ಶನಿವಾರ, ಮೇ 15, 2021
24 °C
ದರಸಗುಪ್ಪೆ-ಕಪರನಕೊಪ್ಪಲು ಜೋಡಿ ಗ್ರಾಮ

ಕೊಳ, ಸ್ಮಶಾನವೂ ಅತಿಕ್ರಮ!

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ದರಸಗುಪ್ಪೆ ಹಾಗೂ ಕಪರನಕೊಪ್ಪಲು ವಿಶಿಷ್ಟ ಜೋಡಿ ಗ್ರಾಮಗಳು. ಹೊಸದಾಗಿ ಇಲ್ಲಿಗೆ ಬಂದರೆ ಯಾವುದು ದರಸಗುಪ್ಪೆ, ಮತ್ಯಾವುದು ಕಪರನಕೊಪ್ಪಲು ಎಂಬುದನ್ನು ತಿಳಿಯುವುದು ಬಲು ಕಷ್ಟ. ಒಂದರ ಒಳಗೆ ಮತ್ತೊಂದು ಬೆರೆತು ಹೋಗಿರುವ ಈ ಜೋಡಿ ಗ್ರಾಮಗಳಲ್ಲಿ ಗ್ರಾಮಠಾಣಾ, ಕೊಳ, ಸ್ಮಶಾನಗಳ ಅತಿಕ್ರಮದ ಬಗ್ಗೆ ಸಾಕಷ್ಟು ದೂರುಗಳಿವೆ.ಎರಡೂ ಗ್ರಾಮಗಳದ್ದೂ ಸೇರಿ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸ್ಮಶಾನ ಇರಲಿ, ಅದರ ಕುರುಹೂ ಇಲ್ಲಿಲ್ಲ. ಜಮೀನು ಇದ್ದವರು ತಮ್ಮ ಜಮೀನುಗಳಲ್ಲಿ, ಇಲ್ಲದಿದ್ದವರು ಊರ ಸುತ್ತ ಹರಿಯುವ ಚಿಕ್ಕದೇವರಾಯ ನಾಲೆ ಏರಿಯಲ್ಲಿ ಶವ ಸಂಸ್ಕಾರ ಮಾಡುತ್ತಾರೆ. `ಈ ಹಿಂದೆ ಎರಡೂ ಗ್ರಾಮಗಳಿಗೆ ಸೇರಿದ್ದ ಸ್ಮಶಾನ ಜಾಗವನ್ನು ಪ್ರಭಾವಿ ವ್ಯಕ್ತಿಗಳು ಅತಿಕ್ರಮಿಸಿದ್ದಾರೆ. ಅದನ್ನು ತೆರವು ಮಾಡಿಸುವ ಕಾರ್ಯ ಅಧಿಕಾರಿಗಳಿಂದ ಆಗುತ್ತಿಲ್ಲ. ದರಸಗುಪ್ಪೆ ವ್ಯಾಪ್ತಿಗೆ ಸೇರಿದ ತೊಳಸಿ ಶೆಟ್ಟರ ಕೊಳ ಹಾಗೂ ಕಪರನಕೊಪ್ಪಲು ವ್ಯಾಪ್ತಿಯ ಬನ್ನಿಮರದ ಕೊಳಗಳನ್ನೂ ಸಂಪೂರ್ಣ ಮುಚ್ಚಿ ತೋಟ ಮಾಡಿಕೊಳ್ಳಲಾಗಿದೆ' ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀಧರ್ (ತಮ್ಮಣ್ಣ) ಹೇಳುತ್ತಾರೆ.ಈ ಎರಡೂ ಗ್ರಾಮಗಳ ಮಧ್ಯೆ, ಆಯಕಟ್ಟಿನ ಜಾಗದಲ್ಲಿ ಒಂದು ಎಕರೆಗೂ ಹೆಚ್ಚು ಸರ್ಕಾರಿ (ಗ್ರಾಮಠಾಣಾ) ಜಾಗ ಇದೆ. ಈಗ ಶೇ 50ರ ಷ್ಟು ಅತಿಕ್ರಮಕ್ಕೆ ಒಳಗಾಗಿದೆ. `ಈ ಜಾಗದ ಹದ್ದುಬಸ್ತು ಗೊತ್ತುಪಡಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ವಿಫಲವಾಗಿದೆ. ಸದರಿ ಜಾಗವನ್ನು ನಿವೇಶನವಾಗಿ ಹಂಚುವ, ಇಲ್ಲವೆ ಸಮುದಾಯ ಭವನ ನಿರ್ಮಿಸುವ ಪ್ರಸ್ತಾವ ಈ ಹಿಂದೆ ಇತ್ತು. ಆದರೆ ಈಗ ಅದರ ಬಗ್ಗೆ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ಹಾಗಾಗಿ ಗ್ರಾಮಠಾಣಾ ಜಾಗ ಸಿಕ್ಕಿದವರಿಗೆ ಸೀರುಂಡೆ ಎಂಬಂತಾಗಿದೆ. ಮಡಿವಾಳ ಹಾಗೂ ವಿಶ್ವಕರ್ಮ ಜನಾಂಗದ ಸ್ಮಶಾನ ಕೂಡ ಮಾಯವಾಗಿದ್ದು, ಶವ ಸಂಸ್ಕಾರಕ್ಕೆ ತೊಂದರೆಯಾಗಿದೆ' ಎನ್ನುವುದು ಗ್ರಾಮಸ್ಥರ ದೂರು.ಕಪರನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪಕ್ಕದ ರಸ್ತೆ ತೀರಾ ಹಾಳಾಗಿದೆ. ದಲಿತ ಕಾಲೋನಿಯ ಯಾವೊಂದು ಬೀದಿಯೂ ಅಭಿವೃದ್ಧಿ ಕಂಡಿಲ್ಲ. ನೀರಿನ ಟ್ಯಾಂಕ್ ಶಿಥಿಲಗೊಂಡಿದೆ. ನಲ್ಲಿಗಳಲ್ಲಿ ಕೆಲವೊಮ್ಮೆ ಪಾಚಿ ಮಿಶ್ರಿತ ನೀರು ಬರುತ್ತಿದ್ದು, ದೂರು ನೀಡಿದರೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಗಮನ ಹರಿಸುತ್ತಿಲ್ಲ. ಕಪರನಕೊಪ್ಪಲು ಗರಡಿ ಮನೆ ಪಾಳು ಬಿದ್ದಿದೆ. ಸಿಡಿಎಸ್ ನಾಲೆಯ ಸೋಪಾನ ಕಟ್ಟೆ ಹಾಳಾಗಿದೆ. ಆರೋಗ್ಯ ಸಹಾಯಕಿಯರ ವಸತಿ ಗೃಹ ಕಳೆದ ಮೂರು ವರ್ಷಗಳಿಂದ ಅನಾಥವಾಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಇದರಿಂದ ಹೆರಿಗೆ ಇತರ ತುರ್ತು ಸಂದರ್ಭಗಳಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಸಮಸ್ಯೆಗಳ ಪಟ್ಟಿಯನ್ನು ಮುಂದಿಡುತ್ತಾರೆ.  ಗ್ರಾ.ಪಂ. ಬೇರೆ ಬೇರೆ: ದರಸಗುಪ್ಪೆ- ಕಪರನಕೊಪ್ಪಲು ಜೋಡಿ ಗ್ರಾಮಗಳು ಪ್ರತ್ಯೇಕ ಗ್ರಾಮ ಪಂಚಾಯಿತಿಗೆ ಸೇರಿವೆ. ದರಸಗುಪ್ಪೆ ಅದೇ ಗ್ರಾಮ ಪಂಚಾಯಿತಿ ಸೇರಿದ್ದರೆ, ಕಪರನಕೊಪ್ಪಲು 4 ಕಿ.ಮೀ. ದೂರದ ಕಿರಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.

ಕಪರನಕೊಪ್ಪಲು ಗ್ರಾಮದಲ್ಲಿ ಸ್ಮಶಾನ ಇರುವ ಬಗ್ಗೆ ಯಾವುದೇ ದಾಖಲೆ ಇಲ್ಲ' ಎಂದು ಕಿರಂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಣ್ಣಗೌಡ ಹೇಳಿದರೆ, `ದರಸಗುಪ್ಪೆಯಲ್ಲೂ ಸ್ಮಶಾನ ಇರುವ ಬಗ್ಗೆ ನಮ್ಮಲ್ಲಿ  ಪುರಾವೆಗಳಿಲ್ಲ' ಎಂದು ಆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪಗೌಡ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.