ಗುರುವಾರ , ಜೂನ್ 17, 2021
22 °C

ಕೆಸರಲ್ಲಿ ಸಿಲುಕಿದ್ದ ಕಾಡಾನೆ ರಕ್ಷಿಸಿದ ಅಭಿಮನ್ಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ವೀರನಹೊಸಹಳ್ಳಿ ಅರಣ್ಯ ಪ್ರದೇಶದ ದೊಡ್ಡೆಗೌಡನ ಕೆರೆಯಲ್ಲಿ ಸೋಮವಾರ ಕೆಸರಿಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗಂಡಾನೆಯನ್ನು ಸಾಕಾನೆ ಅಭಿಮನ್ಯು ಮತ್ತು ತಂಡ ಮಂಗಳವಾರ ರಕ್ಷಿಸಿತು.ಸುಮಾರು 70 ವರ್ಷದ ಕಾಡಾನೆ ಕೆಸರಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಗ ಸಾಕಾನೆ ಅಭಿಮನ್ಯು ಸಹಾಯದಿಂದ  ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆಗೆ ಧಾವಿಸಿದರು. ತಾಲ್ಲೂಕಿನ ಕೊಳವಿಗೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಿಂದ ಕೂಗಳತೆಯಲ್ಲಿರುವ ದೊಡ್ಡೆಗೌಡನಕೆರೆಯಲ್ಲಿ ಸೋಮವಾರ ರಾತ್ರಿ ನೀರು ಕುಡಿಯಲು ಬಂದಿದ್ದ ಗಂಡಾನೆ ಆಕಸ್ಮಿಕವಾಗಿ ಕೆರೆಯ ಕೆಸರಿನಲ್ಲಿ ಸಿಕ್ಕಿಕೊಂಡು ಹೊರ ಬರಲಾರದ ಸ್ಥಿತಿ ತಲುಪಿತ್ತು.

 

ವಿಷಯ ತಿಳಿದ ಕೊಳವಿಗೆ ಗ್ರಾಮಸ್ಥರು ಇಲಾಖೆಗೆ ಮಾಹಿತಿ ನೀಡಿ ಸ್ಥಳಕ್ಕೆ ಸಾಕಾನೆಗಳಾದ ಅಭಿಮನ್ಯು, ಗಣೇಶ್ ಮತ್ತು ರಾಜೇಶ್ ಕರೆತಂದು ಆನೆಯನ್ನು ಹೊರ ತೆಗೆಯಲಾಯಿತು ಎಂದು ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್ ತಿಳಿಸಿದ್ದಾರೆ.ಇದರ ದಂತ ಅಂದಾಜು 6-7 ಅಡಿ ಬೆಳೆದು ಆಹಾರ ಸೇವಿಸಲಾಗದೆ ನಿತ್ರಾಣಗೊಂಡಿದ್ದು ಗಂಭೀರ ಸ್ಥಿತಿಯಲ್ಲಿದೆ ಎಂದು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಉಮಾಶಂಕರ್ ತಿಳಿಸಿದ್ದಾರೆ. ಆನೆಗೆ ಉಪಚಾರದ ಅವಶ್ಯಕತೆಯಿದ್ದರೂ ಕಾಡಾನೆ ಆಗಿರುವುದರಿಂದ ಔಷಧೋಪಚಾರ ನೀಡುವುದು ಕಷ್ಟಸಾಧ್ಯ ಎಂದಿದ್ದಾರೆ.ಕಾರ್ಯಾಚರಣೆಯಲ್ಲಿ ಅಭಿಮನ್ಯು, ಗಣೇಶ್ ಮತ್ತು ರಾಜೇಶ್ ಆನೆಗಳ ಮಾವುತರು ಮತ್ತು ಅರಣ್ಯ ಸಿಬ್ಬಂದಿಗಳಾದ ಫಾರೆಸ್ಟರ್ ಮಂಜು ಮತ್ತು ಮಂಜುನಾಥ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.