗೆ ಹಾಕಿಕೊಂಡಂತೆ ಅನಿಸುತ್ತಿದೆ. ನ್ಯಾಯಾಂಗದ ವಿಚಾರಕ್ಕೆ ಬಂದಾಗ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಘಟನೆ ನೆನಪಿಗೆ ಬರುತ್ತದೆ. ಕೋಟ್ಯಧಿಪತಿ ಉದ್ಯಮಿ, ರಾಜಕಾರಣಿ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಮಾಡಲು ನ್ಯಾಯಾಧೀಶರಿಗೆ ಕೋಟಿಗಟ್ಟಲೆ ಹಣ ನೀಡಲಾಗಿತ್ತು.

ಸೇವೆಯಲ್ಲಿರುವ ಇಬ್ಬರು ನ್ಯಾಯಾಧೀಶರು ಹಾಗೂ ನಿವೃತ್ತ ನ್ಯಾಯಾಧೀಶರೊಬ್ಬರು ಈ ವ್ಯವಹಾರ ಕುದುರಿಸಿದ್ದರು ಎಂಬುದನ್ನು ನೋಡಿದಾಗ ನ್ಯಾಯಾಂಗ ಸಹ ಸಿರಿವಂತರ ಕೈಯಲ್ಲಿ ದಾಳವಾಗಿದೆ ಎಂಬುದು ಸಾಬೀತಾಗುತ್ತದೆ.

ಪ್ರಜಾಪ್ರಭುತ್ವ ಅಂದರೆ ನಿಜ ಅರ್ಥದಲ್ಲಿ ಬಡವರು, ಸಿರಿವಂತರ ನಡುವಿನ ಸಮಾನ ಸಹಭಾಗಿತ್ವ. ಪುರುಷರು ಮತ್ತು ಮಹಿಳೆಯರು, ಭಿನ್ನ ಧರ್ಮಗಳು, ವಿಭಿನ್ನ ಪ್ರದೇಶಗಳು, ಬೇರೆ ಬೇರೆ ಜಾತಿ ಮತ್ತು ಜನಾಂಗಕ್ಕೆ ಸೇರಿದ ಜನರ ನಡುವಿನ ಸಮಾನ ಪಾಲುದಾರಿಕೆ. ಅನುಭವವನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಭಾರತದ ಜನರ 64 ವರ್ಷಗಳ ಸ್ವಾತಂತ್ರ್ಯದ ಪಯಣ ಅಸಮಾನ ಪಾಲುದಾರಿಕೆಯ ಮೇಲೆ ಸಾಗಿದೆ.

ಬಹುದೊಡ್ಡ ಸಂಖ್ಯೆಯಲ್ಲಿದ್ದರೂ ಸಹಜವಾಗಿ ಬಡವರು ಹೊಂದಾಣಿಕೆ ಮಾಡಿಕೊಂಡು ಸಾಗಿದ್ದಾರೆ. ಅತಿ ಕಡಿಮೆ ಸಂಖ್ಯೆಯಲ್ಲಿರುವ ಸಿರಿವಂತರು, ಬಲಾಢ್ಯರು ಇವರ ಮೇಲೆ ಹಿಡಿತ ಸಾಧಿಸಿದ್ದಾರೆ.

ಈ ಪ್ರಜಾಪ್ರಭುತ್ವ, ಅತಿ ಕಡಿಮೆ ಜನರಿಗೆ ಅಧಿಕಾರ ನೀಡಿದೆ. ಕೆಲವೇ ಸಿರಿವಂತರು, ಜನಸಂಖ್ಯೆಯಲ್ಲಿ ಐದನೇ ಒಂದು ಭಾಗದಷ್ಟಿರುವ ಮೇಲ್ಜಾತಿಯ ಜನರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಇಂದಿನ ಪ್ರಜಾಪ್ರಭುತ್ವ, ಬಲಹೀನರಾಗಿರುವ ಬೃಹತ್ ಸಮುದಾಯದ ಮೇಲೆ ಕೆಲ ಸಂಖ್ಯೆಯಲ್ಲಿರುವ ಬಲಾಢ್ಯರ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿದೆ.

ಪ್ರಜಾಪ್ರಭುತ್ವದ ನಾಲ್ಕು ಅಂಗಗಳ ಲಕ್ಷಣ ಮತ್ತು ಅವುಗಳ ಕಾರ್ಯನಿರ್ವಹಣೆಯತ್ತ ಕಣ್ಣು ಹಾಯಿಸೋಣ. ವರ್ಷಗಳು ಉರುಳಿದಂತೆ ಭಾರತದ ಸಂಸತ್ತು ಹಾಗೂ ವಿವಿಧ ಶಾಸಕಾಂಗ ಸಭೆಗಳಲ್ಲಿ ಶ್ರೀಮಂತರು ಹಾಗೂ ಬಲಾಢ್ಯ ಜಾತಿಗಳ ಜನರೇ ತುಂಬಿಕೊಂಡಿದ್ದಾರೆ. ಹಾಗೆಯೇ ಸಂವಿಧಾನ ನೀಡಿರುವ ಮೀಸಲಾತಿಯಂತೆ ಕೆಲ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಜನಾಂಗದ ಪ್ರತಿನಿಧಿಗಳೂ ಇದ್ದಾರೆ.

ಹಿಂದುಳಿದ ವರ್ಗದ ಜನರ ಹೋರಾಟದಿಂದ, ಕೆಲ ರಾಜ್ಯಗಳಲ್ಲಿ ದಮನಿತ ವರ್ಗಗಳು ತಮ್ಮ ಹಕ್ಕಿಗಾಗಿ ಹೋರಾಡಲು ರಾಜಕೀಯ ಪಕ್ಷ ಸ್ಥಾಪಿಸಿಕೊಂಡಿರುವುದರಿಂದ ಹಾಗೂ ರಾಜಕೀಯ ಪಕ್ಷಗಳು ಬಾಯ್ಬಿಟ್ಟು ಹೇಳಿಕೊಳ್ಳದಿದ್ದರೂ ಹಿಂದುಳಿದ ವರ್ಗಗಳನ್ನು ಓಲೈಸಲು ಅಲ್ಲಲ್ಲಿ ಕೆಲ ಟಿಕೇಟ್ ನೀಡಿರುವುದರಿಂದ ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಕೆಲ ಮಟ್ಟಿನ ಪ್ರಾತಿನಿಧ್ಯ ಈ ವರ್ಗಗಳಿಗೆ ದೊರಕಿದೆ.

ಮುಸ್ಲಿಮರು ಹಾಗೂ ಮಹಿಳೆಯರಿಗೆ ಮಾತ್ರ ಪ್ರಾತಿನಿಧ್ಯವೇ ಇಲ್ಲದಂತಾಗಿದೆ. ಇಡೀ ಚುನಾವಣಾ ಪ್ರಕ್ರಿಯೆಯೇ ಹಣ ಬಲದಿಂದ ನಡೆಯುತ್ತಿರುವುದರಿಂದ, ವಿಧಾನಸಭೆ ಚುನಾವಣೆಯಲ್ಲಿ ಹಲವು ಕೋಟಿಗಳು, ಲೋಕಸಭಾ ಚುನಾವಣೆಯಲ್ಲಿ ಅದರ ಬಹುಪಟ್ಟು ಹಣ ನೀರಿನಂತೆ ಹರಿಯುತ್ತಿರುವುದರಿಂದ ಪ್ರಜಾಪ್ರಭುತ್ವ ಪ್ರಕ್ರಿಯೆ ಜನಸಾಮಾನ್ಯರ ಕೈಯಿಂದ ಜಾರಿಹೋಗಿದೆ.

ಕೆಲವೇ ವರ್ಷಗಳ ಹಿಂದೆ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ನೆರಳಿನಂತೆ ನಿಂತು ರಾಜಕಾರಣಿಗಳಿಗೆ ಬೆಂಬಲ ನೀಡುತ್ತಿದ್ದರು. ಹಣದ ಮೂಟೆಗಳನ್ನೇ ನೀಡಿ ತಮಗೆ ಬೇಕಾದ ರಾಜಕಾರಣಿ ಚುನಾವಣೆಯಲ್ಲಿ ಗೆಲ್ಲುವಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕೆ ಪ್ರತಿಯಾಗಿ ಆ ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ಮೇಲೆ ತಮಗೆ ಅನುಕೂಲಕರವಾದ ನೀತಿಗಳನ್ನು ರೂಪಿಸುವಲ್ಲಿ ಪ್ರಭಾವ ಬೀರುತ್ತಿದ್ದರು.

ತಮ್ಮ ಉದ್ದಿಮೆ, ಕೈಗಾರಿಕೆಗಳಿಗೆ ಭೂಮಿ, ಸರ್ಕಾರಿ ಕೆಲಸಗಳ ಗುತ್ತಿಗೆ ಇತ್ಯಾದಿಗಳನ್ನು ಪಡೆಯುತ್ತಿದ್ದರು. ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ ಇಂತಹ `ಪ್ರಾಕ್ಸಿ~ ಅಭ್ಯರ್ಥಿಗಳ ಬದಲಾಗಿ ತಾವೇ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಕೂಲಕರ ಎಂಬ ಸತ್ಯ ಈಗ ಅವರಿಗೆ ಅರ್ಥವಾಗಿದೆ.

ಈ ವಿಚಾರದಲ್ಲಿ ಅವರು ಆಂಧ್ರಪ್ರದೇಶದ ರಾಯಲ್ಸೀಮಾದ `ಫ್ಯಾಕ್ಷನಿಸಂ~ ರಾಜಕಾರಣವನ್ನು ಅನುಸರಿಸುತ್ತಿದ್ದಾರೆ. ವೈರಿಗಳ ಹತ್ಯೆ, ರಕ್ತಪಾತ, ಸತತ ಹಿಂಸಾಚಾರದ ಮೂಲಕ ರಾಯಲ್ಸೀಮಾ ಭಾಗದಲ್ಲಿ ಕೆಲವರು ಬಲಾಢ್ಯರು ಪ್ರಾಬಲ್ಯ ಸಾಧಿಸಿದ್ದರು. ಬೆದರಿಕೆ, ಅಪಹರಣ, ಕೊಲೆ, ಸುಲಿಗೆಯ ಮೂಲಕ ಆ ಭಾಗದಲ್ಲಿ ಭಯಭೀತಿಯ ವಾತಾವರಣ ಹುಟ್ಟುಹಾಕಿದ್ದರು.

ಪಾಳೇಗಾರರಂತೆ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದರು. ಅಪಾರ ಖನಿಜ ಸಂಪತ್ತಿನಿಂದ ತುಂಬಿದ ಮಳೆ ಬೀಳದ ರಾಯಲ್ಸೀಮಾ ಪ್ರದೇಶದಲ್ಲಿ ಬೃಹತ್ ಜಮೀನಿನ ಮೇಲೆ ಹಿಡಿತ ಸಾಧಿಸಿದ್ದರು. ಆ ಭಾಗದಲ್ಲಿ ಜನಸಾಮಾನ್ಯರು ಭೀತಿಯಲ್ಲೇ ಬದುಕುವಂತಾಗಿದ್ದರೆ, ಜನಪ್ರತಿನಿಧಿಗಳು ಯಾವುದೋ `ಬಣ~ದ ನಾಯಕನ ತಾಳಕ್ಕೆ ತಕ್ಕಂತೆ ಕುಣಿಯುವುದು ಅನಿವಾರ್ಯವಾಗಿತ್ತು. ದಶಕಗಳ ಕಾಲ ಈ ವ್ಯವಸ್ಥೆ ಮುಂದುವರಿಯಿತು.

ಆದರೆ, ಕ್ರಮೇಣ `ಫ್ಯಾಕ್ಷನಿಸ್ಟ್~ ನಾಯಕರಿಗೆ ಸತ್ಯ ಅರ್ಥವಾಗತೊಡಗಿತು. ಯಾವುದೋ ರಾಜಕಾರಣಿಯನ್ನು ಬೆಂಬಲಿಸಿ ಅವರಿಗೆ `ಹಫ್ತಾ~ ನೀಡುವುದಕ್ಕಿಂತ ತಾವೇ ಚುನಾವಣೆಗೆ ನಿಲ್ಲುವುದು ಉತ್ತಮ ಎಂದು ಅರಿವಾಯಿತು. ಈಗ ರಾಯಲ್ಸೀಮಾ ಪ್ರದೇಶದ ಸಮೃದ್ಧ ಖನಿಜ ಸಂಪತ್ತು ಲೂಟಿ ಮಾಡುತ್ತಿರುವವರಲ್ಲಿ ಎರಡನೇ ಮತ್ತು ಮೂರನೇ ತಲೆಮಾರಿನ `ಫ್ಯಾಕ್ಷನಿಸ್ಟ್~ ರಾಜಕಾರಣಿಗಳೇ ಕಾಣುತ್ತಾರೆ.

ಇದೇ ಸಮಯದಲ್ಲಿ ದೇಶದ ಇತರ ಭಾಗಗಳಲ್ಲಿ ಉದ್ಯಮಿಗಳು ಹಣ ಗಳಿಸಲು ಉದ್ದಿಮೆ ನಡೆಸುವುದಕ್ಕಿಂತ ರಾಜಕಾರಣವೇ ಸುಲಭ ಮಾರ್ಗ ಎಂಬುದನ್ನು ಅರಿತುಕೊಂಡರು. ಲಕ್ಷಾಂತರ ರೂಪಾಯಿ ಬಿತ್ತಿ ಕೋಟ್ಯಂತರ ರೂಪಾಯಿಗಳ ಬೆಳೆ ತೆಗೆಯುವುದು ಸುಲಭವೇ ಅಲ್ಲವೆ?

ಹೀಗಿರುವಾಗ, ಚುನಾವಣೆ ನಡೆದಾಗಲೆಲ್ಲ ಮಾಧ್ಯಮಗಳು ಅತಿ ಸಿರಿವಂತ ಸಂಸತ್ ಸದಸ್ಯರು, ಕೋಟ್ಯಧಿಪತಿ ಶಾಸಕರ ಪಟ್ಟಿ ಪ್ರಕಟಿಸುವುದು ಅಚ್ಚರಿ ಹುಟ್ಟಿಸುವುದಿಲ್ಲ. ಈ ಹಿಂದಿನ ದಶಕಗಳಲ್ಲಿ ಭಾರತದಲ್ಲಿ ಕಾಣದ ವಿದ್ಯಮಾನ ಇದು. ಉದಾಹರಣೆಗೆ, ಆಂಧ್ರಪ್ರದೇಶದಲ್ಲಿ ಅತಿ ಸಿರಿವಂತರೆಲ್ಲ ಒಂದೋ ಶಾಸಕರಾಗಿದ್ದಾರೆ ಅಥವಾ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದಾರೆ.

ಮತ್ತೆ ಕೆಲವರು ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ತೆಲಗುದೇಶಂ ಸದಸ್ಯರಾಗಿ ಶಾಸನ ಸಭೆಗೆ ಹೋಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ದೇಶದಾದ್ಯಂತ ಇದೇ ಪರಿಸ್ಥಿತಿ ಇದೆ. ಚುನಾವಣೆಗೆ ಸ್ಪರ್ಧಿಸಲು ದೇಶದ ಪ್ರತಿ ಪ್ರಜೆಗೆ ಇದ್ದ ಅವಕಾಶವನ್ನು ಸಿರಿವಂತರು ಕಿತ್ತುಕೊಂಡಿದ್ದಾರೆ. ಸಾಮಾನ್ಯ ಜನ ಈ ಪ್ರಕ್ರಿಯೆಯಲ್ಲಿ ಮೂಕಪ್ರೇಕ್ಷಕರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಸಂಪತ್ತಿನಿಂದ ಸೀಟು ಖರೀದಿಸುವ ಸಾಮರ್ಥ್ಯವುಳ್ಳ ಅತಿ ಸಿರಿವಂತರೇ ವಿಧಾನಸಭೆಗಳ ಮೇಲ್ಮನೆ ಹಾಗೂ ಸಂಸತ್ತಿನ ಮೇಲ್ಮನೆಗೆ ನಾಮಕರಣಗೊಳ್ಳುತ್ತಿದ್ದಾರೆ. ದೇಶದ ಸಂಸತ್ತಿನಲ್ಲಿ ಈಗ 300ಕ್ಕೂ ಹೆಚ್ಚು ಕೋಟ್ಯಧಿಪತಿಗಳಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಮಟ್ಟ ಮುಟ್ಟಿದೆ ಎಂಬುದಕ್ಕೆ ಹಿಡಿದ ಕನ್ನಡಿ ಇದು. ಯಾವ ರಾಜಕೀಯ ಪಕ್ಷವೂ ಈ ಅನಾರೋಗ್ಯಕರ ಬೆಳವಣಿಗೆಯಿಂದ ಹೊರತಾಗಿಲ್ಲ. ಅತಿ ಹೆಚ್ಚು ಬಡ ಜನರನ್ನು ಹೊಂದಿರುವ ಉತ್ತರ ಪ್ರದೇಶದಿಂದಲೇ 52ಕ್ಕೂ ಹೆಚ್ಚು ಕೋಟ್ಯಧಿಪತಿ ಸಂಸದರು ಆಯ್ಕೆಯಾಗಿದ್ದಾರೆ. ನಂತರದ ಸಾಲಿನಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಇವೆ.

ವಿಪರ್ಯಾಸವೆಂದರೆ ದೇಶದ ಸಾಮಾನ್ಯ ನಾಗರಿಕನೊಬ್ಬ ಕಾಲ, ಕಾಲಕ್ಕೆ ತನ್ನ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಗಾಲಿಯಲ್ಲಿ ಕೇವಲ ಗೂಟವಾಗಿ ಉಳಿದುಬಿಟ್ಟಿದ್ದಾನೆ. ಚುನಾವಣೆಗೆ ಸ್ಪರ್ಧಿಸುವುದು, ಗೆಲ್ಲುವುದು ಆತನಿಗೆ ಕನಸಾಗಿ ಉಳಿದುಬಿಟ್ಟಿದೆ.

ಶಾಸಕಾಂಗದ ನಂತರ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಮತ್ತೊಂದು ಅಂಗ ಕಾರ್ಯಾಂಗ. ಕಾರ್ಯಾಂಗ ದೇಶವನ್ನು ನಡೆಸುತ್ತಿರುವ ಎಂಜಿನ್. ಭ್ರಷ್ಟಾಚಾರದಿಂದ ಹಿಡಿದು ಅದಕ್ಷ ಆಡಳಿತದವರೆಗೆ ದೇಶವನ್ನು ಇಂದು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಕಾರ್ಯಾಂಗವನ್ನು ಹೊಣೆ ಮಾಡಿದಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ರಾಜಕಾರಣಿಗಳಿಗೆ ಭ್ರಷ್ಟಾಚಾರದ ರುಚಿ ಹತ್ತಿಸಿದ್ದೇ ಕಾರ್ಯಾಂಗ ಎಂಬ ವಾದವೂ ಇದೆ.

ಆಡಳಿತ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯದ ನಂತರವಷ್ಟೇ ರಾಜಕಾರಣಿಗಳು ಕಾಣಿಸಿಕೊಂಡರು. ಆದರೆ, ಅಧಿಕಾರಶಾಹಿಗೆ ನೂರು ವರ್ಷಗಳ ಹಿಂದಿನಿಂದ ಬ್ರಿಟಿಷ್ ಆಡಳಿತದ ಕಾಲದಲ್ಲಿಯೇ ಈ ರಕ್ತದ ರುಚಿ ಹತ್ತಿತ್ತು. ಭ್ರಷ್ಟಾಚಾರದ ಈ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ತಮಗಿಂತ ಉತ್ತಮವಾಗಿ ಹಣ ಮಾಡುವ ಕಲೆ ಕಲಿತಿದ್ದಕ್ಕೆ ಹೆಮ್ಮೆ ಪಡುತ್ತಿರಬೇಕು.

ವಿಚಿತ್ರವೆಂದರೆ ರಾಜಕಾರಣಿಗಳು ಜನರ ಶಾಪವನ್ನು, ಸಾಮಾಜಿಕ ಹೋರಾಟಗಾರರ ನಿಂದನೆಯನ್ನು ಕೇಳಬೇಕಾಗುತ್ತದೆ. ದೇಶದ ಸಮಸ್ಯೆಗಳಿಗೆಲ್ಲ ಅವರತ್ತ ಬೊಟ್ಟು ಮಾಡಲಾಗುತ್ತದೆ. ಆದರೆ, ಅವರ ಹಿಂದೆ ನೆರಳಿನಂತೆ ಇರುವ ಅಧಿಕಾರಶಾಹಿ ಯಾರ ಕಣ್ಣಿಗೂ ಬೀಳುವುದೇ ಇಲ್ಲ.

ಗಾಲಿ ಜನಾರ್ದನ ರೆಡ್ಡಿ ಹಾಗೂ ವೈ. ಎಸ್. ಜಗನ್ಮೋಹನ ರೆಡ್ಡಿ ಭಾಗಿಯಾಗಿರುವ ಅಕ್ರಮ ಆಸ್ತಿ ಸಂಗ್ರಹ, ನೈಸರ್ಗಿಕ ಸಂಪನ್ಮೂಲಗಳ ಲೂಟಿ ಪ್ರಕರಣಗಳಲ್ಲಿ ಉನ್ನತ ಅಧಿಕಾರಿಗಳು ಮಹತ್ವದ ಪಾತ್ರ ವಹಿಸಿರುವುದು ಈಗಾಗಲೇ ಬಹಿರಂಗಗೊಂಡಿದೆ.

ದೇಶದಾದ್ಯಂತ ಹಿರಿಯ ಅಧಿಕಾರಿಗಳು ಅಳತೆಗೆ ಸಿಗದಷ್ಟು ಸಂಪತ್ತು ಸಂಗ್ರಹಿಸಿರುವುದು, ಐಷಾರಾಮಿ ಜೀವನ ಸಾಗಿಸುತ್ತಿರುವುದು, ಅರಮನೆಯಂತಹ ಬಂಗಲೆಗಳಲ್ಲಿ ವಾಸಿಸುವುದು, ಎರಡು `ಕುಟುಂಬ~ಗಳನ್ನು ಹೊಂದಿರುವುದು ಕಾಣುತ್ತದೆ. ಇದಕ್ಕೆಲ್ಲ ಸಾಮಾಜಿಕ ಮಾನ್ಯತೆ ದೊರೆಯುತ್ತದೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದ `ಬಾಬು~ಗಳೆಲ್ಲ ತಾವು ರಾಜಕೀಯ ನಾಯಕರ ಆದೇಶ ಪಾಲಿಸುತ್ತಿದ್ದುದಾಗಿ ಸಮಜಾಯಿಷಿ ನೀಡುತ್ತಾರೆ. ಅದು ಸತ್ಯವೂ ಆಗಿರಬಹುದು. ಆದರೆ, ಹೀಗೆ ತಪ್ಪು ಮಾಡಿದವರೆಲ್ಲ ಸಿದ್ಧಾಂತಗಳ ಜತೆ ರಾಜೀ ಮಾಡಿಕೊಂಡಿದ್ದಕ್ಕೆ ಇತರರನ್ನು ದೂರುವುದು ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ.

ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮಗಳತ್ತ ದೃಷ್ಟಿ ಹಾಯಿಸೋಣ. ಆಂತರಿಕ ಹಾಗೂ ಬಾಹ್ಯ ದಾಳಿಗೆ ಒಳಗಾಗಿರುವ ಮಾಧ್ಯಮ ಈಗ ಹಿಂದೆಂದಿಗಿಂತಲೂ ದುರ್ಬಲವಾಗಿ ಕಾಣುತ್ತಿದೆ. ಅಪರಾಧಿಗಳು ರಾಜಕೀಯಕ್ಕೆ ಇಳಿದ ಮಾದರಿಯಲ್ಲಿಯೇ ಬಲಶಾಲಿಯಾದ ಉದ್ಯಮ ಸಮೂಹಗಳು ಮಾಧ್ಯಮಗಳನ್ನು ಖರೀದಿಸುತ್ತ ಹೊರಟಿವೆ. ಈ ಉದ್ದಿಮೆದಾರರೆಲ್ಲ ಮೊದಲು ಮಾಧ್ಯಮಗಳಲ್ಲಿ ಇರುವವರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ.

ಆನಂತರ ಆ ಮಾಧ್ಯಮ ಸಂಸ್ಥೆಯನ್ನು ಖರೀದಿಸುತ್ತಾರೆ ಅಥವಾ ಹೊಸದಾದ ಮಾಧ್ಯಮ ಸಮೂಹ, ಸುದ್ದಿ ವಾಹಿನಿ ಅಥವಾ ವೃತ್ತಪತ್ರಿಕೆಯನ್ನು ಆರಂಭಿಸುತ್ತಾರೆ. ದೇಶದ ಬೆರಳೆಣಿಕೆಯಷ್ಟು ಉದ್ದಿಮೆದಾರರು ಮಾತ್ರ ಯಾವುದೇ ಮಾಧ್ಯಮ ಸಂಸ್ಥೆಯಲ್ಲಿ ಹಣ ತೊಡಗಿಸುವ ಗೋಜಿಗೆ ಹೋಗಿಲ್ಲ.

ತಮ್ಮ ಮಾಲೀಕರ ಅಥವಾ ಹೂಡಿಕೆದಾರರ ರಾಜಕೀಯ ಅಥವಾ ಔದ್ಯಮಿಕ ಆಸಕ್ತಿಯನ್ನು ಕಡೆಗಣಿಸಿ, ಸುದ್ದಿ ಬಿತ್ತರಿಸುವ ಸ್ವತಂತ್ರ ಪತ್ರಕರ್ತರು ಈಗ ಕಾಣುತ್ತಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಕೆಲ ಸುದ್ದಿ ವಾಹಿನಿಗಳ ಷೇರು ಖರೀದಿಸಿದ ಮೇಲೆ, 2002ರ ಗುಜರಾತ್ ಕೋಮುಗಲಭೆ ಹಾಗೂ ನರೇಂದ್ರ ಮೋದಿಯ ವಿರುದ್ಧ ಕಿಡಿಕಾರುತ್ತಿದ್ದ ವಸ್ತುನಿಷ್ಠ ವಿಶ್ಲೇಷಕರೊಬ್ಬರು ಪ್ರತಿ ಕಾರ್ಯಕ್ರಮದಲ್ಲೂ ಮೋದಿ ಪರ ಸಾಲುಗಳನ್ನು ಸೇರಿಸುತ್ತಿದ್ದಾರೆ. ಗುಜರಾತ್ನ ಕೈಗಾರಿಕಾ ಪ್ರಗತಿ ಹಾಡಿಹೊಗಳುತ್ತಿದ್ದಾರೆ. ಮೋದಿಯಂತಹ ನಾಯಕರು ದೇಶಕ್ಕೆ ಬೇಕು ಎನ್ನುತ್ತಿದ್ದಾರೆ.

ನೌಕರಿ ಕಳೆದುಕೊಳ್ಳುವುದಕ್ಕಿಂತ ಸಿದ್ಧಾಂತಗಳ ಜತೆ ರಾಜೀ ಮಾಡಿಕೊಳ್ಳುವುದು ಉತ್ತಮ ಅಲ್ಲವೇ? ದೊಡ್ಡ, ದೊಡ್ಡ ಸಂಪಾದಕರಿಗೆ ಈ ಗತಿ ಎದುರಾದಲ್ಲಿ ಸಣ್ಣ ಪತ್ರಕರ್ತ/ರ್ತೆ ತನ್ನ ವೃತ್ತಿಯ ಸಿದ್ಧಾಂತಗಳನ್ನು ಎತ್ತಿಹಿಡಿಯಲಿ ಎಂದು ನಿರೀಕ್ಷಿಸುವುದು ಹೇಗೆ?

ಇದು ಪತ್ರಕರ್ತರ ಮೇಲಿರುವ ಬಾಹ್ಯ ಒತ್ತಡದ ಮಾತಾಯಿತು. ಪತ್ರಿಕೆ ಅಥವಾ ಟಿವಿ ವಾಹಿನಿ ಒಂದು ಉತ್ಪನ್ನ. ಅದನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ರೂಪಿಸಬೇಕು ಎಂಬ ಒತ್ತಡ ಅವರ ಮೇಲೆ ಆಂತರಿಕವಾಗಿ ಇರುವಂತೆಯೂ ಕಾಣುತ್ತಿದೆ. ಜನರಿಗೆ ಸೇವೆ ಸಲ್ಲಿಸುವ, ಜನರ ಕಣ್ಣು, ಕಿವಿಯಂತೆ ವರ್ತಿಸುವ, ಸಮಾಜದ ಹುಳುಕು ಹೊರಗೆ ತೆಗೆಯುವ ಮಾಧ್ಯಮದ ವಿಶಾಲ ಉದ್ದೇಶ ಈಗ ಪಕ್ಕಕ್ಕೆ ಸರಿದಿದೆ.

ಯಾವ ಬಡವರು, ದಮನಿತರ ಪರವಾಗಿ ಮಾಧ್ಯಮ ಕೆಲಸ ಮಾಡಬೇಕಿತ್ತೋ ಅವರು ಯಾವುದೋ ಪ್ರಮುಖವಲ್ಲದ `ಕಾಲಂ~ಗಳಲ್ಲಿ ಕಳೆದುಹೋಗುತ್ತಾರೆ. ಮಧ್ಯಮ ವರ್ಗ ಮಾಧ್ಯಮದ ಗ್ರಾಹಕರಾಗಿರುವುದರಿಂದ ಅದು, ಆ ವರ್ಗದ ಯಶಸ್ಸು, ಸಾಧನೆಗಳನ್ನು ದೊಡ್ಡದಾಗಿ ಬಿಂಬಿಸುತ್ತದೆ.

ಹಾಗಾಗಿ ಗ್ಲಾಮರ್ ಗೊಂಬೆಗಳ ಜೀವನಶೈಲಿ, ಫ್ಯಾಷನ್, ಮೇಲು ವರ್ಗದ ಬದುಕು ವರ್ಣರಂಜಿತವಾಗಿ ಚಿತ್ರಿತವಾಗುತ್ತದೆ. ನಮ್ಮ ದೇಶದ ಬೃಹತ್ ಸಮುದಾಯದ ಸಮಸ್ಯೆಯಾದ ಬಡತನ, ಹಸಿವು, ಅಸಮಾನತೆ ಮತ್ತು ತಾರತಮ್ಯದ ಬಗ್ಗೆ ಮಾಧ್ಯಮಕ್ಕೆ ಈಗ ಆಸಕ್ತಿ ಇದ್ದಂತೆ ಕಾಣುವುದಿಲ್ಲ.

ಈ ದುರ್ಬಲ ಪ್ರಜಾಪ್ರಭುತ್ವ ವ್ಯವಸ್ಥೆಯ ಫಲಾನುಭವಿಗಳೆಲ್ಲ, `ನಮ್ಮದು ಪರಿಪೂರ್ಣ ಪ್ರಜಾಪ್ರಭುತ್ವ ಅಲ್ಲದಿರಬಹುದು. ಆದರೆ, ಇದು ಜೀವಂತ ಪ್ರಜಾಪ್ರಭುತ್ವ~ ಎಂದು ಸಮರ್ಥಿಸಿಕೊಳ್ಳುತ್ತಾರೆ. ವಿವಿಧ ವರ್ಗಗಳ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ಕಾಪಾಡುವ ವ್ಯವಸ್ಥೆಯನ್ನು ಈ ಪ್ರಜಾಪ್ರಭುತ್ವ ರೂಪಿಸಿದೆ ಎನ್ನುತ್ತಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಆಕಸ್ಮಿಕ ಎಂಬಂತೆ ಕೆಲಸ ಮಾಡುತ್ತಿದೆ. ದಮನಿತರು, ಬಡವರ ಬದುಕಿನಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣುತ್ತಿದ್ದಲ್ಲಿ ಅದು ಪ್ರಜಾಪ್ರಭುತ್ವ ಎಂಬ `ಅಪಮಾನ~ದ ಹೊರತಾಗಿ ಆಗುತ್ತಿದೆ.

-ಡಾ. ಆರ್. ಅಖಿಲೇಶ್ವರಿ
(ಲೇಖಕರು ಪತ್ರಕರ್ತರು ಹಾಗೂ ಶೈಕ್ಷಣಿಕ ತಜ್ಞರು)

(ಡಿ. ಮುರಳೀಧರ್ ಅವರ `ಅರ್ಥ ವಿಚಾರ~ ಅಂಕಣ ನಾಳೆ ಪ್ರಕಟವಾಗಲಿದೆ)
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.