ಬುಧವಾರ, ಆಗಸ್ಟ್ 12, 2020
27 °C

ಕೇರಳಿಗರ ಮೇಳವೂ ಸಾವಯವ ಆಹಾರವೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳಿಗರ ಮೇಳವೂ ಸಾವಯವ ಆಹಾರವೂ

ರಸಗೊಬ್ಬರ ಹಾಕಿ ಬೆಳೆಸಿ, ಕ್ರಿಮಿನಾಶಕ ಸಿಂಪಡಿಸಿ ಕೊಯ್ದ ತರಕಾರಿಗಳು, ಗೂಡು ಬಿಟ್ಟು ಹೊರಬರದ, ಹಾರ್ಮೋನುಗಳನ್ನು ಚುಚ್ಚಿ ಬೆಳೆಸಿದ ಬ್ರಾಯ್ಲರ್ ಕೋಳಿಯ ಮಾಂಸ ತಿಂದು ಜಡ್ಡುಹಿಡಿದ ನಾಲಗೆ ಇವ್ಯಾವುದನ್ನೂ ಬಳಸದ ಸ್ವಾದದ ಆಹಾರ ಹುಡುಕಿ ಎಲ್ಲಿಗೆ ಹೋಗಲೂ ಸಿದ್ಧ.ಅದಕ್ಕೆಂದೇ ಸಾವಯವ ಆಹಾರ ಮಾತ್ರವನ್ನು ಉಣಬಡಿಸುವ ಹೊರ ವರ್ತುಲ ರಸ್ತೆಯ ದೊಡ್ಡನೆಕ್ಕುಂದಿಯಲ್ಲಿನ ಲುಮೇರ್ ರೆಸ್ಟೋರೆಂಟ್ ಇತ್ತೀಚೆಗೆ ಅಂಥದ್ದೇ ಒಂದು ಸಾವಯವ ಆಹಾರ ಮೇಳವನ್ನು ಏರ್ಪಡಿಸಿತ್ತು. `ಕೇರಳ ಸಾವಯವ ಆಹಾರ ಮೇಳ~ ಎಂಬ ಹೆಸರಿನಲ್ಲಿ ನಡೆದ ಈ ಮೇಳ ರುಚಿಯಾದ ಆಹಾರದೊಂದಿಗೆ `ವಿಷಯುಕ್ತ ಆಹಾರ ತ್ಯೆಜಿಸಿ ಸಾವಯವ ಆಹಾರಕ್ಕೆ `ಮರಳಿ ಬನ್ನಿ~ ಎಂಬ ಸಂದೇಶವನ್ನೂ ಸಾರಿತ್ತು. ಮೇಳದಲ್ಲಿ ಉಣಬಡಿಸಿದ್ದ ಸಾವಯವ ರೀತಿಯಲ್ಲೇ ಬೆಳೆದ ತರಕಾರಿಗಳು ಹಾಗೂ ಹಣ್ಣುಗಳಿಂದ ತಯಾರಿಸಿದ ಕಡಚ್ಚಕ್ಕ ತೀಯಲ್, ಚಕ್ಕ ಅವಿಯಲ್,ಮಾಂಬಳ ಪುಳಿಶೇರಿ, ಮೀನ್ ಪೀರ, ಮಾಂಗಾ ಪಚ್ಚಡಿ, ಚಕ್ಕಯಡ, ಮಾಂಬಳ ಪ್ರಥಮನ್, ಅಂಬಳಂಗ್ಯಾ ಮೀನ್ ಕರಿ, ಕೋಳಿ ಕರಿ. ಮುರಿಂಗಯಿಲ ಪರಿಪ್ಪು ತೋರನ್, ಕೋಳಿ ಉಲರ್ತು, ಚಮ್ಮಂದಿ ಮುಂತಾದ ಅಪ್ಪಟ ಕೇರಳೀಯ ಸಾಂಪ್ರದಾಯಿಕ ಆಹಾರವನ್ನು ಮಲಯಾಳಿಗಳು ಮಾತ್ರವಲ್ಲ, ಕನ್ನಡಿಗರು, ತಮಿಳರು, ತೆಲುಗರು, ಉತ್ತರಭಾರತದವರು ತಿಂದು, `ಆಹಾ.. ಎಂಥ ರುಚಿ~ ಎಂದು ಹೊಗಳಿದರು.ಹತ್ತು ದಿನಗಳ ಕಾಲ ನಡೆದ ಈ ಆಹಾರ ಮೇಳದಲ್ಲಿ ವಾರಾಂತ್ಯದಲ್ಲಂತೂ ಕಿಕ್ಕಿರಿದ ಜನರನ್ನು ಕಂಡಾಗ ಮೇಳದ ಸಂಯೋಜಕರಾದ ಮಂಜುನಾಥ್, ಆಂಬ್ರೋಸ್ ಮತ್ತು ಅಶೋಕ್ ಮುಖದಲ್ಲಿ ಸಂತೃಪ್ತಿಯ ಭಾವ ಎದ್ದು ಕಂಡಿತ್ತು.ಸಾವಯವ ಆಹಾರ ಮೇಳಕ್ಕೆ ನಗರದ ವಿವಿಧ ಭಾಗಗಳಿಂದ ಜನ ಬಂದು ಉಂಡು ಹೋದರೆನ್ನುವುದು ನಿಜ. ಇಲ್ಲಿ ಬಳಸಿದ ತರಕಾರಿಗಳು ಮತ್ತು ಕೋಳಿಗಳು ಮಂಜುನಾಥ್ ಮತ್ತು ಆಂಬ್ರೋಸ್‌ಗೆ  ಸೇರಿದ ಹೊಲದಿಂದ ಹಾಗೂ ಸಾವಯವ ಕೃಷಿ ಮಾಡುವ ಇತರ ಸಂಸ್ಥೆಗಳಿಂದ ಖರೀದಿಸಲಾಗಿತ್ತು ಎನ್ನುವುದೇ ವಿಶೇಷ.ಐಟಿಯಿಂದ ಸಾವಯವಕ್ಕೆ


ಈ ಆಹಾರ ಮೇಳದ ನೇತೃತ್ವ ವಹಿಸಿದ್ದ ಮಂಜುನಾಥ್ ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಎಸ್‌ಎಪಿ (ಸ್ಯಾಪ್) ಕಂಪೆನಿಯ ಕನ್ಸಲ್ಟನ್ಟ್ ಆಗಿ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಒಮ್ಮೆ ಕೇರಳಕ್ಕೆ ಬಂದಾಗ ಆಂಬ್ರೋಸ್ ಅವರ ಪರಿಚಯವಾಯಿತು. ಅವರಿಂದ ಸಾವಯವ ಕೃಷಿಯ ಕುರಿತು ಅರಿತ ಮಂಜುನಾಥ್ ತಲೆಗೆ ಸಾವಯವದ ಗೀಳು ಹತ್ತಿತು.ಅಂದೇ ಹನ್ನೆರಡು ವರ್ಷಗಳ ಅಮೆರಿಕ ವಾಸ, ಕೈತುಂಬಾ ಸಂಬಳ ತರುತ್ತಿದ್ದ ಉದ್ಯೋಗ ತ್ಯಜಿಸಿ ಸೀದಾ ತಾಯ್ನಾಡಿಗೆ ಮರಳಿದರು. ಆಂಬ್ರೋಸ್ ಜೊತೆ ಸೇರಿ ಮೂನ್ನಾರ್ ಬಳಿಯ ಕಾಂತಲ್ಲೂರಿನಲ್ಲಿ ಹತ್ತು ಎಕರೆ ಜಮೀನು ಖರೀದಿಸಿ ಸಾವಯವ ಕೃಷಿ ಆರಂಭಿಸಿದರು.  ತಾವು ಬೆಳೆಯುವ ಉತ್ಪನ್ನಗಳು ಸ್ಥಳೀಯ ಜನರಿಗೇ ಲಭ್ಯವಾಗಬೇಕೆಂಬ ಉದ್ದೇಶದಿಂದ ಕೊಚ್ಚಿಯಲ್ಲಿ ಸಾವಯವ ರೆಸ್ಟೋರೆಂಟ್ ಆರಂಭಿಸಿದರು. ಬಳಿಕ ಅದೇ ಮಾದರಿಯಲ್ಲಿಯೇ ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ `ಲುಮೇರ್~ ರೆಸ್ಟೋರೆಂಟ್ ಆರಂಭಿಸಿದರು. ಅಷ್ಟೇ ಅಲ್ಲದೆ ಈ ಹೋಟೆಲ್‌ಗೆ ಅನುಕೂಲವಾಗಲೆಂದೇ ಎಂಟು ತಿಂಗಳ ಹಿಂದೆ ನಗರದ ಹೊರವಲಯದಲ್ಲಿ ಎರಡು ಎಕರೆ ಜಾಗ ಖರೀದಿಸಿ ಅಲ್ಲಿ ವಿವಿಧ ರೀತಿಯ ಸೊಪ್ಪು ಹಾಗೂ ನಾಟಿ ಕೋಳಿಗಳನ್ನು ಬೆಳೆಸತೊಡಗಿದರು.`ಲುಮೇರ್~ ಎಂದರೆ ಫ್ರೆಂಚ್ ಭಾಷೆಯಲ್ಲಿ ಬೆಳಕು ಎಂದರ್ಥ. ಸಾವಯವ ಕೃಷಿ, ಸಾವಯವ ಆಹಾರ ಮತ್ತು ಸಾವಯವ ಜೀವನಪದ್ಧತಿಯತ್ತ ಜನರ ಬೆಳಕು ಹರಿಯಲಿ ಎಂಬ ಉದ್ದೇಶದಿಂದ ಈ ಹೆಸರನ್ನಿಡಲಾಗಿದೆ ಎನ್ನುತ್ತಾರೆ ಮಂಜುನಾಥ್.`ನಮ್ಮದು ಉದ್ದಿಮೆ ಎನ್ನುವುದಕ್ಕಿಂತಲೂ ಸಾವಯವ ಕೃಷಿ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಾಮಾಜಿಕ ಜವಾಬ್ದಾರಿ. ಸಾವಯವ ಕೃಷಿಯ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಇಂದಿನ ಅಗತ್ಯ ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವುದು ನಮ್ಮ ಉದ್ದೇಶ~ ಎನ್ನುತ್ತಾರೆ ಅವರು.ಸಂಪೂರ್ಣ ಸಾವಯವ

`ಲುಮೇರ್~ನಲ್ಲಿ ದೊರೆಯುವ ಎಲ್ಲಾ ಆಹಾರ ಸಂಪೂರ್ಣ ಸಾವಯವ. ತುಮಕೂರಿನ ಅಕ್ಷಯಕಲ್ಪದಿಂದ ಹಾಲು ಸರಬರಾಜಾಗುತ್ತದೆ. ಇದೇ ಹಾಲಿನಿಂದ ಮೊಸರು ಮತ್ತು ಬೆಣ್ಣೆಯನ್ನು ತಯಾರಿಸಲಾಗುತ್ತದೆ. ಮೂನ್ನಾರ್‌ನಲ್ಲಿನ ಇವರ ಹೊಲವಲ್ಲದೆ ಕೊಡೈಕನಾಲ್ ಮತ್ತು ಊಟಿಯಿಂದ ಹಣ್ಣುಹಂಪಲುಗಳು ಬರುತ್ತವೆ. ಹೈದರಾಬಾದ್‌ನಿಂದ ಹಾಗೂ ಜೈಪುರದಿಂದ ಅಕ್ಕಿ, ಗೋಧಿಹಿಟ್ಟು, ಬೇಳೆಗಳು ಸರಬರಾಜಾಗುತ್ತವೆ. ಮಲ್ಲೇಶ್ವರದ ಸಹಜ ಸಮೃದ್ಧ ಸಂಸ್ಥೆಯಿಂದಲೂ ಅಕ್ಕಿ ಖರೀದಿಸುತ್ತೇವೆ ಎಂದು ವಿವರಿಸುತ್ತಾರೆ ಮಂಜುನಾಥ್.`ಸಾವಯವ ಆಹಾರ ಎಂದರೆ ಉಪ್ಪು, ಹುಳಿ ಖಾರ ಸೇರಿಸದೆ ತಯಾರಿಸಿದ ಆಹಾರ ಅಲ್ಲ. ಸಮೀಪದ ರೆಸ್ಟೋರೆಂಟ್‌ಗಳಲ್ಲಿ ದೊರೆಯುವ ಅದೇ ಆಹಾರ ನಮ್ಮ ಹೋಟೆಲ್‌ನಲ್ಲಿ ದೊರೆಯುತ್ತದೆ.ಆದರೆ ರುಚಿಯಲ್ಲಿ ವ್ಯತ್ಯಾಸವಿರುತ್ತದೆ~ ಎನ್ನುತ್ತಾರೆ ಅವರು.ರೀಟೇಲ್ ಮಳಿಗೆ

ಲುಮೇರ್ ಸಾವಯವ ಉತ್ಪನ್ನಗಳ ರೀಟೇಲ್ ಸ್ಟೋರ್ ಹಾಗೂ ಬೇಕರಿಯನ್ನೂ ಒಳಗೊಂಡಿದೆ. ಸಾವಯವ ಉತ್ಪನ್ನಗಳಿಂದ ತಯಾರಿಸಿದ ಆದರೆ ಮೈದಾ ಆದಷ್ಟೂ ಕಡಿಮೆ ಬಳಸಿ ತಯಾರಿಸಿದ ಬ್ರೆಡ್, ಕೇಕ್, ಟಾರ್ಟ್ ಹಾಗೂ ಮಫಿನ್ಸ್ ಬೇಕರಿಯಲ್ಲಿ ದೊರೆತರೆ, ಉಳಿದ ವಸ್ತುಗಳು ರೀಟೇಲ್ ಸ್ಟೋರ್‌ನಲ್ಲಿ ದೊರೆಯುತ್ತವೆ. ಸಾವಯವ ಕಾಸ್ಮೆಟಿಕ್‌ಗಳೂ ಇಲ್ಲಿ ಲಭ್ಯ.ಸಾವಯವ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರ ಅನುಕೂಲಕ್ಕೆ ಆನ್‌ಲೈನ್ ಪೋರ್ಟಲ್ ಒಂದನ್ನು ಲುಮೇರ್ ಆರಂಭಿಸಿದೆ. ಈ ಪೋರ್ಟಲ್‌ನಲ್ಲಿ ಜನ ನೋಂದಣಿ ಮಾಡಿ ಆರ್ಡರ್ ನೀಡಿದಲ್ಲಿ ಮನೆಬಾಗಿಲಿಗೆ ವಸ್ತುಗಳನ್ನು ತಲುಪಿಸುವ ವ್ಯವಸ್ಥೆಯನ್ನೂ ಲುಮೇರ್ ಮಾಡುತ್ತದೆ. ಆದರೆ ಸದ್ಯಕ್ಕೆ ಸುತ್ತಲಿನ ಪ್ರದೇಶಗಳಿಗೆ ಮಾತ್ರ ಸೇವೆಯನ್ನುಸೀಮಿತಗೊಳಿಸಲಾಗಿದೆ ಎನ್ನುತ್ತಾರೆ ಮಂಜುನಾಥ್. 6

ಲುಮೇರ್‌ನಲ್ಲಿ ಕೇರಳ, ಮಂಗಳೂರು, ಬಂಗಾಳಿ, ಥಾಯ್, ಚೈನೀಸ್, ಕಾಂಟಿನೆಂಟಲ್ ಹೀಗೆ ಹಲವು ಪ್ರದೇಶದ ಆಹಾರ ಲಭ್ಯ.ಮಾಹಿತಿಗೆ: 6537 2244,  90350 19804, ವೆಬ್‌ಸೈಟ್ ವಿಳಾಸ: www.lumiere.co.in

www.lumiere.co.in/loginshopping.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.