ಮಂಗಳವಾರ, ಜನವರಿ 21, 2020
28 °C
ರಾಮೇಶ್ವರ ದೇವಸ್ಥಾನದಲ್ಲಿ ಡಿ.15ರಂದು ಕಾರ್ಯಕ್ರಮ

ಕೆಳದಿ ಉತ್ಸವಕ್ಕೆ ಭರದ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಳದಿ ಉತ್ಸವಕ್ಕೆ ಭರದ ಸಿದ್ಧತೆ

ಸಾಗರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಳದಿ ಗ್ರಾಮದ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಡಿ.15ರಂದು ರಾಜ್ಯ ಸರ್ಕಾರ ಕೆಳದಿ ಉತ್ಸವ  ಆಯೋಜಿಸಿದ್ದು ತಾಲ್ಲೂಕು ಆಡಳಿತದ ವತಿಯಿಂದ ಉತ್ಸವದ ಯಶಸ್ಸಿಗೆ ಸಿದ್ದತೆ ಭರದಿಂದ ಸಾಗಿವೆ.ರಾಜ್ಯದ ವಿವಿಧ ಐತಿಹಾಸಿಕ ಸ್ಥಳಗಳಲ್ಲಿ ಪ್ರತಿ ವರ್ಷ ಉತ್ಸವ ಆಚರಿಸಲಾಗುತ್ತಿದ್ದು ಕೆಳದಿ ಮಾತ್ರ ಇದರಿಂದ ವಂಚಿತವಾಗಿದೆ ಎಂಬ ಸ್ಥಳೀಯರ ಕೂಗಿಗೆ ಸ್ಪಂದಿಸಿರುವ ಸರ್ಕಾರ ಈ ಬಾರಿ ಉತ್ಸವ ಆಚರಣೆಗೆ ಅವಕಾಶ ಮಾಡಿಕೊಟ್ಟಿದೆ.ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡಾಗ ಧೃತಿಗೆಡದೆ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದು 25ವರ್ಷಗಳ ಕಾಲ ರಾಜ್ಯಭಾರ ಮಾಡಿದ ರಾಣಿ ಚೆನ್ನಮ್ಮ, ಕಂದಾಯ ಸಂಗ್ರಹಣಾ ವ್ಯವಸ್ಥೆಗೆ ಹೊಸ ಮಾರ್ಪಾಡು ತಂದ ಶಿವಪ್ಪನಾಯಕ ಹೀಗೆ ಹಲವು ವಿಶೇಷತೆಗಳನ್ನು ಹೊಂದಿರುವ ಕೆಳದಿ ಸಂಸ್ಥಾನದ ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಉತ್ಸವದ ಮೂಲಕ ಜನರಿಗೆ ಪರಿಚಯಿಸಲು ತಾಲ್ಲೂಕು ಆಡಳಿತ ಮುಂದಾಗಿದೆ.ಉತ್ಸವದ ಅಂಗವಾಗಿ ಇದೇ 13ರಂದು ಕೆಳದಿ ಸಮೀಪದ ಬಂದಗದ್ದೆ ಗ್ರಾಮದ ಭಾರತಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ. ಡಿ.15ರಂದು ಬೆಳಿಗ್ಗೆ 8.30ಕ್ಕೆ ಕೆಳದಿ ಚೌಡಪ್ಪ ನಾಯಕ ಮಹಾದ್ವಾರದಿಂದ ಮೆರವಣಿಗೆ ಆರಂಭವಾಗಲಿದ್ದು ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ.ಡಿ.15ರಂದು ಬೆಳಿಗ್ಗೆ 10.30ಕ್ಕೆ ಉತ್ಸವವನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್‌ನ ಸಭಾಪತಿ ಡಿ.ಎಚ್‌.ಶಂಕರಮೂರ್ತಿ  ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಚಿವ ಕಿಮ್ಮನೆ ರತ್ನಾಕರ್‌ ವಸ್ತು ಪ್ರದರ್ಶನವನ್ನು, ಸಚಿವ ಎಚ್‌.ಆಂಜನೇಯ ನಾಣ್ಯ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾ.ಡಿಸೋಜ ಅವರನ್ನು ನ್ಮಾನಿಸಲಾಗುವುದು.ಅಂದು ಬೆಳಿಗ್ಗೆ 12ಕ್ಕೆ ಕೆಳದಿ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಎಂಬ ವಿಷಯದ ಕುರಿತು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ‘ಕೆಳದಿ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ’ ಕುರಿತು, ‘ಕೆಳದಿ ಕಾಲದ ಸಾಹಿತ್ಯ’ ಕುರಿತು ಡಾ.ಬಿ.ನಂಜುಂಡಸ್ವಾಮಿ ಮಾತನಾಡಲಿದ್ದು, ಶಿವಾನಂದ ಕುಗ್ವೆ ಹಾಗೂ ದೇವೇಂದ್ರ ಬೆಳೆಯೂರು ಪ್ರತಿಕ್ರಿಯಿಸಲಿದ್ದಾರೆ. ಡಾ.ಕೆಳದಿ ವೆಂಕಟೇಶ್‌ ಜೋಯಿಸ್ ಹಾಜರಿರುತ್ತಾರೆ.ಮಧ್ಯಾಹ್ನ 3ಕ್ಕೆ ಕವಿ ಬಿ.ಆರ್‌.ಲಕ್ಷ್ಮಣ್‌ರಾವ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು ಸ್ಥಳೀಯ ಕವಿಗಳು ತಮ್ಮ ಕವಿತೆ ವಾಚಿಸಲಿದ್ದಾರೆ. ಬೆಳಿಗ್ಗೆ 9.30ರಿಂದ 10.30ರವರೆಗೆ ಗೀತ ಗಾಯನ, ಮಧ್ಯಾಹ್ನ 12ರಿಂದ 12.15ರವರೆಗೆ ಗಾಯನ, 1.30ರಿಂದ 3ರವರೆಗೆ ಸಾಂಸ್ಕೃತಿಕ ವೈವಿಧ್ಯ, ಸಂಜೆ 4ರಿಂದ 6ರವರೆಗೆ ಸಾಂಸ್ಕೃತಿಕ ಸಂಜೆ, ರಾತ್ರಿ 7ರಿಂದ 10.30ರವರೆಗೆ ಸಾಂಸ್ಕೃತಿಕ ವೈಭವ, 10.30ರಿಂದ 12ರವರೆಗೆ ದೊಡ್ಡಾಟ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಂಗಕರ್ಮಿ ಪ್ರಸನ್ನ ಸಮಾರೋಪ ಭಾಷಣ ಮಾಡಲಿದ್ದಾರೆ.ಕೆಳದಿ ಉತ್ಸವ  ನಾಡಹಬ್ಬದ ರೀತಿಯಲ್ಲಿ ಆಚರಿಸುವ ಸಂಬಂಧ ಕೆಳದಿ ಹಾಗೂ ಸುತ್ತಮುತ್ತಲಿನ ಜನರ ಜೊತೆ ಈಗಾಗಲೆ ಹಲವು ಸಮಾಲೋಚನಾ ಸಭೆ ನಡೆಸಲಾಗಿದೆ ಎಂದು ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಡಾ.ಬಿ.ಉದಯಕುಮಾರ್‌ ಶೆಟ್ಟಿ ತಿಳಿಸಿದರು.ತಹಶೀಲ್ದಾರ್‌ ಸಾಜಿದ್‌ ಅಹ್ಮದ್‌ ಮುಲ್ಲಾ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ರಾಮಕೃಷ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೀಶ್‌ ಗಂಟೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಕೆಳದಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೌಡಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)