ಸೋಮವಾರ, ಸೆಪ್ಟೆಂಬರ್ 16, 2019
24 °C

ಕೈಕೊಟ್ಟ ಮುಂಗಾರು: ಕ್ಷೀಣಿಸುತ್ತಿದೆ ಅಂತರ್ಜಲ

Published:
Updated:

ಚಳ್ಳಕೆರೆ: ಸದಾ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಬಿರುದಾಂಕಿತ ಚಳ್ಳಕೆರೆ ತಾಲ್ಲೂಕು ಪ್ರಸಕ್ತ ಮುಂಗಾರು ಮಳೆ ಆಗದೇ ಇರುವುದರಿಂದ ಈ ಭಾಗದಲ್ಲಿ ಅಂತರ್ಜಲಮಟ್ಟ ಕ್ಷೀಣಿಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಗೋಮಾಳ ಸೇರಿದಂತೆ ಸರ್ಕಾರಿ ಜಮೀನುಗಳಲ್ಲಿ ಸರ್ಕಾರ ಕೊಳವೆ ಬಾವಿಗಳನ್ನು ಕೊರೆಸಿ ಕೈಪಂಪ್‌ಗಳನ್ನು ಅಳವಡಿಸಲಾಗಿತ್ತು.

ಇಂತಹ ಕೈಪಂಪ್‌ಗಳು ಮಳೆಯಾಧಾರಿತ ಆಗಿರುವುದರಿಂದ ಮಳೆ ಬಂದಾಗ ಅಂತರ್ಜಲ ಮಟ್ಟ ಹೆಚ್ಚಿ ಕೈಪಂಪ್‌ಗಳಲ್ಲಿ ನೀರು ಬರುತ್ತಿತ್ತು.ಆದರೆ, ಈ ಬಾರಿ ಸಂಪೂರ್ಣವಾಗಿ ಮಳೆ ಆಗದೇ ಇರುವುದರಿಂದ ಕೈಪಂಪ್‌ಗಳಲ್ಲಿ ನೀರು ಬರುತ್ತಿಲ್ಲ. ಹಾಗೇಯೇ ರೈತನ ಜಮೀನುಗಳೂ ಸಹ  ಬರಡಾಗಿ ಹೋಗಿವೆ. ಕುರಿ, ಮೇಕೆ, ಹಸು, ದನ, ಎಮ್ಮೆಗಳು ಮೇವಿಗಾಗಿ ಪರದಾಡುವ ಭೀಕರ ಪರಿಸ್ಥಿತ ಬಂದೊದಗುವ ಸ್ಥಿತಿ ನಿರ್ಮಾಣ ಆಗುತ್ತಿರುವುದು ಕಂಡುಬರುತ್ತಿದೆ. ಇದ್ದ ಒಣ ಹುಲ್ಲನ್ನು ಮೇಯಲು ಅಡವಿಗೆ ಹೋದ ಜಾನುವಾರುಗಳಿಗೆ ಕುಡಿಯುವ ನೀರು ಸಿಗದಂತಹ ದುಃಸ್ಥಿತಿ ಇದೆ.ಅಡವಿಯಲ್ಲಿ ಜನ-ಜಾನುವಾರುಗಳ ಉಪಯೋಗಕ್ಕೆ ಕೊರೆಸಿರುವ ಕೈಪಂಪ್‌ಗಳು ಬತ್ತಿ ಹೋಗಿವೆ. ಕಾಪರಹಳ್ಳಿ, ಬಡವನಹಳ್ಳಿ ಕಾವಲ್, ಹುಲಿಕುಂಟೆ, ಸಾಣೀಕೆರೆಯಿಂದ ಬೆಳೆಗೆರೆ ಮಾರ್ಗವಾಗಿ ಹೋಗುವ ಬಹುತೇಕ ಹಳ್ಳಿಗಳ ಗೋಮಾಳಗಳಲ್ಲಿ ನಿರ್ಮಿಸಿರುವ ಕೈಪಂಪ್‌ಗಳಲ್ಲಿ ಕುಡಿಯಲು ಒಂದು ಹನಿ ನೀರು ಹೊರಬರುತ್ತಿಲ್ಲ.ಇನ್ನು ಕೆಲವೇ ದಿನಗಳಲ್ಲಿ ಜಾನುವಾರುಗಳ ಸಮೇತ ಜನರು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಗ್ರಾಮೀಣ ಭಾಗದ ರೈತರನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ.ಮುಂಗಾರು ಬಿತ್ತನೆ ಸಮಯದಲ್ಲಿ ತಾಲ್ಲೂಕಿನ ನಾಯಕನಹಟ್ಟಿ, ತಳಕು, ಹೋಬಳಿಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ಅಲ್ಪಪ್ರಮಾಣದಲ್ಲಿ ಆದ ಮಳೆಯನ್ನೇ ನಂಬಿಕೊಂಡು ಆ ಭಾಗದ ರೈತರು ಶೇಂಗಾ ಬಿತ್ತನೆ ಕಾರ್ಯ ಮಾಡಿದ್ದರು. ಆದರೆ, ಇಲ್ಲಿಯೂ ಸಕಾಲಕ್ಕೆ ಮಳೆಯಾಗದ ಕಾರಣ ಬಿತ್ತಿದ ಬೀಜ ಬೆಳೆ ಕೊಡುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ.ಕಸಬಾ, ಪರಶುರಾಂಪುರ ಹೋಬಳಿಗಳಲ್ಲಿ ಸಂಪೂರ್ಣವಾಗಿ ಮಳೆ ಇಲ್ಲದ ಕಾರಣ ಬಿತ್ತನೆಗೆ ಸಿದ್ದತೆ ಮಾಡಿಕೊಂಡಿದ್ದ ರೈತರು ಶೇಂಗಾ ಬೀಜಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಿ ಕೈತೊಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿರುವ ಕೈಪಂಪ್‌ಗಳು ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ರೈತರು ಗುಳೇ ಹೊರಡಲು ಸಜ್ಜಾಗುತ್ತಿದ್ದಾರೆ.ಇಷ್ಟಾದರೂ ಸರ್ಕಾರ ಮಾತ್ರ ಬರಪೀಡಿತ ಪ್ರದೇಶ ಎಂದು ಘೋಷಿಸಲು ಮೀನ ಮೇಷ ಎಣಿಸುತ್ತಿರುವುದು ಏಕೆ? ಎಂದು ಪ್ರಶ್ನಿಸುತ್ತಾರೆ ರೈತ ಮುಖಂಡ ಕೆ.ಪಿ. ಭೂತಯ್ಯ. ಈ ಭಾಗದ ರೈತರು ಮಳೆಯನ್ನು ಆಶ್ರಯಿಸಿ ವ್ಯವಸಾಯ ಮಾಡುವುದರಿಂದ ಪ್ರತೀ ವರ್ಷವೂ ಮಳೆಯ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಸರ್ಕಾರ ಈ ಭಾಗದ ರೈತರಿಗೆ ಶ್ವಾಶತ ಪರಿಹಾರ ಕಂಡು ಹಿಡಿಯಬೇಕು ಎಂಬ ರೈತ ಸಂಘದ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.ಸದ್ಯದ ಪರಿಸ್ಥಿತಿಯಲ್ಲಿ ಕೈಪಂಪ್‌ಗಳು ಬತ್ತಿಹೋಗಿವೆ. ಮುಂದಿನ ದಿನಗಳಲ್ಲಿ ನೀರಾವರಿಗಳಲ್ಲಿ ಕೊರೆಸಿರುವ ಬೋರ್‌ವೆಲ್‌ಗಳು ಕೈಕೊಡುವ ದಿನಗಳು ದೂರವಿಲ್ಲ. ಅದ್ದರಿಂದ, ಈ ಭಾಗದ ರೈತರಿಗೆ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಹಾಗೂ ಬರಪೀಡಿತ ಪ್ರದೇಶ ಎಂದು ಘೋಷಿಸಿ, ಕಾಮಗಾರಿಗಳನ್ನು ಕೈಗೆತ್ತಿಕೊಂಡು ದುಡಿಯುವ ವರ್ಗಕ್ಕೆ ಕೆಲಸ ಕೊಡಬೇಕು.ಈಗಾಗಲೇ ಬಿತ್ತನೆ ಬೀಜಗಳನ್ನು ಮಾರಿ ಕೈಸುಟ್ಟುಕೊಂಡಿರುವ ರೈತರಿಗೆ ಅಗತ್ಯ ನೆರವು ಕಲ್ಪಿಸಲು ಸರ್ಕಾರ ಮುಂದೆ ಬರಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.

  

Post Comments (+)