ಶುಕ್ರವಾರ, ಮೇ 27, 2022
21 °C

ಕೈಗಾರಿಕಾ ವಲಯದಲ್ಲಿ ಮತ್ತೆ ಗರಿಗೆದರಿದ ನಿರೀಕ್ಷೆ

ಪ್ರಕಾಶ ಕುಗ್ವೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜಕೀಯ ಶಕ್ತಿಕೇಂದ್ರವಾಗಿ ಮೆರೆಯುತ್ತಿರುವ ಶಿವಮೊಗ್ಗ ಜಿಲ್ಲೆ, ಕೈಗಾರಿಕೆಗಳ ಕೇಂದ್ರವಾಗಿ ಬೆಳೆಯುವ ವಿಫುಲ ಅವಕಾಶಗಳಿದ್ದರೂ ಅದು ಸಾಧ್ಯವಾಗುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ, ಅಧಿಕಾರಶಾಹಿ ಧೋರಣೆಗಳಿಂದಾಗಿ ಶಿವಮೊಗ್ಗ ಕೈಗಾರಿಕಾ ಶಕ್ತಿಯಾಗಿ ರೂಪುಗೊಳ್ಳುತ್ತಿಲ್ಲ.ಕಳೆದ ವರ್ಷದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಜಿಲ್ಲೆಯ ಕೈಗಾರಿಕಾ ನಕ್ಷೆಯಲ್ಲಿ ಹೊಸ ನಿರೀಕ್ಷೆಗಳನ್ನೇ ಹುಟ್ಟಿಸಿತ್ತು. ಸರ್ಕಾರವೂ ಸಾಕಷ್ಟು ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಕೊನೆ ಗಳಿಗೆಯಲ್ಲಿ ಕೇವಲ 8 ಘಟಕಗಳ ಸ್ಥಾಪನೆಗೆ ಅನುಮೋದನೆ ದೊರಕಿತ್ತು. ಈಗ ಮತ್ತೊಂದು ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ಎದುರಾಗಿದೆ. ಈಗ ಮತ್ತೆ ಜಿಲ್ಲೆಯ ಕೈಗಾರಿಕಾ ವಲಯದಲ್ಲಿ ನಿರೀಕ್ಷೆಗಳು ಗರಿಗೆದರಿವೆ.ಕಳೆದ ಜೂನ್‌ನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮೋದನೆಗೊಂಡ ಯೋಜನೆಗಳ ಪೈಕಿ ಈಗ ಕೇವಲ ಮೂರಷ್ಟೇ ಚಾಲನೆ ಪಡೆಯುತ್ತಿವೆ. ಅದರಲ್ಲಿ ಒಂದು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರಗೊಂಡಿದೆ. ಉಳಿದ ಯೋಜನೆಗಳ ಅನುಷ್ಠಾನಕ್ಕೆ ಇಚ್ಛಾಶಕ್ತಿ ಕೊರತೆ ಅಡ್ಡವಾಗಿದೆ.ಶಿವಮೊಗ್ಗ ತಾಲ್ಲೂಕು ನಿಧಿಗೆಯ 250 ಎಕರೆ ಪ್ರದೇಶದಲ್ಲಿ ಶಾಹಿ ಎಕ್ಸ್‌ಫೋರ್ಟ್ ಪ್ರೈ ಲಿಮಿಟೆಡ್ ರೂ. 600 ಕೋಟಿ ಬಂಡವಾಳದೊಂದಿಗೆ ಸುಮಾರು 10ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಮಗ್ರ ಸಿದ್ಧ ಉಡುಪು ತಯಾರಿಕಾ ಘಟಕ ಸ್ಥಾಪಿಸಿದ್ದು, ಇನ್ನಷ್ಟೇ ಘಟಕ ಕಾರ್ಯಾರಂಭ ಮಾಡಬೇಕಿದೆ.

 

ಪ್ರೀಮಿಯಂ ಫಾರ್ಮ್ ಫ್ರೆಶ್ ಪ್ರೊಡ್ಯೂಸ್ ಪ್ರೈ ಲಿಮಿಟೆಡ್‌ಗೆ, ರೂ. 104.94 ಕೋಟಿ ಬಂಡವಾಳದೊಂದಿಗೆ ಸುಮಾರು 220 ಜನರಿಗೆ ಉದ್ಯೋಗಾವಕಾಶ ನೀಡುವ ಹಣ್ಣು ಮತ್ತು ತರಕಾರಿ ಮಾರಾಟ ಘಟಕ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ 60 ಎಕರೆ ಜಮೀನು ನೀಡಿದೆ. ಅದು ಆರಂಭವಾಗುವ ಲಕ್ಷಣಗಳು ಈಗಷ್ಟೇ ಗೋಚರಿಸುತ್ತಿವೆ.ಹಾಗೆಯೇ, ಸಾಗರ ತಾಲ್ಲೂಕಿನ ಮಲ್ಲಂದೂರಿನ 9.13 ಎಕರೆ ಪ್ರದೇಶದಲ್ಲಿ ಮಲ್ಲಂದೂರಿನ ಸಂತೋಷ್ ಆಗ್ರೋ ಇಂಡಿಸ್ಟ್ರೀಸ್ ರೂ. 14 ಕೋಟಿ ವೆಚ್ಚದಲ್ಲಿ ಸುಮಾರು 60 ಜನರಿಗೆ ಉದ್ಯೋಗ ಒದಗಿಸುವ ರೈಸ್‌ಮಿಲ್ ಆರಂಭಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ ಸ್ಟೀಲ್ ಪೈಪ್ ಉತ್ಪಾದನೆಯ ನವದೆಹಲಿಯ ಸೂರ್ಯ ವಿಜಯನಗರ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ ಕಂಪೆನಿಗೆ, ಅದು ಕೇಳಿದ 100 ಎಕರೆ ಜಾಗ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಜೈವಿಕ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಒಪ್ಪಂದಕ್ಕೆ ಸಹಿ ಮಾಡಿದ್ದ ಸಿಎಫ್ ಬಯೋಮಾಸ್ ಪ್ರೈ ಲಿಮಿಟೆಡ್‌ಗೆ 60 ಎಕರೆ ಜಾಗ ಇನ್ನೂ ನೀಡಿಲ್ಲ.

 ಟ್ಯೂಬ್‌ಲೈಟ್, ಸಿಎಫ್‌ಎಲ್ ಬಲ್ಫ್, ಲ್ಯಾಂಪ್ ಉತ್ಪಾದಿಸುವ ಸೂರ್ಯ ರೋಶಿನಿ ಪ್ರೈ ಲಿಮಿಟೆಡ್‌ಗೆ ಬೇಕಾದ 25 ಎಕರೆ ಜಾಗ ಭೂಸ್ವಾಧೀನ ಮಾಡಿಲ್ಲ. ಸಿಲಿಕಾನ್ ಕಾರ್ಬೈಡ್ ಉತ್ಪಾದಿಸುವ ಕೆವಿಎಂ ಕಾಬೋಡ್ರಂ ಕಂಪೆನಿಗೆ ಬೇಕಾದ 19.38 ಎಕರೆ ಜಾಗವನ್ನೂ ನೀಡಿಲ್ಲ.

 

ಜಿಲ್ಲೆಯಲ್ಲಿ ಆಯನೂರು ಹತ್ತಿರದ ಮಲಗೊಪ್ಪದಲ್ಲಿ ಸಗಣಿಯಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿದ್ದ ಮೈಸೂರು ಮರ್ಕ್‌ನ್‌ಟೈಲ್ ಕೋಂ, ಲಿಮಿಟೆಡ್ ಕಂಪೆನಿ ಈಗ ಈ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರಿಸಿದೆ.ಈ ಇಲ್ಲಗಳ ಮಧ್ಯೆ ಹೆಚ್ಚಿನ ಭೂಮಿ ಬೇಡದ ಬಹುತೇಕ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲೇ ಕಾರ್ಯನಿರ್ವಹಿಸಲು ಸಾಧ್ಯವಾಗುವಂತಹ ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲು ಈ ಬಾರಿ ಸರ್ಕಾರ ನಿರ್ಧರಿಸಿದೆ.ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದ ಟೆಕ್ನೋ ರಿಂಗ್ಸ್ ಕಂಪೆನಿ ರೂ. 10 ಕೋಟಿ ವೆಚ್ಚದಲ್ಲಿ ಆಟೋ ಕಾಂಪೋನೆಂಟ್ಸ್ ಘಟಕ ಸ್ಥಾಪನೆ ಮಾಡಲು ಮುಂದೆ ಬಂದಿದೆ. ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದ ಈಶ್ವರ್ ಸ್ಟೀಲ್ ಟೆಕ್ ಪ್ರೈ ಲಿಮಿಟೆಡ್ ಕಂಪೆನಿ ರೂ. 5 ಕೋಟಿ ವೆಚ್ಚದಲ್ಲಿ ಸ್ಟೀಲ್ ಕಾಸ್ಟಿಂಗ್ ಘಟಕ ಸ್ಥಾಪನೆಗೆ, ರೂ. 4.24 ಕೋಟಿ ವೆಚ್ಚದಲ್ಲಿ ಭದ್ರಾವತಿಯ ವೀರಾಪುರ ಭದ್ರಾ ಕಾಲೋನಿಯಲ್ಲಿ ಬತ್ತದ ಹಲ್ಲಿಂಗ್ ಘಟಕ ಸ್ಥಾಪನೆಗೆ ಅಲ್ಲಿನ ಸಂತೋಷ್ ಟ್ರೇಡರ್ಸ್‌ ಮುಂದೆ ಬಂದಿದೆ.ಹಾಗೆಯೇ ಶಿವಮೊಗ್ಗ ದುರ್ಗಿಗುಡಿಯ ಓಂಕಾರ್ ಕ್ರೈಯೋ ಬಯೋ ಟೆಕ್ನಾಲಜಿಸ್ ರೂ. 4 ಕೋಟಿ ವೆಚ್ಚದಲ್ಲಿ ಶಿವಮೊಗ್ಗದ ಸಿರಿಗೆರೆಯಲ್ಲಿ ಕ್ರೈಯೋ ಟೆಕ್ನಾಲಜಿಸ್ ಘಟಕ ಸ್ಥಾಪಿಸಲು ಹಾಗೂ ಮಾಚೇನಹಳ್ಳಿಯ ಪ್ರಗತಿ ಸ್ಟೀಲ್ ಕಾಸ್ಟಿಂಗ್ ಪ್ರೈ ಲಿಮಿಟೆಡ್, ರೂ. 4 ಕೋಟಿ ವೆಚ್ಚದಲ್ಲಿ ಪೌಂಡ್ರಿ ಘಟಕ ಸ್ಥಾಪನೆಗೆ ಇದೇ ಜೂನ್ 6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯುಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಲಿವೆ.ಇಷ್ಟೇ ಅಲ್ಲದೇ ಇನ್ನಷ್ಟು ಯೋಜನೆಗಳಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರಲಿದ್ದಾರೆ. ಸಮಾವೇಶ ಮುಗಿದ ಮೇಲೆ ಸಮಗ್ರ ಚಿತ್ರಣ ಸಿಗುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಜಂಟಿ ನಿರ್ದೇಶಕ ಶ್ರೀನಿವಾಸ್ `ಪ್ರಜಾವಾಣಿ~ಗೆ ತಿಳಿಸಿದರು.ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಜಾಗವಿದೆ. ಆದರೂ ಬಂಡವಾಳ ಹೂಡಿಕೆದಾರರನ್ನು ಸೆಳೆಯುವಲ್ಲಿ ಸಫಲವಾಗುತ್ತಿಲ್ಲ. ಆದರೆ, ಈ ಬಾರಿ ಹೆಚ್ಚಿನ ನಿರೀಕ್ಷೆ ಇದೆ ಎನ್ನುತ್ತಾರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣಶೆಟ್ಟಿ.ತೋರಿಕೆಗಿಂತ, ವಾಸ್ತವವಾಗಿ ಬಂಡವಾಳ ಹೂಡಿ ಕೈಗಾರಿಕೆ ಸ್ಥಾಪಿಸಲು ಬರುವವರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಸಮಾವೇಶಕ್ಕೂ ಮೊದಲು ಕೆಲ ರಿಯಾಯ್ತಿಗಳನ್ನು ನೀಡುವ ಬಗ್ಗೆ, ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವ ಬಗ್ಗೆ ಆಶ್ವಾಸನೆ ನೀಡಬೇಕು ಎಂಬ ಅಭಿಪ್ರಾಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಕೆ.ವಿ. ವಸಂತಕುಮಾರ್ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.