ಭಾನುವಾರ, ಮೇ 9, 2021
25 °C

ಕೆಳಗೇರಿಯ ಜಲಯೋಗ ತಪಸ್ಸು!

ಪ್ರಜಾವಾಣಿ ವಾರ್ತೆ /-ಇಮಾಮಹುಸೇನ್ ಎಂ. ಗೂಡುನವರ . Updated:

ಅಕ್ಷರ ಗಾತ್ರ : | |

ಕೆಳಗೇರಿಯ ಜಲಯೋಗ ತಪಸ್ಸು!

ಬೆಳಗಾವಿ: ನೆಲದ ಮೇಲೆ ಯೋಗಾಸನ ಮಾಡುವ ಸಾವಿರಾರು ಯೋಗಪಟುಗಳು ಸಿಗಬಹುದು. ಆದರೆ, ನೀರಿನೊಳಗೆ ಯೋಗಾಭ್ಯಾಸ ಮಾಡುವ ಕಲೆ ಬೆರಳೆಣಿಕೆಯ ಯೋಗಪಟುಗಳಿಗೆ ಮಾತ್ರ ಒಲಿಯುತ್ತದೆ. ಇಂಥವರಲ್ಲಿ ಒಬ್ಬರಾದ ಬೆಳಗಾವಿ ಬಸವನಕುಡಚಿಯ ಯೋಗಪಟು ಸಿದ್ಧಾರ್ಥ ಕೆಳಗೇರಿ, ನೀರಿನೊಳಗೆ ಯೋಗಾಸನದ ವಿವಿಧ ಭಂಗಿಗಳನ್ನು ಮಾಡುವ ಮೂಲಕ ಬೆರಗು ಮೂಡಿಸುತ್ತಿದ್ದಾರೆ.ಹೌದು, ಸಿದ್ಧಾರ್ಥ ಕೆಳಗೇರಿ ಅವರು ನೀರಿನೊಳಗೆ ಸತತ 12 ಗಂಟೆಗಳ ಕಾಲ ಯೋಗಾಸನ ಮಾಡುವ ಕೌಶಲವನ್ನು ಹೊಂದಿದ್ದಾರೆ. ಆಸನಗಳನ್ನು ಮಾಡುವಾಗ ಕೈ ಕಾಲುಗಳನ್ನು ಕೊಂಚವೂ ಅಲುಗಾಡಿಸದೇ ನೀರಿನಲ್ಲಿ ಶವದಂತೆ ತೇಲುತ್ತಾರೆ. ನೀರೊಳಗೆ ಪ್ರಾಣಾಯಾಮ, ಸೂರ್ಯ ನಮಸ್ಕಾರ, ಪದ್ಮಾಸನ, ವಜ್ರಾಸನ, ಧನುರ್ವಾಸನ, ಮತ್ಸ್ಯಾಸನ, ತಾಡಾಸನ, ಪಶ್ಚಿಮೋತ್ತಾಸನ, ಚಕ್ರಾಸನ, ನೀರಾಸನ, ಭೂನಮವಾಸನ, ಶಿವಾಸನ, ಶಲಬಾಸನ, ಶವಾಸನ ಸೇರಿದಂತೆ ನೂರಾರು ಆಸನಗಳನ್ನು ಮಾಡುತ್ತಾರೆ. ಕೆಳಗೇರಿ ಅವರು ಜೊತೆಗೆ ಯೋಗ ತಪಸ್ಸು ಮಾಡುತ್ತಾರೆ. ಇನ್ನೊಂದು ವಿಶೇಷವೆಂದರೆ, ಇವರು ಯೋಗ ಗುರು ಡಾ. ಓ. ಅನಂತರಾಮರನ್ನು ತಮ್ಮ ಮನದೊಳಗೆ ಗುರುವಾಗಿ ಸ್ವೀಕರಿಸಿ, ಯೋಗ ವಿದ್ಯೆಯನ್ನು ಕಲಿತಿದ್ದಾರೆ.ವಿಠ್ಠಲ ಹಾಗೂ ಲಕ್ಷ್ಮೀಬಾಯಿ ದಂಪತಿಯ ಮಗನಾಗಿ 1965ರಲ್ಲಿ ಜನಿಸಿದ ಕೆಳಗೇರಿ ಅವರು ಮೂಲತಃ ವಿಜಾಪುರ ಜಿಲ್ಲೆಯ ಸಾತಲಗಾವ ಗ್ರಾಮದವರು. ಇವರ ತಂದೆ ರೈಲ್ವೆ ಇಲಾಖೆಯಲ್ಲಿ ಘಟಪ್ರಭಾ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಇವರು ಘಟಪ್ರಭಾದಲ್ಲಿಯೇ ಬಂದು ನೆಲೆಸಿದರು. ಪ್ರಾಥಮಿಕ ಶಿಕ್ಷಣವನ್ನು ಬೆಳಗಾವಿ, ಗೋಕಾಕಿನಲ್ಲಿ ಪಡೆದಿದ್ದಾರೆ.ಬಾಲ್ಯದಿಂದಲೇ ವ್ಯಾಯಾಮದ ಗೀಳು ಅಂಟಿಸಿಕೊಂಡ ಕೆಳಗೇರಿಯವರು ಮಾಧ್ಯಮಿಕ ಶಿಕ್ಷಣ ಪಡೆಯುವಾಗಲೇ ಬೆಳಗಿನ ಜಾವ 5 ಗಂಟೆಗೆ ಘಟಪ್ರಭಾ ನದಿದಂಡೆಗೆ ಹೋಗಿ ಯೋಗಾಸನ ಮಾಡುತ್ತಿದ್ದರು. ನಂತರ ಕೆಲವೇ ದಿನಗಳಲ್ಲಿ ಕೆಲವು ಯುವಕರಿಗೆ ಯೋಗಾಸನ ಕಲಿಸುವ ಮಾರ್ಗದರ್ಶಕರಾದರು. ಸದ್ಯ, ವಿವಿಧೆಡೆ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಜನಪ್ರಿಯ ಯೋಗಪಟುವಾಗಿ ಹೊರಹೊಮ್ಮಿದ್ದಾರೆ.ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿ ಸಿ.ಪಿ.ಇಡಿ ತರಬೇತಿ ಮುಗಿಸಿ, 1997ರಲ್ಲಿ ಚಿಕ್ಕೋಡಿ ತಾಲ್ಲೂಕಿನ ಕರೋಶಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡರು. ತದನಂತರ 1999ರಲ್ಲಿ ಕರೋಶಿಯಿಂದ ವರ್ಗಾವಣೆಗೊಂಡು ಹುಕ್ಕೇರಿ ತಾಲ್ಲೂಕಿನ ಗುಡಸದ ಶಾಸಕರ ಮತಕ್ಷೇತ್ರದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಯೋಗಾಸನ ಮತ್ತು ವ್ಯಾಯಾಮದ ಬಗ್ಗೆ ಅರಿವು ಮೂಡಿಸಿ ಹೆಸರುವಾಸಿಯಾದರು.

ಕೆಳಗೇರಿಯವರು 2003ರಿಂದ ಬೆಳಗಾವಿಯ ಬಸವನ ಕುಡಚಿಯ ಎಂಬಿಎಸ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಲ್ಲಿ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ನೂರಾರು ಯುವಕ ಯುವತಿಯರು ಇವರ ಮಾರ್ಗದರ್ಶನದಲ್ಲಿ ಯೋಗವನ್ನು ಕಲಿತಿದ್ದಾರೆ.`ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯವಂತನಾಗಿ ಇರುವ ಮನುಷ್ಯ ನಿಜವಾಗಿಯೂ ಭಾಗ್ಯವಂತ ಎನ್ನಬಹುದು. ಆರೋಗ್ಯದ ಅಂಗಗಳಾದ ವ್ಯಾಯಾಮ, ಸ್ವಚ್ಛತೆ, ಪ್ರಾಣಾಯಾಮ, ಧ್ಯಾನ, ಪೌಷ್ಟಿಕ ಆಹಾರ ಸೇವನೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಹಸನಾಗುತ್ತದೆ. ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳಬೇಕಾದರೆ ಯೋಗವೇ ಅದಕ್ಕೆ ಮದ್ದು' ಎಂದು ಸಿದ್ಧಾರ್ಥ `ಪ್ರಜಾವಾಣಿ'ಗೆ ತಿಳಿಸಿದರು.`ಆರೋಗ್ಯವಂತ ನಿರುದ್ಯೋಗಿಯಾಗಿದ್ದರೂ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಶಾಂತ, ತೃಪ್ತನೂ ಆಗಿರುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಒತ್ತಡದ ಜೀವನದಲ್ಲಿಯೂ ಕೆಲ ಸಮಯವನ್ನು ವ್ಯಾಯಾಮಗಳಿಗಾಗಿ ಮೀಸಲಿಡಬೇಕು. ಮುಂಬರುವ ದಿನಗಳಲ್ಲಿ ವಸತಿ ನಿಲಯಗಳಲ್ಲಿರುವ ಮಕ್ಕಳಿಗೆ ಉಚಿತವಾಗಿ ಯೋಗಾಸನ ಕಲಿಸಬೇಕೆಂಬ ಇಚ್ಛೆ ಇದೆ' ಎನ್ನುತ್ತಾರೆ ಕೆಳಗೇರಿ.

-ಇಮಾಮಹುಸೇನ್ ಎಂ. ಗೂಡುನವರ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.