ಶುಕ್ರವಾರ, ಮೇ 27, 2022
31 °C
ಶಿರಸಿ: ಕೃಷಿ ವಿ.ವಿ.ಯಿಂದ 2 ಕೋಟಿ ವೆಚ್ಚದಲ್ಲಿ ಶೀಘ್ರ ಆರಂಭ

ಕೋಕೊ ಸಂಸ್ಕರಣೆ-ಸಂಶೋಧನೆ ಕೇಂದ್ರ

ಪ್ರಜಾವಾಣಿ ವಾರ್ತೆ / ಸಿದ್ದೇಶ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋಕೊ  ಬೆಳೆಯುವ ಪ್ರದೇಶ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ವಿಸ್ತಾರಗೊಳ್ಳುತ್ತಿದ್ದು ಶಿರಸಿಯಲ್ಲಿ ಇದಕ್ಕಾಗಿಯೇ ಪ್ರತ್ಯೇಕವಾಗಿ ಸಂಸ್ಕರಣೆ ಹಾಗೂ ಸಂಶೋಧನಾ ಕೇಂದ್ರ ಆರಂಭಿಸಲು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮುಂದಾಗಿದೆ.`ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ಅಡಿ ಶಿರಸಿಯ ಕೃಷಿ ವಿಸ್ತರಣಾ ಕೇಂದ್ರದ ಆವರಣದಲ್ಲಿ ರೂ 2 ಕೋಟಿ ವೆಚ್ಚದಲ್ಲಿ ಈ ಕೇಂದ್ರ ತಲೆ ಎತ್ತಲಿದೆ. ಈಗಾಗಲೇ ಜಾಗ ಗುರುತಿಸಲಾಗಿದೆ. ಬಹುತೇಕ ಪುತ್ತೂರಿನ ಕ್ಯಾಂಪ್ಕೊ ಮಾದರಿಯಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ.ಆದರೆ ಲಾಭದ ಉದ್ದೇಶ ಇಲ್ಲ. ರೈತರಿಗೆ ಮಾರ್ಗದರ್ಶನ  ನೀಡಲಿದೆ' ಎನ್ನುತ್ತಾರೆ ಕೇಂದ್ರದ ಸ್ಥಾಪನೆ ಜವಾಬ್ದಾರಿ ಹೊತ್ತಿರುವ ವಿ.ವಿ.ಯ ಹಿಂದಿನ ಡೀನ್ ಡಾ. ಮಹದೇವ ಚೆಟ್ಟಿ.`ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಉಪ ಬೆಳೆಯಾಗಿ ಈಗ ಕೋಕೊ  ಬೆಳೆಯುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 1000ಕ್ಕೂ ಹೆಚ್ಚು ರೈತರು ಕೋಕೊ ಬೆಳೆಯುತ್ತಿದ್ದಾರೆ.

ವಿಶ್ವವಿದ್ಯಾಲಯದ ಸಮೀಕ್ಷೆಯಂತೆ 97 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 96 ಟನ್ ಕೋಕೊ  ಬೆಳೆಯಲಾಗುತ್ತಿದೆ. ಉತ್ಪನ್ನವನ್ನು ಘಟ್ಟದ ಕೆಳಗಿನ ರೈತರು ಕ್ಯಾಂಪ್ಕೊಗೆ ಮಾರಾಟ ಮಾಡುತ್ತಿದ್ದಾರೆ.

ಶಿರಸಿ, ಯಲ್ಲಾಪುರ ಪಟ್ಟಣದ ಆಸುಪಾಸಿನ ರೈತರು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಪುತ್ತೂರಿಗೆ ಕೊಂಡೊಯ್ಯುವ ಸಾಗಣೆ ವೆಚ್ಚ ಹಾಗೂ ಸ್ಥಳೀಯವಾಗಿ ಅವೈಜ್ಞಾನಿಕ ಬೆಲೆ ನಿಗದಿ ನಮ್ಮ ಕೇಂದ್ರ ಆರಂಭವಾದರೆ ತಪ್ಪಲಿದೆ' ಎಂದು ಡಾ. ಚಟ್ಟಿ ಹೇಳುತ್ತಾರೆ .ಕೋಕೊ ಬೆಣ್ಣೆ-ಪುಡಿ

ಕೃಷಿ ವಿವಿಯ ಉದ್ದೇಶಿತ ಕೇಂದ್ರದಲ್ಲಿ ಕೋಕೊದಿಂದ ಬೆಣ್ಣೆ ಹಾಗೂ ಪುಡಿ ತಯಾರಿಸಲಾಗುವುದು. ವಿವಿಯ ಆಹಾರ ತಂತ್ರಜ್ಞಾನ ವಿಭಾಗ ಇದನ್ನು ನಿರ್ವಹಿಸಲಿದೆ. ಇಲ್ಲಿ ಉತ್ಪಾದನೆಯಾದ ಬೆಣ್ಣೆ ಹಾಗೂ ಪುಡಿಯನ್ನು ಚಾಕಲೇಟ್ ತಯಾರಿಕೆ ಕೇಂದ್ರಗಳಿಗೆ ರಫ್ತು ಮಾಡಲಾಗುವುದು.

ಜೊತೆಗೆ ಸಣ್ಣ ಸಣ್ಣ ಚಾಕಲೇಟ್ ತಯಾರಿಕಾ ಘಟಕ ಸ್ಥಾಪನೆಗೆ ಬೆಳಗಾರರಿಗೆ ಮಾರ್ಗದರ್ಶನ ನೀಡಿ ಅವರಿಗೂ ಸಂಸ್ಕರಿಸಿದ ಕೋಕೊ ಪೂರೈಸಲಾಗುತ್ತದೆ. ಆರಂಭದಲ್ಲಿ ಇದಕ್ಕೆ ಕ್ಯಾಂಪ್ಕೊ ಘಟಕದಿಂದಲೇ ತಾಂತ್ರಿಕ ನೆರವು ಪಡೆಯುವ ಉದ್ದೇಶವಿದೆ.ಒಂದು ಎಕರೆ ಅಡಿಕೆ ತೋಟದಲ್ಲಿ 200 ಕೋಕೊ ಸಸಿ ನೆಟ್ಟರೆ 4 ವರ್ಷಗಳಲ್ಲಿ ಕಾಯಿ ಬಿಡಲಾರಂಭಿಸುತ್ತದೆ. ಉಪಬೆಳೆಯಾಗಿ ಎಕರೆಗೆ ವಾರ್ಷಿಕ ಕನಿಷ್ಠ ರೂ 35,000 ಪಡೆಯಬಹುದು. ಶಿರಸಿ ಭಾಗದಲ್ಲಿ ವೆನಿಲಾ ಬೆಳೆಗಿದ್ದ ಸ್ಥಾನವನ್ನು ಈಗ ಕೋಕೊ ಹೊಂದಿದೆ. ಕೇಂದ್ರದ ಆವರಣದಲ್ಲಿಯೇ ಉತ್ಕೃಷ್ಟ ದರ್ಜೆಯ ಕೋಕೊ ಸಸಿಗಳನ್ನು ಬೆಳೆಸಿ ಅವುಗಳನ್ನು ಬೆಳೆಗಾರರಿಗೆ ವಿತರಿಸಿ ಬೆಳೆಯುವ ಪ್ರದೇಶವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯನ್ನು ವಿವಿ ಹೊಂದಿದೆ.`ಚಾಕಲೇಟ್ ತಯಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುವ ಕೋಕೊಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಚಾಕೊಲೇಟ್ ಪ್ರಿಯರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಕಡಿಮೆಯಾಗುವ ಪ್ರಶ್ನೆಯೇ ಇಲ್ಲ' ಎಂದು ಡಾ. ಚೆಟ್ಟಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.