ಬುಧವಾರ, ಜನವರಿ 29, 2020
29 °C

ಕೇಕ್ ಕಲೆ

–ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಕೇಕ್ ಕಲೆ

ಚಾರ್‌ಮಿನಾರ್‌ ವೈಭವ, ಭಾರತರತ್ನ ಸ‘ಚಿನ್ನ’ನ ಬ್ಯಾಟಿಂಗ್‌ ಮಾಂತ್ರಿಕತೆ, ವಿಂಟೇಟ್‌ ಶಿಪ್‌ನ ಪಾರಂಪರಿಕ ಚೆಲುವು, ಎರಡು ಸಾವಿರ ಗುಲಾಬಿ ಹೂಗಳಲ್ಲಿ ಮೈದಳೆದಿರುವ ವೆಡ್ಡಿಂಗ್‌ ಬೊಂಬೆ... ಒಂದೇ, ಎರಡೇ. ಹೀಗೆ ಕಣ್ಮನ ತಣಿಸುವ ಇಪ್ಪತ್ತೊಂಬತ್ತು ಸಕ್ಕರೆ ಗೊಂಬೆಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯ ಕೇಕ್‌ ಪ್ರಿಯರದ್ದು. ಅಂದಹಾಗೆ, ಈ ಬಾರಿಯ ಕೇಕ್ ಪ್ರದರ್ಶನಕ್ಕೆ ಡ್ರ್ಯಾಗನ್‌ ವಿಶೇಷ ಅತಿಥಿಯಾಗಿ ಬಂದಿದೆ.ಕ್ರಿಸ್‌ಮಸ್‌ ಹಬ್ಬ ಹತ್ತಿರದಲ್ಲಿದೆ. ಕ್ರಿಸ್‌ಮಸ್‌ ಆಚರಣೆಗೆ ಸಿದ್ಧತೆಗಳು ಎಲ್ಲೆಡೆ ಜೋರಾಗಿ ನಡೆಯುತ್ತಿವೆ. ಹಬ್ಬದ ಗುಂಗಿಗೆ ರಂಗು ತುಂಬಲು ಈಗ ಕೇಕ್‌ ಷೋ ಜತೆಗೂಡಿದೆ. ದೇಶದ ಅತಿದೊಡ್ಡ ಕೇಕ್‌ ಶೋ ಎಂಬ ಖ್ಯಾತಿ ಹೊಂದಿರುವ ಈ ಪ್ರದರ್ಶನ ವಿಠಲಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆ ಹಿಂಭಾಗದ ಸೇಂಟ್‌ ಜೋಸೆಫ್‌ ಪ್ರೌಢಶಾಲೆ ಆವರಣದಲ್ಲಿ ಡಿಸೆಂಬರ್‌ 29ರವರೆಗೆ ನಡೆಯಲಿದೆ.ಸಕ್ಕರೆಯಲ್ಲಿ ಮೈದಳೆದಿರುವ 18 ಅಡಿ ಎತ್ತರ 22 ಅಡಿ ಅಗಲದ ಚಾರ್‌ಮಿನಾರ್‌ ಕಟ್ಟಡ ಈ ಪ್ರದರ್ಶನದ ಪ್ರಮುಖ ಆಕರ್ಷಣೆ. ಈ ಸಕ್ಕರೆ ಶಿಲ್ಪವನ್ನು ನಿರ್ಮಿಸಲು 40 ಬೇಕರಿವಾಲಾಗಳು 60 ದಿನ ದುಡಿದ್ದಾರೆ. ಐದು ಟನ್‌ ಸಕ್ಕರೆ, ನೂರಾರು ಕಿ.ಲೋ. ಕ್ರೀಂ, ಸಾವಿರಾರು ಮೊಟ್ಟೆ ಇದಕ್ಕೆ ಬಳಕೆಯಾಗಿದೆ’ ಎಂದು ವಿವರಣೆ ನೀಡುತ್ತಾರೆ ನ್ಯಾಷನಲ್‌ ಕನ್ಸೂಮರ್‌ ಫೇರ್‌ನ ಗೌತಮ್‌ ಅಗರ್‌ವಾಲ್‌.ಸುಮಾರು 50 ವರ್ಷಗಳಿಂದ ಬೇಕರಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಸಿ.ರಾಮಚಂದ್ರನ್‌, ಸಚಿನ್‌ ತೆಂಡೂಲ್ಕರ್‌ ಅವರ ಅಪ್ಪಟ ಅಭಿಮಾನಿ. ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಕ್ರಿಕೆಟ್‌ ದೇವರಿಗೆ ಈ ಸಂದರ್ಭದಲ್ಲಿ ವಿಶೇಷವಾಗಿ ನಮನ ಸಲ್ಲಿಸಬೇಕು ಎಂಬ ಸಲುವಾಗಿ ಅವರು ಕೇಕ್‌ನಲ್ಲಿ ಸಚಿನ್‌ ಅವರ ಪ್ರತಿಕೃತಿ ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಸಚಿನ್‌ ಅವರ ಸಹಜ ಗಾತ್ರದಲ್ಲಿಯೇ ಮೈದಳೆದಿರುವ ಈ ಗೊಂಬೆ ಪ್ರದರ್ಶನದ ಮತ್ತೊಂದು ಪ್ರಮುಖ ಆಕರ್ಷಣೆ. ಕೇಕ್‌ನಲ್ಲಿ ಮೈದಳೆದಿರುವ ಈ ಮೂರ್ತಿಯ ಚೆಂದವು ಲಂಡನ್‌ನಲ್ಲಿರುವ ಮೇಣದ ಪ್ರತಿಮೆಗೆ ಸ್ಪರ್ಧೆಯೊಡ್ಡುವಂತಿದೆ ಎಂಬುದು ಆಯೋಜಕರ ಮಾತು.ಇನ್ನುಳಿದಂತೆ ಸಕ್ಕರೆಯಲ್ಲಿ ನಿರ್ಮಾಣವಾಗಿರುವ ಶೂ ಮಳಿಗೆ, ಫಾರ್ಮುಲಾ ಒನ್‌ ಕಾರು, ಬುರ್ಜ್‌ ಅಲ್‌ ದುಬೈ, ಮೋಹಕ ರೂಪದರ್ಶಿ ಬೊಂಬೆ, ಉದ್ಯಾನ, ಪೀಕಾಕ್‌ ವೆಡ್ಡಿಂಗ್‌ ಕೇಕ್‌ಗಳು ಮನಸೆಳೆಯುತ್ತವೆ. ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ತುಂಬಿದ ಸಂದರ್ಭವನ್ನು ಸಂಭ್ರಮಿಸುವ ಸಲುವಾಗಿ ಇಲ್ಲೊಂದು ಸಕ್ಕರೆ ಮಾದರಿಯನ್ನು ತಯಾರಿಸಿ ಇಡಲಾಗಿದೆ. ಭಾರತೀಯ ಚಿತ್ರರಂಗದ ದಿಗ್ಗಜರೆಲ್ಲರೂ ಇಲ್ಲಿದ್ದಾರೆ. ಇದು ಸಹ ವೀಕ್ಷಕರ ಮನ ಸೆಳೆಯುವಂತಿದೆ.ಶಿಲ್ಪದಿಂದ ಸಿಹಿ ತಿನಿಸು

ಕೇಕ್‌ ಶೋನಲ್ಲಿ ಮೈದಳೆದಿರುವ 29 ಕಲಾಕೃತಿಗಳು ಡಿಸೆಂಬರ್‌ 29ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯ. ಆನಂತರ, ಅವುಗಳನ್ನು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಗೌತಮ್‌ ಅಗರ್‌ವಾಲ್‌ ಉತ್ತರಿಸಿದ್ದು ಹೀಗೆ: ‘ಈ ಎಲ್ಲ ಶಿಲ್ಪಗಳ ತಯಾರಿಕೆಗೆ ಐದು ಟನ್‌ಗೂ ಹೆಚ್ಚು ಸಕ್ಕರೆ ಬಳಕೆಯಾಗಿದೆ. ಪುಟ್ಟ ಶಿಲ್ಪಗಳಿಗೆ ಹದವಾದ ಬಿಸಿ ಒದಗಿಸುತ್ತಾ ಬಂದರೆ ಸಾಕಷ್ಟು ದಿನ ಕಾಪಾಡಿಕೊಳ್ಳಬಹುದು. ತಿನ್ನುವ ಆಸೆ ಇದ್ದವರೂ ಈ ಕಲಾಕೃತಿಗಳನ್ನು ಅಡಿಯಿಂದ ಮುಡಿಯವರೆಗೂ ತಿನ್ನಬಹುದು. ಈ ಎರಡೂ ಆಯ್ಕೆಗಳ ನಂತರ ನಮಗೆ ಮತ್ತೊಂದು ಆಯ್ಕೆಯೂ ಇದೆ. ಪ್ರತಿವರ್ಷ ಮುಳುಬಾಗಿಲಿನಿಂದ ಒಬ್ಬ ವ್ಯಕ್ತಿ ಬರುತ್ತಾರೆ. ಅವರಿಗೆ ಇವುಗಳೆಲ್ಲವನ್ನೂ ಉಚಿತವಾಗಿ ಕೊಟ್ಟು ಬಿಡುತ್ತೇವೆ. ಅವರು ಈ ಶಿಲ್ಪಗಳನ್ನೆಲ್ಲಾ ಒಡೆದು ಹಾಕಿ, ಸಂಪೂರ್ಣವಾಗಿ ಕರಗಿಸಿ ಅದರಿಂದ ಮಕ್ಕಳ ಸಿಹಿತಿನಿಸು ಮಾಡಿ ಮಾರಾಟ ಮಾಡುತ್ತಾರೆ’.ಹದಿನೈದು ದಿನ ವೀಕ್ಷಕರ ಕಣ್ಮನ ತಣಿಸುವ ಕಲಾಕೃತಿಗಳು ಹೀಗೆ ಕೊನೆಯಲ್ಲಿ ಸಿಹಿತಿನಿಸುಗಳಾಗಿ ಮಕ್ಕಳ ಹೊಟ್ಟೆ ಸೇರುತ್ತವೆ. ಸಕ್ಕರೆ ಶಿಲ್ಪ ತಯಾರಿಸಲು ಸಾಕಷ್ಟು ಬಣ್ಣಗಳ ಬಳಕೆ ಮಾಡಿರುತ್ತೀರಿ. ಅವುಗಳಿಂದ ಸಿಹಿತಿನಿಸು ತಯಾರಿಸಿದರೆ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ ಎಂಬ ಗೊಂದಲಕ್ಕೆ ಗೌತಮ್‌ ವಿವರಣೆ ನೀಡಿದ್ದು ಹೀಗೆ: ‘ಸಕ್ಕರೆ ಶಿಲ್ಪ ತಯಾರಿಕೆಗೆ ಬಳಸಿರುವ ಬಣ್ಣವನ್ನೆಲ್ಲಾ ತೊಡೆದುಹಾಕುವಂತೆ ಕರಗಿಸಿ, ಶೋಧಿಸಲಾಗುತ್ತದೆ. ಬಣ್ಣವನ್ನೆಲ್ಲಾ ತೆಗೆದು ಕೊನೆಯಲ್ಲಿ ಸಿಗುವ ಸಕ್ಕರೆಯನ್ನು ಮಾತ್ರ ತೆಗೆದುಕೊಂಡು ಅವರು ಸಿಹಿತಿನಿಸುಗಳನ್ನು ಮಾಡುತ್ತಾರೆ. ಹಾಗಾಗಿ ಕರಗಿದ ಸಕ್ಕರೆಯಿಂದ ತಯಾರಿಸಿದ ಸಿಹಿತಿನಿಸುಗಳು ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’.ಬಣ್ಣ ಬಣ್ಣದ ಚಿತ್ತಾರದಲ್ಲಿ ಅರಳಿರುವ ಸಕ್ಕರೆ ಶಿಲ್ಪಗಳ ಸೊಬಗನ್ನು ಕಣ್ಣು ತುಂಬಿಕೊಳ್ಳುವ ಆಸೆ ಇದ್ದವರು ಕುಟುಂಬ ಸಮೇತರಾಗಿ ತೆರಳಿ ಅವುಗಳ ಚೆಲುವನ್ನು ಆಸ್ವಾದಿಸಬಹುದು. ಪ್ರವೇಶ ಶುಲ್ಕ ರೂ49. ಮೂರು ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ಉಚಿತ. ಚಿತ್ರ: ಕಿಶೋರ್‌ ಕುಮಾರ್ ಬೋಳಾರ್

ಪ್ರತಿಕ್ರಿಯಿಸಿ (+)