ಶನಿವಾರ, ಮೇ 28, 2022
31 °C

ಕೇದಾರನಾಥ: `ರೋಪ್ ವೇ' ನಿರ್ಮಾಣಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಐಎಎನ್‌ಎಸ್): ಉತ್ತರಾಖಂಡದಲ್ಲಿ ಸಂಭವಿಸಿದ  ಜಲಪ್ರಳಯದಿಂದ ಸಂಪೂರ್ಣ ಹಾನಿಗೊಳಗಾಗಿರುವ ಕೇದಾರನಾಥ ಮಂದಿರಕ್ಕೆ ಸಂಪರ್ಕ ಕಲ್ಪಿಸಲು `ರೋಪ್‌ವೇ' (ಕೇಬಲ್ ಹಳಿ) ನಿರ್ಮಿಸುವ ಕುರಿತು ಇಲ್ಲಿನ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ..ಗೌರಿಕುಂಡ್ ಮೂಲಶಿಬಿರ ಮತ್ತು ಕೇದಾರನಾಥ ಮಂದಿರ ನಡುವಿನ 14 ಕಿ.ಮೀ. ಬೆಟ್ಟ ಪ್ರದೇಶದ ಮಧ್ಯೆ, `ರೋಪ್ ವೇ' ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಯೋಜನಾ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ರಾಜೀವ್ ಶುಕ್ಲಾ, `ಕೇದಾರನಾಥಕ್ಕೆ ಸಂಪರ್ಕ ಕಲ್ಪಿಸಲು `ರೋಪ್ ವೇ' ನಿರ್ಮಿಸುವುದರಿಂದ ಯಾತ್ರಿಗಳು ಅತ್ಯಂತ ಸುಲಭವಾಗಿ ಮಂದಿರಕ್ಕೆ ಭೇಟಿ ನೀಡಬಹುದು' ಎಂದಿದ್ದಾರೆ.`ತಾಂತ್ರಿಕತೆಯ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಂದಿರವನ್ನು ಪುನರ್ ನಿರ್ಮಾಣ ಮಾಡಲಾಗುವುದು. ಮಂದಿರಕ್ಕೆ ಪಾದಯಾತ್ರೆಯಲ್ಲಿ ಸಾಗುವುದಕ್ಕೆ ಬದಲಾಗಿ ಪರ್ಯಾಯ ಮಾರ್ಗಗಳ ಶೋಧ ಮತ್ತು ಸುರಕ್ಷತೆ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆ'ಯನ್ನು ಸಂಪರ್ಕಿಸಲಾಗುತ್ತಿದೆ' ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಪೂರ್ಣಗಿರಿ ಮತ್ತು ಯಮುನೋತ್ರಿ ನಡುವೆಯೂ `ರೋಪ್ ವೇ' ನಿರ್ಮಿಸಲು ಆಲೋಚಿಸಲಾಗಿದೆ. ಜಂಕಿ ಚಟ್ಟಿ- ಯಮುನೋತ್ರಿ ನಡುವಿನ 3.84 ಕಿ.ಮೀ. `ರೋಪ್ ವೇ' ನಿರ್ಮಾಣಕ್ಕೆ ನಿರ್ಮಾಣ ವೆಚ್ಚ ರೂ. 70 ಕೋಟಿ ಎಂದು ಅಂದಾಜಿಸಲಾಗಿದೆ. ಅದರಂತೆ ತುಲಿಗಾಡ್- ಪೂರ್ಣಗಿರಿ ನಡುವಿನ ಒಂದಕ್ಕಿಂತ ಕಡಿಮೆ ಕಿ.ಮೀ. ದೂರ ನಿರ್ಮಿಸಲು ಅಂದಾಜು ವೆಚ್ಚ ರೂ. 35 ಕೋಟಿ ತಗಲಬಹುದು.ಬಿನ್ಸರ್ ರಸ್ತೆಯಿಂದ ಅಲ್ಮೊರಾದ ಕಸರ್ ದೇವಿ ದೇವಸ್ಥಾನದವರೆಗೆ , ಋಷಿಕೇಶದಿಂದ ಕುಂಜಾಪುರಿ, ಚಕ್ರತಾ- ಟೈಗರ್ ಫಾಲ್ಸ್ ಹಾಗೂ ದಯಾರಾ ಬುಗ್ಯಾಲ್ ನಡುವೆ `ರೋಪ್ ವೇ' ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ಅಧ್ಯಯನ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.