ಶುಕ್ರವಾರ, ಜೂನ್ 18, 2021
22 °C

ಕೈವಾರ ತಾತಯ್ಯನ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೈವಾರ ನಾಡಿನೆಲ್ಲೆಡೆ ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಸಿದ್ಧವಾದ ಧರ್ಮಕ್ಷೇತ್ರ.ಅಮರನಾರಾಯಣ ಸ್ವಾಮಿ, ಭೀಮಲಿಂಗೇಶ್ವರ, ಲಕ್ಷ್ಮೀನರಸಿಂಹ ಸ್ವಾಮಿ ಮೊದಲಾದ ದೇವಾಲಯಗಳು ಇಲ್ಲಿವೆ. ಈ ಗ್ರಾಮದಲ್ಲಿ ಜನಿಸಿ ತಮ್ಮ ಆಧ್ಯಾತ್ಮಿಕ  ಸಾಧನೆಯಿಂದ ಹೆಸರಾಗಿದ್ದ ಯೋಗಿನಾರೇಯಣರ (ಕಾಲಜ್ಞಾನಿ ಕೈವಾರ ತಾತಯ್ಯ) ಮಠ ವರ್ಷದುದ್ದಕ್ಕೂ ಅನೇಕ ಧಾರ್ಮಿಕ  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರನ್ನು ಸೆಳೆಯುತ್ತಿದೆ.ಕಾಲಜ್ಞಾನಿ ನಾರೇಯಣರು ಅಮರನಾರಾಯಣ ದೇವರ ಪರಮ ಭಕ್ತ. ಗ್ರಾಮೀಣ ಜನರೊಂದಿಗೆ ಬಾಳಿ ಬದುಕಿದ ಅವರು ವೃತ್ತಿಯಿಂದ  ಬಳೆಗಾರರು. ಬದುಕಿನ ಎಲ್ಲ ಸಿಹಿ ಕಹಿಗಳನ್ನು  ಅನುಭವಿಸಿದ ನಂತರ ಆಧ್ಯಾತ್ಮದ ಕಡೆಗೆ ಹೊರಳಿ ನರಸಿಂಹ ಬೆಟ್ಟದ ಗುಡಿಯಲ್ಲಿ ತಪಸ್ಸು ಮಾಡಿ ಸಿದ್ಧ ಪಡೆದರು.

 

ತಾವು ಪಡೆದದ್ದನ್ನು ಇತರರಿಗೂ ಹಂಚಲು ಸಮಾಜಮುಖಿ ಸರಳ ಸಂಗತಿಗಳನ್ನು ಓದು ಬರಹ ಬಾರದವರಿಗೂ ಅರ್ಥವಾಗುವ ರೀತಿಯಲ್ಲಿ ಬರೆದು ತಾತಯ್ಯನೆಂಬ ಹೆಸರನ್ನು ಗಳಿಸಿದರು. ತಾತನವರ ತತ್ವಪದಗಳು ಹಳ್ಳಿಗಾಡಿನ ಜನಕ್ಕೆ ಸುಲಭವಾಗಿ ಅರ್ಥವಾಗುತ್ತಿತ್ತು.ಹೀಗಾಗಿ ಅವರನ್ನು ಗುರುಗಳೆಂದು ಒಪ್ಪಿಕೊಂಡು ಅವರಿಂದ ತಮ್ಮ ಸಮಸ್ಯೆ ಸಂಕಷ್ಟಗಳಿಗೆ ಆಧ್ಯಾತ್ಮಿಕ ಪರಿಹಾರವನ್ನು ಪಡೆಯುವ  ಶಿಷ್ಯರ ಸಂಖ್ಯೆ ದಿನೇ ದಿನೇ ಹೆಚ್ಚಾಯಿತು.ಊರೂರು ಸುತ್ತಿ ಬಳೆ ಮಾರುತ್ತಿದ್ದ  ನಾರೇಯಣಪ್ಪ ನಂತರ ನಾರೇಯಣ ತಾತಯ್ಯನಾಗಿ ಉತ್ತಮ ಜೀವನಕ್ಕೆ ಅಗತ್ಯವಾದ ವಿಷಯಗಳನ್ನು  ತತ್ವಪದಗಳ ಮೂಲಕ ಹೇಳುತ್ತಾ ಅನೇಕ ಗ್ರಾಮಗಳನ್ನು ಸುತ್ತಿದರು. ಕೊನೆಗೆ  ಕೈವಾರದಲ್ಲಿ ಪುಟ್ಟ ಮಠವನ್ನು ಅವರ  ಅನುಯಾಯಿಗಳು ನಿರ್ಮಿಸಿಕೊಟ್ಟರು. ಆ ಮಠ  ಈಗ ಹೆಮ್ಮರವಾಗಿ ತಾತಯ್ಯನವರ ಚಿಂತನೆಗಳನ್ನು ಸಂದೇಶಗಳನ್ನು ಜನಮಾನಸದಲ್ಲಿ  ಬಿತ್ತುತ್ತಿದೆ.ಮುಂಜಾನೆಯಿಂದ ರಾತ್ರಿಯ ವರೆಗೆ ತೆರೆದಿರುವ ಯೋಗಿನಾರೇಯಣರ ಮಠ  ನಾದಸುಧಾರಸ, ನಗರ ಸಂಕೀರ್ತನೆ, ಸರಳ  ವಿವಾಹ, ಗುರು ಪೌರ್ಣಿಮೆ, ಸಂಗೀತ ಮಹೋತ್ಸವ, ನಿತ್ಯ ಭಜನೆ, ನಿತ್ಯ ದಾಸೋಹ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ನಿತ್ಯ ಬೆಳಿಗ್ಗೆ 11ರಿಂದ ಸಂಜೆ 7 ಗಂಟೆ ವರೆಗೂ ದಾಸರ ಪದಗಳು, ತಾತಯ್ಯನವರ ತತ್ವಪದಗಳು, ಪೋತನ ಭಾಗವತ ಒಳಗೊಂಡ  ನಾದಸುಧಾರಸ ಧಾರ್ಮಿಕ ಸಂಗೀತ ನಿರಂತರವಾಗಿ ನಡೆಯುವುದು ಕೈವಾರದ ವಿಶೇಷ. ವರ್ಷಕೊಮ್ಮೆ ನಡೆಯುವ ತಾತಯ್ಯನವರ ರಥೋತ್ಸವಕ್ಕೆ ದೂರದೂರದ  ಭಕ್ತರು ಆಗಮಿಸುತ್ತಾರೆ.ಇವರಲ್ಲಿ ಬಹುಮಂದಿ ರೈತಾಪಿ ಜನರು. ತಾವು ಬೆಳೆದ ಕಾಳುಕಡಿ, ತರಕಾರಿಗಳನ್ನು ರಥೋತ್ಸವದ ಸಂದರ್ಭದಲ್ಲಿ  ನಿತ್ಯ ದಾಸೋಹಕ್ಕಾಗಿ ಅರ್ಪಿಸುವುದು ರೂಢಿ. ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕಗಳ ಭಜನಾ ತಂಡಗಳು ರಥೋತ್ಸವಕ್ಕಾಗಿ ಆಗಮಿಸುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.