ಶುಕ್ರವಾರ, ಮೇ 27, 2022
21 °C
`ಸಿಐಐ' ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯಮಂತ್ರಿ

ಕೋಲಾರ, ಗುಲ್ಬರ್ಗದಲ್ಲೂ `ಎನ್‌ಐಎಂಜೆಡ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು ಜಿಲ್ಲೆಗಳಲ್ಲಿ `ಪರಿಕರ ತಯಾರಿಕೆ ಉದ್ಯಮಗಳ ರಾಷ್ಟ್ರೀಯ ಹೂಡಿಕೆ ವಲಯ'(ಎನ್‌ಐಎಂಜೆಡ್) ಸ್ಥಾಪಿಸಲು ಸರ್ಕಾರ ಸಜ್ಜಾಗಿದ್ದು, ಕೇಂದ್ರದಿಂದ ಅನುಮತಿ ಪಡೆಯಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಹೇಳಿದರು.ನಗರದಲ್ಲಿ `ಭಾರತೀಯ ಕೈಗಾರಿಕಾ ಒಕ್ಕೂಟ'ದ(ಸಿಐಐ) ರಾಷ್ಟ್ರೀಯ ಸಮಿತಿ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಅವರು, ಮೊದಲ `ಎನ್‌ಐಎಂಜೆಡ್' ತುಮಕೂರು ಜಿಲ್ಲೆಯಲ್ಲಿ 12 ಸಾವಿರ ಎಕರೆಯಲ್ಲಿ ನೆಲೆಗೊಳ್ಳಲಿದೆ. ಇದಕ್ಕೆ ಈಗಾಗಲೇ ಕೇಂದ್ರ ಸರ್ಕಾರದ ಅನುಮತಿಯೂ ದೊರಕಿದೆ ಎಂದರು.ಪರಿಕರ ತಯಾರಿಕಾ ಉದ್ಯಮ ವಲಯ ದೇಶದ ಕೈಗಾರಿಕಾ ರಂಗದಲ್ಲಿ ಬಹಳ ಪ್ರಮುಖವಾದುದು. ದೇಶದ ಒಟ್ಟಾರೆ ಆಂತರಿಕ ಉತ್ಪಾದನೆ(ಜಿಡಿಪಿ)ಯಲ್ಲಿ ಈ ಕ್ಷೇತ್ರದ ಪಾತ್ರ ದೊಡ್ಡದಿದೆ. ರಾಜ್ಯವೂ ತಯಾರಿಕಾ ವಲಯದ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಇದೇ ನಿಟ್ಟಿನಲ್ಲಿ  ಕೋಲಾರ ಮತ್ತು ಗುಲ್ಬರ್ಗದಲ್ಲಿಯೂ `ಎನ್‌ಐಎಂಜೆಡ್' ಸ್ಥಾಪನೆಗೆ ಪ್ರಯತ್ನಿಸುತ್ತಿದೆ. ಬಂಡವಾಳ ಹೂಡಿಕೆಗೆ ರಾಜ್ಯವನ್ನು ಬಹಳ ಸೂಕ್ತ ಪ್ರದೇಶವಾಗಿಸುವುದಕ್ಕೆ ಸರ್ಕಾರ ಬದ್ಧವಾಗಿದೆ  ಎಂದರು.ಆಧುನಿಕ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕೆ ಮತ್ತು ಸೇವಾ ವಲಯದ ಪಾತ್ರ ದೊಡ್ಡದು. ಎರಡೂ ಕ್ಷೇತ್ರಗಳಿಂದ ಕೆಲವು ದೇಶಗಳ `ಜಿಡಿಪಿ'ಗೆ ಶೇ 70ರಿಂದ 80ರಷ್ಟು ಕೊಡುಗೆ ಸಲ್ಲುತ್ತಿದೆ. ಆದರೆ, ರಾಜ್ಯದ `ಜಿಡಿಪಿ'ಗೆ ಪರಿಕರ ತಯಾರಿಕಾ ಕ್ಷೇತ್ರ ಶೇ 25ಕ್ಕಿಂತ ಕಡಿಮೆ ಮತ್ತು ಸೇವಾ ಕ್ಷೇತ್ರ ಶೇ 59ರಷ್ಟು ಕಾಣಿಕೆ ನೀಡುತ್ತಿವೆ. ಆದರೆ, ಈ ಎರಡೂ ವಲಯ ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿವೆ. ಹಾಗಾಗಿಯೇ ಸರ್ಕಾರವೂ ಈ ಉದ್ಯಮಗಳತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದರು.ವಿದ್ಯುತ್-ಸ್ವಾವಲಂಬನೆ

ಕೈಗಾರಿಕೆ ಸ್ಥಾಪನೆಗೆ ಮೂಲ ಸೌಕರ್ಯ ಒದಗಿಸುವುದರಲ್ಲಿ ಸರ್ಕಾರ ಸದಾ ಮುಂದಿದೆ. ವಿದ್ಯುತ್ ಸರಬರಾಜು ಬಗ್ಗೆ ಉದ್ಯಮಿಗಳು ಚಿಂತಿಸಬೇಕಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಹಲವು ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.ನವೀಕರಿಸಬಹುದಾದ ಮತ್ತು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ರಾಜ್ಯದಲ್ಲಿ ವಿಪುಲ ಅವಕಾಶಗಳಿದ್ದು, ಖಾಸಗಿ ಕಂಪೆನಿಗಳೂ ಈ ವಿಭಾಗದಲ್ಲಿ ಕಾರ್ಯನಿರತವಾಗಿವೆ. ಕರ್ನಾಟಕ 2020ರ ವೇಳೆಗೆ `ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯ' ಎನಿಸಿಕೊಳ್ಳಲಿದೆ. ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ವಿಭಾಗದಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸಲಿದೆ ಎಂದು ಭರವಸೆಯ ಮಾತನಾಡಿದರು.ಗಣಿಗಾರಿಕೆ ಅನುಮತಿ

`
ಟಾಟಾ ಸ್ಟೀಲ್'ನ  ಮುತ್ತುರಾಮನ್ ಅವರು ಕೇಳಿದ ಗಣಿಗಾರಿಕೆ ಅನುಮತಿ ಕುರಿತ ಪ್ರಶ್ನೆಗೆ, `ಕಬ್ಬಿಣದ ಅದಿರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸದ್ಯ ಸಿಬಿಐ ತನಿಖೆ ನಡೆಯುತ್ತಿದೆ. ಹಾಗಿದ್ದೂ ಅದಿರು ಮೌಲ್ಯವರ್ಧಿಸಿ ಉಕ್ಕು ತಯಾರಿಸಲು ಇಚ್ಛಿಸುವ ಕಂಪೆನಿಗಳಿಗೆ ಗಣಿಗಾರಿಕೆಗೆ ಅನುಮತಿ ನೀಡಲು ಅಡ್ಡಿ ಇಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆಯೇ ಸರ್ಕಾರ ನಡೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಉತ್ತರಿಸಿದರು.`ಸಿಐಐ' ಅಧ್ಯಕ್ಷ ಎಸ್.ಗೋಪಾಲಕೃಷ್ಣನ್ ಮನವಿ ಪತ್ರ ಸಲ್ಲಿಸಿದರು. ದೇಶದ ವಿವಿಧೆಡೆ ಪ್ರಮುಖ ಉದ್ಯಮಿಗಳು, `ಸಿಐಐ' ಪ್ರತಿನಿಧಿಗಳು ಇದ್ದರು.

ಜನವರಿಗೆ ನೂತನ ಕೈಗಾರಿಕಾ ನೀತಿ

ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಸಲುವಾಗಿ `ನೂತನ ಕೈಗಾರಿಕಾ ನೀತಿ'ಯನ್ನು ಮುಂದಿನ ಜನವರಿಗೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.ನೂತನ ಕೈಗಾರಿಕಾ ನೀತಿ ರೂಪಿಸುವಲ್ಲಿ ಕೈಗಾರಿಕೆ ವಲಯದ ಪ್ರಾತಿನಿಧಿಕ ಸಂಸ್ಥೆಗಳು ಮತ್ತು ಉದ್ಯಮಿಗಳ ಸಹಕಾರವೂ ಅಗತ್ಯ. ಸದ್ಯ `ಸಿಐಐ' ಸಿದ್ಧಪಡಿಸಿರುವ `ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಪರಿಸ್ಥಿತಿ' ಕುರಿತ ವರದಿಯ ಅಂಶಗಳೂ ನೂತನ ನೀತಿ ರೂಪಿಸುವಲ್ಲಿ ಸಹಕಾರಿಯಾಗಲಿವೆ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.