ಮಂಗಳವಾರ, ಜೂನ್ 15, 2021
21 °C

ಕೋಡಿಮಠ: 17ರಿಂದ ಮಹದೇಶ್ವರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ತಾಲ್ಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಮಾರ್ಚ್ 17ರಿಂದ 19ರವರೆಗೆ ಮೂರು ದಿನಗಳ ಕಾಲ ಮಹದೇಶ್ವರ ಜಾತ್ರಾ ಮಹೋತ್ಸವ ಹಾಗೂ ಜನ ಜಾಗೃತಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕೋಡಿಮಠದ ಪೀಠಾಧ್ಯಕ್ಷ  ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಠದ ಸಂಪ್ರದಾಯದಂತೆ ಮಾ.17ರಂದು ಬೆಳಿಗ್ಗೆ ಮಹಾ ರುದ್ರಾಭಿಷೇಕ, ಹುಣ್ಣಮೆ ಕಟ್ಟಳೆ, ಜಂಗಮ ಮಹಾಪೂಜೆ, ಸುಕ್ಷೇತ್ರ ಕೋಡಿಮಠ ಪೀಠವನ್ನು ಅಲಕಂರಿಸಿದ 55 ಜಂಗಮವರ್ಯರ ಸ್ಮರಣಾರ್ಥ ಕತೃ ಗದ್ದುಗೆಗೆ ಮಹಾಪೂಜೆ, ಮಹಾಸಿಂಹಾಸನ ಪೂಜೆ, ಅಣ್ಣಾಯಕನಹಳ್ಳಿ ಮತ್ತು ಹಾರನಹಳ್ಳಿ ವಂಶಸ್ಥರಿಂದ ಅನಾದಿ ಕಾಲದಿಂದಲೂ ಮಠದಲ್ಲಿ ನಡೆದುಕೊಂಡು ಬರುತ್ತಿದೆ. ರಜತ ಪಲ್ಲಕ್ಕಿ ಪೂಜೆ ಬೀರೂರು ಟಿ.ಪಿ. ರುದ್ರಾರಾಧ್ಯ ಮತ್ತು ಭಾಗ್ಯಮ್ಮ ಇವರ ಸ್ಮರಣಾರ್ಥ ಅವರ ಮಕ್ಕಳಾದ ಗಣೇಶ್‌ ಪ್ರಸಾದ್‌ ಇವರಿಂದ ಒಂದು ಸಾವಿರದ ಒಂದುನೂರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯ ಲಿದೆ  ಎಂದರು.ಮಾರ್ಚ್ 18ರಂದು ಬೆಳಿಗ್ಗೆ ಮಠದಲ್ಲಿ ವೇದಮೂರ್ತಿ ನೀಲಕಂಠಯ್ಯ, ಶಿವಲಿಂಗ­ಮೂರ್ತಿ ಅವರಿಂದ ಕತೃ ಗದ್ದುಗೆ ಮುಂಭಾಗ ಪುರಾಣ ಪ್ರವಚನ, 8 ಗಂಟೆಗೆ ಸಂಗಮೇಶ್ವರ ಭಜನಾ ಮಂಡಲಿ ನೃತ್ಯದೊಂದಿಗೆ ಶಿವಾನಂದ ಶಿವಯೋಗೀ ರಾಜೇಂದ್ರ ಸ್ವಾಮೀಜಿ ಅವರು ಪಾದಯಾತ್ರೆ ಮೂಲಕ ಹಾರನಹಳ್ಳಿ ಗ್ರಾಮಕ್ಕೆ ತೆರಳಿ ಭಕ್ತರ ಮನೆಯಲ್ಲಿ ಬಿಕ್ಷಾಟನೆ ಮಾಡುವರು. ಸಂಜೆ 6.30 ಗಂಟೆಗೆ ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.ಹಿರೇಮಠದ ಮಹಾಂತಲಿಂಗ ಸ್ವಾಮೀಜಿ, ಹಾನಗಲ್‌ ತಾಲ್ಲೂಕಿನ ಶಿವಯೋಗಿ ಸ್ವಾಮೀಜಿ, ತೊಗರ್ಸಿ ಮಠದ ಮಹಾಂತ ದೇಶೀಕೇಂದ್ರ ಸ್ವಾಮೀಜಿ ಭಾಗವಹಿಸಲಿದ್ದು, ಸಂಪಾದನ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ರಾತ್ರಿ 10ಗಂಟೆಗೆ ಮಹದೇಶ್ವರ ಬೆಟ್ಟದಲ್ಲಿ ಡಿ.ಎಂ. ಕುರ್ಕೆ ಬೂದಿಹಾಲ್‌ ವಿರಕ್ತ ಮಠದ ರಾಜಶೇಖರ ಸ್ವಾಮೀಜಿ ಅವರ ಪಾದಪೂಜೆ ನಡೆಯಲಿದೆ ಎಂದು ಅವರು ಹೇಳಿದರು.ಮಾರ್ಚ್ 19ರಂದು ಬೆಳಿಗ್ಗೆ 6.30 ಗಂಟೆಗೆ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ನೆರವೇರಲಿದೆ. ಬೆಳಿಗ್ಗೆ 8.30 ಗಂಟೆಗೆ ಪ್ರತಿ ವರ್ಷದ ಪದ್ಧತಿಯಂತೆ ಮಠದ ಸನ್ನಿಧಿಯು ಸಕಲ ಬಿರುದಾವಳಿಗಳೊಂದಿಗೆ ಗಿರಿಯಾಪುರದ ಜೆ.ಪಿ. ಜಗದೀಶ್‌ ಅವರ ತಂಡದವರಿಂದ ವೀರಗಾಸೆ ನೃತ್ಯ ಹಾಗೂ ಜನಪದ ಕಲಾ ತಂಡಗಳೊಂದಿಗೆ ಬೆಳ್ಳಿ ಪಲ್ಲಕ್ಕಿಯಲ್ಲಿ ಉತ್ಸವದಲ್ಲಿ ಹಾರನಹಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಪೂಜೆಯ ನಂತರ 12 ಗಂಟೆಗೆ ಮಹದೇಶ್ವರ ಬೆಟ್ಟಕ್ಕೆ ಉತ್ಸವ ತೆರಳಲಿದೆ ಎಂದರು.ಮಧ್ಯಾಹ್ನ 1ಗಂಟೆಗೆ  ಬೆಟ್ಟದಲ್ಲಿ ಗುಗ್ಗಳ ಸೇವೆ, ಹೆಜ್ಜೆ ನಮಸ್ಕಾರ, ದಿಂಡುರುಳು ಸೇವೆ ಬಳಿಕ ಬಂದ ಭಕ್ತಾದಿಗಳಿಗೆ ದಾಸೋಹ ನಡೆಯಲಿದೆ. ಸಂಜೆ 6 ಗಂಟೆಗೆ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಂದ ಅನಾದಿ ನಿರಂಜನ ಜಗದ್ಗುರು ಜಂಗಮ ಪೀಠದ ಮಹಾಸಿಂಹಾಸನಾ­ರೋಹಣ, ಸಂಜೆ 6.30 ಗಂಟೆಗೆ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ  ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.