ಸೋಮವಾರ, ಜೂನ್ 21, 2021
27 °C

ಕ್ರಿಕೆಟಿಗರ ಶೈಲಿ ರಂಗನ್ ಶೈಲಿ

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಕ್ರಿ ಕೆಟ್‌ ಅಂದರೆ ಈ ಯುವಕನಿಗೆ ಪಂಚಪ್ರಾಣ. ಕಾಲೇಜಿನಲ್ಲಿ ಕ್ರಿಕೆಟ್‌ ಟೀಮಿಗೆ ಕ್ಯಾಪ್ಟನ್‌ ಕೂಡ ಆಗಿದ್ದ. ಮುಂದೆ ಕ್ರಿಕೆಟಿಗನಾಗುವ ಆಸೆ ಇತ್ತಾದರೂ ಆಕಸ್ಮಿಕವಾಗಿ ಬಂದಿದ್ದು ಬಣ್ಣದ ಲೋಕಕ್ಕೆ.ಹಲವು ಸಿನಿಮಾಗಳಲ್ಲಿ ಸಹ ನಟನಾಗಿದ್ದ ಪ್ರದೀಪ್‌, ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿರುವ ‘ರಂಗನ್ ಸ್ಟೈಲ್’ ಇಂದು ತೆರೆ ಕಾಣಲಿದೆ. ‘ಈ ಹಿಂದಿನ ನನ್ನ ಸಿನಿಮಾ ೨೫ ಚಿತ್ರಮಂದಿರದಲ್ಲಿ ತೆರೆ ಕಂಡಿತ್ತು. ಅದಕ್ಕೆ ಹೋಲಿಸಿದರೆ ರಂಗನ್ ಸ್ಟೈಲ್ ನೂರಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದು ರೋಮಾಂಚನ ಮೂಡಿಸುತ್ತಿದೆ. ಅಷ್ಟಕ್ಕೂ ನನಗೆ ದೊಡ್ಡ ದೊಡ್ಡ ಗುರಿಗಳಾಗಲೀ, ಕನಸುಗಳಾಗಲೀ ಇಲ್ಲ. ಸಣ್ಣ–ಪುಟ್ಟ ಖುಷಿಯಲ್ಲೇ ಬದುಕು ನಡೆಸುವವನು’ ಎನ್ನುತ್ತಾರೆ ಪ್ರದೀಪ್‌.ಮಂಡ್ಯ ಬಳಿಯ ಹಳ್ಳಿಯೊಂದರಿಂದ ಬಂದಿರುವ ಪ್ರದೀಪ್, ಓದಿದ್ದು ಮೈಸೂರು ಹಾಗೂ ಬೆಂಗಳೂರಿನಲ್ಲಿ. ಬೆಂಗಳೂರಿನ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿರುವಾಗಲೇ ಅಲ್ಲಿದ್ದ ಕ್ರಿಕೆಟ್‌ ತಂಡಕ್ಕೆ ನಾಯಕನಾಗಿದ್ದವರು. ಕ್ರಿಕೆಟ್‌ ಆಟಗಾರನಾಗುವ ಕನಸು ಅವರದಾಗಿತ್ತು. ಅಣ್ಣ ರಾಮಪ್ರಸಾದ್ ಅವರಿಗೆ ಸಿನಿಮಾ ಲೋಕದ ಜತೆ ನಂಟು ಇತ್ತು. ಒಮ್ಮೆ ಅಪಘಾತವಾಗಿ ರಾಮಪ್ರಸಾದ್‌ ಆಸ್ಪತ್ರೆ ಸೇರಿದ ಸಂದರ್ಭದಲ್ಲಿ, ನಿರ್ದೇಶಕ ಎಂ.ಡಿ. ಶ್ರೀಧರ್ ಅವರನ್ನು ಭೇಟಿಯಾಗುವಂತೆ ಅವರು ಪ್ರದೀಪ್‌ಗೆ ಸೂಚಿಸಿದರು.ಸಿನಿಮಾ, ಅಭಿನಯದತ್ತ ಯಾವತ್ತೂ ಆಸಕ್ತಿ ಹೊಂದಿರದ ಪ್ರದೀಪ್‌, ಅರೆಮನಸ್ಸಿನಿಂದ ಸೀಡಿಯೊಂದರಲ್ಲಿ ಫೋಟೋ ಹಾಕಿಕೊಂಡು ಹೋಗಿ ಶ್ರೀಧರ್‌ ಅವರನ್ನು ಒಂದು ಮುಂಜಾನೆ ಭೇಟಿ ಮಾಡಿದರು. ಅಂದೇ ಸಂಜೆ ಹೊತ್ತಿಗೆ ಶ್ರೀಧರ್‌ ನಿರ್ದೇಶನದ ‘ಜಾಲಿ ಡೇಸ್‌’ಗೆ ಪ್ರದೀಪ್‌ ಆಯ್ಕೆಯಾಗಿದ್ದರು! ‘ಜಾಲಿ ಡೇಸ್‌’ ಚಿತ್ರೀಕರಣ ಆರಂಭದ ಐದಾರು ದಿನಗಳಲ್ಲಿ ಪ್ರದೀಪ್‌ ಅನಾಸಕ್ತಿಯಿಂದಲೇ ನಟಿಸಿದ್ದರು. ‘ಕ್ರಮೇಣ ಆಸಕ್ತಿ ಬೆಳೆಯಿತು. ಅಭಿನಯ ಇಷ್ಟಪಡಲು ಶುರು ಮಾಡಿದೆ. ಕಲಿಯುವ ಆಸೆ ಹೆಚ್ಚುತ್ತ ಹೋಯಿತು’ ಎಂದು ಪ್ರದೀಪ್‌ ಹೇಳುತ್ತಾರೆ.ಬಿಡುಗಡೆಯಾದ ‘ಜಾಲಿ ಡೇಸ್‌’ ಐವತ್ತು ದಿನ ಪ್ರದರ್ಶನ ಕಂಡಿತು. ಸದಾ ಕ್ರಿಕೆಟ್‌ನಲ್ಲಿ ಮುಳುಗಿರುತ್ತಿದ್ದ ಪ್ರದೀಪ್‌ನನ್ನು ಸಿನಿಮಾದಲ್ಲಿ ನೋಡಿದಾಗ ಸ್ನೇಹಿತರಿಗೆ ಅಚ್ಚರಿ. ‘ನಾನು ಸಿನಿಮಾದಲ್ಲಿ ಅಭಿನಯಿಸುವುದನ್ನು ಯಾರೂ ಊಹಿಸಿರಲೇ ಇಲ್ಲ. ಆದರೂ ನನ್ನ ಅಭಿನಯ ನೋಡಿ ಮೆಚ್ಚಿದವರು ಅನೇಕ ಮಂದಿ. ಅದರಲ್ಲೂ ಕಾಲೇಜು ಹುಡುಗ– ಹುಡುಗಿಯರು ಹೆಚ್ಚು ಇಷ್ಟಪಟ್ಟರು’ ಎನ್ನುತ್ತಾರೆ.ಇದಾದ ಬಳಿಕ ಇನ್ನಷ್ಟು ಸಿನಿಮಾಗಳಲ್ಲಿ ಪ್ರದೀಪ್‌ಗೆ ಅವಕಾಶ ಸಿಕ್ಕಿತು. ಕಿರುಚಿತ್ರ ‘ನವಿಲಾದವರು’, ‘ಪೆರೋಲ್’, ‘ಕೃಷ್ಣನ್ ಲವ್ ಸ್ಟೋರಿ’, ‘ಚಿಂಗಾರಿ’ ಇತ್ಯಾದಿ. ಆ್ಯಕ್ಟಿಂಗ್‌ ಚೆನ್ನಾಗಿದೆ ಅಂತ ಜನರೆಲ್ಲ ಹೊಗಳುತ್ತಿದ್ದರು. ಆದರೆ ಪೂರ್ಣಪ್ರಮಾಣದ ನಾಯಕನಾಗುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಪ್ರದೀಪ್, ಮುಂದಿನ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶ ಸಿಕ್ಕಿದರೆ ಮಾತ್ರ ಒಪ್ಪಿಕೊಳ್ಳಬೇಕು ಎಂದು ನಿರ್ಧರಿಸಿದರು.ಇದಕ್ಕಾಗಿಯೇ ಆರೆಂಟು ತಿಂಗಳ ಕಾಲ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕೈಬಿಟ್ಟರು. ‘ಜಾಲಿ ಡೇಸ್’ ಚಿತ್ರೀಕರಣದಲ್ಲಿ ಸಹ ನಿರ್ದೇಶಕ ಪ್ರಶಾಂತ್ ಅವರು ತಾವೇನಾದರೂ ಸಿನಿಮಾ ನಿರ್ದೇಶಿಸುವುದಾದರೆ ನೀನೇ ಹೀರೋ ಅಂತ ಪ್ರದೀಪ್‌ಗೆ ಹೇಳಿದ್ದರಂತೆ. ಅದರಂತೆ ‘ರಂಗನ್ ಸ್ಟೈಲ್’ ಮಾಡುವಾಗ ಪ್ರಶಾಂತ್‌ ಆಯ್ಕೆ ಮಾಡಿದ್ದು ಪ್ರದೀಪ್‌ ಅವರನ್ನು.

ಯುವಕರಿಂದಲೇ ತುಂಬಿರುವ ‘ರಂಗನ್ ಸ್ಟೈಲ್’ ಟೀಮ್‌ ಮೇಲೆ ಪ್ರದೀಪ್‌ಗೆ ಹೆಚ್ಚು ಭರವಸೆಯಿದೆ. ಚಿತ್ರೀಕರಣದಲ್ಲಿ ಎಲ್ಲರೂ ಚರ್ಚಿಸಿ, ಒಮ್ಮತ ಮೂಡಿದ ಬಳಕವಷ್ಟೇ ಶೂಟಿಂಗ್‌ ಮಾಡುತ್ತಿದ್ದುದನ್ನು ನೆನೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚು ವಿಶ್ವಾಸವಿರುವುದು ನಿರ್ದೇಶಕ ಪ್ರಶಾಂತ್‌ ಅವರ ಮೇಲೆ. ಇವತ್ತು (ಮಾರ್ಚ್ ೨೧) ಬಿಡುಗಡೆಯಾಗಲಿರುವ ‘ರಂಗನ್ ಸ್ಟೈಲ್’ ಕುರಿತು ಪ್ರದೀಪ್‌ ಅವರಲ್ಲಿ ಹೆಚ್ಚು ನಿರೀಕ್ಷೆಗಳಿವೆ. ಮುಂದಿನ ದಿನಗಳಲ್ಲಿ ತಮ್ಮ ಪಾತ್ರ ಹಾಗೂ ಕಥೆ ಚೆನ್ನಾಗಿರುವ ಸಿನಿಮಾಗಳನ್ನಷ್ಟೇ ಒಪ್ಪಿಕೊಳ್ಳುವ ನಿರ್ಧಾರ ಅವರದು. ‘ನನಗೆ ಕಲಾತ್ಮಕ ಅಥವಾ ಕಮರ್ಷಿಯಲ್ ಎಂಬ ವ್ಯತ್ಯಾಸ ಖಂಡಿತ ಇಲ್ಲ. ನಿರ್ದೇಶಕರು ಇಂಥವರೇ ಇರಬೇಕು ಎಂಬುದೂ ಇಲ್ಲ. ನನ್ನ ಅಭಿನಯಕ್ಕೆ ಪೂರಕವಾದ ಪಾತ್ರ ಹಾಗೂ ಪ್ರೇಕ್ಷಕರು ಸದಾ ನೆನಪಿನಲ್ಲಿ ಇಡುವ ಕಥೆ ಸಿಕ್ಕರೆ ಸಾಕು’ ಎನ್ನುತ್ತಾರೆ.ಬಣ್ಣಬಣ್ಣದ ಕನಸು ಹೊತ್ತು ಸಿನಿಮಾ ಲೋಕಕ್ಕೆ ಕಾಲಿಡುವ ಇತರ ಕಲಾವಿದರಂತೆ ತಾವಲ್ಲ ಎಂದು ಸ್ಪಷ್ಟಪಡಿಸುವ ಪ್ರದೀಪ್‌, ಬದುಕಿನ ಸಣ್ಣ–ಪುಟ್ಟ ಖುಷಿಗಳೇ ತಮಗೆ ಸಾಕು ಎನ್ನುತ್ತಾರೆ. ‘ಈ ಹಿಂದೆ ನಾನು ಅಭಿನಯಿಸಿದ ಪೆರೋಲ್ ಸಿನಿಮಾ ರಾಜ್ಯದಲ್ಲಿ ೨೫ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈಗ ಹೊಸ ಟೀಮ್ -ನಿರ್ಮಾಣದ ರಂಗನ್ ಸ್ಟೈಲ್ ೧೪೫ ಮಂದಿರದಲ್ಲಿ ಬಿಡುಗಡೆಯಾಗಲಿದೆ. ಇದೊಂದು ರೀತಿ ದೊಡ್ಡ ಸ್ಟಾರ್ ಸಿನಿಮಾ ಪ್ರದರ್ಶನದ ಹಾಗೆಯೇ ಆಯಿತಲ್ಲವೇ? ಕಳೆದ ವರ್ಷಕ್ಕೂ ಈ ವರ್ಷಕ್ಕೂ ನಾನು ಕಂಡ ನನ್ನ ಬೆಳವಣಿಗೆ ಇದು. ನನಗೇನೂ ದೊಡ್ಡ ದೊಡ್ಡ ಕನಸುಗಳಿಲ್ಲ. ಒಂದೊಂದೇ ಹೆಜ್ಜೆ ಇಡುತ್ತ ಸಾಗಬೇಕು’ ಎನ್ನುತ್ತಾರೆ.ಸಿಸಿಎಲ್ ತಂಡದಲ್ಲಿ ಕ್ರಿಕೆಟ್ ಆಡಿದ ಪ್ರದೀಪ್‌ಗೆ ಸ್ನೇಹಿತರ ಜತೆ ಪ್ರವಾಸ ಹೋಗುವುದೆಂದರೆ ಬಲು ಇಷ್ಟವಂತೆ. ‘ಟೈಮ್ ಸಿಕ್ಕರೆ ಸಾಕು; ಹೆಗಲಿಗೆ ಬ್ಯಾಗ್‌ ಹಾಕಿಕೊಂಡು ಸ್ನೇಹಿತರೊಂದಿಗೆ ಸಿಕ್ಕ ಬಸ್‌ ಹತ್ತಿ ಹೊರಟು ಬಿಡುತ್ತೇನೆ’ ಎನ್ನುತ್ತಾರೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.