ಸೋಮವಾರ, ಏಪ್ರಿಲ್ 19, 2021
25 °C

ಕ್ಯೂರಿಯಾಸಿಟಿ ಪಯಣಕ್ಕೆ ಸ್ಥಳ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಮಂಗಳನ ಅಂಗಳದಲ್ಲಿ ಕ್ಯೂರಿಯಾಸಿಟಿ ರೋವರ್ ಕೈಗೊಳ್ಳಲಿರುವ ಮೊದಲ ಪ್ರಯಾಣಕ್ಕಾಗಿ ನಾಸಾ ವಿಜ್ಞಾನಿಗಳು ಮೂರು ವಿಭಿನ್ನ ಸ್ಥಳ ಮತ್ತು ಪ್ರದೇಶಗಳನ್ನು ಗುರುತಿಸಿದ್ದು, ವಾರದಲ್ಲಿ ಅದು ಐತಿಹಾಸಿಕ ಪಯಣ ಆರಂಭಿಸಲಿದೆ.ಕ್ಯೂರಿಯಾಸಿಟಿ ಯಶಸ್ವಿಯಾಗಿ ಇಳಿದ ಗೇಲ್ ಕುಳಿಯ ಆಗ್ನೇಯ ದಿಕ್ಕಿಗೆ 500 ಮೀಟರ್ ವ್ಯಾಪ್ತಿಯ ಗ್ಲೆನ್‌ಎಲ್ (ಸರಿಯಾದ) ಪ್ರದೇಶವನ್ನು ಮೊದಲ ಹಂತದ ಪ್ರಯಾಣಕ್ಕೆ ಗುರುತಿಸಲಾಗಿದೆ. ವಿಜ್ಞಾನಿಗಳ ತಂಡ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದೆ ಎಂದು ನಾಸಾದ ಜಾನ್ ಗ್ರೋಟ್ಜಿಂಗರ್ ತಿಳಿಸಿದ್ದಾರೆ.ಮಂಗಳ ಗ್ರಹದ ಭೌಗೋಳಿಕ ಲಕ್ಷಣಗಳ ಅಧ್ಯಯನ ನಡೆಸಲಿರುವ ರೋವರ್ ಕಲ್ಲುಗಳ ಮಾದರಿಯನ್ನು ಸಂಗ್ರಹಿಸಲಿದೆ. ಅದರಲ್ಲಿ ಅಳವಡಿಸಲಾಗಿರುವ ಯಂತ್ರಗಳಿಂದ ರಂಧ್ರ ಕೊರೆಯಲಿದ್ದು, ಕಲ್ಲುಗಳನ್ನೂ ಪುಡಿ ಮಾಡಿ ಸಂಗ್ರಹಿಸಲಿದೆ.  ಒಂದು ವಾರದಲ್ಲಿ ರೋವರ್ ಪಯಣ ಆರಂಭಿಸಲಿದ್ದು ನಿಗದಿತ ಪ್ರದೇಶಕ್ಕೆ ತೆರಳಲು ಮೂರರಿಂದ ನಾಲ್ಕು ವಾರ ಬೇಕಾಗಬಹುದು. ಆ ನಂತರ ಒಂದು ವಾರ ಕಾಲ ಅದು ಅಲ್ಲಿಯೇ ನೆಲೆ ನಿಂತು, ಕಲ್ಲು, ಮಣ್ಣುಗಳ ಅಧ್ಯಯನ ನಡೆಸಲಿದೆ. ಆ ನಂತರ ಪುನಃ ಗೇಲ್ ಕುಳಿ ಇರುವ ಮೌಂಟ್ ಪರ್ವತಕ್ಕೆ ಮರಳಲಿದೆ. ಎರಡನೇ ಹಂತದಲ್ಲಿ ನೀರಿನ ಕುರುಹುಗಳನ್ನು ಶೋಧನೆಗೆ ಹೊರಡಲಿದೆ.   ರೋವರ್ ರವಾನಿಸಿರುವ ಮೌಂಟ್ ಪರ್ವತದ ಚಿತ್ರಗಳಲ್ಲಿ ಕಡಿದಾದ ಒಂಟಿ ಬೆಟ್ಟ, ಬೃಹತ್ ಗುಡ್ಡ, ತಗ್ಗು, ದಿಣ್ಣೆಕಲ್ಲು, ಪ್ರಸ್ಥಭೂಮಿ, ಕಮರಿಗಳು ಕಂಡುಬಂದಿದ್ದು ಮಂಗಳನ ನಿಗದಿತ ಪಯಣಕ್ಕೆ ವರ್ಷಗಳೇ ಬೇಕಾಗಬಹುದು.ಆರು ಗಾಲಿಗಳನ್ನು ಹೊಂದಿರುವ ರೋವರ್ ಪ್ರತಿದಿನ ಫುಟ್‌ಬಾಲ್ ಮೈದಾನದಷ್ಟು ದೂರ ಚಲಿಸಲಿದೆ ಎಂದು ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪುಲ್ಶನ್ ಲ್ಯಾಬೋರೆಟರಿ (ಜೆಪಿಎಲ್) ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.