ಶುಕ್ರವಾರ, ಜನವರಿ 24, 2020
18 °C

ಕ್ರಿಕೆಟ್: ಬಯಲಾಯಿತು ಭಾರತದ ಬ್ಯಾಟಿಂಗ್ ದೌರ್ಬಲ್ಯ; ಮೂರನೇ ಟೆಸ್ಟ್‌ನಲ್ಲೂ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್: ನಿರೀಕ್ಷೆ ಹುಸಿಯಾಗಲಿಲ್ಲ. ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಜಯ ಎನ್ನುವ ಲೆಕ್ಕಾಚಾರವೂ ತಪ್ಪಲಿಲ್ಲ. ಈ ಪರಿಣಾಮ ಭಾರತ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲೂ ಭಾರಿ ಮುಖಭಂಗ ಅನುಭವಿಸಿತು.ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಎರಡನೇ ದಿನದಾಟದಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಾಗಲೇ ಖಚಿತವಾಗಿತ್ತು. ಆದರೆ, ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಹೋರಾಟ ನಡೆಸುವ ಉತ್ಸಾಹವನ್ನು `ಮಹಿ~ ಪಡೆ ತೋರಿತ್ತು. ಇದಕ್ಕೆ ಆಸೀಸ್‌ನ ಬೌಲರ್‌ಗಳು ಅವಕಾಶ ನೀಡಲಿಲ್ಲ. ಕೇವಲ 23 ರನ್ ಅಂತರದಲ್ಲಿ ಆರು ವಿಕೆಟ್ ಕಿತ್ತ ಆಸೀಸ್ ವಿಜಯದ ವೇದಿಕೆ ಮೇಲೆ ಸಂಭ್ರಮಿಸಿತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0ರಲ್ಲಿ ಮುನ್ನಡೆ ಸಾಧಿಸಿತು.ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 32 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 88 ರನ್ ಗಳಿಸಿತ್ತು. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 120 ರನ್ ಗಳಿಸುವ ಅಗತ್ಯವಿತ್ತು.ಇದೇ ಗುರಿ ಹೊತ್ತು ಮೂರನೇ ದಿನದಾಟಕ್ಕೆ ಕ್ರೀಸ್‌ಗಿಳಿದ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ನಿರಾಸೆ ಕಾಡಿತು. 63.2 ಓವರ್‌ಗಳಲ್ಲಿ 171 ರನ್ ಗಳಿಸುವ ಮೂಲಕ ಈ ತಂಡ ತನ್ನ ಹೋರಾಟ ಅಂತ್ಯಗೊಳಿಸಿತು. ಆಸೀಸ್ ಗಳಿಸಿದ್ದ 369 ರನ್‌ಗಳು ತಂಡಕ್ಕೆ ಭಾರಿ ದೊಡ್ಡ ಸವಾಲು ಎನ್ನಿಸಿತು.ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡುವ ಉತ್ಸಾಹ ತೋರಿದ್ದ ಯುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (75, 136ಎಸೆತ, 9ಬೌಂಡರಿ) ಹಾಗೂ ರಾಹುಲ್ ದ್ರಾವಿಡ್ (47, 114ಎಸೆತ, 8ಬೌಂಡರಿ) ಉತ್ತಮ ಹೋರಾಟ ನಡೆಸಿದ್ದರು.176 ನಿಮಿಷ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ದ್ರಾವಿಡ್ ಬೇಗನೇ ವಿಕೆಟ್ ಒಪ್ಪಿಸಲಿಲ್ಲ. ಕೊಹ್ಲಿಗೆ ಚೆನ್ನಾಗಿ ಬೆಂಬಲ ನೀಡಿದರು. ಇದರಿಂದ ಈ ಜೋಡಿ ಸಂಕಷ್ಟದಲ್ಲಿದ್ದ ಭಾರತಕ್ಕೆ ಆಸರೆಯಾಗುವ ಭರವಸೆ ಮೂಡಿಸಿತ್ತು. ಆದರೆ, ರ‌್ಯಾನ್ ಹ್ಯಾರಿಸ್ ಅವರು ದ್ರಾವಿಡ್ ವಿಕೆಟ್ ಪಡೆದು ಭಾರತದ ಇನಿಂಗ್ಸ್ ಮುನ್ನಡೆಯ ಓಟಕ್ಕೆ ಅಡ್ಡಿಯಾದರು. ಇದು ಪ್ರವಾಸಿ ತಂಡದ ಇನಿಂಗ್ಸ್ ಸೋಲಿಗೆ ಮುನ್ನುಡಿಯೂ ಆಯಿತು.31.4 ಓವರ್‌ಗಳಲ್ಲಿ ದ್ರಾವಿಡ್ ಹಾಗೂ ಕೊಹ್ಲಿ 84 ರನ್ ಕಲೆ ಹಾಕಿದರು. ಐದನೇ ವಿಕೆಟ್‌ಗೆ ಈ ಜೋಡಿ ಕಲೆ ಹಾಕಿದ ಮೊತ್ತವು ಭಾರತದ ಪರ ಈ ಪಂದ್ಯದಲ್ಲಿ ಬಂದ ಗರಿಷ್ಠ ರನ್  ಜೊತೆಯಾಟವೂ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕದ ಹೊಸ್ತಿಲಲ್ಲಿ ಎಡವಿ ನಿರಾಸೆ ಅನುಭವಿಸಿದ್ದ ಕೊಹ್ಲಿ ಎರಡನೇ ಇನಿಂಗ್ಸ್‌ನಲ್ಲಿ ಅದನ್ನು ಈಡೇರಿಸಿಕೊಂಡರು. ಈ ಪ್ರವಾಸದಲ್ಲಿ ರನ್ `ಬರ~ ಅನುಭವಿಸಿದ್ದ ಈ ಬಲಗೈ ಬ್ಯಾಟ್ಸ್ ಮನ್ ಭಾರತದ ನೆರವಿಗೆ ನಿಂತರು. 187 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ನಿಂತು, ಸೋಲು ಖಚಿತವಾದ ಮೇಲೂ ಕ್ರೀಡಾಂಗಣದಲ್ಲಿದ್ದ ಭಾರತದ ಅಭಿಮಾನಿಗಳಿಗೆ ಸಂತಸ ನೀಡಿದರು.ಮಿಷೆಲ್ ಸ್ಟಾರ್ಕ್ಸ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಅರ್ಧಶತಕ ಗಳಿಸಿದರು. ಆದರೆ, ತಂಡ ಸಂಕಷ್ಟದಲ್ಲಿದ್ದ ಕಾರಣ ಸಂಭ್ರಮಿಸುವ ಸಂದರ್ಭ ಅದಾಗಿರಲಿಲ್ಲ. ದ್ರಾವಿಡ್ ಔಟಾದ ನಂತರ ಬಂದ ನಾಯಕ ಮಹೇಂದ್ರ ಸಿಂಗ್ ದೋನಿ ಕೇವಲ ಎರಡು ರನ್ ಗಳಿಸಿ ಪೆವಿಲಿಯನ್ ಹಾದಿ ತುಳಿದರು. ಆಗ ಭಾರತ ತಂಡದ ಒಟ್ಟು ಮೊತ್ತ ಆರು ವಿಕೆಟ್‌ಗೆ 148.ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆರ್. ವಿನಯ್ ಕುಮಾರ್ (6, 20ಎಸೆತ, 1ಬೌಂ) ಅವರು ಕೊಹ್ಲಿ ಜೊತೆಗೂಡಿ ಏಳನೇ ವಿಕೆಟ್‌ಗೆ  23 ರನ್ ಕಲೆ ಹಾಕಿದರು. 62.1ನೇ ಓವರ್‌ನಲ್ಲಿ ಬೆನ್ ಹಿಲ್ಪೆನಾಸ್ ಕರ್ನಾಟಕದ ಆಟಗಾರನ ವಿಕೆಟ್ ಪಡೆದರು.ಇದಾದ ನಂತರ ಬಂದ ಜಹೀರ್ ಖಾನ್ ಹಾಗೂ ಇಶಾಂತ್  ಶರ್ಮ `ಸೊನ್ನೆ~ ಸುತ್ತಿದರು. ಭಾರತದ ಆಟಗಾರರ `ಪೆವಿಲಿಯನ್ ಪರೇಡ್~ಗೆ  ಬೆನ್ ಹಿಲ್ಪೆನಾಸ್ (54ಕ್ಕೆ4) ಪ್ರಮುಖ ಕಾರಣರಾದರು. ಈ ಬೌಲರ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಪಡೆದರು. ಇದರಿಂದ ಆಸೀಸ್ ಪಾಲಿಗೆ `ಹೀರೋ~ ಆಗಿ ಮೆರೆದರು. ಇದಕ್ಕೆ ಪೀಟರ್ ಸಿಡ್ಲ್ (43ಕ್ಕೆ3) ತಕ್ಕ ಸಾಥ್ ನೀಡಿದರು.ಎರಡನೇ ಟೆಸ್ಟ್‌ನಲ್ಲೂ ಭಾರತ ಇನಿಂಗ್ಸ್ ಹಾಗೂ 69 ರನ್‌ಗಳ ಸೋಲು ಅನುಭವಿಸಿತ್ತು. ಈಗ ಮತ್ತೊಂದು ಇನಿಂಗ್ಸ್ ಸೋಲು ಭಾರತದ ಬ್ಯಾಟಿಂಗ್ `ಶಕ್ತಿ~ಯನ್ನು ಬಯಲು ಮಾಡಿದೆ. ಈ ಪಂದ್ಯದಲ್ಲಿ ಹೊಸ ತಪ್ಪುಗಳೇನೂ ಆಗಲಿಲ್ಲ. ಅದೇ ಹಳೆಯ ತಪ್ಪುಗಳು ಮರುಕಳಿಸಿದವು.         ಹಿರಿಯ ಆಟಗಾರರ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಮಾತನ್ನು ಪಂದ್ಯದ ನಂತರ ದೋನಿ ಸಹ ಒಪ್ಪಿಕೊಂಡರು.ಇದರಿಂದ ಭಾರತ ವಿದೇಶಿ ನೆಲದಲ್ಲಿ ಸತತ ಏಳನೇ ಸೋಲು ಅನುಭವಿಸಿತು. ಕಳೆದ ವರ್ಷದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ `ಕ್ಲೀನ್ ಸ್ವೀಪ್~ ಆಗಿತ್ತು.ಔಟಾಗುವುದರಲ್ಲೂ ದಾಖಲೆ: ರಾಹುಲ್ ದ್ರಾವಿಡ್ ಔಟ್ ಆಗುವುದರಲ್ಲಿಯೂ ದಾಖಲೆ ಬರೆದರು.  ಗಟ್ಟಿಯಾಗಿ ಕ್ರೀಸ್‌ಗೆ ಕಚ್ಚಿಕೊಂಡು ನಿಲ್ಲುವ ಅಭ್ಯಾಸ ಹೊಂದಿರುವ `ಗೋಡೆ~ ಈ ಸಲದ ಆಸೀಸ್ ಪ್ರವಾಸದಲ್ಲಿ ಬಿರುಕು ಬಿಟ್ಟಿದೆ. ಮೂರು ಟೆಸ್ಟ್‌ಗಳ ಆರು ಇನಿಂಗ್ಸ್‌ಗಳಲ್ಲಿ ಬೆಂಗಳೂರಿನ ಈ ಬ್ಯಾಟ್ಸ್‌ಮನ್ ಬೌಲ್ಡ್ ಆಗಿದ್ದೇ ಇದಕ್ಕೆ ಸಾಕ್ಷಿ.

ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಸಲ ಬೌಲ್ಡ್ ಆದ ಬ್ಯಾಟ್ಸ್‌ಮನ್ ಎನ್ನುವ `ದಾಖಲೆ~ ದ್ರಾವಿಡ್ ಪಾಲಾಯಿತು. ಈ ಆಟಗಾರ ಇದುವರೆಗೂ 54 ಸಲ ಬೌಲ್ಡ್ ಆಗಿದ್ದಾರೆ. ಇದರಿಂದ ಆಸ್ಟ್ರೇಲಿಯಾದ ಅಲನ್ ಬಾರ್ಡರ್ (53) ಅವರ ದಾಖಲೆ ಮುರಿದರು.

ಸ್ಕೋರ್ ವಿವರ:

ಭಾರತ ಮೊದಲ ಇನಿಂಗ್ಸ್ 60.2 ಓವರ್‌ಗಳಲ್ಲಿ 161

ಆಸ್ಟೇಲಿಯಾ ಪ್ರಥಮ ಇನಿಂಗ್ಸ್ 76.2 ಓವರ್‌ಗಳಲ್ಲಿ 369

ಭಾರತ ದ್ವಿತೀಯ ಇನಿಂಗ್ಸ್ 63.2 ಓವರ್‌ಗಳಲ್ಲಿ 171

(ಶನಿವಾರದ ಅಂತ್ಯಕ್ಕೆ 32 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 88)

ರಾಹುಲ್ ದ್ರಾವಿಡ್ ಬಿ ರ‌್ಯಾನ್ ಹ್ಯಾರಿಸ್  47

ವಿರಾಟ್ ಕೊಹ್ಲಿ ಸಿ ಬ್ರಾಡ್ ಹಡಿನ್ ಬಿ ಪೀಟರ್ ಸಿಡ್ಲ್  75

ಮಹೇಂದ್ರ ಸಿಂಗ್ ದೋನಿ ಸಿ ರಿಕಿ ಪಾಂಟಿಂಗ್ ಬಿ ಪೀಟರ್ ಸಿಡ್ಲ್  02

ಆರ್. ವಿನಯ್ ಕುಮಾರ್ ಸಿ ಮೈಕಲ್ ಕ್ಲಾರ್ಕ್ ಬಿ ಬೆನ್ ಹಿಲ್ಫೆನಾಸ್  06

ಜಹೀರ್ ಖಾನ್ ಸಿ ಮೈಕಲ್ ಕ್ಲಾರ್ಕ್ ಬಿ ಬೆನ್ ಹಿಲ್ಫೆನಾಸ್  00

ಇಶಾಂತ್ ಶರ್ಮ ಸಿ ಎಡ್ ಕೊವನ್ ಬಿ ಬೆನ್ ಹಿಲ್ಫೆನಾಸ್  00

ಉಮೇಶ್ ಯಾದವ್ ಔಟಾಗದೇ  00

ಇತರೆ (ಬೈ-1, ಲೆಗ್ ಬೈ-5, ವೈಡ್-3) 09

ವಿಕೆಟ್ ಪತನ: 5-135 (ದ್ರಾವಿಡ್ 50.5), 6-148 (ದೋನಿ 55.4), 7-171 (ವಿನಯ್ ಕುಮಾರ್ 62.1), 8-171 (ಜಹೀರ್ 62.2), 9-171(ಇಶಾಂತ್ 62.5), 10-171 (ಕೊಹ್ಲಿ 63.2).

ಬೌಲಿಂಗ್: ರ‌್ಯಾನ್ ಹ್ಯಾರಿಸ್ 16-3-34-1, ಬೆನ್ ಹಿಲ್ಫೆನಾಸ್ 18-6-54-4, ಮಿಷೆಲ್ ಸ್ಪಾರ್ಕ್ಸ್ 12-4-31-2, ಪೀಟರ್ ಸಿಡ್ಲ್15.2-5-43-3, ಮೈಕಲ್ ಹಸ್ಸಿ 2-0-3-0.

ಫಲಿತಾಂಶ: ಆಸ್ಟ್ರೇಲಿಯಾಕ್ಕೆ ಇನಿಂಗ್ಸ್ ಹಾಗೂ 37 ರನ್ ಜಯ.

ಸರಣಿಯಲ್ಲಿ 3-0ರಲ್ಲಿ ಮುನ್ನಡೆ

ಪಂದ್ಯ ಶ್ರೇಷ್ಠ: ಡೇವಿಡ್ ವಾರ್ನರ್

ನಾಲ್ಕನೇ ಹಾಗೂ ಕೊನೆಯ ಟೆಸ್ಟ್: ಜನವರಿ 24ರಿಂದ 28 (ಅಡಿಲೇಡ್ ಓವಲ್)

 

ಪ್ರತಿಕ್ರಿಯಿಸಿ (+)