ಗುರುವಾರ , ಮೇ 13, 2021
35 °C
*ಮರಗಳಿಗೆ ಹಾನಿ *ಶೇಂಗಾ ಬೆಳೆಗೂ ಹಬ್ಬುವ ಆತಂಕ

`ಕೊಂಡಲಿ'ಗೆ ಹುಣಸೆ ಬಲಿ: ಕಂಗೆಟ್ಟ ರೈತ

ವಿಶೇಷ ವರದಿ / ಪ್ರಜಾವಾಣಿ ವಾರ್ತೆ /ಎಚ್.ಜೆ.ಪದ್ಮರಾಜು Updated:

ಅಕ್ಷರ ಗಾತ್ರ : | |

ತೋವಿನಕೆರೆ: ಈಗ ಹುಣಸೆ ಮರಗಳು ಬರಿದಾಗಿವೆ. ಹೂವು ತುಂಬಿ ಕಂಗೊಳಿಸುತ್ತಿದ್ದ ನಾಲ್ಕರಿಂದ ಐದು ಸಾವಿರ ಹುಣಸೆ ಮರಗಳು ಹೀಚು ಕಟ್ಟದೆ ಕೊಂಡಲಿ ಹುಳುಗಳ ಬಾಧೆಯಿಂದ ತತ್ತರಿಸಿವೆ.ವರ್ಷಕ್ಕೊಮ್ಮೆ ರೈತರ ಕೈ ಖರ್ಚಿಗೆ ಸಿಗುತ್ತಿದ್ದ ಕಾಸು ಮುಂದಿನ ವರ್ಷ ಸಿಗದಾಗಿದೆ. ಹುಣಸೆ ಹೂವಿನಿಂದ ಹೀಚಾಗಿ, ಕಾಯಿ ಹಣ್ಣಾಗುವ ಹಂತ ಮುಕ್ತಾಯಗೊಳ್ಳುವುದು ಡಿಸೆಂಬರ್-ಜನವರಿಯಲ್ಲಿ.ಈ ನಡುವೆ ಮರ ಕಾಯಿ ಕಟ್ಟಿರುವುದನ್ನು ನೋಡಿದ ಮಧ್ಯವರ್ತಿಗಳು ಅಕ್ಟೋಬರ್- ನವೆಂಬರ್ ಅವಧಿಯಲ್ಲೇ ರೈತರ ಬಳಿ ವ್ಯಾಪಾರ ಕುದುರಿಸುತ್ತಿದ್ದರು. ಇದರಿಂದ ಇಬ್ಬರಿಗೂ ಲಾಭವಾಗುತ್ತಿತ್ತು.ಆದರೆ ಇದೀಗ ಎಲ್ಲವೂ ತಲೆಕೆಳಗಾಗಿದೆ. ಹುಣಸೆ ನಂಬಿ ವಿವಿಧ ವ್ಯವಹಾರ ನಡೆಸಿದ್ದ ರೈತನಿಗೆ ದಿಕ್ಕು ತೋಚದಾಗಿದ್ದರೆ; ವ್ಯಾಪಾರಿಗೆ ಜೀವನ ನಿರ್ವಹಣೆಯ ಪ್ರಶ್ನೆ ಎದುರಾಗಿದೆ.ಈ ಸಮಸ್ಯೆ ಜಿಲ್ಲೆಯ ಬೇರೆ ಕಡೆ ಕಂಡು ಬಂದಿಲ್ಲ. ತೋಟಗಾರಿಕೆ, ಕೃಷಿ ಅಧಿಕಾರಿಗಳು ಇಪ್ಪತ್ತು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ನೀಡಿದ್ದ ಸಲಹೆ ಉಪಯೋಗಕ್ಕೆ ಬಂದಿಲ್ಲ. ಕೊಂಡಲಿ ಹುಳುಗಳು ಒಂದು ಕಡೆಯಿಂದ ಇಡೀ ಮರಗಳ ಹೂವನ್ನೇ ತಿಂದು ನಾಶಪಡಿಸಿವೆ.ಪ್ರತಿ ಮರದಲ್ಲೂ ಸಾವಿರಾರು ಹುಳುಗಳು ಕಂಡು ಬರುತ್ತಿವೆ. ಹದಿನೈದು ದಿನಕ್ಕೂ ಹೆಚ್ಚು ಮರದ ಮೇಲೆ ಇದ್ದು ಹೂವು-ಚಿಗುರನ್ನು ತಿಂದವು.ಮೇ ಕೊನೆ ದಿನ ಬಿರುಸಾಗಿ ಸುರಿದ ಮಳೆಯಿಂದ ಕೆಲ ಹುಳುಗಳು ಸತ್ತು ಬಿದ್ದವು. ಇದರ ಜತೆ ಕಾಗೆಗಳು ಹುಳುಗಳನ್ನು ತಿಂದವು. ಇದನ್ನು ನೋಡಿದ ರೈತರು ಸಮಸ್ಯೆ ಬಗೆಹರಿಯಿತು ಅಂದುಕೊಂಡರು.ಆದರೂ ಹುಳುಗಳ ಸಂಖ್ಯೆ ದಿನೇ ದಿನೇ ಹೆಚ್ಚಿ ಮರದ ಹೂವನ್ನೆಲ್ಲ ಖಾಲಿ ಮಾಡಿವೆ. ಎಲೆಗಳು ಬಲಿತಿರುವ ಕಡೆಗಳಲ್ಲಿ ತಿನ್ನದೆ ಹೊಂಗೆ, ಹುಲುವೆ, ಬೀಟೆ ಮರಗಳ ಚಿಗುರು ತಿನ್ನುತ್ತಿರುವುದು ಕಂಡು ಬಂದಿದೆ. ಈ ಬೆಳವಣಿಗೆ ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.ಆಲಿಕಲ್ಲು ಸಹಿತ ಎಲ್ಲೆಲ್ಲಿ ಭರಣಿ ಮಳೆ ಸುರಿದಿದೆ ಆ ಭಾಗದಲ್ಲಿ ಮಾತ್ರ ಕೊಂಡಲಿ ಹುಳುಗಳು ಕಂಡು ಬಂದಿವೆ. ಬೇರೆ ಕಡೆ ಈ ರೀತಿ ಅನಾಹುತ ನಡೆದಿಲ್ಲ ಎಂದು ಓಬನಹಳ್ಳಿಯ ಜಯಣ್ಣ ಬರಿದಾದ ಹುಣಸೆ ಮರಗಳನ್ನು ತೋರಿಸಿದರು.ತುಮಕೂರು ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ಅಜ್ಜೇನಹಳ್ಳಿಯ ಲತಾಶ್ರೀ ಕಳೆದ ವರ್ಷ ಹುಣಸೆ ಮರಗಳಿಂದ ರೂ. 1.50 ಲಕ್ಷಕ್ಕೂ ಹೆಚ್ಚು ಹಣ ನಮ್ಮ ತಂದೆಗೆ ಬಂದಿತ್ತು. ಆದರೆ ಈ ವರ್ಷ ಒಂದು ರೂಪಾಯಿ ಸಹ ಬರುವುದಿಲ್ಲ ಎಂದು ನೊಂದು ನುಡಿದರು.ಮರಗಳಲ್ಲಿ ಕಳೆದ ಸಾಲಿಗಿಂತ ಈ ವರ್ಷ ಹೂವು ಚೆನ್ನಾಗಿತ್ತು. ಬೆಳೆ ನಂಬಿಕೊಂಡು ಸಾಲ ಮಾಡಿ ಮಗನ ಮದುವೆ ಮಾಡಿದ್ದೇನೆ. ಬೆಳೆ ಕೈಕೊಟ್ಟಿದೆ. ಮಾಡಿರುವ ಸಾಲ ಹೇಗೆ ತೀರಿಸಬೇಕು ಎಂದು ಅರ್ಥವಾಗುತ್ತಿಲ್ಲ ಎನ್ನುವ ನೋವು ಗಿಡದಾಗಲಹಳ್ಳಿ ಹೊನ್ನೇಶಪ್ಪ ಅವರದ್ದು.ಸಮಸ್ಯೆ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ತೋವಿನಕೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಎಂ.ಹರೀಶ್, ಈ ಕೊಂಡಲಿ ಹುಳಗಳನ್ನು ನಿಯಂತ್ರಿಸದಿದ್ದರೆ ಮುಂದೆ ಶೇಂಗಾ ಬೆಳೆ ಸೇರಿದಂತೆ ಇತರ ಬೆಳೆಗಳ ಇಳುವರಿ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಆತಂಕ ವ್ಯಕ್ತಪಡಿಸಿದರು.ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಳುಗಳ ನಿಯಂತ್ರಣ ಮಾಡಲು ಸೂಚಿಸಿದ ಸಲಹೆಗಳನ್ನು ರೈತರು ಪಾಲಿಸದಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ ಎಂದರು.

ಅವರ‌್ನ ಬಿಟ್ ಇವರ‌್ನ ಬಿಟ್ ಅವರ‌್ಯಾರು...?

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಸಾದ್ ಅವರನ್ನು ಸಂಪರ್ಕಿಸಿ, ಕೊಂಡಲಿ ಹುಳು ಬಾಧೆ ಕುರಿತು ಪ್ರಶ್ನಿಸಿದಾಗ, `ನಮ್ಮ ತಾಲ್ಲೂಕು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೃಷಿಕರಿಗೆ ಬಿಎಚ್‌ಸಿ ಪುಡಿಯನ್ನು ಮರದ ಸುತ್ತಲೂ ಹಾಕಲು ತಿಳಿಸಿದ್ದಾರೆ' ಎಂದರು.`ಯಾವ ಅಧಿಕಾರಿ, ಯಾವ ಸ್ಥಳಕ್ಕೆ ಹೋಗಿದ್ದರು, ಯಾವ ರೈತರನ್ನು ಭೇಟಿಯಾಗಿದ್ದರು?' ಎಂದು ಮರು ಪ್ರಶ್ನಿಸಿದಾಗ, `ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದರು. ರೈತರಿಗೆ ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಅಧಿಕಾರಿಗಳಿಗೆ ಈ ದಿನವೇ ಸ್ಥಳಕ್ಕೆ ಹೋಗಲು ತಿಳಿಸುತ್ತೇನೆ' ಎಂದು ನುಡಿದರು.`ಕೊಂಡಲಿ ಹುಳು ಬಾಧೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಹುಣಸೆ ಸಸಿಗಳನ್ನು ಅರಣ್ಯ ಇಲಾಖೆಯವರು ವಿತರಿಸುವುದರಿಂದ ನಮಗಿಂತ ಅವರಿಗೇ ಚೆನ್ನಾಗಿ ಗೊತ್ತು' ಎಂದು ಕೊರಟಗೆರೆ ತಾಲ್ಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಗೀತಾ ಹೇಳಿದರು.ಹುಣಸೆ ಸಮಸ್ಯೆ ಕುರಿತು ವಲಯ ಸಂರಕ್ಷಣಾಧಿಕಾರಿ ರಮೇಶ್ ಅವರನ್ನು ಸಂಪರ್ಕಿಸಿದಾಗ, `ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ನಾನು ಬುಧವಾರವೇ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತೇನೆ. ಈಗಾಗಲೇ ಕೊಂಡಲಿ ಹುಳುಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ' ಎಂದು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.