ಭಾನುವಾರ, ಮಾರ್ಚ್ 7, 2021
22 °C

ಕ್ಯಾನ್ಸರ್‌ಗೆ ರೇಡಿಯೊಥೆರಪಿ

ಡಾ. ಮಾತಂಗಿ Updated:

ಅಕ್ಷರ ಗಾತ್ರ : | |

ಕ್ಯಾನ್ಸರ್‌ಗೆ ರೇಡಿಯೊಥೆರಪಿ

ಕಳೆದ ಹತ್ತು ವರ್ಷಗಳಲ್ಲಿ ಹೋಲಿಸಿದಲ್ಲಿ ರೆಡಿಯೋಥೆರಪಿ ಚಿಕಿತ್ಸಾ ವಿಧಾನದಲ್ಲಿ ಗಮನಾರ್ಹ ರೀತಿಯಲ್ಲಿ ಬದಲಾವಣೆಯಾಗಿದೆ. ಹಾನಿಯಾದ ಭಾಗಷ್ಟೇ ವಿಕಿರಣವನ್ನು ಹಾಯಿಸುವಷ್ಟು ನಿಖರತೆಯನ್ನು ಸಾಧಿಸಲಾಗಿದೆ. ಸೂಜಿ ಮೊನೆಯಷ್ಟಿನ ಈ ನಿಖರತೆ ಮುಂದಿನ ದಿನಗಳಲ್ಲಿ ಇನ್ನುಷ್ಟು... ಮತ್ತಷ್ಟು... ಎನ್ನುವ ಸೂಕ್ಷ್ಮಾತೀತ ಸೂಕ್ಷ್ಮತೆಯನ್ನು ಸಾಧಿಸಲಿದೆ.ಕ್ಯಾನ್ಸರ್ ಕಾಯಿಲೆ ಈಗ ಗುಣವಾಗುವಂತಹ ಕಾಯಿಲೆಯಾಗಿದೆ. ಕ್ಯಾನ್ಸರ್ ಎಂದರೆ, ಕುಟುಂಬದ ಸದಸ್ಯರೂ ಸೇರಿದಂತೆ ರೋಗಿಗಳು ಬಹಳ ಭಯಪಡುತ್ತಿದ್ದಂತಹ ದಿನಗಳು ಈಗ ಇಲ್ಲ. ಕ್ಯಾನ್ಸರ್ ಕಾಯಿಲೆಯ ಬಗ್ಗೆ ಅರಿವು, ತಪಾಸಣಾ ಶಿಬಿರಗಳು, ಉತ್ತಮ ಆರೋಗ್ಯ ರಕ್ಷಣೆಯ ಲಭ್ಯತೆಯ ಅಂಶಗಳು ಇಂದು ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಉತ್ತಮ ಚಿಕಿತ್ಸೆಯನ್ನು ಒದಗಿಸುವ ಮೂಲಕ ಗುಣಪಡಿಸುವ ಸಂಭವ ಹೆಚ್ಚಾಗಿದೆ. ಹಾಗಾಗಿ, ಕ್ಯಾನ್ಸರ್ ಆರೈಕೆಯ ಕಡೆ ದೃಷ್ಟಿಯೂ ಸಹ ಕ್ಯಾನ್ಸರ್ ನಂತರದ ಜೀವನದ ಕಡೆಗೆ ಹೊರಳಿದೆ.ಕ್ಯಾನ್ಸರ್ ಕಾಯಿಲೆಯ ವಿಶೇಷ ತಜ್ಞರಾಗಿ ನಾವು ಈಗ ’ಕ್ಯಾನ್ಸರ್ ನಂತರದ ಜೀವನ’ದ ಕಡೆ ಈಗ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಶಸ್ತ್ರಚಿಕಿತ್ಸೆಯ ಪರಿಕಲ್ಪನೆಗಳು ಈಗ, ಉತ್ತಮ ಕಾರ್ಯನಿರ್ವಹಣಾ ಸ್ಥಿತಿಗತಿ ಹಾಗೂ ಸಕಾರಾತ್ಮಕ ಪರಿಣಾಮಗಳಿಂದ ಕೂಡಿರುವಂತಹ ಅಂಗಾಂಗ ಸಂರಕ್ಷಣಾ ವಿಧಾನಗಳ ಕಡೆಗೆ ಹೊರಳಿದೆ. ಈಗಿನ ಕಿಮೊಥೆರಪಿ ಔಷಧಗಳು, ಈ ಹಿಂದೆ ಕೇವಲ ದ್ವಿಗುಣವಾಗುವ ಜೀವಕೋಶಗಳನ್ನು ಕೊಲ್ಲುವುದಕ್ಕಿಂತ, ಹೆಚ್ಚು ಪರಿಣಾಮಕಾರಿಯಾಗಿವೆ ಹಾಗೂ ಈ ಪ್ರಕಾರವಾಗಿ ಸಾಮಾನ್ಯ ಟಿಷ್ಯೂ ಹಾನಿ ಕಡಿಮೆಯಾಗಿದೆ.ಕ್ಯಾನ್ಸರ್ ನಿರ್ವಹಣೆಯ ಸಮಗ್ರ ಭಾಗವಾದ ರೇಡಿಯೊ ಥೆರಪಿ (ವಿಕಿರಣ ಚಿಕಿತ್ಸೆ), ಸಾಮಾನ್ಯ ಜನರಿಗೆ ಮೊದಲಿನಿಂದಲೂ ರಹಸ್ಯವಾಗಿಯೇ ಉಳಿದುಕೊಂಡಿದೆ. ದ್ವಿಗುಣಗೊಳ್ಳುವ ಜೀವಕೋಶಗಳ ಡಿಎನ್ಎ ಅನ್ನು ನಾಶಪಡಿಸಲು ಕ್ಷ-ಕಿರಣಗಳನ್ನು ಬಳಸುವುದು ಇದರಲ್ಲಿ ಸೇರಿದೆ. ಕ್ಯಾನ್ಸರ್ ಜೀವಕೋಶಗಳು ಬಹಳ ವೇಗವಾಗಿ ಹೆಚ್ಚಾಗುವ ಕಾರಣದಿಂದಾಗಿ ಈ ಪರಿಕಲ್ಪನೆಯನ್ನು ಅನುಕೂಲವಾಗಿ ಬಳಸಲಾಗುತ್ತಿದೆ. ಆದರೆ, ಇದೇ ಸಮಯದಲ್ಲಿ ನಮ್ಮ ಕೆಲವು ಸಾಮಾನ್ಯ ಜೀವಕೋಶಗಳೂ ಸಹ ಹೆಚ್ಚಾಗುತ್ತವೆ ಹಾಗೂ ಹಾನಿಯಾಗುತ್ತವೆ. ಆದ್ದರಿಂದ, ಸಾಧ್ಯವಾದಷ್ಟೂ ಡೋಸೇಜ್ ಅನ್ನು ಸಾಮಾನ್ಯ ಟಿಷ್ಯೂಗಳಿಗೆ ಕಡಿಮೆಗೊಳಿಸುವುದು ಕಡ್ಡಾಯವಾಗಿದೆ.ಆರಂಭದ ದಿನಗಳಲ್ಲಿ, ಸುಧಾರಿತ ಇಮೇಜಿಂಗ್ ಮೊಡಾಲಿಟಿಗಳು ಇಲ್ಲದಿದ್ದಂತಹ ಸಮಯದಲ್ಲಿ, ಕ್ಯಾನ್ಸರ್ ಗಡ್ಡೆ ತಪ್ಪಿಸಿಕೊಳ್ಳದಿರುವುದನ್ನು ಖಾತ್ರಿಪಡಿಸಲು, ಚಿಕಿತ್ಸೆ ಯಲ್ಲಿ ಹೆಚ್ಚು ಸಾಮಾನ್ಯ ಟಿಷ್ಯೂಗಳೊಂದಿಗೆ ವಿಸ್ತಾರವಾದ ಮಾರ್ಜಿನ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿತ್ತು. ಆದರೆ, ಈಗ ಸಿಟಿ, ಎಂಆರ್ಐ, ಹಾಗೂ ಪಿಇಟಿ ಸಿಟಿ ಸ್ಕ್ಯಾನ್‌ಗಳ ಲಭ್ಯತೆಯಿಂದಾಗಿ, ಗಡ್ಡೆಯ ನಿಜವಾದ ಗಾತ್ರದ ಬಗೆಗಿನ ಜ್ಞಾನ ಅತ್ಯಂತ ನಿಖರವಾಗಿ ತಿಳಿದು ಕೊಳ್ಳಬಹುದಾಗಿದೆ.ಗಡ್ಡೆಯ ಸಂಪೂರ್ಣ ಗಾತ್ರ ಹಾಗೂ ವಿಸ್ತರಣೆಯನ್ನು ತಿಳಿದುಕೊಳ್ಳುವುದರಿಂದ, ಕೇವಲ ಗಡ್ಡೆಯ ಕಡೆ ವಿಕಿರಣದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವ ಬೇಡಿಕೆ ಹೆಚ್ಚಾಗುತ್ತದೆ. ಚಿಕಿತ್ಸೆಯ ಯೋಜನೆಯಲ್ಲಿ, ಇಮೇಜಿಂಗ್ ಮೊಡಾಲಿಟಿಗಳನ್ನು ಏಕೀಕರಣಗೊಳಿಸುವ ಮೂಲಕ, 3ಡಿ ಕಾನ್ಫಾರ್ಮಲ್ ವಿಕಿರಣ ಚಿಕಿತ್ಸೆ ಇದನ್ನು ಸಾಧ್ಯವಾಗಿಸಿತು. ತೀವ್ರತೆ ಸಮನ್ವಯಗೊಳಿಸಿರುವ ವಿಕಿರಣ ಚಿಕಿತ್ಸೆ (ಇನ್ಟೆನ್ಸಿಟಿ ಮಾಡ್ಯುಲೇಟೆಡ್ ರೇಡಿಯೋಥೆರಪಿ), ಈ ನಿಟ್ಟಿನಲ್ಲಿ ಬಹುಮುಖ್ಯವಾದ ಆವಿಷ್ಕಾರವಾಗಿದ್ದು, ಇದು ಅತ್ಯಂತ ಮುಖ್ಯವಾದ ರಚನೆಯ ಬಳಿಯಿರುವಂತಹ ಗಡ್ಡೆಗಳನ್ನೂ ಗುಣಪಡಿಸುವುದನ್ನು ಸಾಧ್ಯವಾಗಿಸಿದೆ. ಉದಾಹರಣೆಗೆ, ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್‌ಗಾಗಿ ನೀಡುವ ವಿಕಿರಣ ಚಿಕಿತ್ಸೆ, ಮೂತ್ರಕೋಶ ಹಾಗೂ ಗುದನಾಳದಂತಹ, ಅಕ್ಕಪಕ್ಕದ ರಚನೆಗಳನ್ನು ಹಾನಿಗೊಳಿಸುತ್ತದೆ ಹಾಗೂ ದೀರ್ಘಾವಧಿ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ.ಆದರೆ ಇನ್ಟೆನ್ಸಿಟಿ ಮಾಡ್ಯುಲೇನ್ ನೊಂದಿಗೆ, ಗುದನಾಳದ ಡೋಸ್ ಅನ್ನು ಸಂಪೂರ್ಣವಾಗಿ ಕಡಿಮೆಗೊಳಿಸಲಾಗಿದೆ ಹಾಗೂ ಪುರುಷರು ಇನ್ನು ಮುಂದೆ ಹೆಚ್ಚು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗಿಲ್ಲ ಹಾಗೂ ಸಂಪೂರ್ಣ ಗುಣಮುಖವಾಗಬಹುದು. ಸಾಮಾನ್ಯವಾಗಿ ವಿಕಿರಣ ಚಿಕಿತ್ಸೆಯನ್ನು, ಪ್ರತಿ ದಿನ ಕೆಲವು ನಿಮಿಷಗಳವರೆಗೆ, ಕೆಲವು ವಾರಗಳವರೆಗೆ ನೀಡಲಾಗುತ್ತದೆ. ಈ ಚಿಕಿತ್ಸೆ ನೀಡುವ ಸಮಯದಲ್ಲಿ, ಅಂಗಾಂಗಗಳ ಆಂತರಿಕ ಚಲನೆಯಿಂದಾಗಿ, ಪ್ರತಿ ದಿನ ರೋಗಿಯ ಸ್ಥಿತಿಯಲ್ಲಿ ಮಹತ್ತರವಾದ ಚಲನೆಯಾಗುತ್ತದೆ. ಇತ್ತೀಚಿನ ಲೀನಾರ್ ಅಕ್ಸಿಲೇಟರ್ಸ್‌ಗಳು (ವಿಕಿರಣವನ್ನು ಒದಗಿಸಲು ಬಳಸುವ ಯಂತ್ರಗಳು), ಚಿಕಿತ್ಸೆ ನೀಡುವ ಮೇಜಿನ ಮೇಲೆಯೇ, ಸಿಟಿ ಸ್ಕ್ಯಾನ್ ಅಥವಾ ಕ್ಷ-ಕಿರಣಗಳನ್ನು ಬಳಸುವ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ರೋಗಿಯ ಸ್ಥಿತಿಯ ಸ್ವಯಂಚಾಲಿತ ಕರೆಕ್ಷನ್ ಸಾಧ್ಯವಾಗುತ್ತದೆ ಅಥವಾ ಪ್ರತಿ ದಿನ ಪ್ರೊಸ್ಟೇಟ್‌ನಂತಹ ಅಂಗಾಂಗದ ಚಿಕಿತ್ಸೆಯ ಕರೆಕ್ಷನ್ ಕೂಡ ಸಾಧ್ಯವಾಗಿದೆ. ಇದನ್ನು ಇಮೇಜ್ ಗೈಡೆಡ್ ರೇಡಿಯೋಥೆರಪಿ ಎನ್ನುತ್ತಾರೆ.ಶ್ವಾಸಕೋಶದ ಮತ್ತು ಯಕೃತ್ತು (ಲಿವರ್) ಗಳಲ್ಲಿರುವ ಕ್ಯಾನ್ಸರ್ ಗಡ್ಡೆಗಳನ್ನು ಚಲನೆಯನ್ನು ಹೊಂದಿರುವಂತೆ ಭಾಸವಾಗುತ್ತವೆ. ಏಕೆಂದರೆ, ಶ್ವಾಸಕೋಶದ ಕ್ಯಾನ್ಸರ್ ವೇಳೆ ಉಸಿರಾಟದ ಚಕ್ರದ ಕ್ರಿಯೆಯಲ್ಲಿ ಕ್ಯಾನ್ಸರ್ ಗಡ್ಡೆಗಳು ಸರಿದಂತೆ ಇಲ್ಲವೆ ಚಲಿಸುವಂತೆಯೇ ಇರುತ್ತವೆ. ಹೀಗಾಗಿ, ಇದನ್ನು ಇಡೀ ಭಾಗಕ್ಕೆಂದೇ ಅನ್ವಯಿಸಲಾಗುತ್ತದೆ. ಹಾಗೆಯೇ, ಚಿಕಿತ್ಸೆ ನೀಡುವ ವೇಳೆ ಇಡೀ ಶ್ವಾಸಕೋಶಕ್ಕೇ ಚಿಕಿತ್ಸೆ ನೀಡುವ ಅನಿವಾರ್ಯವೂ ಎದುರಾಗುತ್ತದೆ. ಇತ್ತೀಚಿನ ದಿನಗಳಲ್ಲಿ 4ಡಿ ಸಿಟಿ ಸ್ಕ್ಯಾನ್ ಲಭ್ಯವಿದೆ.ಇದು ಪ್ರತಿ ವ್ಯಕ್ತಿಗೆ ಅನುಗುಣವಾಗಿ ಅತ್ಯಂತ ಸ್ಪಷ್ಟವಾದ ವಿಡಿಯೋ ಚಿತ್ರಗಳನ್ನು ನೀಡುತ್ತದೆ. ಹೀಗಾಗಿ, ಹಾನಿಯಾಗಿರುವ ಭಾಗಕಷ್ಟೇ ಸೀಮಿತವಾಗಿ ಚಿಕಿತ್ಸೆಯನ್ನು ನೀಡುವ ಮೂಲಕ ಇನ್ನಿತರ ಭಾಗಗಳಲ್ಲಿರುವ ಆರೋಗ್ಯವಂತ ಜೀವ ಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳ ಬಹುದಾಗಿದೆ. ಈ ವಿಧಾನದಿಂದಾಗಿ ಎಡಭಾಗದ ಸ್ತನಗಳಿಗೆ ಚಿಕಿತ್ಸೆ ನೀಡುವಾಗ ಅದು ಹೃದಯದವರೆಗೆ ತಲುಪದಂತೆ ನೋಡಿಕೊಳ್ಳುವುದು ಸಹ ಸಾಧ್ಯವಾಗಿದೆ. ಇದರಿಂದಾಗಿ ದೀರ್ಘಕಾಲದ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಎಡಭಾಗದ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವಾಗ ಹೃದಯಕ್ಕೆ ತೊಂದರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಬಹುದಾಗಿದೆ.ಮೆದುಳಿನ ಕ್ಯಾನ್ಸರ್ ಗೆಡ್ಡೆಗಳಿಗೆ ಚಿಕಿತ್ಸೆ ನೀಡುವಾಗಲೂ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಮೆದುಳಿನಲ್ಲಿರುವ ಆರೋಗ್ಯವಂತ ಜೀವಕೋಶಗಳಿಗೆ ಹಾನಿಯಾಗದಂಥೆ ಬಾದಿತ ಭಾಗಕಷ್ಟೇ ಚಿಕಿತ್ಸೆ ನೀಡುವುದು ಅತ್ಯಂತ ಸಮಂಜಸ ವಿಧಾನವಾಗಿದೆ. ಮೆದುಳಿನ ಪಿಟ್ಯುಟರಿ ಭಾಗಕ್ಕೆ ಸಂಬಂಧಿಸಿದ ವಿವಿಧ ಕ್ಯಾನ್ಸರ್‌ಗಳಿಗೆ ವಿಕಿರಣ ಚಿಕಿತ್ಸೆ ನೀಡುವ ವೇಳೆ ಅಧಿಕ ಪ್ರಮಾಣದ ವಿಕಿರಣವನ್ನು ಹಾಯಿಸುವ ವಿಧಾನವನ್ನು ಇಂದಿನ ಆಧುನಿಕ ಚಿಕಿತ್ಸಾ ವಿಧಾನಗಳು ಕಡಿತಗೊಳಿಸಿವೆ. ಕಡಿಮೆ ಪ್ರಮಾಣ ವಿಕಿರಣದಿಂದಲೇ ಇಂದು ಪರಿಣಾಮಕಾರಿಯಾಗಿ ಇತರ ಜೀವಕೋಶಗಳಿಗೆ ಹಾನಿಯಾಗದಂಥೆ ಚಿಕಿತ್ಸೆ ನೀಡುವ ವಿಧಾನಗಳು ಅಭಿವೃದ್ಧಿಗೊಂಡಿವೆ.ಕಳೆದ ಹತ್ತು ವರ್ಷಗಳಲ್ಲಿ ಹೋಲಿಸಿದಲ್ಲಿ ರೆಡಿಯೋಥೆರಪಿ ಚಿಕಿತ್ಸಾ ವಿಧಾನದಲ್ಲಿ ಗಮನಾರ್ಹ ರೀತಿಯಲ್ಲಿ ಬದಲಾವಣೆಯಾಗಿದೆ. ಹಾನಿಯಾದ ಭಾಗಷ್ಟೇ ವಿಕಿರಣವನ್ನು ಹಾಯಿಸುವಷ್ಟು ನಿಖರತೆಯನ್ನು ಸಾಧಿಸಲಾಗಿದೆ. ಸೂಜಿಮೊನೆಯಷ್ಟಿನ ಈ ನಿಖರತೆ ಮುಂದಿನ ದಿನಗಳಲ್ಲಿ ಇನ್ನುಷ್ಟು... ಮತ್ತಷ್ಟು... ಎನ್ನುವ ಸೂಕ್ಷ್ಮಾತೀತ ಸೂಕ್ಷ್ಮತೆಯನ್ನು ಸಾಧಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ರೆಡಿಯೋ ಥೆರಪಿಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಗಳು ರೋಗಿಯ ಬದುಕನ್ನು ಉತ್ತಮಗೊಳಿಸುವಲ್ಲಿ ಸಫಲವಾಗುತ್ತಿವೆ ಎನ್ನುವುದೇ ಈ ರೆಡಿಯೋ ಥೆರಪಿಯ ಫಲಶೃತಿಯನ್ನು ತೋರಿಸುತ್ತವೆ.(ಲೇಖಕರು ಕ್ಯಾನ್ಸರ್‌ ತಜ್ಞರು, ಬಿಜಿಎಸ್‌ ಗ್ಲೋಬಲ್‌  ಆಸ್ಪತ್ರೆ, ಬೆಂಗಳೂರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.