ಕೋಲ್ಕತ್ತದಲ್ಲಿ ಪರೀಕ್ಷೆಗೆ ಸಲಹೆ

ಮೈಸೂರು: ‘ವಿಷಕಾರಕ ಅಂಶದಿಂದಾಗಿ ವಿವಾದಕ್ಕೀಡಾಗಿರುವ ನೆಸ್ಲೆ ಮ್ಯಾಗಿ ನೂಡಲ್ಸ್ ಮಾದರಿಯನ್ನು ಕೇಂದ್ರ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್ಟಿಆರ್ಐ) ಪರೀಕ್ಷಿಸಲು ನಿಯಮಾನುಸಾರ ಅವಕಾಶ ಇಲ್ಲ. ಹೀಗಾಗಿ, ಮಾದರಿಯನ್ನು ಸಂಬಂಧಪಟ್ಟ ಕೋಲ್ಕತ್ತ ಪ್ರಯೋಗಾಲಯಕ್ಕೆ ರವಾನಿಸಲು ಸೂಚಿಸಲಾಯಿತು’ ಎಂದು ಸಿಎಫ್ಟಿಆರ್ಐ ನಿರ್ದೇಶಕ ಪ್ರೊ.ರಾಮರಾಜಶೇಖರನ್ ತಿಳಿಸಿದರು.
‘ಜೂನ್ 4ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ರಾಜ್ಯದ ಅಧಿಕಾರಿಗಳು ನೆಸ್ಲೆ ಮ್ಯಾಗಿ ನೂಡಲ್ಸ್ ಮಾದರಿಯನ್ನು ಪರೀಕ್ಷೆಗೆ ಸಿಎಫ್ಟಿಆರ್ಐಗೆ ತಂದಿದ್ದರು. ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣದ ಪ್ರಾಧಿಕಾರವು (ಎಫ್ಎಸ್ಎಸ್ಎಐ) 2014 ಡಿ. 2ರ ಗೆಜೆಟ್ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಕರ್ನಾಟಕದ ಮಾದರಿಗಳನ್ನು ಕೋಲ್ಕತ್ತದಲ್ಲಿನ ಆಹಾರ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಮೈಸೂರಿನ ಸಿಎಫ್ಟಿಆರ್ಐ ವ್ಯಾಪ್ತಿಗೆ ಬಿಹಾರ, ಗೋವಾ, ನವದೆಹಲಿ, ಜಾರ್ಖಂಡ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕೇಂದ್ರಾಡಳಿತ ಪ್ರದೇಶಗಳಾದ ದಾದರ್ ಮತ್ತು ನಗರಹವೇಲಿ, ದಿಯು ಮತ್ತು ದಾಮನ್ ಒಳಪಡುತ್ತವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ವಿವರಿಸಿದರು.
‘ಪಕ್ಷಪಾತ ಸಾಧ್ಯತೆಯ ಕಾರಣ ಕೇಂದ್ರವು ಪ್ರಯೋಗಾಲಯಗಳಿಗೆ ನಿರ್ದಿಷ್ಟ ವ್ಯಾಪ್ತಿ ನಿಗದಿಪಡಿಸಿದೆ. ಘಾಜಿಯಾಬಾದ್, ಪುಣೆ, ಕೋಲ್ಕತ್ತ ಮತ್ತು ಮೈಸೂರಿನಲ್ಲಿ ಈ ಪ್ರಯೋಗಾಲಯಗಳು ಇವೆ. ನಿಯಮದ ಪ್ರಕಾರ ಕರ್ನಾಟಕ ರಾಜ್ಯ ಕೋಲ್ಕತ್ತ ವ್ಯಾಪ್ತಿಗೆ ಒಳಪಡುವುದರಿಂದ ಅಲ್ಲಿಗೆ ಕಳುಹಿಸಲು ಸಲಹೆ ನೀಡಲಾಯಿತು. ಅಲ್ಲದೇ, ಮಾದರಿ ತಂದಿದ್ದ ಅಧಿಕಾರಿಗಳಿಗೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ರಾಜ್ಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಆಹಾರ ವಿಶ್ಲೇಷಣಾ ಗುಣಮಟ್ಟ ಪರೀಕ್ಷೆ ಪ್ರಯೋಗಾಲಯ, ಮೈಸೂರಿನ ನಜರಬಾದ್ನ ಪ್ರಾದೇಶಿಕ ಆಹಾರ ವಿಶ್ಲೇಷಣಾ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳ ಮಾಹಿತಿ ನೀಡಲಾಯಿತು. ಸಿಎಫ್ಟಿಆರ್ಐನಲ್ಲಿ ಮಾದರಿಪರೀಕ್ಷಿಸಲು ತಿರಸ್ಕರಿಸಿಲ್ಲ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.