ಶುಕ್ರವಾರ, ಮೇ 14, 2021
31 °C

ಕೊನೆಯ ಕಾಲದಲ್ಲಿಯಾದರೂ ಅಮ್ಮಾ ಎನಬಾರದೇ?

ರವೀಂದ್ರ ಭಟ್ಟ, ಮೈಸೂರು. Updated:

ಅಕ್ಷರ ಗಾತ್ರ : | |

ಕೆಟ್ಟ ಮಕ್ಕಳು ಇರಬಹುದಂತೆ. ಆದರೆ ಕೆಟ್ಟ ತಾಯಿ ಇರುವುದಕ್ಕೆ ಸಾಧ್ಯವಿಲ್ಲ ಎಂಬ ಮಾತಿದೆ. ಅದಕ್ಕೊಂದು ನಿದರ್ಶನ ಇಲ್ಲಿದೆ. ಮದ್ದೂರು ತಾಲ್ಲೂಕಿನ ಬನ್ನಹಳ್ಳಿಯಲ್ಲಿ ಈಚೆಗೆ ವೃದ್ಧ ದಂಪತಿಗಳ ಆತ್ಮಹತ್ಯೆ ಈ ಮಾತನ್ನು ಮತ್ತೊಮ್ಮೆ ರುಜುವಾತುಗೊಳಿಸಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿಯೂ ಕೌಟುಂಬಿಕ ವ್ಯವಸ್ಥೆ ಕುಸಿಯುತ್ತಿರುವ ಅಪಾಯದ ಛಾಯೆ ಬೀಡುಬಿಟ್ಟಿರುವುದನ್ನೂ ಸಾಬೀತು ಪಡಿಸುತ್ತದೆ.

ಅತ್ತೆ ಸೊಸೆಯರ ಜಗಳ ಹೊಸದೇನಲ್ಲ. ಅದಕ್ಕೆ ಪುರಾತನ ಕಾಲದಿಂದಲೂ ಪುರಾವೆಗಳು ಇವೆ. ಆದರೂ ಈ ಘಟನೆ ಮಾತ್ರ ತಾಯಿಯ ಹೃದಯ ವೈಶಾಲ್ಯವನ್ನು ಬಿಚ್ಚಿಡುತ್ತದೆ. ಒಂದು ಕ್ಷಣ `ನಾವು ನಮ್ಮ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತಿದ್ದೇವೆ~ ಎನ್ನುವ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ.  ಆ ದಂಪತಿಗೆ ಎರಡೂವರೆ ಎಕರೆ ಜಮೀನು ಇತ್ತು. ಅದರಲ್ಲಿ ಬೇಸಾಯ ಮಾಡುತ್ತಾ ಅವರು ನೆಮ್ಮದಿಯಿಂದ ಸಂಸಾರವನ್ನು ನಡೆಸಿದ್ದರು. ಮಗನನ್ನು ಚೆನ್ನಾಗಿ ಓದಿಸಿದರಲ್ಲದೆ ಪ್ರಾಪ್ತ ವಯಸ್ಸಿನಲ್ಲಿ ಮದುವೆಯನ್ನೂ ಮಾಡಿದರು. ಮದುವೆಯಾದ ಹೊಸದರಲ್ಲಿ ಎಲ್ಲ ಸರಿಯಾಗಿತ್ತು. ಅತ್ತೆ ಸೊಸೆ, ಮಾವ ಎಲ್ಲರೂ ಅನ್ಯೋನ್ಯವಾಗಿಯೇ ಇದ್ದರು. ಆದರೆ ಕಾಲ ಕಳೆದಂತೆ ಅತ್ತೆ ಸೊಸೆ ನಡುವೆ ಜಗಳ ಆರಂಭವಾಯಿತು. ಅತ್ತೆಯ ಮೇಲೆ ಸೊಸೆಯ ಸವಾರಿ ನಡೆಯತೊಡಗಿತು. ಮುದುಕ ಮುದುಕಿ ಮನೆಯಲ್ಲಿ ಇರುವುದು ವ್ಯರ್ಥ ಎನ್ನುವ ಭಾವನೆ ಮೊಳೆಯತೊಡಗಿತು. ವೃದ್ಧ ದಂಪತಿಗಳು ಮನೆಯಲ್ಲಿ ಇರುವುದೇ ಕಷ್ಟವಾಯಿತು. ಪ್ರತಿ ದಿನವೂ ಜಗಳ. ಇದಕ್ಕೆ ಮಗ ಸುಮ್ಮನಿದ್ದ. ಅತ್ತ ತಾಯಿಯನ್ನು ಬೆಂಬಲಿಸಲಿಲ್ಲ. ವಯಸ್ಸಾದ ಅಪ್ಪನ ಬಗ್ಗೆಯೂ ಕಾಳಜಿ ತೋರಲಿಲ್ಲ. ಆದರೂ ಆ ತಾಯಿ ಸುಮ್ಮನಿದ್ದಳು. ತಂದೆಯೂ ಮಾತಿಗೆ ಮಾತು ಬೆಳೆಸಲಿಲ್ಲ. ಆದರೂ ಒಂದು ದಿನ ಈ ವೃದ್ಧ ದಂಪತಿಯನ್ನು ಮನೆಯಿಂದ ಹೊರಕ್ಕೆ ಅಟ್ಟಲಾಯಿತು.ತಮ್ಮ ಜೀವನಕ್ಕೆ ಆಸರೆಯಾಗಿದ್ದ ಮಗ ತಮ್ಮನ್ನು ಮನೆಯಿಂದ ಹೊರಕ್ಕೆ ಹಾಕಿದ್ದು ವೃದ್ಧ ದಂಪತಿಗೆ ಭಾರಿ ನೋವು ಉಂಟು ಮಾಡಿತು. ಆ ಹಿರಿಯ ಜೀವಗಳ ಪಾಲಿಗೆ ಮಗನೊಬ್ಬನೇ ಪ್ರೀತಿಯ ಸೆಲೆಯಾಗಿದ್ದ. ಅವನ ಬದುಕೇ ಅವರ ಬದುಕೂ ಆಗಿತ್ತು.ಅವನಲ್ಲಿಯೇ ಅವರು ತಮ್ಮ ಕನಸುಗಳನ್ನೆಲ್ಲಾ ಕಂಡಿದ್ದರು. ಆಶಾ ಗೋಪುರ ಕಟ್ಟಿಕೊಂಡಿದ್ದರು. ಆದರೆ ಅದು ಠುಸ್ ಎಂದು ಒಡೆದು ಹೋಯಿತು. ತಮ್ಮ ಜೀವನದ ಎಲ್ಲವನ್ನೂ ಧಾರೆ ಎರೆದು ಆತನನ್ನು ಅವರು ಪೋಷಿಸಿದ್ದರು. ಈಗ ಅವನೇ ತಮ್ಮನ್ನು ಮನೆಯಿಂದ ದೂರ ಕಳುಹಿಸಿದ್ದು ಅವರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು.ಆದರೂ, ಇಂದಲ್ಲ ನಾಳೆ ಮಗ ತಮ್ಮ ಹತ್ತಿರ ಬಂದಾನು ಎಂಬ ಆಸೆಯಿಂದ ಕೆಲವು ದಿನಗಳ ಕಾಲ ಅವರು ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು.ಒಬ್ಬರಿಗೊಬ್ಬರು ಆಸರೆಯಾಗಿ ಜೀವ ಇರುವಷ್ಟು ದಿನ ಬದುಕಿರಬೇಕು ಎಂದೂ ನಿರ್ಧರಿಸಿಕೊಂಡಿದ್ದರು. ಆದರೆ ವಯಸ್ಸಿನ ಫಲವಾಗಿ ಅವರ ಆರೋಗ್ಯ ಕ್ಷೀಣಿಸಿತು. ಇನ್ನೊಬ್ಬರ ಸಹಾಯ ಬೇಕಾಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಬೇಕಾಗಿತ್ತು. ಆದರೆ ಮಗ ಅತ್ತ ಕಡೆ ಸುಳಿಯಲೇ ಇಲ್ಲ. ಕೊನೆಯ ಕಾಲದಲ್ಲಿಯಾದರೂ ಮಗ ಬಂದು ತಮ್ಮನ್ನು ಸಂತೈಸಬಹುದು ಎನ್ನುವ ನಂಬಿಕೆಯೂ ಕುಸಿದು ಹೋಯಿತು. ಇದರಿಂದ ಆ ವೃದ್ಧ ದಂಪತಿಗೆ ಬದುಕಿನ ಮೇಲೆ ಇದ್ದ ಎಲ್ಲ ಆಸೆಗಳು ಕಮರಿ ಹೋದವು. ಅದಕ್ಕೆ ಆ.28ರಂದು ತಮ್ಮ ಬದುಕಿಗೆ ಮಂಗಳ ಹಾಡಲು ಆ ಹಿರಿಯ ಜೀವಿಗಳು ನಿರ್ಧರಿಸಿಬಿಟ್ಟರು.ಮಗನ ಬಗ್ಗೆ ಅವರ ಅಂತರಂಗದ ಪ್ರೀತಿಯ ಒರತೆ ಖಾಲಿಯಾಗಿರಲಿಲ್ಲ. ತಾವು ಸತ್ತ ನಂತರ ಮಗ ಕಷ್ಟ ಪಡಬಾರದು ಎಂದು ತಮ್ಮ ಅಂತ್ಯ ಸಂಸ್ಕಾರಕ್ಕೆ ಬೇಕಾಗಿದ್ದ ಎಲ್ಲ ವಸ್ತುಗಳನ್ನೂ ಅವರು ಸಿದ್ಧ ಮಾಡಿಕೊಂಡಿದ್ದರು. ಕೊನೆಯ ಕಾಲದಲ್ಲಿ ತಮ್ಮನ್ನು ನೋಡಲು ಬಾರದೇ ಇದ್ದ ಮಗನಿಗೆ ತಮ್ಮ ಸಾವಿನ ನಂತರ ಶವ ಸಂಸ್ಕಾರಕ್ಕೆ ವಸ್ತುಗಳನ್ನು ಜೋಡಿಸುವ ಕಷ್ಟವನ್ನಾದರೂ ಯಾಕೆ ಬಿಡಬೇಕು ಎಂದು ಅವರು ಅಂದುಕೊಂಡಿರಬೇಕು. ಅದಕ್ಕಾಗಿಯೇ ಅಂತ್ಯ ಸಂಸ್ಕಾರಕ್ಕೆ ಅಗತ್ಯವಾದ ಹೂವಿನ ಹಾರ, ಎಲೆ ಅಡಿಕೆ, ಗಂಧದಕಡ್ಡಿ, ಅರಿಶಿಣ, ಕುಂಕುಮ, ಚಟ್ಟದ ನಾಲ್ಕು ಮೂಲೆಯಲ್ಲಿ ಕಟ್ಟಲು ಬೇಕಾದ ಎಳೆನೀರು ಎಲ್ಲ ವಸ್ತುಗಳನ್ನೂ ಸಿದ್ಧಮಾಡಿಕೊಂಡಿದ್ದರು.ಆತ್ಮಹತ್ಯೆಗೆ ನಿರ್ಧರಿಸಿದ್ದ ಈ ವೃದ್ಧ ದಂಪತಿ ಮದ್ದೂರು ಪಟ್ಟಣಕ್ಕೆ ತೆರಳಿ ವಿಷದ ಬಾಟಲಿಯ ಜೊತೆಗೆ ಶವ ಸಂಸ್ಕಾರಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿ ಮಾಡಿಕೊಂಡು ಬಂದಿದ್ದರು. ತಾವು ಸತ್ತಿರುವ ವಿಷಯ ಯಾರಿಗೂ ತಿಳಿಯದೇ ಶವಗಳು ಕೊಳೆತು ಹೋಗಬಹುದು ಎನ್ನುವುದಕ್ಕಾಗಿ ಮುನ್ನೆಚ್ಚರಿಕೆಯನ್ನೂ ಅವರು ತೆಗೆದುಕೊಂಡಿದ್ದರು. ಆ.28ರ ರಾತ್ರಿ ವೃದ್ಧ ಮಹಿಳೆ ತಮ್ಮ ಜಮೀನಿನ ಪಕ್ಕದ ಜಮೀನು ಮಾಲೀಕರ ಮನೆಗೆ ತೆರಳಿ `ಪತಿಗೆ ಆರೋಗ್ಯ ಸರಿ ಇಲ್ಲ. ದಯವಿಟ್ಟು ನಾಳೆ ಬೆಳಿಗ್ಗೆ ನಮ್ಮ ಮನೆಗೆ ಬನ್ನಿ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಕರಿಸಿ~ ಎಂದು ಮನವಿ ಮಾಡಿಕೊಂಡಿದ್ದರು. ಹೀಗೆ ತಮ್ಮ ಸಂಸ್ಕಾರಕ್ಕೆ ಎಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದ ಆ ವೃದ್ಧ ದಂಪತಿ ಆ.28ರ ರಾತ್ರಿ ವಿಷ ಸೇವಿಸಿ ತಮ್ಮ ಬದುಕಿಗೆ ಮಂಗಳ ಹಾಡಿಕೊಂಡರು.ಆಸ್ಪತ್ರೆಗೆ ವೃದ್ಧನನ್ನು ಕರೆದುಕೊಂಡು ಹೋಗಲು ಪಕ್ಕದ ಜಮೀನಿನವರು ಮಾರನೇ ದಿನ ಬೆಳಿಗ್ಗೆ ಬಂದಾಗ ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಬಹಿರಂಗವಾಯಿತು. ನಂತರ ಗ್ರಾಮಸ್ಥರು ಆ ದಂಪತಿಯ ಮಗನನ್ನು ಕರೆಸಿ ಮೊದಲೇ ಸಿದ್ಧಪಡಿಸಿದ್ದ ಪರಿಕರಗಳನ್ನೇ ಬಳಸಿ ವೃದ್ಧ ದಂಪತಿಗಳ ಅಂತ್ಯ ಸಂಸ್ಕಾರ ನಡೆಸಿದರು.ಇದು ಕೇವಲ ಈ ದಂಪತಿ ಕತೆ ಮಾತ್ರ ಅಲ್ಲ. ಅತ್ತ ಸಾಯಲೂ ಆಗದೆ ಇತ್ತ ಬದುಕಲೂ ಆಗದೆ ಅದೆಷ್ಟೋ ವೃದ್ಧ ದಂಪತಿಗಳಿವೆ. ಕುಟುಂಬ ವ್ಯವಸ್ಥೆ ಈಗ ಅಷ್ಟು ಶಿಥಿಲವಾಗಿದೆ. ವೃದ್ಧ ದಂಪತಿಗಳಿಗೆ ಕೊನೆಯ ಕಾಲಕ್ಕೆ ಬೇಕಾಗಿದ್ದು ಮಕ್ಕಳ ಪ್ರೀತಿಯ ಆಸರೆ. ಒಂದು ಬೆಚ್ಚಗಿನ ಸ್ಪರ್ಶ ಅಷ್ಟೆ. ಹಿರಿಯ ಜೀವಿಗಳ ಇಂತಹ ಸಣ್ಣ ಸಣ್ಣ ಬಯಕೆ ಎಷ್ಟು ಮಂದಿ ಮಕ್ಕಳಿಗೆ ಅರ್ಥವಾದೀತು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.