ಶನಿವಾರ, ಸೆಪ್ಟೆಂಬರ್ 26, 2020
26 °C

ಕ್ರಿಕೆಟ್: ಗೆಲುವಿನ ವಿಶ್ವಾಸದಲ್ಲಿ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಗೆಲುವಿನ ವಿಶ್ವಾಸದಲ್ಲಿ ಭಾರತ

ಕೊಲಂಬೊ (ಪಿಟಿಐ): ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತ ತಂಡ ಇದೀಗ ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಮೂರನೇ ಪಂದ್ಯದಲ್ಲಿ ಗೆಲುವು ಪಡೆದು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮುನ್ನಡೆ ಸಾಧಿಸುವುದು ಮಹೇಂದ್ರ ಸಿಂಗ್ ದೋನಿ ಬಳಗದ ಲೆಕ್ಕಾಚಾರ.ಹಂಬಂಟೋಟಾದಲ್ಲಿ ನಡೆದ ಮೊದಲ ಎರಡು ಪಂದ್ಯಗಳ ಬಳಿಕ ಉಭಯ ತಂಡಗಳು 1-1 ರಲ್ಲಿ ಸಮಬಲ ಸಾಧಿಸಿವೆ. ಮೊದಲ ಪಂದ್ಯದಲ್ಲಿ ಭಾರತ 21 ರನ್‌ಗಳ ಗೆಲುವು ಪಡೆದು ಶುಭಾರಂಭ ಮಾಡಿತ್ತು. ಆದರೆ ಸೊಗಸಾದ ರೀತಿಯಲ್ಲಿ ತಿರುಗೇಟು ನೀಡಿದ್ದ ಶ್ರೀಲಂಕಾ ಎರಡನೇ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.ಕಳೆದ ಪಂದ್ಯದಲ್ಲಿ ಎದುರಾಗಿದ್ದ ಬ್ಯಾಟಿಂಗ್ ವೈಫಲ್ಯ ಮರುಕಳಿಸದಂತೆ ಎಚ್ಚರ ವಹಿಸುವುದು ಭಾರತ ತಂಡದ ಗುರಿ. ತಿಸಾರ ಪೆರೇರಾ ಅವರ ಆರಂಭಿಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲುವುದು ಅಗತ್ಯ. ಅವರು ಸರಣಿಯಲ್ಲಿ ಒಟ್ಟು ಆರು ವಿಕೆಟ್ ಪಡೆದು ಲಂಕಾ ಪರ ಯಶಸ್ವಿ ಬೌಲರ್ ಎನಿಸಿದ್ದಾರೆ. ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರಿಂದ ತಂಡ ಉತ್ತಮ ಆರಂಭವನ್ನು ನಿರೀಕ್ಷಿಸುತ್ತಿದೆ.ರೋಹಿತ್ ಶರ್ಮ ಅವರ ಕಳಪೆ ಫಾರ್ಮ್ ಭಾರತದ ಚಿಂತೆಗೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ಒಂದು ರನ್ ಗಳಿಸಿದ್ದ ಅವರು ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಆದರೂ ಅವರಿಗೆ ಇನ್ನೊಂದು ಅವಕಾಶ ನೀಡುವ ಸಾಧ್ಯತೆಯಿದೆ. ತಾವಾಡಿದ ಕೊನೆಯ 10 ಪಂದ್ಯಗಳಲ್ಲಿ ರೋಹಿತ್ ಕೇವಲ 156 ರನ್ ಪೇರಿಸಿದ್ದಾರೆ.ರೋಹಿತ್ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯದಿದ್ದರೆ, ಮನೋಜ್ ತಿವಾರಿಗೆ ಅವಕಾಶದ ಬಾಗಿಲು ತೆರೆಯಲಿದೆ. ಚೊಚ್ಚಲ ಏಕದಿನ ಶತಕ ಗಳಿಸಿದ ಬಳಿಕ ತಿವಾರಿಗೆ ಹೆಚ್ಚಿನ ಅವಕಾಶ ಲಭಿಸಿಲ್ಲ. ಅವರು ಸತತ 14 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ತಂಡದ ಆಡಳಿತ ಅಜಿಂಕ್ಯ ರಹಾನೆ ಅವರಿಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.ಪ್ರೇಮದಾಸ ಕ್ರೀಡಾಂಗಣದ ಪಿಚ್ ಸಹಜವಾಗಿ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುತ್ತದೆ. ಗುರುವಾರ ಅಭ್ಯಾಸದ ವೇಳೆ ಗಾಯಗೊಂಡಿದ್ದ ಪ್ರಗ್ಯಾನ್ ಓಜಾ ಈ ಪಂದ್ಯದಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ. ಅದೇ ರೀತಿ ರಾಹುಲ್ ಶರ್ಮಾ ಅವರನ್ನು ಆಡಿಸಬೇಕೇ ಎಂಬುದರ ಬಗ್ಗೆ ತಂಡದ ಆಡಳಿತ ಗೊಂದಲದಲ್ಲಿದೆ. ಏಕೆಂದರೆ ರಾಹುಲ್ ಮುಂಬೈನಲ್ಲಿ ನಡೆದಿದ್ದ ರೇವ್ ಪಾರ್ಟಿಯೊಂದರಲ್ಲಿ ಮಾದಕ ವಸ್ತು ಸೇವಿಸಿದ್ದು ಸಾಬೀತಾಗಿತ್ತು.ಕಳೆದ ಪಂದ್ಯದಲ್ಲಿ ಗೆಲುವು ದೊರೆತಿರುವ ಕಾರಣ ಆತಿಥೇಯ ಲಂಕಾ ಆತ್ಮವಿಶ್ವಾಸದಲ್ಲಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ತಿಲಕರತ್ನೆ ದಿಲ್ಶಾನ್ ಮತ್ತು ಉಪುಲ್ ತರಂಗ ಫಾರ್ಮ್‌ಗೆ ಮರಳಿರುವುದು ನಾಯಕ ಮಾಹೇಲ ಜಯವರ್ಧನೆ ಸಂತಸಕ್ಕೆ ಕಾರಣವಾಗಿದೆ.ಮೊದಲ ಪಂದ್ಯದಲ್ಲಿ ಆಕರ್ಷಕ ಶತಕ           ಗಳಿಸಿದ್ದ ಕುಮಾರ ಸಂಗಕ್ಕಾರ ಕೂಡಾ ಭಾರತದ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.

ತಂಡಗಳು

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ),  ವಿರಾಟ್ ಕೊಹ್ಲಿ (ಉಪ ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರೋಹಿತ್ ಶರ್ಮ, ಸುರೇಶ್ ರೈನಾ, ಇರ್ಫಾನ್ ಪಠಾಣ್, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಉಮೇಶ್ ಯಾದವ್, ಪ್ರಗ್ಯಾನ್ ಓಜಾ, ಅಜಿಂಕ್ಯ ರಹಾನೆ, ಮನೋಜ್ ತಿವಾರಿ, ರಾಹುಲ್ ಶರ್ಮ ಮತ್ತು ಅಶೋಕ್ ದಿಂಡಾ.ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ಆ್ಯಂಜಲೊ ಮ್ಯಾಥ್ಯೂಸ್ (ಉಪ ನಾಯಕ), ತಿಲಕರತ್ನೆ ದಿಲ್ಯಾನ್, ಕುಮಾರ ಸಂಗಕ್ಕಾರ, ಉಪುಲ್ ತರಂಗ, ದಿನೇಶ್ ಚಂಡಿಮಾಲ್ (ವಿಕೆಟ್ ಕೀಪರ್), ತಿಸಾರ ಪೆರೇರಾ, ಲಾಹಿರು ತಿರುಮಾನೆ, ಲಸಿತ್ ಮಾಲಿಂಗ, ಚಾಮರ ಕಪುಗೆಡೆರಾ, ರಂಗನಾ ಹೆರಾತ್, ಸಚಿತ್ರಾ ಸೇನಾನಾಯಕೆ, ನುವಾನ್ ಪ್ರದೀಪ್, ಜೀವನ್ ಮೆಂಡಿಸ್ ಮತ್ತು ಐಸುರು ಉದಾನ.

ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.